ಅಂಧ ಮಕ್ಕಳ ಕಲಿಕೆಗಾಗಿ ಆಡಿಯೋ ಪಠ್ಯಪುಸ್ತಕ
Team Udayavani, Jun 1, 2018, 6:00 AM IST
ಬೆಂಗಳೂರು: ಗ್ರಾಮೀಣ ಪ್ರದೇಶದ ಅಂಧ ಮಕ್ಕಳ ಕಲಿಕೆಗಾಗಿ ಶ್ರಮಿಸುತ್ತಿರುವ ಕನ್ನಡ ಪುಸ್ತಕ ತಂಡ ಇದೀಗ ಆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆಡಿಯೋ ಪಠ್ಯ ಪುಸ್ತಕಗಳನ್ನು ಹೊರತರಲು ಯೋಜನೆ ರೂಪಿಸಿದ್ದು, ಪಠ್ಯಪುಸ್ತಕಗಳಿಗೆ ಧ್ವನಿ ನೀಡಲು
ಇಚ್ಛಿಸುವ ಕಲಾವಿದರ ಹುಡುಕಾಟದಲ್ಲಿ ನಿರತವಾಗಿದೆ. ಉತ್ತಮ ಧ್ವನಿ ಹೊಂದಿರುವ ಹಾಗೂ ಕನ್ನಡವನ್ನು ಸರಾಗವಾಗಿ ಓದಬಲ್ಲ ಸ್ವಯಂಸೇವಕರು ಈ ಅನುಪಮ ಕಾರ್ಯಕ್ರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ ಅವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಎಂ.ಡಿ.ಪಲ್ಲವಿ ಅವರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಕೆಲ ಪುಸ್ತಕಗಳಿಗೆ ಧ್ವನಿ ನೀಡಿದ್ದಾರೆ. ಅಲ್ಲದೆ, ಕಲಾವಿದರ ಧ್ವನಿ ಮುದ್ರಣಕ್ಕಾಗಿ ರಘು ದೀಕ್ಷಿತ್ ಅವರು ತಮ್ಮ ಸ್ಟುಡಿಯೋವನ್ನು ಉಚಿತವಾಗಿ ನೀಡಿದ್ದಾರೆ. ಈ ಸಂಬಂಧ ಇತ್ತೀಚೆಗಷ್ಟೇ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಪುಸ್ತಕ ತಂಡದೊಂದಿಗೆ ಪಠ್ಯ ಪುಸ್ತಕದ ಧ್ವನಿ ಮುದ್ರಣಕ್ಕೆ ಸಂಬಂಧಿಸಿದ ಎರಡು ಯೋಜನೆಗಳ ಬಗ್ಗೆ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ಮಾತುಕತೆ ನಡೆಸಿದರು. ಜತೆಗೆ ವಿಜ್ಞಾನ ಮತ್ತು ಗಣಿತ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯ ಮತ್ತು ಧ್ವನಿ ಮುದ್ರಣ ವಿಚಾರವಾಗಿ ಕೆಲಹೊತ್ತು ಚರ್ಚೆ ನಡೆಸಿದರು.
ಒಂದನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಡಿಯೋ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲು ಕನ್ನಡ ಪುಸ್ತಕ ತಂಡ ಮುಂದಾಗಿದ್ದು, ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಲು ಇಚ್ಛಿಸುವವರು www. kannadapustaka.org ಅನ್ನು ಸಂಪರ್ಕಿಸಬಹುದಾಗಿದೆ.
ರಾಜ್ಯದಲ್ಲಿ ಸುಮಾರು 50 ಸಾವಿರ ಅಂಧ ಮಕ್ಕಳಿದ್ದಾರೆ. ಅವರ ಕಲಿಕೆಗೆ ಸರಿಯಾದ ಪಠ್ಯಪುಸ್ತಕಗಳಿಲ್ಲ. ಅಲ್ಲದೆ, ಬ್ರೈಲ್ ಲಿಪಿ ಮೂಲಕ ಎಲ್ಲವನ್ನೂ ಓದಿ ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ತಂಡ ಅಂಧ ಮಕ್ಕಳ ಬದುಕಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಆಡಿಯೋ
ಪಠ್ಯಪುಸ್ತಕಗಳನ್ನು ಹೊರತರಲು ಯೋಜನೆ ರೂಪಿಸಿದೆ. ಇಂತಹ ಒಳ್ಳೆ ಕಾರ್ಯಕ್ಕೆ ನಾನು ಕೂಡ ಕೈ ಜೋಡಿಸಿರುವುದು ಖುಷಿ ನೀಡಿದೆ.
● ಎಂ.ಡಿ.ಪಲ್ಲವಿ, ಹಿನ್ನೆಲೆ ಗಾಯಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.