ಶೇ.33.15 ಸರ್ಕಾರಿ ಹುದ್ದೆಗಳು ಖಾಲಿ! ಸಿಬ್ಬಂದಿ ಸಂಖ್ಯಾಬಲ ಮರುವಿಮರ್ಶೆಗೆ ಸಲಹೆ
ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗುತ್ತಿರುವುದೇಕೆ? ಗ್ರಹಿಸಲೂ ಆಗುತ್ತಿಲ್ಲ: 7ನೇ ವೇತನ ಆಯೋಗ ಕಳವಳ
Team Udayavani, Mar 17, 2024, 7:20 AM IST
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಮಂಜೂರಾಗಿರುವ 7.72 ಲಕ್ಷ ಹುದ್ದೆಗಳ ಪೈಕಿ 5.16 ಲಕ್ಷ ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಶೇ.33.15 ರಷ್ಟು ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗುತ್ತಿರುವುದೇಕೆ ಎಂಬುದನ್ನು ಗ್ರಹಿಸಲೂ ಆಗುತ್ತಿಲ್ಲ ಎಂದು 7ನೇ ವೇತನ ಆಯೋಗ ಕಳವಳ ವ್ಯಕ್ತಪಡಿಸಿದೆ.
ಹುದ್ದೆಗಳನ್ನು ಸೃಜಿಸುವ ವಿಷಯದಲ್ಲಿ ಯಾವುದೇ ಸುವ್ಯವಸ್ಥಿತ ನೀತಿ ಇಲ್ಲವೆಂಬ ಅಂಶವನ್ನು ಗಮನಿಸಲಾಗಿದೆ. ಆಯಾ ಇಲಾಖೆಗಳ ಕಾರ್ಯನಿರ್ವಹಣೆಗೆ ಅಗತ್ಯ ಸಿಬ್ಬಂದಿಸಂಖ್ಯಾಬಲವನ್ನು ಮರುವಿಮರ್ಶೆ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖೀಸಿದ್ದು, 6ನೇ ವೇತನ ಆಯೋಗವೂ ಇದನ್ನೇ ಹೇಳಿತ್ತು. ಆದರೂ ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ ಎಂಬುದನ್ನು ಪರೋಕ್ಷವಾಗಿ ಬೊಟ್ಟು ಮಾಡಿ ತೋರಿಸಿದೆ.
ಸರ್ಕಾರದ ಒಟ್ಟು 94 ಇಲಾಖೆಗಳಲ್ಲಿ 2,500 ವೃಂದ ಮತ್ತು ಮಂಜೂರಾದ 7.72 ಲಕ್ಷ ಹುದ್ದೆಗಳಿವೆ. ಈ ಪೈಕಿ 5.16 ಲಕ್ಷ ಕಾರ್ಯನಿರತ ನೌಕರರಿದ್ದಾರೆ. ಇನ್ನೂ ಶೇ.33.15 ಹುದ್ದೆಗಳು ಖಾಲಿ ಇವೆ. ಒಟ್ಟು ಕಾರ್ಯನಿರತ ನೌಕರರ ಪೈಕಿ 1,84,688 ಮಹಿಳಾ ನೌಕರರಿದ್ದಾರೆ. ಕಳೆದ 5 ವರ್ಷಗಳಲ್ಲಿ ಶೇ.1 ರಷ್ಟು ಮಹಿಳಾ ಪ್ರಾತಿನಿಧ್ಯ ಹೆಚ್ಚಳವಾಗಿದೆಯಷ್ಟೆ. ನೇರ ನೇಮಕಾತಿಯಲ್ಲಿ ಶೇ.33 ರಷ್ಟು ಮಹಿಳೆಯರಿಗೆ ಉದ್ಯೋಗ ಮೀಸಲಾತಿ ನೀಡಿದ್ದರಿಂದ ಶೇ.1ರಷ್ಟು ಹೆಚ್ಚಳ ಸಿಕ್ಕಿದೆ. ಇನ್ನು 33,822 ಡಿ ದರ್ಜೆ ನೌಕರರಿದ್ದರೆ, 4,27,264 ಸಿ ದರ್ಜೆ ನೌಕರರಿದ್ದಾರೆ. ಅಂತೆಯೇ ಬಿ ವೃಂದದ 28,694 ನೌಕರರಿದ್ದು, ಎ ವೃಂದದ 15,604 ನೌಕರರಿದ್ದಾರೆ.
ಶಿಕ್ಷಣ ಇಲಾಖೆಗೆ 3.08 ಲಕ್ಷ ಹುದ್ದೆಗಳು ಮಂಜೂರಾಗಿದ್ದರೆ, ಶೇ.45.8 ಅಂದರೆ, 2.33 ಲಕ್ಷ ಕಾರ್ಯನಿರತ ನೌಕರರಿದ್ದಾರೆ. ಗೃಹ ಇಲಾಖೆಗೆ 1.27 ಲಕ್ಷ ಹುದ್ದೆಗಳು ಮಂಜೂರಾಗಿ, 1.05 ಲಕ್ಷ ಅಂದರೆ ಶೇ.20.42 ನೌಕರರು ಕಾರ್ಯನಿರತರಾಗಿದ್ದಾರೆ. ಆರೋಗ್ಯ ಇಲಾಖೆಗೆ ಮಂಜೂರಾಗಿದ್ದ 74,799 ಹುದ್ದೆಗಳ ಪೈಕಿ 39,603 ಹುದ್ದೆಗಳು ಭರ್ತಿಯಾಗಿದ್ದು, ಶೇ.7.67 ಕಾರ್ಯನಿರತ ನೌಕರರಿದ್ದಾರೆ. ಉಳಿದ ಎಲ್ಲ ಇಲಾಖೆಗಳಿಗೆ 2.60 ಲಕ್ಷ ಹುದ್ದೆಗಳು ಮಂಜೂರಾಗಿದ್ದರೆ, 1.37 ಲಕ್ಷ ನೌಕರರು ಕಾರ್ಯನಿರತರಾಗಿದ್ದಾರೆ.
ಹೆಚ್ಚುತ್ತಿವೆ ಖಾಲಿ ಹುದ್ದೆಗಳ ಪ್ರಮಾಣ:
ಪಶು ಸಂಗೋಪನೆಯಲ್ಲಿ 2,673, ಶಾಲಾ ಶಿಕ್ಷಣ- 2,540, ಅರಣ್ಯ- 2,238, ರೇಷ್ಮೆ- 2,131, ಕಂದಾಯ- 1,266, ಆರ್ಥಿಕ- 1,239 ಹಾಗೂ ತೋಟಗಾರಿಕೆಯಲ್ಲಿ 1,224 ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ, ಸಹಕಾರ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಕಾರ್ಮಿಕ, ಪಶುಸಂಗೋಪನೆ, ಆಹಾರ, ಆರೋಗ್ಯ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳು ಹೆಚ್ಚಿದ್ದರೂ ಭರ್ತಿ ಹುದ್ದೆಗಳ ಪ್ರಮಾಣ ಕಡಿಮೆಯಾಗಿದೆ. ಖಾಲಿ ಹುದ್ದೆಗಳ ಪ್ರಮಾಣ ಹೆಚ್ಚುತ್ತಿರುವುದೇಕೆ ಎಂಬುದನ್ನು ಗ್ರಹಿಸಲೂ ಆಗುತ್ತಿಲ್ಲ. ಹುದ್ದೆಗಳನ್ನು ಸೃಜಿಸುವ ವಿಷಯದಲ್ಲಿ ಯಾವುದೇ ಸುವ್ಯವಸ್ಥಿತ ನೀತಿ ಇಲ್ಲವೆಂಬ ಅಂಶವನ್ನು ಗಮನಿಸಲಾಗಿದೆ. ಆಯಾ ಇಲಾಖೆಗಳ ಕಾರ್ಯನಿರ್ವಹಣೆಗೆ ಅಗತ್ಯ ಸಿಬ್ಬಂದಿಯ ಸಂಖ್ಯಾಬಲವನ್ನು ಮರು ವಿಮರ್ಶೆ ಮಾಡಬೇಕು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಹೊರಗುತ್ತಿಗೆ, ದಿನಗೂಲಿ ನೌಕರರಿಗಾಗಿ 1,935 ಕೋಟಿ ರೂ. ವೆಚ್ಚ
2013-14ರಲ್ಲಿ ಶೇ.24.31ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವು 2022-23 ರಲ್ಲಿ ಶೇ.33.15 ರಷ್ಟಾಗಿದೆ. 2013-14ರಲ್ಲಿ 7.45 ಲಕ್ಷ ಹುದ್ದೆಗಳು ಮಂಜೂರಾಗಿದ್ದರೆ, 2022-23ರಲ್ಲಿ 7.72 ಲಕ್ಷ ಹುದ್ದೆಗಳು ಮಂಜೂರಾಗಿವೆ. ಅಂದರೆ ಶೇ0.40 ಮಾತ್ರ ಮಂಜೂರಾತಿಯಲ್ಲಿ ಏರಿಕೆಯಾಗಿದೆ. ಸಿಬ್ಬಂದಿ ಕೊರತೆಯನ್ನು ತಾತ್ಕಾಲಿಕವಾಗಿ ನೀಗಿಸಲು 68 ಸಾವಿರ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದು ಇವರಿಗಾಗಿ 1,685 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 7 ಸಾವಿರ ದಿನಗೂಲಿ ನೌಕರರಿಗಾಗಿ ವಾರ್ಷಿಕ 250 ಕೋಟಿ ರೂ. ವ್ಯಯಿಸಲಾಗುತ್ತಿದೆ. 2022-23ರಲ್ಲಿ ನೌಕರರ ವೇತನ ವೆಚ್ಚವು 35,467 ಕೋಟಿ ರೂ. ಇದ್ದರೆ, ನಿವೃತ್ತಿ ವೇತನ ವೆಚ್ಚವು 20,666 ಕೋಟಿ ರೂ. ಇತ್ತು. ರಾಜ್ಯದ ಜಿಎಸ್‌ಡಿಪಿಯು 3 ಲಕ್ಷ ರೂ. ಇದ್ದರೆ, ಅದರ ಶೇ.3.52 ವೇತನ ವೆಚ್ಚವಿದೆ. 2022-23ರಲ್ಲಿ ಕೇಂದ್ರ ಸರ್ಕಾರದ ವೇತನ ವೆಚ್ಚವು ಜಿಡಿಪಿಯ ಶೇ.1.76 ರಷ್ಟಿದ್ದರೆ, ಒಟ್ಟು ವೆಚ್ಚದ ಶೇ.12.16 ರಷ್ಟಿದೆ. ರಾಜ್ಯದ ಜಿಎಸ್‌ಡಿಪಿಯು 3 ಲಕ್ಷ ರೂ. ಇದೆ. ಅದೇ ರೀತಿ ಜಿಎಸ್‌ಡಿಪಿಯ ಶೇ.3.52 ರಷ್ಟು ರಾಜ್ಯದ ವೇತನ ವೆಚ್ಚವಿದ್ದು, ಒಟ್ಟಾರೆ ವೆಚ್ಚದ ಶೇ.27.28 ರಷ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Hubli: ವಕ್ಫ್ ಬೋರ್ಡ್ ಆಸ್ತಿ ಸಿದ್ದು ಸರ್ಕಾರದ ಕಬಳಿಕೆಗೆ ಕುಮ್ಮಕ್ಕು: ಪ್ರತಾಪ್ ಸಿಂಹ
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
MUST WATCH
ಹೊಸ ಸೇರ್ಪಡೆ
Karkala: ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ… ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Trump: ಗುಜರಾತ್ ಮೂಲದ ಪಟೇಲ್ CIA ನೂತನ ಮುಖ್ಯಸ್ಥ: ಡೊನಾಲ್ಡ್ ಟ್ರಂಪ್ ಒಲವು
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.