ಬಸ್ ನಿಲ್ದಾಣಗಳಲ್ಲಿ 1 ರೂ.ಗೆ ಲೀಟರ್ ಶುದ್ಧ ನೀರು
Team Udayavani, Oct 16, 2017, 11:46 AM IST
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಇನ್ಮುಂದೆ ಒಂದು ರೂ.ಗೆ ಒಂದು ಲೀಟರ್ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಈ ಮೂಲಕ ಐಷಾರಾಮಿ ಬಸ್‌ಗಳಲ್ಲಿ ಸೀಮಿತವಾಗಿದ್ದ ಕುಡಿಯುವ ನೀರಿನ ಸೌಲಭ್ಯ ಎಲ್ಲ ಪ್ರಕಾರದ
ಪ್ರಯಾಣಿಕರಿಗೂ ವಿಸ್ತರಣೆಯಾಗಲಿದೆ.
ಈ ನಿಟ್ಟಿನಲ್ಲಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಕೆಎಸ್ ಆರ್‌ಟಿಸಿ ನಿರ್ಧರಿಸಿದ್ದು, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದಲ್ಲಿ ತಿಂಗಳಲ್ಲಿ ಘಟಕಗಳು ತಲೆಯೆತ್ತಲಿವೆ. ಇದರಿಂದ ನಿಲ್ದಾಣಗಳಿಗೆ ಬರುವ ಎಲ್ಲ ಪ್ರಕಾರದ ಪ್ರಯಾಣಿಕರಿಗೂ ಒಂದು ರೂ. ಕಾಯಿನ್ ಹಾಕಿ, ಒಂದು ಲೀಟರ್ ಶುದ್ಧ ಕುಡಿಯುವ ನೀರು ಪಡೆಯಬಹುದು. ಈ ಸೇವೆ ಜಾರಿಯಾದರೆ, ದೇಶದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಈ ಸೇವೆ ಒದಗಿಸುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೆಎಸ್‌ಆರ್‌ಟಿಸಿ ಪಾತ್ರವಾಗಲಿದೆ.
ಬಿಪಿಸಿಎಲ್ 5.50 ಲಕ್ಷ ರೂ. ವೆಚ್ಚದಲ್ಲಿ ಪ್ರತಿ ನಿಲ್ದಾಣಗಳಲ್ಲೂ ಕುಡಿಯುವ ನೀರಿನ ಘಟಕ ನಿರ್ಮಿಸಲಿದೆ. ಇದಕ್ಕೆ ಪ್ರತಿಯಾಗಿ ಉದ್ದೇಶಿತ ಯೋಜನೆಗೆ ಕೆಎಸ್‌ಆರ್‌ಟಿಸಿ ಜಾಗ ನೀಡಲಿದೆ. ಎಲ್ಲ ತಾಲೂಕು, ಹೋಬಳಿ ಮತ್ತು ಪಟ್ಟಣ ಸೇರಿ ಒಟ್ಟಾರೆ 160 ನಿಲ್ದಾಣಗಳಿದ್ದು, ಈ ಪೈಕಿ ಮೊದಲ ಹಂತದಲ್ಲಿ 15 ನಿಲ್ದಾಣಗಳಲ್ಲಿ ಈ ಘಟಕಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿಸ್ತರಿಸಲಾಗುವುದು.
ಹಳ್ಳಿ ಜನರಿಗೂ ಸಿಗಲಿದೆ ಶುದ್ಧ ನೀರು: ಯೋಜನೆ
ಉದ್ದೇಶ ಕೇವಲ ಪ್ರಯಾಣಿಕರಿಗೆ ನೀರು ಕಲ್ಪಿಸುವುದಲ್ಲ. ಆ ನಿಲ್ದಾಣಗಳ ಸುತ್ತಲಿನ ಗ್ರಾಮೀಣ ಜನರಿಗೂ ಈ ಮೂಲಕ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿನ ನಿಲ್ದಾಣಗಳನ್ನೇ ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗಿದೆ. ಘಟಕಗಳಲ್ಲಿ ನೀರು ಪಡೆಯಲು ಯಾವುದೇ ನಿರ್ಬಂಧಗಳಿಲ್ಲ. ಯಾರು ಬೇಕಾದರೂ ದಿನದ 24 ಗಂಟೆಯೂ ನೀರು ಪಡೆಯಬಹುದು. ನಿತ್ಯ 24 ಸಾವಿರ ಲೀ. ನೀರು ಈ ಘಟಕಗಳಿಗೆ ಪೂರೈಕೆ ಆಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ವೋಲ್ವೋ, ಸ್ಲಿಪರ್‌ನಂತಹ ಪ್ರೀಮಿಯರ್ ಬಸ್ ಸೇವೆಗಳು ಅಬ್ಬಬ್ಟಾ ಎಂದರೆ 500ರಿಂದ 1000 ಇರಬಹುದು. ಉಳಿದ ಸೇವೆಗಳು ಕರ್ನಾಟಕ ಸಾರಿಗೆ ಬಸ್‌ಗಳಾಗಿವೆ. ಅಂದರೆ ಸುಮಾರು ಶೇ.75ರಷ್ಟು ಪ್ರಯಾಣಿಕರು ಗ್ರಾಮೀಣ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವವರಾಗಿದ್ದಾರೆ. ಅಂದರೆ ಎಲ್ಲ ಪ್ರಯಾಣಿಕರಿಗೂ ಸಾಧ್ಯವಾದಷ್ಟು ಉತ್ತಮ ಸೇವೆ ಕಲ್ಪಿಸುವುದು ನಿಗಮದ ಕರ್ತವ್ಯ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದೂ ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮುಂದಿನ ತಿಂಗಳು ಕಾರ್ಯಾರಂಭ: ಬಿಪಿಸಿಎಲ್‌ನಿಂದ 30 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಉಳಿದಂತೆ ಕೆಲವೆಡೆ ಶಾಸಕರು, ಸ್ಥಳೀಯ ಪ್ರತಿನಿಧಿಗಳು ಮುಂದೆ ಬಂದಿದ್ದಾರೆ. ಅಲ್ಲದೆ, ಕೆಎಸ್‌ಆರ್‌ಟಿಸಿಯ ಆಯಾ ವಿಭಾಗಗಳಿಂದಲೂ ನಿರ್ಮಿಸಲಾಗುತ್ತಿದೆ. ಇದೆಲ್ಲವೂ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ ಕೆಲವು ಘಟಕಗಳು ಮುಂದಿನ ತಿಂಗಳಿಂದಲೇ ಕಾರ್ಯಾರಂಭ ಮಾಡಲಿವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ತಿಳಿಸಿದರು.
ಈ ಮಧ್ಯೆ ಬಿಎಂಟಿಸಿ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಸ್ಥಳೀಯ ಜನಪ್ರತಿನಿಧಿಗಳ ಅನುದಾನದಿಂದ ಪ್ರಮುಖ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಘಟಕಗಳ ಅಳವಡಿಕೆ ಎಲ್ಲೆಲ್ಲಿ?
ಪಾಂಡವಪುರ, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಮೇಲುಕೋಟೆ, ಕೆ.ಆರ್. ಪೇಟೆ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಭದ್ರಾವತಿ , ಹಿರಿಯೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಕುಂದಾಪುರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.