![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 8, 2024, 11:01 PM IST
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಬಹಿರಂಗ ಪ್ರಕರಣದಲ್ಲಿ ಮೈತ್ರಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡೆಗೆ ಬೊಟ್ಟು ಮಾಡುತ್ತಿರುವ ಬೆನ್ನಲ್ಲೇ ತಿರುಗಿಬಿದ್ದ ಕಾಂಗ್ರೆಸ್‌ನ ಒಕ್ಕಲಿಗ ಸಚಿವರು ಮತ್ತು ಶಾಸಕರು, ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿ ಶಕ್ತಿಪ್ರದರ್ಶಿಸಿದರು. ಅಲ್ಲದೆ ವಿಪಕ್ಷಗಳು ವ್ಯವಸ್ಥಿತವಾಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಸಹಿತ ವಿಪಕ್ಷಗಳ ನಾಯಕರು, ಪ್ರಜ್ವಲ್ ಅಶ್ಲೀಲ ವೀಡಿಯೋ ಪ್ರಕರಣದ ಪ್ರಮುಖ ರೂವಾರಿ ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಒಕ್ಕಲಿಗ ಸಮುದಾಯ ಟಾರ್ಗೆಟ್ ಆಗುತ್ತಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರು, ನಾಯಕರು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ-ಜೆಡಿಎಸ್ ಅನ್ನು ತರಾಟೆಗೆ ತೆಗೆದುಕೊಂಡರು.
ಹಿಂದೂ ಮಹಿಳೆಯರ ಮಾಂಗಲ್ಯ ಹಾಳು
ಸಚಿವ ಕೃಷ್ಣ ಬೈರೇಗೌಡ ಮಾತ ನಾಡಿ, ನೂರಾರು ಹಿಂದೂ ಮಹಿಳೆ ಯರ ಮಾಂಗಲ್ಯ ಹಾಳುಮಾಡಿರುವ ಜಗತ್ತಿನ ಅತಿದೊಡ್ಡ ಲೈಂಗಿಕ ಹಗರಣ ನಡೆದಿದೆ. ಇದು ಮೂಲ ಪ್ರಕರಣ. ಇದರಲ್ಲಿನ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಮುಖ್ಯ ಗುರಿ ಆಗಬೇಕು. ಆದರೆ, ಅದರ ಬಗ್ಗೆ ಮಾತಾಡಿದ್ದೇ ಅಪರಾಧ ಎನ್ನುವಂತೆ ಬಿಂಬಿಸಲಾಗುತ್ತಿದೆ. ಅಂದರೆ ದರೋಡೆ ಮಾಡಿದ್ದು ಅಪರಾಧ ಅಲ್ಲ; ಅದರ ಬಗ್ಗೆ ದೂರು ಸಲ್ಲಿಸಿದ್ದು ಮುಖ್ಯ ಆದಂತಾಗಿದೆ ಎಂದರು.
ಇದುವರೆಗೆ ಈ ಪ್ರಕರಣ ಅಕ್ಷಮ್ಯ ಅಂತ ಆ ಕುಟುಂಬದವರು (ಗೌಡರ ಕುಟುಂಬಕ್ಕೆ) ಖಂಡಿಸಿದ್ದಾರಾ? ತಪ್ಪಿತಸ್ಥನಿಗೆ ಶರಣಾಗಲು ಯಾಕೆ ಸೂಚಿಸಲಿಲ್ಲ? ಬಿಜೆಪಿ ಮೇಲಿನ ತಮ್ಮ (ಕುಮಾರಸ್ವಾಮಿಗೆ) ಸಿಟ್ಟನ್ನು ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ. ಮನೆಗೆ ಬಂದ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಲು ನಾವು ಹೇಳಿದ್ದಾ? ಲೈಂಗಿಕ ಕಿರುಕುಳ ನೀಡಲು ನಾವು ಹೇಳಿದ್ದಾ? ಅಥವಾ ಕಿಡ್ನಾಪ್ ಮಾಡಲು ನಾವು ಹೇಳಿದ್ದಾ ಎಂದು ಪ್ರಶ್ನಿಸಿದರು.
ಎಲ್ಲವೂ ನಿಮ್ಮ ಹಿಡಿತದಲ್ಲಿದೆ ಅಂದುಕೊಳ್ಳಬೇಡಿ
ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಮಾಜವನ್ನು ಈ ವಿಚಾರದಲ್ಲಿ ಎಳೆದುತರುವುದು ಒಳ್ಳೆಯದಲ್ಲ. ನಾವು-ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ. ಸಂದರ್ಭ ಬಂದಾಗ ಸಮಾಜ ನಮ್ಮನ್ನು ನಿಮ್ಮನ್ನು ಬೆಂಬಲಿಸುತ್ತದೆ. ಸಮಾಜ ಒಂದಿಷ್ಟು ಜನರಿಗೆ ಹೆಚ್ಚು ಮತ್ತು ಹಲವರಿಗೆ ಕಡಿಮೆ ಆಶೀರ್ವಾದ ಮಾಡಿರಬಹುದು. ಹಾಗಂತ, ಎಲ್ಲವೂ ನಮ್ಮದೇ ಹಿಡಿತದಲ್ಲಿದೆ ಎಂದು ಭಾವಿಸುವುದು ತಪ್ಪು ಎಂದು ಖಾರವಾಗಿ ಹೇಳಿದರು.
ಮೊದಲು ಏಕವಚನದಲ್ಲಿ ಮಾತನಾಡುವುದು, ಗದರಿಸಿ ಹೇಳುವುದನ್ನು ನಿಲ್ಲಿಸಬೇಕು. ನಿಮಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನಮಗೂ ಗೊತ್ತು ಎಂದ ಚಲುವರಾಯಸ್ವಾಮಿ, ವೀಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ಅದರ ಹಂಚಿಕೆ ಬಗ್ಗೆ ಮಾತಾಡುತ್ತಿದ್ದಾರೆ. ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಮತ್ತು ಡಿ.ಕೆ.ಶಿವಕುಮಾರ್ ಅವರಿಗೂ ಸಂಬಂಧ ಇಲ್ಲ. ಅವರು (ಕುಮಾರಸ್ವಾಮಿ) ಟೀಕಿಸಿದ ಕಾರಣಕ್ಕೆ ಪಕ್ಷದ ಅಧ್ಯಕ್ಷರು ತಿರುಗೇಟು ನೀಡಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದರು.
ಶರಣಾಗಲು ಹೇಳಿ
ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಆಪಾದನೆ ಬಂದ ತತ್‌ಕ್ಷಣ ಆರೋಪಿಗೆ ಶರಣಾಗಲು ಹೇಳಿದ್ದರೆ, ಇಷ್ಟೆಲ್ಲ ಗೊಂದಲವೇ ಇರುತ್ತಿರಲಿಲ್ಲ. ಆರೋಪ ಸುಳ್ಳಾದರೆ ಖುಲಾಸೆ ಆಗುತ್ತಿದ್ದರು. ಈ ಕೆಲಸ ಮಾಡಲಿಲ್ಲ ಯಾಕೆ ಎಂದು ಕೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಪ್ರಮುಖರಾದ ಪ್ರೊ| ರಾಜೀವ್‌ಗೌಡ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ದಿನೇಶ್ ಗೂಳಿಗೌಡ, ರಮೇಶ್ ಬಾಬು, ತೇಜಸ್ವಿನಿ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಮುಳಗುಂದ ಮತ್ತಿತರರು ಉಪಸ್ಥಿತರಿದ್ದರು.
ಈ ಹಿಂದೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತಾ ಸ್ವತಃ ಕುಮಾರಸ್ವಾಮಿ ಹೇಳಿದ್ದರು. ಈಗ ತನಿಖಾ ಸಂಸ್ಥೆಗೆ ಕಪ್ಪುಚುಕ್ಕೆ ಬರುವಂತೆ ನಡೆದುಕೊಳ್ಳುತ್ತಾರೆ. ಪ್ರಕರಣದ ಹಿನ್ನೆಲೆ-ಮುನ್ನೆಲೆ ಗೊತ್ತಿದ್ದೂ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಗೊತ್ತಿಲ್ಲ. ತನಿಖೆಗೆ ಸಹಕಾರ ನೀಡಬೇಕು.
-ಡಾ| ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.