ನೂತನ ಜವಳಿ ನೀತಿಯಿಂದ 36 ಸಾವಿರ ಉದ್ಯೋಗ ಸೃಷ್ಟಿ: ಸಚಿವ ಶಂಕರ ಪಾಟೀಲ್ ಬಿ.ಮುನೇನಕೊಪ್ಪ
Team Udayavani, Nov 3, 2022, 11:30 PM IST
ಬೆಂಗಳೂರು: ರಾಜ್ಯದಲ್ಲಿ ಜಾರಿಯಾಗಿರುವ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24ರ ಜಾರಿಯಿಂದಾಗಿ ರಾಜ್ಯಕ್ಕೆ 37 ಹೊಸ ಎಂಎಸ್‌ಎಂಇ, ದೊಡ್ಡ ಮತ್ತು ಮೆಗಾ ಜವಳಿ ಘಟಕಗಳು 4,200 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದು, ಅದರಿಂದ 36,427 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಬಿ.ಮುನೇನಕೊಪ್ಪ ಹೇಳಿದರು.
ಅರಮನೆ ಮೈದಾನದಲ್ಲಿ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕದ ಎರಡನೇ ದಿನದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯ ಸರ್ಕಾರ ಜವಳಿ ಮತ್ತು ಉಡುಪು ವಲಯದಲ್ಲಿ ಪ್ರಮುಖ ಬಂಡವಾಳ ಹೂಡಿಕೆ ತಾಣವನ್ನಾಗಿ ಮಾಡಲು ಮತ್ತು ಜವಳಿ ಮೌಲ್ಯ ಸರಪಳಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಅದಕ್ಕೆ ಪೂರಕವಾಗಿ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಅನುಷ್ಠಾನಗೊಳಿಸುತ್ತಿದೆ ಎಂದರು.
ಜವಳಿ ಉದ್ಯಮದಲ್ಲಿ ತೊಡಗಿಕೊಂಡಿರುವ ಬೃಹತ್ ಕೈಗಾರಿಕೆಗಳ ಜತೆಗೆ ಮಧ್ಯಮ ಕೈಗಾರಿಕೆಗಳಿಗೆ ಶೇ. 5ರ ಬಡ್ಡಿ ದರದಲ್ಲಿ ಸಹಾಯಧನ ನೀಡಲಾಗುತ್ತಿದೆ. ಜವಳಿ ಮತ್ತು ಸಿದ್ಧ ಉಡುಪು ಘಟಕಗಳಿಗೆ ರಿಯಾಯಿತಿ ಮತ್ತು ಪ್ರೋತ್ಸಾಹ ಧನಗಳ ಮಿತಿಯನ್ನು ಶೇ. 100ರವರೆಗೆ ವಿಸ್ತರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸಿದ್ಧ ಉಡುಪು ಘಟಕಗಳಿಗೆ ವೇತನ ಸಹಾಯಧನವನ್ನು 1,500 ರೂ.ನಿಂದ 3 ಸಾವಿರ ರೂ.ಗೆ ಹಾಗೂ ರಾಜ್ಯದ ಇತರ ಭಾಗಗಳಿಗೆ 1 ಸಾವಿರ ರೂ.ನಿಂದ 2 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ರಾಜ್ಯದ ಜವಳಿ ಮತ್ತು ಉಡುಪು ವಲಯ ಸಾಕಷ್ಟು ಚೇತರಿಕೆ ಕಂಡಿದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.