ಭಟ್ಕಳ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಅನಂತ
Team Udayavani, Sep 4, 2017, 12:01 PM IST
ಹೊನ್ನಾವರ: ಹಿಂದೂ ಸಂಘಟನೆಯ ಸಾಮಾನ್ಯ ಕಾರ್ಯಕರ್ತನಾಗಿ ಶಿರಸಿಯಲ್ಲಿ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ ಅನಂತಕುಮಾರ ಹೆಗಡೆ ಭಟ್ಕಳವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ನಡೆದವರು.
ಕೇಂದ್ರ ಸಂಪುಟ ವಿಸ್ತರಣೆ ಸಮಯದಲ್ಲಿ ಅನಿರೀಕ್ಷಿತವಾಗಿ ಅನಂತಕುಮಾರ ಹೆಗಡೆ ಹೆಸರು ಬರಲು ಕಾರಣವಿದೆ. ಬಿಜೆಪಿಯನ್ನು ಅದ್ಭುತವಾಗಿ ಸಮರ್ಥಿಸಿಕೊಳ್ಳಬಲ್ಲ, ಪ್ರತಿಪಕ್ಷವನ್ನು ಹಿಗ್ಗಾಮುಗ್ಗಾ ಜಾಲಾಡಿಸಬಲ್ಲ ವಾಕ್ ಚಾತುರ್ಯ ಹೊಂದಿರುವ ಹೆಗಡೆ, ಬಿಜೆಪಿಯ ರಾಜ್ಯ ಕಾರ್ಯದರ್ಶಿ ಆಗುವವರೆಗೆ ತಮ್ಮ ಕ್ಷೇತ್ರದಲ್ಲಿ ಗಟ್ಟಿ ನಿಲ್ಲುವ ರಾಜಕೀಯ ತಂತ್ರಗಾರಿಕೆ ಮಾಡುತ್ತಾ ಬಂದರು. ತಮ್ಮ ವಾಗ್ಝರಿಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಬಲ್ಲ, ಆ ಕ್ಷಣದಲ್ಲಿ ಎಲ್ಲರನ್ನೂ ಒಪ್ಪಿಸಬಲ್ಲ, ಎಲ್ಲ ಜಾತಿಯವರ ವಿಶ್ವಾಸ ಗಳಿಸಿರುವ ಹೆಗಡೆ ಎಂಬ ನಾಣ್ಯ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ತರುವ ವಿಶ್ವಾಸದ ಮೇಲೆ ಮಂತ್ರಿ ಪಟ್ಟ ದಕ್ಕಿದೆ.
ಪ್ರಾಮಾಣಿಕ, ಸತ್ಯವಂತ, ಸೌಮ್ಯ ಸ್ವಭಾವದ ಹಿಂದೂವಾದಿ ಡಾ| ಯು.ಚಿತ್ತರಂಜನ್ ಅವರ ಶಿಷ್ಯರಾಗಿ ಅವರ ಮನೆಯಲ್ಲೇ ಉಳಿದು, ಭಟ್ಕಳದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯತ್ನ ಆರಂಭಿಸಿದ ಅನಂತ, ಚಿತ್ತರಂಜನರ ಧ್ವನಿಗೆ ಪ್ರತಿಧ್ವನಿಯಾಗಿ ಎಲ್ಲರಿಗೆ ಕೇಳಿಸುವಂತಾದರು. ಸ್ಪುರದ್ರೂಪಿ, ಎತ್ತರದ ಅನಂತ ಎಲ್ಲರಿಗೂ ಕಾಣುವಂತಾದರು. ಕೋಮುಗಲಭೆಯ ವಿವಾದದಲ್ಲಿ ಅನಂತ ಹೆಸರು ಸುಳಿದಾಡಿತ್ತೇ ವಿನಃ ಆಧಾರ ಕೊನೆಗೂ ಸಿಗಲಿಲ್ಲ. ಇಲ್ಲಿಂದ ಅವರ ನಡೆ ವಿವಾದಾಸ್ಪದವಾಯಿತು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜ ಏರಿಸುವ ಪ್ರಕರಣ ರಾಜ್ಯಕ್ಕೆ ಅನಂತರನ್ನು ಪರಿಚಯಿಸಿತು. ಅತಿಕ್ರಮಣ ನಿಲ್ಲಿಸಲು ಬಂದ ಅಧಿಕಾರಿಗಳ ಕೈ ಕಡಿಯಿರಿ, ಪಾಕಿಸ್ತಾನದಲ್ಲಿ ಭಗವಾ ಧ್ವಜ ಹಾರಿಸಬೇಕು ಎನ್ನುವವರೆಗೆ ಮಾತನಾಡುವ ಅನಂತ, ಚುನಾವಣೆ ಸಮಯದಲ್ಲೊಮ್ಮೆ ಹಿಂದೂಗಳ ಹೊರತಾಗಿ ಇತರರ ಮತ ಬೇಡ ಎಂದು ಬಹಿರಂಗವಾಗಿಯೇ ಭಾಷಣ ಮಾಡಿದ್ದರು. ವರ್ಷಕಾಲ ಭಟ್ಕಳದಲ್ಲಿ ನಡೆದ ಗಲಭೆ, ಉಭಯ ಕೋಮು ಸೇರಿ ನಡೆದ 21 ಹತ್ಯೆಗಳು, ಚಿತ್ತರಂಜನ್, ತಿಮ್ಮಪ್ಪ ನಾಯಕರ ಹತ್ಯೆ ಸಹಿತ ಹಲವು ನಡೆಯಬಾರದ ಘಟನೆಗಳಿಂದಾಗಿ ಕರಾವಳಿಯಲ್ಲಿ ಹಿಂದುತ್ವದ ಕಾವು ಉಳಿಯಿತು. ಬಿಜೆಪಿ ಗೆಲುವಿಗೆ ಬಹುಮಟ್ಟಿಗೆ ಕಾರಣವಾಯಿತು. ಅನಂತ ಇದಕ್ಕೆ ಕಾರಣರಾದವರಲ್ಲಿ ಒಬ್ಬರು.
ಪಕ್ಷದ ಮೇಲೆ ಬಲವಾದ ಹಿಡಿತ: ಪರ್ಯಾಯ ಅಭ್ಯರ್ಥಿ ಇಲ್ಲದಂತೆ ಪಕ್ಷದ ಮೇಲೆ ಹಿಡಿತ ಸಾಧಿಸಿರುವ ಅನಂತ, ದೊಡ್ಡ ಬೆಂಬಲಿಗರ ಪಡೆ ಕಟ್ಟಿದ್ದಾರೆ. ಅನಂತ ಹೇಳಿದರೆ ಸಮುದ್ರಕ್ಕೆ ಹಾರಲು ಸಿದ್ಧ ಎಂದು ಹೇಳುವ ಕಾರ್ಯಕರ್ತರು ಅನಂತ ಜೊತೆಗೆ ಇರು ವುದು ವಿಶೇಷ. ವರ್ಷಗಟ್ಟಲೆ ಕಾಣದಿದ್ದಾಗ ಗೊಣಗುವ ಕಾರ್ಯಕರ್ತರು ಅನಂತ ಎದುರಾದಾಗ ಎಲ್ಲ ಮರೆತು ತಬ್ಬಿಕೊಳ್ಳುತ್ತಾರೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಇನ್ನೊಬ್ಬ ಇಲ್ಲ ಎಂಬಷ್ಟರ ಮಟ್ಟಿಗೆ ಅನಂತ ಬೆಳೆದಿದ್ದಾರೆ.
ಪರಿಸರವಾದಿಗಳಿಂದ ಅಡ್ಡಗಾಲು: ಉತ್ತರ ಕನ್ನಡದ 11, ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ತಾಲೂಕುಗಳನ್ನೊಳಗೊಂಡ ಸುಮಾರು ಗೋವಾ ರಾಜ್ಯದಷ್ಟೇ ದೊಡ್ಡದಾದ ಕೆನರಾ ಮತ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅನಂತ ಪರಿಸರಕ್ಕೆ ಪೂರಕವಾದ ಕೆನರಾ ಟ್ರೇಲ್‌ನಂತಹ ಯೋಜನೆ ತಂದರೂ ಪರಿಸರವಾದಿಗಳು ಅಡ್ಡಗಾಲು ಹಾಕಿದರು. ಸಿಆರ್‌ಜಡ್ ಮತ್ತು ಅರಣ್ಯ ಕಾನೂನು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲಾಗಿರುವುದರಿಂದ ಅನಂತ ಯೋಜನೆಗೆ ಕಲ್ಲುಬಿತ್ತು. ಅವರು ಸಂಸದರಿದ್ದಾಗ ಸೀಬರ್ಡ್ ಯೋಜನೆ ಬಂತು, ಪರಿಹಾರದ ತೀರ್ಮಾನ ಈಗ ಬಂದಿದೆ, ಕೊಡಿಸುವ ಜವಾಬ್ದಾರಿ ಮಂತ್ರಿ ಅನಂತ ಮೇಲಿದೆ.
ಕೇಂದ್ರ ಸಂಪುಟದಲ್ಲಿ ಕೌಶಲ್ಯಾಭಿವೃದ್ಧಿ ಸಚಿವರಾಗಿ ನೇಮಕಗೊಂಡಿರುವ ಅನಂತಕುಮಾರ್ ಹೆಗಡೆ ಅವರಿಗೆ ಅಭಿನಂದನೆಗಳು. ಹೊಸ ಭಾರತ ಸೃಷ್ಟಿಗಾಗಿ ಕೋಟ್ಯಂತರ ಕೌಶಲ್ಯಭರಿತ ಯುವ ಸಮುದಾಯ ರೂಪಿಸುವ ಪ್ರಧಾನಿ ಮೋದಿ ಕನಸಿಗೆ ಹೊಸ ಶಕ್ತಿ ಬರಲಿದೆ. ಮಹತ್ವದ ಖಾತೆ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ಮುಕ್ತಾರ್ ಅಬ್ಟಾಸ್ ನಖೀÌ, ಧರ್ಮೇಂದ್ರ ಪ್ರಧಾನ್ ಅವರನ್ನೂ ಅಭಿನಂದಿಸುತ್ತೇನೆ.
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಜೀಯು ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.