ಪರಿಪೂರ್ಣತೆಗೆ ಗಮನ ನೀಡಿದಾಗ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯ : ಮನು ಸಾಲೆ
'ಹವ್ಯಕ ಭವನ'ದಲ್ಲಿ "ವಿಜಯೀ ಭವ''
Team Udayavani, Jul 17, 2022, 9:03 PM IST
ಬೆಂಗಳೂರು: ಪರಿಪೂರ್ಣತೆಗೆ ಗಮನ ನೀಡಿದಾಗ ಮಾತ್ರ ನಾವು ಹತ್ತರಲ್ಲಿ ಹನ್ನೊಂದಾಗದೇ, ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಬೆನ್ಜ್ ಕಂಪನಿಯ ಸಿಇಓ ಮನು ಸಾಲೆ ಹೇಳಿದರು.
ಶ್ರೀ ಅಖಿಲ ಹವ್ಯಕ ಮಹಾಸಭೆಯ ‘ಹವ್ಯಕ ಭವನ’ದಲ್ಲಿ ನಡೆದ “ವಿಜಯೀ ಭವ” ಕಾರ್ಯಕ್ರಮದಲ್ಲಿ ಸ್ಪೂರ್ತಿಯ ಮಾತುಗಳನ್ನಾಡಿದ ಮರ್ಸಿಡಿಸ್ ಬೆನ್ಜ್ ಸಿಇಓ ಮನು ಸಾಲೆ, ಉದ್ಯಮ ಯಶಸ್ವಿಯಾಗಲು ಗ್ರಾಹಕ ಸಂತುಷ್ಟಿ ಹಾಗೂ ಉತ್ಪನ್ನದ ಗುಣಮಟ್ಟ ಮುಖ್ಯ. ಹಾಗೆಯೇ ಮನುಷ್ಯನಲ್ಲಿ ಉತ್ಸಾಹ ಇಲ್ಲದಿದ್ದರೆ ಗುರಿ ಮುಟ್ಟಲು ಅಸಾಧ್ಯ. ಯಶಸ್ಸಿನ ಹಿಂದೆ ನಾವು ಹೋಗಬಾರದು. ನಾವು ಕೆಲಸ ಮಾಡುತ್ತಾ ಹೋಗಬೇಕು. ಯಶಸ್ಸು ನಮ್ಮ ಕೆಲಸದ ಜೊತೆ ಬರುತ್ತದೆ ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.
ಮರ್ಸಿಡಿಸ್ ಬೆನ್ಜ್ ಅಂತಾರಾಷ್ಟ್ರೀಯ ಅಧಿಕಾರಿಯೊಬ್ಬರು ಹಿಂದೊಮ್ಮೆ ಮಾತನಾಡುತ್ತಾ, ಪ್ರತಿ ಬೆನ್ಜ್’ಲ್ಲಿ ಭಾರತದ ಸ್ವಲ್ಪ ಪಾಲಿದೆ ಎಂದಿದ್ದರು. ಪ್ರತಿ ಬೆನ್ಜ್’ನಲ್ಲಿ ಬಹುಪಾಲು ಭಾರತದ್ದಿದೆ ಎಂದು ಹೇಳುವಂತಾಗಬೇಕು ಎಂಬುದು ನನ್ನ ಗುರಿ ಎಂದ ಅವರು, ಯುವ ಜನತೆ ಭಾರತದ ಬಹುದೊಡ್ಡ ಆಸ್ತಿ. ನಮ್ಮ ನಮ್ಮ ವಿಭಾಗದಲ್ಲಿ ಸರಿಯಾಗಿ ಕೆಲಸ ಮಾಡುವ ಮೂಲಕ ದೇಶಕಟ್ಟಲು ನೆರವಾಗಬಹುದಾಗಿದೆ ಎಂದರು.
ಹೊರದೇಶಗಳಲ್ಲಿ ನಾವು ನಮ್ಮ ದೇಶವನ್ನು ಪ್ರತಿನಿಧಿಸುವಾಗ, ಮೊದಲು ನನ್ನ ದೇಶ, ನಂತರ ನನ್ನ ಕಂಪನಿ, ಆನಂತರ ನಾನು ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡರೆ ದೇಶಕ್ಕೆ ಹೆಮ್ಮ ತರಲು ಸಾಧ್ಯವೆಂದರು.
ಉದ್ಯಮದ ಕುರಿತಾದ ಪ್ರೀತಿಯೇ ಯಶಸ್ಸಿನ ಗುಟ್ಟಾಗಿದ್ದು, ವಾಹನದ ಮೇಲೆ ನನಗಿರುವ ಹುಚ್ಚೇ ಸಾರಿಗೆ ಉದ್ಯಮದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ವಾಹನದ ಕುರಿತಾದ ಕಿಚ್ಚು ಹತ್ತಲು ನನ್ನ ತಂದೆಯೇ ಕಾರಣ ಎಂದು ಶ್ರೀಕುಮಾರ್ ರೋಡ್’ಲೈನ್ಸ್ ಹಾಗೂ ಟ್ರಾವೆಲ್ಸ್ ಮಾಲಿಕರಾದ ವೆಂಕಟರಮಣ ವಿ ಹೆಗಡೆ ಹೇಳಿದರು.
ಉದ್ಯಮಿ ವಿಜಯ ಸಂಕೇಶ್ವರ ಅವರು ನನ್ನ ಉದ್ಯಮಕ್ಕೆ ಮಾದರಿ ಯಾಗಿದ್ದು, ಉದ್ಯಮ ನಡೆಸುವಾಗ ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡಬಾರದು ಎಂಬುದು ಮೂಲಮಂತ್ರವಾಗಿದೆ. ಚಾಲಕರೇ ವಾಹನೋದ್ಯಮದ ನಿಜವಾದ ಚಾಲಕರು ಎಂದು ತಿಳಿಸಿದರು.
ಮೊದಲು ಸಾರಿಗೆ ಉದ್ಯಮ ಆರಂಭಿಸಿದಾಗ ಸ್ವಂತವಾಗಿ ವಾಹನ ಚಾಲನೆ ಮಾಡುತ್ತಿದೆ. ಉದ್ಯಮ ಬೆಳೆದು 50 ಕಮರ್ಷಿಯಲ್ ವಾಹನಗಳನ್ನು ನಡೆಸಿದೆ. ಉದ್ಯಮದಲ್ಲಿ ನಷ್ಟವಾದಾಗ ಕುಗ್ಗಿದ್ದೆ. ಆದರೆ ಸ್ನೇಹಿತರ ಬೆಂಬಲದಿಂದ ಹುಬ್ಬಳ್ಳಿಯಲ್ಲಿ ಕಛೇರಿ ಆರಂಭಿಸಿ; ಮತ್ತೆ ಉದ್ಯಮ ಬೆಳಸಿದೆ. ಈಗ 36 ಬಸ್ಸು ಹಾಗೂ 75 ಸರಕು ಸಾಗಣೆವಾಹನ ನಡೆಸುತ್ತಿದ್ದೇನೆ ಎಂದು ತಮ್ಮ ಸಾಧನೆಯ ಹಾದಿಯನ್ನು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಿನಿ ತಾರೆ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ‘ವಿಜಯೀ ಭವ’ ದ ಮೂಲಕ ಹವ್ಯಕ ಮಹಾಸಭೆಯು ಸಾಧಕರ ಪರಿಚಯವನ್ನು ಸಮಾಜಕ್ಕೆ ಮಾಡುವ ಮೂಲಕ; ಸ್ಪೂರ್ತಿಯನ್ನು ತುಂಬುತ್ತಿರುವುದು ಶ್ಲಾಘನೀಯ. ಮಹಾಸಭೆಯು ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಾವೆಲ್ಲ ಕೈಜೋಡಿಸೋಣ ಎಂದರು.
ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಮಾತನಾಡಿ, ಯಶಸ್ಸನ್ನು ಸಂಭ್ರಮಿಸುವ ಹಬ್ಬ ‘ವಿಜಯೀ ಭವ’ ಸರಣಿಯಾಗಿದ್ದು, ಜೀವನದಲ್ಲಿ ಯಶಸ್ಸನ್ನು ಸಾಧಿಸಿದರು ತಮ್ಮ ಯಶೋಗಾಥೆಯನ್ನು ಹೇಳಿ; ಉಳಿದವರಿಗೆ ಸ್ಪೂರ್ತಿಯ ತುಂಬುವುದು ಈ ಕಾರ್ಯಕ್ರಮದ ಉದ್ದೇಶ. ಹವ್ಯಕರಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭೆಗಳಿಗೆ ಯಶಸ್ಸಿನ ದಾರಿಯ ಮಾರ್ಗದರ್ಶನದ ಅಗತ್ಯವಿದ್ದು, ಮಹಾಸಭೆ ಈ ದಿಶೆಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಪ್ರತಿಮಾ ಭಟ್, ಕೃಷ್ಣಾನಂದ ಶರ್ಮ ಸಾಧಕರ ಜೊತೆ ಸಂವಾದ ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮನು ಸಾಲೆ, ಶ್ರೀ ವೆಂಕಟರಮಣ ವಿ ಹೆಗಡೆ ಹಾಗೂ ಶ್ರೀ ನೀರ್ನಳ್ಳಿ ರಾಮಕೃಷ್ಣ ಇವರನ್ನು ಮಹಾಸಭೆಯವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ತಾಳಮದ್ದಳೆ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು. ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯದರ್ಶಿ ಆದಿತ್ಯ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಶ್ರೀಧರ ಜೆ ಭಟ್ಟ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ, ಕಾರ್ಯಕ್ರಮದ ಸಂಚಾಲಕ ರವಿನಾರಾಯಣ ಪಟ್ಟಾಜೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.