ಭಿನ್ನಮತಕ್ಕೆ ಆಕ್ರೋ”ಶಾ”; ವೈಮನಸ್ಸಿಗೆ ಬೇಸರ
Team Udayavani, Oct 4, 2017, 6:50 AM IST
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೇರಳ ಪ್ರವಾಸದ ಬಳಿಕ ಬುಧವಾರ (ಅ. 4) ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಜತೆ ಸರಣಿ ಸಭೆಗಳನ್ನು ಮಾಡ ಬೇಕಿತ್ತಾದರೂ ಅವೆಲ್ಲವೂ ದಿಢೀರ್ ರದ್ದಾಗಿದ್ದು, ಇದಕ್ಕೆ ರಾಜ್ಯ ಬಿಜೆಪಿಯಲ್ಲಿ ಗುಪ್ತ ಗಾಮಿನಿಯಾಗಿ ಹರಡುತ್ತಿರುವ ಭಿನ್ನಮತವೇ ಕಾರಣ ಎಂದು ತಿಳಿದುಬಂದಿದೆ.
ರಾಜ್ಯ ಬಿಜೆಪಿಯಲ್ಲಿ ಕಳೆದ ವರ್ಷ ಸ್ಫೋಟಗೊಂಡಿದ್ದ ಭಿನ್ನಮತಕ್ಕೆ ಆಗಸ್ಟ್‌ನಲ್ಲಿ ಅಮಿತ್ ಶಾ ಮದ್ದೆರೆದಿದ್ದರು. ಅನಂತರ ನಾಯಕರೆಲ್ಲರೂ ಒಗ್ಗಟ್ಟಿನ ಮಂತ್ರ ಹೇಳಲಾರಂಭಿಸಿದ್ದಾರಾದರೂ ಗುಂಪುಗಾರಿಕೆ ಗುಪ್ತಗಾಮಿನಿಯಾಗಿ ಮುಂದುವರಿದಿತ್ತು. ಈಗ ಜಿಲ್ಲಾ ಮಟ್ಟದಲ್ಲೂ ಸಹ ಎರಡು ಗುಂಪುಗಳಾಗುವವರೆಗೆ ಅದು ಕಾಣಿಸಿಕೊಂಡಿದ್ದು, ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಮಿತ್ ಶಾ ಸಭೆ ಗಳನ್ನೇ ರದ್ದುಗೊಳಿಸುವ ಮೂಲಕ ಭಿನ್ನಮತ ಚಟುವಟಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿ ದ್ದಾರೆಂದು ಹೇಳಲಾಗಿದೆ.
ಕೇರಳ ಪ್ರವಾಸ ಮುಗಿಸಿದ ಬಳಿಕ ಅಮಿತ್ ಶಾ ಬುಧವಾರ ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ, ಪದಾಧಿಕಾರಿಗಳು, ಸಾಂಪ್ರದಾಯಿಕ ಪ್ರಚಾರ ಸಮಿತಿ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿಗಳ ಜತೆ ಸಭೆ ನಡೆಸಬೇಕಿತ್ತು. ಇದಾದ ಬಳಿಕ ಸಂಜೆ ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚನೆ ಮಾಡಬೇಕಿತ್ತು. ಆದರೆ, ಮಂಗಳವಾರ ಮಧ್ಯಾಹ್ನದ ವೇಳೆ ಈ ಎಲ್ಲ ಸಭೆಗಳು ರದ್ದಾಗಿವೆ.
ಮೊದಲು ಮಂಗಳೂರಿನಲ್ಲಿ ಸಭೆಗಳು ನಡೆಯುತ್ತವೆ. ಆದರೆ, ಅಮಿತ್ ಶಾ ಬರುವುದಿಲ್ಲ ಎಂದು ಹೇಳಲಾಗಿತ್ತು. ಅನಂತರದಲ್ಲಿ ಈ ಸಭೆಗಳನ್ನು ಬುಧವಾರವೇ ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಯೋಚಿಸಲಾಗಿತ್ತು. ಬಳಿಕ ಯಾವುದೇ ಸಭೆ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಯಿತು.
ದಿಲ್ಲಿಯಲ್ಲಿ ಅಮಿತ್ ಶಾ ಅವರ ತುರ್ತು ಕಾರ್ಯಕ್ರಮ ಇದ್ದುದರಿಂದ ಮಂಗಳೂರಿನ ಸಭೆಗಳನ್ನು ರದ್ದುಪಡಿಸ ಲಾಗಿದೆ ಎಂದು ಬಿಜೆಪಿ ಅಧಿಕೃತ ಮೂಲಗಳು ಹೇಳುತ್ತವೆ ಯಾದರೂ ಸಭೆ ರದ್ದಾಗಲು ನಿಜವಾದ ಕಾರಣ ಪಕ್ಷದಲ್ಲಿ ಮುಂದುವರಿದ ಗುಂಪುಗಾರಿಕೆ ಎಂದು ಹೇಳಲಾಗಿದೆ.
ಏನಿದು ಗುಂಪುಗಾರಿಕೆ?: ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಅಭ್ಯರ್ಥಿ, ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದ್ದು, ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಸೂಚಿಸಿದ್ದರು. ನಂತರದಲ್ಲಿ ಪಕ್ಷದಲ್ಲಿ ಭಿನ್ನಮತ ದೂರವಾಗಿದೆ ಎಂಬಂತೆ ಕಾಣಿಸುತ್ತಿತ್ತಾದರೂ ಇತ್ತೀಚೆಗೆ ಬೂತ್ ಸಮಿತಿ, ಸಾಂಪ್ರದಾಯಿಕ ಮತ್ತು ಆಧುನಿಕ ಪ್ರಚಾರ ಸಮಿತಿ ರಚನೆಯಾಗುವುದರೊಂದಿಗೆ ಭಿನ್ನಮತ ಮತ್ತೆ ಕಾಣಿಸಿಕೊಂಡಿತ್ತು. ಈ ಮೂರೂ ಸಮಿತಿಗಳಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬೆಂಬಲಿಗರಿಗೆ ಮಣೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಸಮಿತಿ ರಚಿಸುವ ಮುನ್ನ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆಯನ್ನೂ ಮಾಡಿರಲಿಲ್ಲ ಎಂದು ಹೇಳಲಾಗಿತ್ತಲ್ಲದೇ, ಇದನ್ನು ಅಮಿತ್ ಶಾ ಅವರ ಗಮನಕ್ಕೂ ತರಲಾಗಿತ್ತು.
ಈ ಮಧ್ಯೆ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲು ಬಿಜೆಪಿ 17 ಮಂದಿಯ ರಾಜ್ಯ ಮಟ್ಟದ ಪ್ರಣಾಳಿಕಾ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿರುವವರೆಲ್ಲರೂ ಯಡಿಯೂರಪ್ಪ ಅವರಿಗೆ ಆಪ್ತರು. 2013ರ ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪ ಅವರು ಪಕ್ಷ ತೊರೆದಿದ್ದಾಗ ಪ್ರಚಾರದ ಉಸ್ತುವಾರಿ ನೋಡಿಕೊಂಡಿದ್ದ ಸಂತೋಷ್ ಅವರ ಬೆಂಬಲಿಗರನ್ನು ಈ ಸಮಿತಿಗೆ ಆಯ್ಕೆ ಮಾಡದ ಬಗ್ಗೆ ಮತ್ತೂಂದು ಗುಂಪಿನಲ್ಲಿ ಅಸಮಾಧಾನ ಉಂಟಾಗಿದೆ.
ಇನ್ನೊಂದೆಡೆ ಉತ್ತರ ಪ್ರದೇಶ ಮಾದರಿಯಲ್ಲಿ ಸ್ಥಳೀಯ ಆದ್ಯತೆಗಳನ್ನು ಪರಿಗಣಿಸಿ ಜಿಲ್ಲಾ ಮಟ್ಟದಲ್ಲಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ಮುಂದಾಗಿರುವ ಬಿಜೆಪಿ, ಈಗಾಗಲೇ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಿದೆ. ಈ ಸಮಿತಿಯಲ್ಲಿ ಸಂತೋಷ್ ಬೆಂಬಲಿಗರೇ ಇದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಸಂತೋಷ್ ಅವರ ಆಪ್ತ ಮೂಲಗಳ ಪ್ರಕಾರ, ಅಮಿತ್ ಶಾ ಅವರ ಸೂಚನೆಯಂತೆ ಪಕ್ಷದಲ್ಲಿ ಜಿಲ್ಲಾ ಮಟ್ಟದ ಪ್ರಣಾಳಿಕೆ ಸಮಿತಿ ರಚಿಸಲಾಗಿದೆ. ಪಕ್ಷದ ನಿಷ್ಠರನ್ನೇ ಇದಕ್ಕೆ ನೇಮಿಸಲಾಗಿದ್ದು, ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿಲ್ಲ ಎಂದು ಹೇಳುತ್ತಾರೆ.
ಪ್ರಸ್ತುತ ಈ ಗುಂಪುಗಾರಿಕೆ ಮೇಲ್ನೋಟಕ್ಕೆ ಕಾಣದೇ ಇದ್ದರೂ ಜಿಲ್ಲೆಗಳಲ್ಲಿಯೂ ಪಕ್ಷ ಎರಡು ಗುಂಪುಗಳಾಗಿ ಕೆಲಸ ಮಾಡುವ ಪರಿಸ್ಥಿತಿ ಉದ್ಭವವಾಗಿದೆ ಎಂಬ ವರದಿ ಅಮಿತ್ ಶಾ ಅವರ ಕೈಸೇರಿದೆ. ಈ ಕಾರಣಕ್ಕಾಗಿ ಶಾ ಅವರು ಬುಧವಾರ ಮಂಗಳೂರಿನಲ್ಲಿ ಕರೆದಿದ್ದ ಸಭೆಗಳನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.