BJP; ಬ್ಲ್ಯಾಕ್ ಮೇಲ್ ತಂತ್ರದಿಂದ ರಾಜ್ಯಾಧ್ಯಕ್ಷರ ನೇಮಕವಾಗಿದೆ: ಮತ್ತೆ ಗುಡುಗಿದ ಯತ್ನಾಳ್
Team Udayavani, Nov 17, 2023, 3:02 PM IST
ಬೆಂಗಳೂರು: ಬಿಜೆಪಿಯ ಅತೃಪ್ತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ವಿಜಯೇಂದ್ರ ಬಗ್ಗೆ ಗುಡುಗಿದ್ದು, ಬ್ಲ್ಯಾಕ್ ಮೇಲ್ ತಂತ್ರದಿಂದ ರಾಜ್ಯಾಧ್ಯಕ್ಷರ ನೇಮಕವಾಗಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೋ ಒಂದು ಕುಟುಂಬದ ಪಕ್ಷವಲ್ಲ. ಇದನ್ನು ನಾವು ಕೂಡ ಒಪ್ಪುವುದಿಲ್ಲ. ಬಿಜೆಪಿಗಾಗಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಾನು ಪ್ರಾಣ ಕೊಡಲೂ ತಯಾರಾಗಿದ್ದೇನೆ. ಆದರೆ ಕೆಲ ಚೇಲಾಗಳ ಮಾತು ಕೇಳಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬಾರದು. ಇವರ ತರ ನಾನು ಥರ್ಢ್ ಕ್ಲಾಸ್ ಇಲ್ಲ. ಅಧ್ಯಕ್ಷನಾಗಬೇಕು, ವಿರೋಧ ಪಕ್ಷದ ನಾಯಕನಾಗಬೇಕು ಎಂದು ನಾನು ಹಲ್ಕಾ ಕೆಲಸ ಮಾಡುವುದಿಲ್ಲ ಎಂದರು.
ನಿನ್ನ ಯಾರು ಬೆನ್ನು ಹತ್ತಿಲ್ಲ ಅಂದರೆ ನೀನೊಬ್ಬನೇ ಹೋಗು ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಅದಕ್ಕಾಗಿ ಸತ್ಯ ಹಿಡಿದು ನಾನೊಬ್ಬನೇ ಹೋಗಿದ್ದಕ್ಕೆ ಉತ್ತರ ಕರ್ನಾಟಕ ಭಾಗದವರಿಗೆ ಗೌರವ ಸಿಕ್ಕಿದೆ. ನಾನು ಇವರ ತರ ಹೊಂದಾಣಿಕೆಯಾಗಿದ್ದರೆ ಬೇಕಾದಷ್ಟು ದುಡ್ಡು ಮಾಡಿಕೊಳ್ಳಬಹುದಿತ್ತು. ಇಂತಹ ಸ್ಲಮ್ ನಲ್ಲಿ ನಾನು ವಾಸ ಮಾಡುತ್ತಿರುತ್ತಿರಲಿಲ್ಲ. ಇದನ್ನೆಲ್ಲಾ ನಾನು ವೀಕ್ಷಕರಿಗೆ ಹೇಳಿದ್ದೇನೆ. ಇವರ ಬಣ್ಣವನ್ನು ಬಯಲು ಮಾಡುವ ಕೆಲಸ ಮಾಡಿದ್ದೇನೆ ಎಂದರು.
ಯಡಿಯೂರಪ್ಪ, ವಿಜಯೇಂದ್ರರಿಂದ ಯತ್ನಾಳ್ ಸಂಪರ್ಕ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೆಲಸ ಇದ್ದಾಗ ಮಾಡುತ್ತಾರೆ, ಮುಂದೆ ತುಳಿಯುವ ಕೆಲಸಕ್ಕಾಗಿ ನನಗೆ ಕರೆ ಮಾಡುತ್ತಾರೆ. ನನ್ನಂತಹ ಬಡಪಾಯಿ ಮನೆಗೆ ವೀಕ್ಷಕರು ಬಂದಿದ್ದರು. ಅದೇ ಯಡಿಯೂರಪ್ಪ ಮನೆಗೆ ಹೋಗಿದ್ದರೆ ಬೆಳ್ಳಿ ತಟ್ಟೆ ಊಟ ಸಿಕ್ತಿತ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಎಲ್ಲಾ ಹೇಳಿದ್ದೇನೆ
ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ, ಚುನಾವಣೆಯಲ್ಲಿ ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಿದ್ದರು ಎಂದು ವಿವರಿಸಿದ್ದೇನೆ. ಅವರಿಗೆ ಎಷ್ಟೋ ವಿಷಯ ಗೊತ್ತಿರಲಿಲ್ಲ. ನಾನು ಧೈರ್ಯದಿಂದ ಎಲ್ಲವನ್ನೂ ಹೇಳಿದ್ದೇನೆ. ನಾವು ಈ ದೇಶದಲ್ಲಿ ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ವರಿಷ್ಠರು ಕೆಲವೇ ಚೇಲಾಗಳ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಾರದು. ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ, ನಾನು ಅಂಜಲ್ಲ ಎಂದು ಹೇಳಿದ್ದೇನೆ. ಇಬ್ಬರೂ ಬಹಳ ಖುಷಿಯಾದರು. ನೀವು ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ, ಅಧ್ಯಕ್ಷರು ಮತ್ತು ಪ್ರಧಾನಿಗೆ ಹೇಳುತ್ತೇವೆ ಎಂದು ಹೇಳಿದ್ದಾರೆ. ನಿಮ್ಮನ್ನು ಮನೆಗೆ ಕರೆಸುವಷ್ಟು ದೊಡ್ಡ ಮನೆ ನಂದಲ್ಲ ಎಂದು ಹೇಳಿದೆ. ನನ್ನ ಮನೆಯೂ ಸಣ್ಣದಿದೆ, ಮುಂದಿನ ಸಲ ನನ್ನ ಮನೆ ತೋರಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು ಎಂದು ಯತ್ನಾಳ್ ಹೇಳಿದರು.
ಉ.ಕರ್ನಾಟಕದವರಿಗೆ ಸ್ಥಾನ ನೀಡಬೇಕು
ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತೇನೆ, ಅಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ. ವಿಪಕ್ಷ ನಾಯಕ ಉತ್ತರ ಕರ್ನಾಟಕ್ಕೆ ಕೊಡಬೇಕು, ಅದರಲ್ಲಿ ರಾಜಿ ಇಲ್ಲ. ದಕ್ಷಿಣ ಕರ್ನಾಟಕದವರೇ ಆಗಬೇಕಾ? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರರಿದ್ದಾರೆ. ಬಹಳಷ್ಟು ಶಾಸಕರು ನಮ್ಮ ಜೊತೆಗಿದ್ದಾರೆ ಆದರೆ ಅವರಿಗೆ ಮಾತಾಡಲು ಧಮ್ ಇಲ್ಲ. ಅವರಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ಇದ್ದಾರೆ. ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದಿದ್ದರೆ ಜನ ತೀರ್ಮಾನ ಮಾಡುತ್ತಾರೆ, ಆಗ ನಾವೂ ತೀರ್ಮಾನ ಮಾಡುತ್ತೇವೆ ಎಂದು ಯತ್ನಾಳ್ ಹೇಳಿದರು.
ಉ.ಕರ್ನಾಟಕಕ್ಕೆ ಅನ್ಯಾಯ ಮಾಡಿದರೆ ಕೆಲವೇ ದಿನಗಳಲ್ಲಿ ಜನ ಪ್ರತಿಫಲ ಕೊಡುತ್ತಾರೆ. ಜೀ ಹುಜೂರ್ ಸಂಸ್ಕೃತಿ ನನ್ನದಲ್ಲ. ಪಂಚಮಸಾಲಿ ಸಮುದಾಯವನ್ನು ಯಾವಾಗಲೂ ನಿರ್ಲಕ್ಷ್ಯ ಮಾಡಿದ್ದಾರೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಎಲ್ಲ ಈ ಕಡೆಯವರೇ ಆದರೆ ನಾವು ಸರ್ ಸರ್ ಅಂತಾ ಅವರ ಬಾಲ ಹಿಡಿದುಕೊಂಡು ಅವರ ಮನೆಗೆ ಹೋಗಬೇಕೆ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕಕ್ಕೆ ವಿಪಕ್ಷ ನಾಯಕನ ಸ್ಥಾನ ಕೊಡಬೇಕೆಂದು ನಾವೆಲ್ಲರೂ ಒಂದಾಗಿದ್ದೇವೆ, ಬೊಮ್ಮಾಯಿಯವರನ್ನೂ ಭೇಟಿ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದವರಿಗೆ ವಿರೋಧ ಪಕ್ಷ ಸ್ಥಾನ ಕೊಡಲೇಬೇಕು. ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಎಲ್ಲಾ ದಕ್ಷಿಣ ಕರ್ನಾಟಕದವರು ಆದರೇ ಉತ್ತರ ಕರ್ನಾಟಕದವರು ಏನು ಮಾಡಬೇಕು ಎಂದರು.
ವಿರೋಧ ಪಕ್ಷದ ನಾಯಕ ಯಾರೇ ಆದರೂ ಅದಕ್ಕೆ ನಿಮ್ಮ ಸಹಕಾರ ಇರುತ್ತದಾ ಎಂಬ ಪ್ರಶ್ನೆಗೆ ಯತ್ನಾಳ್, ಸಂಜೆಯ ಸಭೆಯಲ್ಲಿನ ಹೆಸರು ನೋಡಿ ಮುಂದೆ ಮಾತನಾಡುತ್ತೇನೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.