Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
ಏನಿದು 5 ಕೋಟಿ ರೂ. ವಂಚನೆ? ಹೈಕೋರ್ಟ್‌ಗೆ ದಂಪತಿಯಿಂದ ಸುಳ್ಳು ಮಾಹಿತಿ? ..ಬೆಂಜ್ ಕಾರನ್ನು ಬಳಸುತಿದ್ದ ಕಾಂಗ್ರೆಸ್ ಶಾಸಕ
Team Udayavani, Jan 8, 2025, 10:17 AM IST
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿ ಕೊಂಡು ವಂಚಿಸುತ್ತಿದ್ದ ಐಶ್ವರ್ಯ ಗೌಡ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಸ್ತ್ರೀ ರೋಗ ತಜ್ಞೆ ಬಳಿ 2.52 ಕೋಟಿ ರೂ. ನಗದು ಹಾಗೂ 1.75 ಕೋಟಿ ರೂ. ಮೌಲ್ಯದ 2.3 ಕೆಜಿ ಚಿನ್ನಾಭರಣ(ಒಟ್ಟು 4.27 ಕೋಟಿ ರೂ.) ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.
ಆರ್.ಆರ್.ನಗರ ಬಿಇಎಂಲ್ ಲೇಔಟ್ ನಿವಾಸಿ ಸ್ತ್ರೀರೋಗ ತಜ್ಞೆ ಡಾ ಮಂಜುಳಾ ಎ. ಪಾಟೀಲ್ ಎಂಬುವರು ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಶ್ವರ್ಯಾ ಗೌಡ, ಅವರ ಪತಿ ಹರೀಶ್, ಕಾರು ಚಾಲ ಕರಾದ ಧನಂಜಯ್ ಹಾಗೂ ಅಶ್ವಥ್ ಎಂಬುವ ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ದೂರುದಾರರಿಗೆ ಆರೋಪಿಗಳಿಗೆ ಹಣ ಸಂದಾಯ ಮಾಡಿದ ಕುರಿತು ದಾಖಲೆ ಒದಗಿಸುವಂತೆ ನೋಟಿಸ್ ನೀಡಲಾಗಿದೆ.
ಏನಿದು 5 ಕೋಟಿ ರೂ. ವಂಚನೆ?
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿರುವ ಮಂಜುಳಾ ಪಾಟೀಲ್‌ಗೆ 2020-21ನೇ ಸಾಲಿನಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾಗ ಐಶ್ವರ್ಯಾಗೌಡ ಪರಿಚಯವಾಗಿದೆ. ಈ ವೇಳೆ ಆಕೆ ತಾನು, ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಸಹೋದರಿ ಎಂದು ಪರಿಚಯಿಸಿಕೊಂಡಿದ್ದಾಳೆ. ಅಲ್ಲದೆ, ತನಗೆ ದೊಡ್ಡಮಟ್ಟದಲ್ಲಿ ರಿಯಲ್ ಎಸ್ಟೇಟ್,ಗೋಲ್ಡ್ ಬ್ಯುಸಿನೆಸ್, ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದಾಗಿ ನಂಬಿಸಿದ್ದಾಳೆ.
ಈ ಮಧ್ಯೆ 2022ರ ಮಾರ್ಚ್‌ನಲ್ಲಿ ಕೆಲವು ಕಡೆ ನನ್ನ ಕೋಟ್ಯಂತರ ರೂ. ಸ್ಥಗಿತವಾಗಿದೆ. ತುರ್ತಾಗಿ ಹಣ ಬೇಕಿದೆ ಎಂದು 2.52 ಕೋಟಿ ರೂ. ನಗದು ಪಡೆದುಕೊಂಡಿದ್ದಾಳೆ. ಅಲ್ಲದೆ, 2.50 ಕೋಟಿ ರೂ. ಮೌಲ್ಯದ ಒಟ್ಟು 2 ಕೆ.ಜಿ 350 ಗ್ರಾಂ ಚಿನ್ನಾಭರಣ ಪಡೆದಿದ್ದಾಳೆ. ಆದರೆ, ಹಣ ಮತ್ತು ಚಿನ್ನಾಭರಣವನ್ನು ಐಶ್ವರ್ಯಾಗೌಡ ಹಿಂದಿರುಗಿಸದೇ ಸಬೂಬು ಹೇಳುತ್ತಿದ್ದಳು. ಒಮ್ಮೆ ಆಕೆ ಮನೆಗೆ ಹೋಗಿ ಹಣ ಮತ್ತು ಚಿನ್ನಾಭರಣ ವಾಪಸ್ ಕೊಡುವಂತೆ ಕೇಳಲು ಹೋದಾಗ ಕಾರು ಚಾಲಕರಾದ ಅಶ್ವತ್ಥ ಮತ್ತು ಧನಂಜಯ್ ಪ್ರಾಣ ಬೆದರಿಕೆ ಹಾಕಿದ್ದಾರೆ.
ಈ ನಡುವೆ ಇತ್ತೀಚಿಗೆ ಐಶ್ವರ್ಯಾಗೌಡ ಮತ್ತಿತರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಹಾಗೂ ಆರೋಪಿಗಳು ಜಾಮೀನು ಪಡೆದಿರುವುದು ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿತ್ತು. ಬಳಿಕ ಆರ್.ಆರ್.ನಗರ ಠಾಣೆಯಲ್ಲಿ ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ.
ದೂರುದಾರೆಗೆ ನೋಟಿಸ್: ಪ್ರಕರಣ ಸಂಬಂಧ ಸೂಕ್ತ ಮಾಹಿತಿ ನೀಡುವಂತೆ ದೂರುದಾರೆ ಡಾ. ಮಂಜುಳಾ ಪಾಟೀಲ್‌ಗೆ ಆರ್.ಆರ್.ನಗರ ಠಾಣೆ ಪೊಲೀಸರು ದೂರು ನೀಡಿದ್ದಾರೆ. ಆರೋಪಿಗಳಿಗೆ ಸಂದಾಯ ಮಾಡಿರುವ ಬ್ಯಾಂಕ್ ಖಾತೆ ವಿವರ, ಯುಪಿಐ ವಿವರ ಹಾಗೂ ಮೊಬೈಲ್ ನಂಬರ್ ನೀಡಬೇಕು. ಚಿನ್ನಾಭರಣ ಖರೀದಿ ರಸೀದಿ, ಅವುಗಳ ಫೋಟೋ, ಕಾರು ಚಾಲಕರು ನಿಮ್ಮೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿರುವ ಬಗ್ಗೆ ಸಾಕ್ಷ್ಯ ನೀಡಬೇಕು ಹಾಗೂ ಪ್ರಕರಣ ಕುರಿತು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷ್ಯಗಳು ಮತ್ತು ಇತರೆ ದಾಖಲೆಗಳ ನೀಡಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ.
ವೈದ್ಯೆಗೆ ಕಾರು ಚಾಲಕನ ಮುಖಾಂತರ ಬೆದರಿಕೆ:ಪೊಲೀಸರಿಗೆ ದೂರು
ಜ.1ರಂದು ಡಾ. ಮಂಜುಳಾ ಎ. ಪಾಟೀಲ್ ಮನೆ ಬಳಿ ತೆರಳಿದ್ದ ಐಶ್ವರ್ಯಗೌಡ ಕಾರು ಚಾಲಕ ಧನಂಜಯ, ಐಶ್ವರ್ಯಾಗೌಡಗೆ ಕರೆ ಮಾಡಿ ಕೊಟ್ಟಿದ್ದ. ಫೋನ್‌ನಲ್ಲಿ ಮಾತನಾಡಿದ್ದ ಐಶ್ವರ್ಯಾಗೌಡ ಮತ್ತು ಪತಿ ಹರೀಶ್, “ನಿನಗೆ ಕೊಡಬೇಕಿರುವ ಹಣ, ಚಿನ್ನಾಭರಣದ ಕುರಿತು ಎಲ್ಲಿಯೂ ದೂರು ನೀಡಬಾರದು. ಹಾಗೇನಾದರೂ ದೂರು ನೀಡಿದರೆ, ಸಾಕ್ಷಿ ಹೇಳಿಕೆ ನೀಡಿದರೆ ಕೊಡಬೇಕಿರುವ ಹಣ ಚಿನ್ನಾಭರಣ ಕೊಡುವುದಿಲ್ಲ. ನಾನು ಯಾರೆಂದು ಗೊತ್ತಲ್ಲ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರಿ ಎಂಬುದು ಗೊತ್ತಿದೆ ತಾನೇ’ ಎಂದು ಬೆದರಿಕೆ ಹಾಕಿರುವುದಾಗಿ ವೈದ್ಯೆ ಮಂಜುಳಾ ಪಾಟೀಲ್ ದೂರು ನೀಡಿದ್ದಾರೆ .
ಹೈಕೋರ್ಟ್‌ಗೆ ದಂಪತಿಯಿಂದ ಸುಳ್ಳು ಮಾಹಿತಿ?
ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್, ಹೈಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿ ಜಾಮೀನು ಪಡೆದು ಕೊಂಡಿರುವುದು ಗೊತ್ತಾಗಿದೆ. ಆರ್.ಆರ್. ನಗರ ಠಾಣೆ ಪೊಲೀಸರು ಪ್ರಕರಣ ಸಂಬಂಧ ಯಾವುದೇ ನೋಟಿಸ್ ನೀಡಿಲ್ಲ. ಏಕಾಏಕಿ ಬಂಧಿಸಿ ದ್ದಾರೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿ ಜಾಮೀನು ಪಡೆದುಕೊಂಡಿದ್ದರು. ಹೀಗಾಗಿ ಆಕೆ ನೀಡಿದ ಮಾಹಿತಿ ಸುಳ್ಳಾಗಿದ್ದು, ಎರಡು ಬಾರಿ ಆಕೆಗೆ ನೋಟಿಸ್ ನೀಡಿದರೂ ಗೈರಾಗಿದ್ದರು. ಹೀಗಾಗಿ 3ನೇ ಬಾರಿ ನೋಟಸ್ ನೀಡಲಾಗಿತ್ತು. ಆಗಲೂ ಬಾರದಿದ್ದಾಗ ಬಂಧಿಸಲಾಗಿದೆ. ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಸೂಚಿಸಿದ್ದು, ಒಂದೆರಡು ದಿನಗಳಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯೋಗೇಶ್ ಗೌಡ ಕೊಲೆ ಕೇಸ್ ಆರೋಪಿ ಐಶ್ವರ್ಯ ಕಾರು ಚಾಲಕ!
ವೈದ್ಯೆ ಮಂಜುಳಾ ಪಾಟೀಲ್ ಅವರಿಗೆ ವಂಚಿಸಿದ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಅಶ್ವತ್ಥಗೌಡ, ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ 5ನೇ ಆರೋಪಿಯಾಗಿದ್ದಾನೆ. ಈತನೇ ಇದೀಗ ಐಶ್ವರ್ಯಗೌಡಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಅಶ್ವತ್ಥ ಗೌಡ ಐಶ್ವರ್ಯಗೌಡಗೆ ಕಾರು ಚಾಲಕನಾಗಿದ್ದಾನೆ ಎನ್ನಲಾಗಿದೆ. ಹೀಗಾಗಿ ವಿನಯ್ ಹಾಗೂ ಐಶ್ವರ್ಯ ನಡುವೆ ಕೋಟ್ಯಂತರ ರೂ. ವ್ಯವಹಾರ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದಾಯ ತೆರಿಗೆ ಕಟ್ಟದೆ ನಗದು ರೂಪದಲ್ಲೆ ವ್ಯವಹಾರ?
ಕೋಟ್ಯಂತರ ರೂ. ವ್ಯವಹಾರ, ಐಷಾರಾಮಿ ಕಾರುಗಳು, ಮನೆ ಹೊಂದಿರುವ ಐಶ್ವರ್ಯಗೌಡ ಆದಾಯ ತೆರಿಗೆ ಪಾವತಿಸಿಲ್ಲ ಎಂಬುದು ಗೊತ್ತಾಗಿದೆ. ಈಕೆ ಬಹುತೇಕ ನಗದು ರೂಪದಲ್ಲೇ ವ್ಯವಹಾರ ಮಾಡು ತ್ತಿದ್ದರಿಂದ ಆದಾಯ ತೆರಿಗೆಗೆ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಕಾರಣಿಗಳ ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಡುತಿದ ಐಶ್ವರ್ಯ?
ಬೆಂಗಳೂರು: ಡಿ.ಕೆ. ಬ್ರದರ್ಸ್ ಸಹೋದರಿ ಎಂದು ಹೇಳಿಕೊಂಡು ವೈದ್ಯರು, ಚಿನ್ನಾಭರಣ ಮಳಿಗೆ ಮಾಲಿಕರಿಗೆ ಕೋಟ್ಯಂತರ ರೂ. ವಂಚಿಸಿದ್ದ ಐಶ್ವರ್ಯ ಗೌಡ ದಂಪತಿ ರಾಜ್ಯ ಮತ್ತು ರಾಷ್ಟ್ರೀಯ ಪಕ್ಷಗಳ ಮುಖಂಡರ ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸುತ್ತಿರುವ ಅನುಮಾನವಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸ ಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಶ್ವರ್ಯ ಗೌಡಳ ಮೊಬೈಲ್ ಪರಿಶೀಲನೆ ವೇಳೆ ಆಕೆಗೆ ಕೆಲವೊಂದು ರಾಜಕೀಯ ನಾಯಕರ ಪರಿಚಯವಿರುವುದು ಪತ್ತೆಯಾಗಿದೆ. ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕದ ಕೆಲ ಶಾಸಕರು, ಸಚಿವರ ಜತೆ ಆತ್ಮೀಯತೆ ಹೊಂದಿದ್ದಾಳೆ ಎಂಬುದು ಮೊಬೈಲ್‌ನಲ್ಲಿರುವ ಫೋಟೋ, ವಿಡಿಯೋಗಳಿಂದ ತಿಳಿದು ಬಂದಿದೆ.
ಅವರ ಪರಿಚಯದ ಸಂದರ್ಭದಲ್ಲಿ ತನ್ನ ರಿಯಲ್ ಎಸ್ಟೇಟ್, ಗೋಲ್ಡ್ ವ್ಯವಹಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಆಗ ಆ ರಾಜಕೀಯ ಮುಖಂಡರು, ತಮ್ಮ ಬಳಿ ಇರುವ ಬ್ಲ್ಯಾಕ್ ಮನಿಯನ್ನು ವೈಟ್ ಆಗಿ ಪರಿವರ್ತನೆ ಮಾಡಿಕೊಡುವಂತೆ ಕೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಅದರಂತೆ ಈಕೆ ಕಮಿಷನ್ ಪಡೆದು, ರಾಜಕೀಯ ನಾಯಕರ ಕೋಟಿಗಟ್ಟಲೇ ಕಪ್ಪು ಹಣ ವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಾಡಿ, ಆ ಹಣವನ್ನು ಅವರ ಅನುಮತಿ ಮೇರೆಗೆ ಬೇರೆಡೆ ಹೂಡಿಕೆ ಮಾಡುತ್ತಿದ್ದಳು. ಕೆಲ ರಾಜಕೀಯ ಮುಖಂಡರ ಆಸ್ತಿಗಳಿಗೆ ಐಶ್ವರ್ಯಗೌಡ ಬೇನಾಮಿಯಾಗಿದ್ದಾಳೆ ಎಂದು ಹೇಳಲಾಗಿದೆ. ಈ ರೀತಿಯ ಕಮಿಷನ್ ಹಣದಿಂದಲೇ ಐಷಾರಾಮಿ ಮನೆ, ಕಾರುಗಳು ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದಾಳೆ. ಆದರೆ, ಕೆಲ ಮೌಲ್ಯಯುತ ವಸ್ತುಗಳನ್ನು ಪತಿ ಹರೀಶ್ ಹೆಸರಿನಲ್ಲೇ ಖರೀದಿ ಮಾಡಿರುವುದು ಗೊತ್ತಾಗಿದೆ. ಮತ್ತೂಂದೆಡೆ ಐಶ್ವರ್ಯಗೌಡ ದಂಪತಿ ವಿರುದ್ಧ ದೂರು ನೀಡಿರುವ ಕೆಲವರು ತಮ್ಮ ಬಳಿಯಿದ್ದ ಬ್ಲ್ಯಾಕ್ ಮನಿಯನ್ನು ಆರೋಪಿಗೆ ಕೊಟ್ಟಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ವಾಮೀಜಿ ಜೊತೆಗೂ ವಿಡಿಯೋ ಕಾಲ್
ಐಶ್ವರ್ಯಗೌಡ ಜನಪ್ರತಿನಿಧಿಗಳು ಮಾತ್ರವಲ್ಲದೆ, ಸ್ವಾಮೀಜಿಗಳು, ಪೊಲೀಸ್ ಅಧಿಕಾರಿಗಳ ಜತೆ ಸಂಪರ್ಕ ಇರುವುದು ಆಕೆಯ ಮೊಬೈಲ್ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಹಳೇ ಮೈಸೂರು ಭಾಗದ ಶಾಸಕರು, ಉತ್ತರ ಕರ್ನಾಟಕದ ಶಾಸಕರು ಹಾಗೂ ರಾಜ್ಯದ ಪ್ರತಿಷ್ಠಿತ ಸ್ವಾಮೀಜಿ, ಕೆಲ ಪೊಲೀಸ್ ಅಧಿಕಾರಿಗಳಿಗೆ ವಿಡಿಯೋ ಕಾಲ್ ಮಾಡಿರುವುದು ಗೊತ್ತಾಗಿದೆ. ಪ್ರತಿಯೊಬ್ಬರ ಜತೆ ವಿಡಿಯೋ ಕಾಲ್ ಮಾಡಿದಾಗ ತೆಗೆದುಕೊಂಡಿರುವ ಸ್ಕ್ರೀನ್ ಶಾಟ್ ಗಳು ಆಕೆಯ ಮೊಬೈಲ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಶರ್ಯ ಗೌಡ ಪತಿ ಹೆಸರಿನಲ್ಲಿದ್ದ ಬೆಂಜ್ ಕಾರನ್ನು ಬಳಸುತಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ
ಐಶ್ವರ್ಯಗೌಡ ಪತಿ ಹರೀಶ್ ಹೆಸರಿನಲ್ಲಿ ನೋಂದಣಿಯಾಗಿರುವ ಬೆಂಜ್ ಕಾರನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಕಾರನ್ನು ವಾಪಸ್ ತಂದು ಕೊಡುವಂತೆ ಸೂಚಿಸಲಾಗಿದೆ. ಇದೇ ವೇಳೆ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಗೌಡ ದಂಪತಿ ನಡುವೆ ಹಲವಾರು ವರ್ಷಗಳ ಹಿಂದಿನಿಂದ ನಂಟು ಇದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈಗಾಗಲೇ ಐಶ್ವರ್ಯಗೌಡಳಿಂದ ಒಂದು ಬಿಎಂಡಬ್ಲ್ಯೂ, ಆಡಿ ಹಾಗೂ ಫಾರ್ಚೂನರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಐಶ್ವರ್ಯ ಬಳಿ ಇನ್ನೂ ಎರಡು ಬೆಂಜ್ ಕಾರುಗಳಿದ್ದವು. ಈ ಪೈಕಿ ಒಂದನ್ನು ವಿನಯ್ ಕುಲಕರ್ಣಿ ಬಳಸುತ್ತಿದ್ದಾರೆ. ಮತ್ತೂಂದರ ಬಗ್ಗೆ ಆಕೆ ಮಾಹಿತಿ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.