ಸಾಮೂಹಿಕ ಸಂಕಷ್ಟ
ಗುಂಪಿನೊಂದಿಗೆ ರಾಜೀನಾಮೆ ಕೊಡುತ್ತೇನೆ ಎಂದ ಜಾರಕಿಹೊಳಿ
Team Udayavani, Apr 25, 2019, 6:06 AM IST
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ತಣ್ಣಗಾಗಿದ್ದು, ಇದರ ಬೆನ್ನ ಹಿಂದೆಯೇ ರಮೇಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಮೇಲೆ ‘ಸಾಮೂಹಿಕ ರಾಜೀನಾಮೆ’ಯ ಬಾಂಬ್ ಎಸೆದಿದ್ದಾರೆ.
ಮಂಗಳವಾರವಷ್ಟೇ ಬೆಳಗಾವಿಯಲ್ಲಿ ರಾಜೀನಾಮೆಯ ಅಸ್ತ್ರ ಪ್ರಯೋಗಿಸಿದ್ದ ರಮೇಶ್, ಬುಧವಾರ ಬೆಂಗಳೂರಿಗೆ ಆಗಮಿಸಿ ರಾಜೀನಾಮೆಯ ಪರ್ವಕ್ಕೆ ‘ಸಾಮೂಹಿಕ’ ಪದವನ್ನೂ ಸೇರಿಸಿ ರಾಜ್ಯದ ಎಲ್ಲಾ ಪಕ್ಷಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದಾರೆ. ಇದಷ್ಟೇ ಅಲ್ಲ, ಜಾರಕಿಹೊಳಿ ಸಹೋದರರ ಜಗಳವೂ ಜೋರಾಗಿದ್ದು, ಎಲ್ಲಾ ಗೊಂದಲಗಳಿಗೆ ಸತೀಶ್ ಕಾರಣ ಎಂದು ರಮೇಶ್ ಜಾರಕಿಹೊಳಿ ನೇರವಾಗಿಯೇ ಆರೋಪಿಸುವ ಮೂಲಕ ಇಡೀ ಬಂಡಾಯ ಪರ್ವಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಕಾಂಗ್ರೆಸ್‌ನಿಂದ ನಿರ್ಲಕ್ಷ್ಯ: ಈ ಹಿಂದೆ ರಮೇಶ್ ಜಾರಕಿಹೊಳಿ ಅವರ ಬಂಡಾಯವನ್ನು ತೀರಾ ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಈ ಬಾರಿ ನಿರ್ಲಕ್ಷ್ಯ ವಹಿಸಿರುವಂತೆ ತೋರುತ್ತಿದೆ. ರಮೇಶ್ ರಾಜೀನಾಮೆ ನೀಡುತ್ತೇನೆ ಎಂದಿದ್ದರೂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಾಗಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಯಾವುದೇ ಆತಂಕ ವ್ಯಕ್ತಪಡಿಸಿಲ್ಲ. ದಿನೇಶ್ ಮಂಗಳವಾರ ಪ್ರತಿಕ್ರಿಯೆ ನೀಡಿದ್ದರಾದರೂ, ಸಿದ್ದರಾಮಯ್ಯ ಅವರಂತೂ ಇದುವರೆಗೆ ಮಾತನಾಡಿಯೇ ಇಲ್ಲ. ಇದ್ದುದರಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ, ಸರ್ಕಾರಕ್ಕೆ ಅಪಾಯ ಬರದಂತೆ ಆಪರೇಷನ್ ಹಸ್ತ ನಡೆಸಲೂ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದು, ಇವರೂ ಉತ್ತರ ಕರ್ನಾಟಕದ ಕೆಲವು ಬಿಜೆಪಿ ನಾಯಕರ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಕಾದು ನೋಡುವ ತಂತ್ರಕ್ಕೆ ಬಿಜೆಪಿ: ಕಾಂಗ್ರೆಸ್‌ನಲ್ಲಾಗುತ್ತಿರುವ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ನಾಯಕರು ಕಾದು ನೋಡುವ ತಂತ್ರಕ್ಕೆ ಹೋಗಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಬರುವ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು. ಸದ್ಯದಲ್ಲೇ ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆ ಮೇಲಷ್ಟೇ ನಾವು ಗಮನಹರಿಸಿದ್ದೇವೆ ಎಂದೂ ಹೇಳಿದ್ದಾರೆ. ಈ ನಡುವೆ, ಬಿಜೆಪಿ ಮೂಲಗಳ ಪ್ರಕಾರ, ಸದ್ಯಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವುದು ಪಕ್ಷಕ್ಕೆ ಬೇಡವಾಗಿದೆ. ಈಗ ರಾಜೀನಾಮೆ ಕೊಟ್ಟರೆ, ಯಾವುದೇ ಅನುಕೂಲಗಳಾಗುವುದಿಲ್ಲ. ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಮೇಲೆ ಇಂಥ ಕ್ರಮಗಳಿಗೆ ಮುಂದಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ ಎಂದು ಹೇಳಲಾಗುತ್ತಿದೆ.
ಜತೆಗೆ ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಮೇ 23 ರ ವರೆಗೂ ಬಿಜೆಪಿ ನಾಯಕರು ಶಾಸಕರ ರಾಜೀನಾಮೆ ಪರ್ವ ಹಾಗೂ ಆಪರೇಷನ್ ಕಮಲದ ಯತ್ನದಿಂದ ದೂರ ಉಳಿಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯ ಫಲಿತಾಂಶ ಬರುವ ಹೊತ್ತಿಗೆ ಅಗತ್ಯವಿರುವಷ್ಟು ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಮುಂದುವರೆಯುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೌನಕ್ಕೆ ಶರಣಾದ ಜೆಡಿಎಸ್: ರಮೇಶ್ ಜಾರಕಿಹೊಳಿ ಬಂಡಾಯದ ಸುದ್ದಿ ತಿಳಿಯುತ್ತಿದ್ದಂತೆ ಉಡುಪಿ ರೆಸಾರ್ಟ್‌ನಿಂದಲೇ ಮಂಗಳವಾರವೇ ಬೆಂಗಳೂರಿಗೆ ಬಂದಿರುವ ಸಿಎಂ, ಶಾಸಕರ ರಾಜೀನಾಮೆ ಕುರಿತಂತೆ ಮಾಹಿತಿ ಪಡೆದು ನಿರಮ್ಮಳರಾಗಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರಿಸಬಾರದು ಎಂಬ ನಿರ್ಧಾರಕ್ಕೂ ಜೆಡಿಎಸ್ ಬಂದಂತಿದೆ. ಇದು ಸಂಪೂರ್ಣವಾಗಿ ಕಾಂಗ್ರೆಸ್‌ನ ಆಂತರಿಕ ವಿಚಾರವಾಗಿದೆ. ಅದನ್ನು ಅವರೇ ಬಗೆಹರಿಸಿಕೊಳ್ಳಲಿ. ಇದರಲ್ಲಿ ನಾವೇಕೆ ತಲೆ ಹಾಕುವುದು ಎಂಬ ಧೋರಣೆ ಜೆಡಿಎಸ್ ನಾಯಕರಲ್ಲಿದೆ. ಹೀಗಾಗಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರ ಬಳಿ ಈ ಸಂಬಂಧ ಪ್ರತಿಕ್ರಿಯೆ ಕೇಳಿದರೂ, ಅವರು ಉತ್ತರಿಸದೇ ನುಣುಚಿಕೊಂಡಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಜೆಡಿಎಸ್, ಬಿಜೆಪಿ ಶಾಸಕರನ್ನೇ ಸೆಳೆಯಲು ಎಲ್ಲಾ ತಯಾರಿ ನಡೆಸಿದೆ ಎನ್ನಲಾಗಿದ್ದು, ಈಗಾಗಲೇ ಉತ್ತರ ಕರ್ನಾಟಕದ ಐದಾರು ಶಾಸಕರ ಜತೆ ಕುಮಾರಸ್ವಾಮಿ ಅವರೇ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಅವರೂ ಸೂಕ್ತ ಸ್ಪಂದನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಸಚಿವ ಡಿ.ಕೆ. ಶಿವಕುಮಾರ್ ನನ್ನ ಲೆವೆಲ್ ನಾಯಕ ಅಲ್ಲ. ನನ್ನ ನಾಯಕ ರಾಹುಲ್ ಗಾಂಧಿ, ಅವರ ಜೊತೆ ಚರ್ಚಿಸಿ ರಾಜೀನಾಮೆ ನೀಡುವ ತೀರ್ಮಾನ ತೆಗೆದುಕೊಳ್ಳುತ್ತೇನೆ. ಒಬ್ಬನೇ ರಾಜೀನಾಮೆ ಕೊಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇನ್ನೂ ಕೆಲವರ ಜೊತೆ ಚರ್ಚಿಸಿ ಒಟ್ಟಿಗೆ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ.
• ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ
ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಪಕ್ಷದಲ್ಲಿ ನಾಯಕರಿದ್ದಾರೆ. ಜಿಲ್ಲಾ ಉಸ್ತು ವಾರಿ ಸಚಿವರಿದ್ದಾರೆ. ನನಗೆ ಸಿಕ್ಕರೆ ನಾನೂ ಅವರ ಜೊತೆ ಮಾತನಾಡು ತ್ತೇನೆ. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಇಲ್ಲಿಯವರೆಗೆ ನಾವು ಅವರನ್ನು ಗೌರವದಿಂದ ಕಂಡಿದ್ದೇವೆ. ಭಗವಂತ ಅವರ ಆಸೆ ಈಡೇರಿಸಲಿ.
● ಡಿ.ಕೆ. ಶಿವಕುಮಾರ್, ಜಲ ಸಂಪನ್ಮೂಲ ಸಚಿವ
ನಾನು ಅಳುವುದಿಲ್ಲ. ರಮೇಶನೇ ದೊಡ್ಡ ಡ್ರಾಮಾ ಮಾಸ್ಟರ್. ಬಹುಶ: ಯಾವುದೋ ‘ವಸ್ತು’ ಕಳೆದುಕೊಂಡಿದ್ದಾನೆ. ಅದಕ್ಕಾಗಿಯೇ ಈ ರೀತಿ ವರ್ತನೆ ಮಾಡುತ್ತಿದ್ದಾನೆ. ನಾನೇನು ಅವರ ಮಂತ್ರಿಗಿರಿ ಕಸಿದುಕೊಂಡಿಲ್ಲ.
● ಸತೀಶ್ ಜಾರಕಿಹೊಳಿ, ಸಚಿವ
ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರೊಂದಿಗೆ, ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್, ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಅವರು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರೊಂದಿಗೆ ಗುರುತಿಸಿಕೊಂಡಿದ್ದ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದು, ಅವರ ವಿರುದ್ಧ ಇರುವ ಆರೋಪಗಳನ್ನು ಮುಂದಿಟ್ಟುಕೊಂಡು ಬೆದರಿಸುವ ಮೂಲಕ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಯತ್ನ ಮುಂದುವರೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.