ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಗಳ ವೇತನ ಪಾವತಿಗೆ ಕ್ರಮ: ದಿನೇಶ್ ಗುಂಡೂರಾವ್
Team Udayavani, Jun 25, 2023, 6:25 AM IST
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಸಿಬ್ಬಂದಿಗಳ ಎರಡು ತಿಂಗಳ ವೇತನವನ್ನು ಮುಂದಿನ 15ದಿನಗಳೊಳಗೆ ಪಾವತಿಗೆ ಅಗತ್ಯವಿರುವ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಶನಿವಾರ ಆರೋಗ್ಯಸೌಧದಲ್ಲಿ ಡಯಾಲಿಸಿಸ್ ಸಿಬ್ಬಂದಿ ಪ್ರತಿನಿಧಿಗಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಸಚಿವರು, ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯ ಸ್ಥಗಿತವಾಗಬಾರದು. ಏಜನ್ಸಿಯವರೊಂದಿಗೆ ಮಾತುಕತೆ ನಡೆಸಿ ಬಾಕಿ ವೇತನ ಪಾವತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಏಜೆನ್ಸಿ ಗುತ್ತಿಗೆ ಅವಧಿ ಮುಗಿದಿರುವುದರಿಂದ ವೇತನ ಪಾವತಿಯಲ್ಲಿ ಸಮಸ್ಯೆಯಾಗಿದೆ. ಸಂಜೀವಿನಿ ಏಜೆನ್ಸಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಸಿಎಂ ಜೊತೆ ಕೂಡ ಚರ್ಚೆ ನಡೆಸಿ, ಡಯಾಲಿಸಿಸ್ ಕೇಂದ್ರಗಳಲ್ಲಿ ಸಿಬ್ಬಂದಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಎರಡು ವಾರದೊಳಗೆ ಬಾಕಿ ಇರುವ ಭತ್ಯೆ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ತಲಾ 2,000 ರೂ.ನಂತೆ ಡಿಸೆಂಬರ್ ವರೆಗಿನ ಬಾಕಿ ಭತ್ಯೆ ನೀಡಲಾಗುತ್ತದೆ. ಜತೆಗೆ ಮೇ ಮತ್ತು ಜೂನ್ ತಿಂಗಳ ವೇತನ 15 ದಿನದೊಳಗೆ ಸಿಬ್ಬಂದಿಗಳಿಗೆ ಪಾವತಿಸಲಾಗುತ್ತದೆ. ಜತೆಗೆ ಏಜೆನ್ಸಿಯಿಂದ ಪಿಎಫ್ ಮತ್ತು ಇಎಸ್‌ಐಪಿ ದೊರಕಿಸಿಕೊಡುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ ತಿಳಿಸಿದರು.
ಆರೋಗ್ಯ ಸಚಿವರ ಸಕಾರಾತ್ಮಕ ಸ್ಪಂದನೆಗೆ ಸಮಾಧಾನಗೊಂಡ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿಗಳು ಎಂದಿನಂತೆ ಕಾರ್ಯ ಮುಂದುವರಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.