ಅಮಲು ಜೋರು; ನಟಿ ಸಂಜನಾ “ರಾಕಿ ಬ್ರದರ್’ ರಾಹುಲ್, ಮಾಂಡ್ರೆ ಪರಿಚಯಸ್ಥ ಸಿಸಿಬಿ ವಶಕ್ಕೆ
Team Udayavani, Sep 4, 2020, 6:30 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ಯಾಂಡಲ್‌ವುಡ್ ಮಾದಕ ವಸ್ತು ಪ್ರಕರಣ ಈಗ ರಾಗಿಣಿ ದ್ವಿವೇದಿಯ ಅನಂತರ ಇನ್ನಿಬ್ಬರು ನಾಯಕ ನಟಿಯರು ಮತ್ತು ಸಂಗೀತಗಾರರನ್ನು ಆವರಿಸಿದೆ. ಗುರುವಾರ ಬೆಳಗಿನ ಜಾವ ಖ್ಯಾತ ನಟಿ ಸಂಜನಾ ಗಲ್ರಾನಿಯ “ರಾಕಿ ಬ್ರದರ್’ ರಾಹುಲ್, ಇನ್ನೊಬ್ಬ ನಟಿ ಶರ್ಮಿಳಾ ಮಾಂಡ್ರೆಯ ಪರಿಚಯಸ್ಥ ಎನ್ನಲಾದ ಕಾರ್ತಿಕ್ ರಾಜು ಮತ್ತಾತನ ಸ್ನೇಹಿತ ಪ್ರತೀಕ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದರಿಂದ ಮಾದಕ ವಸ್ತು ಹಗರಣದ ಬೇರುಗಳು ಇನ್ನೂ ಆಳಕ್ಕೆ ಇಳಿದಿರುವ ವಾಸನೆ ಲಭ್ಯ ವಾಗಿದೆ. ನಾಲ್ವರು ಆರೋಪಿಗಳಾದ ರವಿಶಂಕರ್, ರಾಹುಲ್, ಕಾರ್ತಿಕ್ ರಾಜು ಮತ್ತು ಪ್ರತೀಕ್ ಶೆಟ್ಟಿ ವಿಚಾರಣೆ ಸಂದರ್ಭದಲ್ಲಿ ಖ್ಯಾತ ನಟ ಮತ್ತು ಖ್ಯಾತ ಸಂಗೀತಗಾರನ ಹೆಸರು ಕೇಳಿ ಬಂದಿದೆ. 15ಕ್ಕೂ ಅಧಿಕ ಮಂದಿಯ ಕಿರುತೆರೆ ನಟ-ನಟಿಯರ ಹೆಸರು ಸಿಕ್ಕಿದ್ದು, ಹಂತಹಂತವಾಗಿ ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಟಿ ಸಂಜನಾ ಗಲ್ರಾನಿ ಪರಿಚಯಸ್ಥ ರಾಹುಲ್ ಬನಶಂಕರಿಯಲ್ಲಿ ವಾಸವಾಗಿದ್ದು, ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದಾನೆ ಎನ್ನಲಾಗಿದೆ. ಈತ ನಗರದಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ವೇಳೆಯೇ ಸಂಜನಾ ಪರಿಚಯವಾಗಿತ್ತು. ಅನಂತರ ಇಬ್ಬರ ನಡುವೆ ಒಡನಾಟ ಹೆಚ್ಚಾಗಿದ್ದು, ಇಬ್ಬರು ಒಟ್ಟಿಗೆ ನೃತ್ಯ ಮಾಡುತ್ತಿರುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ತನಿಖೆ
ನಟಿ ರಾಗಿಣಿ ಆಪ್ತ ರವಿಶಂಕರ್‌ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಮತ್ತೂಬ್ಬ ನಟಿ ಸಂಜನಾ ಗಲ್ರಾನಿ ಪರಿಚಯಸ್ಥ ರಾಹುಲ್ ಮತ್ತು ನಟಿ ಶರ್ಮಿಳಾ ಮಾಂಡ್ರೆ ಪರಿಚಯಸ್ಥ ಎನ್ನಲಾದ ಕಾರ್ತಿಕ್ ರಾಜುವನ್ನು ವಶಕ್ಕೆ ಪಡೆದಿದ್ದಾರೆ. ರಾಜುವಿನ ಸ್ನೇಹಿತ ಪ್ರತೀಕ್ ಶೆಟ್ಟಿ ಎಂಬವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ನಾಲ್ವರ ಪೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿಶಂಕರ್ ನಗರದ ಡ್ರಗ್ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿರುವ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಈ ಮಧ್ಯೆ ಗುರುವಾರ ಬೆಳಗ್ಗೆ ಮತ್ತೂಮ್ಮೆ ಸಿಸಿಬಿ ಕಚೇರಿಗೆ ಆಗಮಿಸಿದ ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ತನಿಖಾಧಿಕಾರಿಗಳಿಗೆ ಇನ್ನಷ್ಟು ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ನಟಿ ರಾಗಿಣಿಗೆ ಅನಾರೋಗ್ಯ?
ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ನಟಿ ರಾಗಿಣಿ ಕಾಲಾವಕಾಶ ಕೇಳಿದ್ದಾರೆ. ಅನಾರೋಗ್ಯದ ಕಾರಣ ಸೋಮವಾರ ಬರುವುದಾಗಿ ಹೇಳಿದ್ದರು. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆಕೆ, “ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ. ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗು ವುದು ನನ್ನ ಕರ್ತವ್ಯ. ಆದರೆ ಕಾರಣಾಂತರಗಳಿಂದ ಗುರುವಾರ ಹಾಜರಾಗಲು ಸಾಧ್ಯವಿಲ್ಲ. ಸೋಮವಾರ ಆಗಮಿಸುವುದಾಗಿ’ ಬರೆದುಕೊಂಡಿದ್ದಾರೆ.
ಡ್ರಗ್ ಪೆಡ್ಲರ್‌ಗಳ ಜತೆ ಸಂಪರ್ಕ
ರಾಗಿಣಿ ಮತ್ತು ಸಂಜನಾ ಆಪ್ತರು ಎನ್ನಲಾದ ರವಿಶಂಕರ್ ಮತ್ತು ರಾಹುಲ್ ನಗರದ ಕೆಲವು ಡ್ರಗ್ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ರವಿಶಂಕರ್ ವಿಚಾರಣೆ ಸಂದರ್ಭದಲ್ಲಿ ರಾಹುಲ್ ಮತ್ತು ಕಾರ್ತಿಕ್ ರಾಜು ಹೆಸರು ಕೇಳಿ ಬಂದಿತ್ತು. ಕೆಲವು ದಿನಗಳ ಹಿಂದೆ ನಗರದ ಡ್ರಗ್ ಪೆಡ್ಲರ್‌ಗಳಾದ ಕಾರ್ತಿಕ್ ರಾಜು ಮತ್ತು ಆತನ ಸ್ನೇಹಿತ ಪ್ರತೀಕ್ ಶೆಟ್ಟಿ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಹುಲ್ ಹೆಸರು ಪ್ರಸ್ತಾಪವಾಗಿತ್ತು. ಹೀಗಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಗುರುವಾರ ನಸುಕಿನ ವೇಳೆ ರಾಹುಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಲ್ಲೂ ಓಡಿ ಹೋಗಿಲ್ಲ
ಆಪ್ತನನ್ನು ಬಂಧಿಸಿದ ಬೆನ್ನಲ್ಲೇ ನಟಿ ಸಂಜನಾ ಪರಾರಿಯಾಗಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಜನಾ, ನಾನು ಓಡಿ ಹೋಗಿಲ್ಲ. ನನಗೆ ನೋಟಿಸ್ ಬಂದಿಲ್ಲ. ಓಡಿ ಹೋಗಲು ನಾನು ದಾವೂದ್ ಅಲ್ಲ ಎಂದಿದ್ದಾರೆ.
2018ರಲ್ಲೇ “ವಾಸನೆ’?
2018ರಲ್ಲಿ ಕೊಕೇನ್ ಮಾರಾಟ ಪ್ರಕರಣದಲ್ಲಿ ಪ್ರತೀಕ್ ಶೆಟ್ಟಿ ಮತ್ತು ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿತ್ತು. ಆಗ ಕಾರ್ತಿಕ್ ರಾಜು ಕೈವಾಡದ ಬಗ್ಗೆ ಶಂಕೆ ಇದ್ದರೂ ಸಾಕ್ಷ್ಯ ಇರಲಿಲ್ಲ. ಈಗ ಕೆಲವು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾರ್ತಿಕ್ ರಾಜುನನ್ನು ವಶಕ್ಕೆ ಪಡೆಯಲಾಗಿದೆ. ಪ್ರತೀಕ್ ಶೆಟ್ಟಿ ದೊಡ್ಡ ಡ್ರಗ್ ಪೆಡ್ಲರ್ ಆಗಿದ್ದು, ಆಫ್ರಿಕಾ ಪ್ರಜೆಗಳ ಜತೆ ನಂಟು ಹೊಂದಿದ್ದಾನೆ. ಸೆಲೆಬ್ರಿಟಿಗಳಿಗೆ ಡ್ರಗ್ ಸರಬರಾಜು ಮಾಡು ತ್ತಿದ್ದ ಎಂದು ಮೂಲಗಳು ತಿಳಿಸಿವೆ.
“ನಾನೊಬ್ಬ ಮೆಸೆಂಜರ್ ಅಷ್ಟೇ’
ಸಿಸಿಬಿ ವಿಚಾರಣೆ ಬಳಿಕ ಮಾಧ್ಯಮ ಪ್ರತಿಕ್ರಿಯೆ ನೀಡಿದ ಇಂದ್ರಜಿತ್ ಲಂಕೇಶ್, ಈ ಹಿಂದೆ ಕೊಟ್ಟ ಮಾಹಿತಿಗೆ ದಾಖಲೆ ಕೇಳಿದ್ದರು, ಗುರುವಾರ ಕೊಟ್ಟಿದ್ದೇನೆ ಎಂದಿದ್ದಾರೆ. “ನಾನೊಬ್ಬ ಮೆಸೆಂಜರ್ ಅಷ್ಟೇ. ಈ ಮೆಸೆಂಜರ್‌ನ ಕಿಲ್ ಮಾಡಬೇಡಿ’ ಎಂದು ಮನವಿ ಮಾಡಿದ ಇಂದ್ರಜಿತ್, ಸತ್ಯ ಹೇಳುವ ಮೂಲಕ ಒಳ್ಳೆಯ ಸಂದೇಶ ನೀಡಿದ್ದೇನೆ. ನಟ-ನಟಿಯರು ಇದರಲ್ಲಿ ಭಾಗಿ ಯಾಗಿದ್ದಾರೆ. ಮುಂದಿನದನ್ನು ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.