ಜನತಾ ಪರಿವಾರದಿಂದ ಬಿಜೆಪಿ ತನಕ: ಹೋರಾಟದ ಹೆಜ್ಜೆ…
Team Udayavani, Jul 28, 2021, 7:00 AM IST
ಮಾಜಿ ಮುಖ್ಯಮಂತ್ರಿ ಪುತ್ರ ಹಾಗೂ ರಾಜ್ಯದ ಪ್ರಬಲ ಸಮುದಾಯ ವೀರಶೈವ-ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಯು ಮತ್ತೆ ಅದೇ ಸಮುದಾಯಕ್ಕೆ ಮಣೆ ಹಾಕಿದೆ.
ಎಸ್.ಆರ್. ಬೊಮ್ಮಾಯಿ 1988-89ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಂದರೆ ಹೆಚ್ಚು-ಕಡಿಮೆ ಮೂರು ದಶಕಗಳ ಅನಂತರ ಅವರ ಪುತ್ರ ಈಗ ಆ ಹುದ್ದೆ ಅಲಂಕರಿಸುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅನಂತರ ಹೀಗೆ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರ ಸಿಎಂ ಸ್ಥಾನ ಅಲಂಕರಿಸುತ್ತಿರುವ ಎರಡನೇ ವ್ಯಕ್ತಿ ಬಸವರಾಜ ಬೊಮ್ಮಾಯಿ ಆಗಿದ್ದಾರೆ.
ಮೂಲತಃ ಹುಬ್ಬಳ್ಳಿಯವರಾದ ಬಸವರಾಜ ಬೊಮ್ಮಾಯಿ ಅವರು ರಾಜಕೀಯ ನೆಲೆ ಕಂಡುಕೊಂಡಿದ್ದು ಶಿಗ್ಗಾಂವಿ. ಮಾಜಿ ಮುಖ್ಯಮಂತ್ರಿ ಪುತ್ರರಾದರೂ ಅವರ ರಾಜಕೀಯ ಹಾದಿ ಹೋರಾಟದಿಂದಲೇ ಕೂಡಿದೆ. ರೈತರೊಂದಿಗೆ ಪಾದಯಾತ್ರೆ, ಐತಿಹಾಸಿಕ ಸಂಘಟನಾ ರ್ಯಾಲಿ, ಈದ್ಗಾ ಮೈದಾನ ಸಮಸ್ಯೆ ಪರಿಹಾರ ಸೇರಿ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಕಾಲೇಜು ಹಂತದಲ್ಲೇ ಸಕ್ರಿಯರಾಗಿದ್ದರು. ಆದರೆ, ಮೊದಲ ಬಾರಿ ವಿಧಾನಸೌಧ ಪ್ರವೇಶ ಪಡೆಯಲು ಸಾಧ್ಯವಾಗಿದ್ದು 1997ರಲ್ಲಿ ಜನತಾ ಪಕ್ಷದಿಂದ. ತಮ್ಮ 37ನೇ ವಯಸ್ಸಿನಲ್ಲಿ ಅವರು ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ಆಯ್ಕೆಯಾಗುತ್ತಾರೆ. ಅಲ್ಲಿಂದ ಬೊಮ್ಮಾಯಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. 2003ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದರು.
ಅಲ್ಲಿಂದ ರಾಜಕೀಯವಾಗಿ ಶಾಶ್ವತ ನೆಲೆ ಕಂಡುಕೊಳ್ಳಲು ಬೊಮ್ಮಾಯಿ ಶಿಗ್ಗಾಂವಿಗೆ ಬರುತ್ತಾರೆ. ಅಷ್ಟರಲ್ಲಿ ಅವರು ಬಿಜೆಪಿಗೆ ಸೇರುತ್ತಾರೆ. 2008ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶಿಗ್ಗಾಂವಿ ಜನ ಈ “ವಲಸಿಗ’ನ ಕೈಹಿಡಿಯುತ್ತಾರೆ. ಅಷ್ಟರಲ್ಲಿ ಜನತಾ ಪರಿವಾರದಿಂದ ಬಿಜೆಪಿಗೆ ಸೇರಿಕೊಳ್ಳುವುದರ ಜತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲೂ ಸ್ಥಾನ ಪಡೆಯುತ್ತಾರೆ. ಅನಂತರ ಸತತ ಮೂರು ಬಾರಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಜನ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತಾರೆ. ಆಯ್ಕೆಯಾದ ವರ್ಷವೇ ಅವರು ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗುತ್ತಾರೆ. ಅನಂತರ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲೂ ಅದೇ ಜಲಸಂಪನ್ಮೂಲ ಖಾತೆ ಸಚಿವರಾಗಿ ಮುಂದುವರಿಯುತ್ತಾರೆ. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ಈ ಮಧ್ಯೆ ಯಡಿಯೂರಪ್ಪ ಅವರು ಬಿಜೆಪಿಯಿಂದ ಬಂಡೆದ್ದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸ್ಥಾಪಿಸುತ್ತಾರೆ. ಅದರ ಅಧಿಕೃತ ಘೋಷಣೆ ಹಾಗೂ ಸಮಾವೇಶ ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿಯಲ್ಲೇ ಆಗುತ್ತದೆ. ಆಗ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಆಹ್ವಾನವನ್ನೂ ನೀಡುತ್ತಾರೆ. ಆದರೆ, ವಿನಯದಿಂದ ನಿರಾಕರಿಸಿ, ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಈಗ ರೇಸ್‌ನಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಅದು ಕೂಡ ಒಂದು ಕಾರಣ ಎಂದು ಹೇಳಬಹುದು.
ಇನ್ನು ಬಸವರಾಜ ಬೊಮ್ಮಾಯಿ ಮೂಲತಃ ಮೆಕಾನಿಕಲ್ ಎಂಜಿನಿಯರ್. ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರ್ ಪದವಿ ಪೂರೈಸಿದ ಅವರು, ಎರಡು ವರ್ಷ ಪುಣೆಯ ಟೆಲ್ಕೋ ಕಂಪೆನಿಯಲ್ಲಿ ತಾಂತ್ರಿಕ ತರಬೇತಿ ಪಡೆದು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಉದ್ಯೋಗವನ್ನೂ ಆರಂಭಿಸುತ್ತಾರೆ. ಈ ನಡುವೆ ವಿದ್ಯಾರ್ಥಿದೆಸೆಯಿಂದಲೂ ಒಂದಿಲ್ಲೊಂದು ರಾಜಕೀಯ-ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಅವರನ್ನು ರಾಜಕೀಯ ಕ್ಷೇತ್ರ ಸೆಳೆಯುತ್ತದೆ. 1995ರಲ್ಲಿ ರಾಜ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಳ್ಳುತ್ತಾರೆ. 1996-97ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಜನತಾ ಪರಿವಾರ ರಾಜ್ಯದಲ್ಲಿ ಪ್ರಬಲವಾಗಿರುತ್ತದೆ. 1997ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಅಧಿಕೃತ ರಾಜಕೀಯ ಪಯಣ ಶುರುವಾಗುತ್ತದೆ.
ಪ್ರವಾಹ, ಕೊರೊನಾ ಸವಾಲು :
ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ, ಕೊರೊನಾ ಮೂರನೇ ಅಲೆ ತಡೆಗಟ್ಟುವಿಕೆ ಮೊದಲ ಸವಾಲಾಗಿದೆ. ಜತೆಗೆ, ಸತತ ಎರಡು ವರ್ಷಗಳ ಪ್ರವಾಹ, ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟವಾಗಿದ್ದು ಸಂಪನ್ಮೂಲ ಕ್ರೋಡೀಕರಣ ಮೂಲಕ ಆರ್ಥಿಕತೆ ಸರಿ ದಾರಿಗೆ ತರುವ ಹೊಣೆಗಾರಿಕೆಯೂ ಇದೆ. ಕೊರೊನಾದಿಂದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ, ಇದೀಗ ಅದಕ್ಕೆ ಹಣ ಹೊಂದಾಣಿಕೆ ಮಾಡಿ ಸರಿತೂಗಿಸಬೇಕಾಗಿದೆ. ಬಿಜೆಪಿ ಪ್ರಣಾಳಿಕೆಯ ಅಂಶಗಳನ್ನು ಜಾರಿಗೊಳಿಸಬೇಕಾಗಿದೆ.
ಹೊಂದಾಣಿಕೆ ಸ್ವಭಾವ :
ಬಸವರಾಜ ಬೊಮ್ಮಾಯಿ ಜನತಾಪರಿವಾರ ಮೂಲದವರಾದರೂ ಸಂಯುಕ್ತ ಜನತಾದಳ ಹಾಗೂ ಬಿಜೆಪಿ ನಡುವೆ ಮೈತ್ರಿ ಆದಾಗಿನಿಂದ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದರು. ಅನಂತರ ಬಿಜೆಪಿ ಬಂದ ಅನಂತರ ಸಂಘ ಪರಿವಾರದ ನಾಯಕರಿಗೂ ಹತ್ತಿರವಾಗಿ ಮೂಲ ಬಿಜೆಪಿ ನಾಯಕರ ಜತೆ ಹೊಂದಾಣಿಕೆಯಿಂದಾಗಿ ಎಲ್ಲರಿಗೂ ಸಲ್ಲುವ ಹಾಗೂ ಸಮನ್ವಯತೆಯಿಂದ ಕೆಲಸ ಮಾಡುವ ನಾಯಕರಾಗಿ ರೂಪುಗೊಂಡರು. ಜನತಾಪರಿವಾರ ಹಾಗೂ ಕಾಂಗ್ರೆಸ್‌ನಲ್ಲಿ ಹೆಚ್ಚು ಸ್ನೇಹಿತ ವಲಯ ಹೊಂದಿದ್ದರೂ ಬಿಜೆಪಿ ಹಾಗೂ ಸರಕಾರದ ವಿಚಾರ ಬಂದಾಗ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರು.ಗೃಹ ಸಚಿವರಾಗಿ ಮಾದಕ ವಸ್ತುಗಳ ವಿರುದ್ಧ ಅಭಿಯಾನ ರೂಪಿಸಿ ಮೂಲ ಬಿಜೆಪಿಯವರಿಗೂ ಪ್ರೀತಿ ಪಾತ್ರರಾಗಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂದ ವಲಸಿಗರಿಗೂ ಆಪ್ತರಾಗಿದ್ದರು.
ತಂದೆಯ ನೆರಳು, ನಾಯಕರ ಗರಡಿ :
ಬಸವರಾಜ ಬೊಮ್ಮಾಯಿ ತಮ್ಮ ತಂದೆ ಎಸ್.ಆರ್. ಬೊಮ್ಮಾಯಿ ಅವರ ನೆರಳಿನಲ್ಲೇ ರಾಜಕಾರಣ ಮಾಡಿಕೊಂಡು ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಸೇರಿದಂತೆ ಜನತಾಪರಿವಾರದ ನಾಯಕರ ಗರಡಿಯಲ್ಲಿ ಪಳಗಿದವರು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. ಜನತಾದಳ ವಿಭಜನೆ ಅನಂತರ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡು ಅನಂತರ ಬಿಜೆಪಿಗೆ ಸೇರ್ಪಡೆಯಾದ ಅನಂತರ ಯಡಿಯೂರಪ್ಪ ಅವರ ಜತೆ ಗುರುತಿಸಿಕೊಂಡಿದ್ದರು.
ಹೊಸ ಸಿಎಂ ಪರಿಚಯ :
- ಜನನ-1960 nತಂದೆ- ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ nತಾಯಿ- ಗಂಗಮ್ಮ nಪತ್ನಿ- ಚನ್ನಮ್ಮ ಬಿ. ಬೊಮ್ಮಾಯಿ
- ಪುತ್ರ- ಭರತ ,ಪುತ್ರಿ- ಆದಿತಿ
- ವಿದ್ಯಾಭ್ಯಾಸ: ಹುಬ್ಬಳ್ಳಿಯ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜು
- ಎಂಜಿನಿಯರಿಂಗ್ (ಮೆಕಾನಿಕಲ್)- ಬಿ.ವಿ. ಭೂಮರೆಡ್ಡಿ ಕಾಲೇಜು
- ಉದ್ಯೋಗ ಪ್ರಾರಂಭ: 1983-85ರವರೆಗೆ ಪುಣೆಯ ಟೆಲ್ಕೋ ಕಂಪೆನಿಯಲ್ಲಿ nಸಾಮಾಜಿಕ ಮತ್ತು ರಾಜಕೀಯ ಸೇವೆ 2007ರಲ್ಲಿ ಧಾರವಾಡದಿಂದ ನರಗುಂದವರೆಗೆ 21 ದಿನಗಳ ರೈತರೊಂದಿಗೆ ಬೃಹತ್ ಪಾದಯಾತ್ರೆ
- 1993ರಲ್ಲಿ ಹುಬ್ಬಳ್ಳಿಯಲ್ಲಿ ಯುವ ಜನತಾದಳದ ಐತಿಹಾಸಿಕ ಬೃಹತ್ ರ್ಯಾಲಿ
- 1995ರಲ್ಲಿ ಈದ್ಗಾ ಮೈದಾನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ನೇತೃತ್ವ
- 1995ರಲ್ಲಿ ಜನತಾದಳದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
- 1996-97ರಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ
- 1997 ಹಾಗೂ 2003ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆ
- 2008ರಲ್ಲಿ ಶಿಗ್ಗಾಂವಿಯಿಂದ ಶಾಸಕರಾಗಿ ಆಯ್ಕೆ
- 2008-2013ರವರೆಗೆ ಜಲಸಂಪನ್ಮೂಲ ಸಚಿವರಾಗಿ ಸೇವೆ
- 2013ರಲ್ಲಿ ಶಾಸಕರಾಗಿ ಮತ್ತೆ ಆಯ್ಕೆ
- 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ
- 2018ರಿಂದ ಗೃಹ ಸಚಿವರಾಗಿ ಸೇವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.