ಜೈಲುಗಳಲ್ಲಿ 4,916 ಮಾನಸಿಕ ಅಸ್ವಸ್ಥರು!
Team Udayavani, Feb 29, 2020, 3:06 AM IST
ಬೆಂಗಳೂರು: “ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 15 ಸಾವಿರಕ್ಕೂ ಹೆಚ್ಚು ಕೈದಿಗಳ ಪೈಕಿ 4,916ಕ್ಕೂ ಹೆಚ್ಚು ಕೈದಿಗಳು ಹಲವು ಬಗೆಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಅವರಲ್ಲಿ 237 ಕೈದಿಗಳು ಗಂಭೀರ ಸ್ವರೂಪದ ಅಸ್ವಸ್ಥತೆಗೆ ಒಳಗಾಗಿದ್ದಾರೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಜೈಲುಗಳಲ್ಲಿ ಸಾಮರ್ಥಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸದಿರಲು, ಜೈಲು ಸಿಬ್ಬಂದಿ ನೇಮಕಾತಿ, ಅಲ್ಲಿನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಸುಧಾರಣೆ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಆಗ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ಅದರಂತೆ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಗರಿಷ್ಠ 2,023 ಕೈದಿಗಳು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರೆ. ಹಾಸನ ಜಿಲ್ಲಾ ಕಾರಾಗೃಹದಲ್ಲಿ 344, ಕಲಬುರಗಿಯಲ್ಲಿ 336 ಹಾಗೂ ತುಮಕೂರಿನಲ್ಲಿ 237 ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 235 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ.
ಈ ಕೈದಿಗಳು ಗಂಭೀರ ಮಾನಸಿಕ ಅಸಮತೋಲನ, ಸಾಮಾನ್ಯ ಮಾನಸಿಕ ಅಸಮತೋಲನ, ಧ್ಯಾನ ಅಭಾವ ಅತಿಸಕ್ರಿಯತೆಯ ವಿಕಾರಗಳು, ಮೂರ್ಛೆರೋಗ, ಮದ್ಯಸೇವನೆ, ತಂಬಾಕು, ಗಾಂಜಾ ಹಾಗೂ ನಶೆಯ ಪದಾರ್ಥಗಳ ಸೇವನೆಯಿಂದ ವಿಚಿತ್ರವಾಗಿ ವರ್ತಿಸುವವರಾಗಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ-2017ರ ಅನುಸಾರ ರಾಜ್ಯದಲ್ಲಿನ 46 ಜೈಲುಗಳಲ್ಲಿ 36 ಜೈಲುಗಳಲ್ಲಿರುವ ಎಲ್ಲ ಕೈದಿಗಳ ಮಾನಸಿಕ ಸ್ಥಿತಿಗಳನ್ನು ತಜ್ಞರು ಅಧ್ಯಯನ ನಡೆಸಿದ್ದಾರೆ.
ಗದಗ ಮತ್ತು ಮಂಡ್ಯ ಜಿಲ್ಲೆ ಸೇರಿದಂತೆ ನಾಲ್ಕು ತಾಲೂಕು ಜೈಲುಗಳಲ್ಲಿ ಅಧ್ಯಯನ ಸದ್ಯ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೈದಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಸರ್ಕಾರ ಏನು ಹೇಳಿತ್ತು?: ರಾಜ್ಯದಲ್ಲಿ ಕೇಂದ್ರ, ಜಿಲ್ಲಾ, ತಾಲೂಕು ಹಾಗೂ ಬಯಲು ಬಂದೀಖಾನೆ ಸೇರಿ 60 ಕಾರಾಗೃಹಗಳಲ್ಲಿ 13,622 ಕೈದಿಗಳ ಸಾಮರ್ಥಯವಿದ್ದು, ಸದ್ಯ 15,257 ಕೈದಿಗಳಿದ್ದಾರೆ. ಒಟ್ಟು ಸಾಮರ್ಥಯಕ್ಕಿಂತ 1,635 ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿಗದಿತ ಸಾಮರ್ಥಯಕ್ಕಿಂತ ಶೇ.11ರಷ್ಟು ಹೆಚ್ಚಾಗಿದೆ.
ಇದರಲ್ಲಿ 2019ರ ಜು.22 ರವರೆಗಿನ ಮಾಹಿತಿಯಂತೆ 14,616 ಪುರುಷ ಹಾಗೂ 641 ಮಹಿಳೆ ಸೇರಿ ಒಟ್ಟು 15,257 ಕೈದಿಗಳಿದ್ದಾರೆ. ಅತಿ ಹೆಚ್ಚು ಕೈದಿಗಳು ಕೇಂದ್ರ ಕಾರಾಗೃಹಗಳಲ್ಲಿದ್ದಾರೆ. 9 ಕೇಂದ್ರ ಕಾರಾಗೃಹಗಳ ಸಾಮರ್ಥಯ 7,817 ಇದ್ದರೆ, ಸದ್ಯ 10,397 ಕೈದಿಗಳಿದ್ದಾರೆ ಎಂದು ಈ ಹಿಂದೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.