ರಸ್ತೆ ಗುಂಡಿಗೆ ಬಿದ್ದು ಅಜ್ಜ, ಅಜ್ಜಿ ಸಾವು, ಮೊಮ್ಮಗಳು ಬಚಾವ್
Team Udayavani, Oct 3, 2017, 3:56 PM IST
ಬೆಂಗಳೂರು:ಮೊಮ್ಮಗಳ ಜತೆ ಬೈಕ್ ನಲ್ಲಿ ತೆರಳುತ್ತಿದ್ದ ವೃದ್ಧ ದಂಪತಿ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದ ವೇಳೆ ಏಕಾಏಕಿ ಮೈಮೇಲೆ ತಮಿಳುನಾಡು ಸಾರಿಗೆ ಬಸ್ ಹರಿದು ಹೋದ ಪರಿಣಾಮ ಸ್ಥಳದಲ್ಲೇ ದಂಪತಿ ಬಲಿಯಾಗಿರುವ ಘಟನೆ ಸೋಮವಾರ ತಡರಾತ್ರಿ ಕೆಆರ್ ಮಾರ್ಕೆಟ್ ಫ್ಲೈಓವರ್ ರಸ್ತೆಯಲ್ಲಿ ನಡೆದಿದೆ. ಮೊಮ್ಮಗಳು ಮಾತ್ರ ಪವಾಡಸದೃಶ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮೊಮ್ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಜ್ಜ, ಅಜ್ಜಿ ವಾಪಸ್ ಆಗುತ್ತಿದ್ದ ವೇಳೆ ಬೈಕ್ ರಸ್ತೆ ಗುಂಡಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಬಸ್ ಅವರ ಮೇಲೆ ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ ಅಜ್ಜ, ಅಜ್ಜಿ ಸಾವನ್ನಪ್ಪಿದ್ದರು, ಮೊಮ್ಮಗಳು ಮಾತ್ರ ಅಪಾಯದಿಂದ ಬಚಾವ್ ಆಗಿದ್ದ.
ಮೈಸೂರು ರಸ್ತೆ ಫ್ಲೈಓವರ್ ಮೇಲೆ ಈ ದುರ್ಘಟನೆ ನಡೆದಿದೆ. ಮೈಸೂರು ರಸ್ತೆ ಗೋರಿಪಾಳ್ಯ ನಿವಾಸಿಗಳಾದ ಅಂಥೋನಿ ಜೋಸೆಫ್(55ವರ್ಷ) ಮತ್ತು ಸಗಾಯ್ ಮೇರಿ(53ವರ್ಷ) ಘಟನೆಯಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಗುವಿಗೆ ಸಣ್ಣ, ಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಚಿಕ್ಕಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಗುಂಡಿಗಳಿಗೆ ಇನ್ನೆಷ್ಟು ಬಲಿಯಾಗಬೇಕು?
ಸಿಲಿಕಾನ್ ಸಿಟಿಯಲ್ಲಿರುವ ರಸ್ತೆ ಗುಂಡಿಗಳಿಗೆ ಇನ್ನೆಷ್ಟು ಮಂದಿ ಬಲಿಯಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೂಡಲೇ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ.