ಬೆಳಗಾವಿ: 11 ದಿನಗಳಿಂದ ಯಮ ಸಲ್ಲೇಖನ ವ್ರತದಲ್ಲಿದ್ದ ಧೈರ್ಯಮತಿ ಮಾತಾಜಿ ಜಿನೈಕ್ಯ
Team Udayavani, Aug 3, 2023, 12:20 AM IST
ಬೆಳಗಾವಿ: ನಗರದ ಶಹಾಪುರ ಕೋರೆ ಗಲ್ಲಿಯ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ 11 ದಿನಗಳಿಂದ ಯಮಸಲ್ಲೇಖನ ವ್ರತ ಕೈಗೊಂಡಿದ್ದ 105 ಧೈರ್ಯಮತಿ ಮಾತಾಜಿ(94) ಅವರು ಬುಧವಾರ ರಾತ್ರಿ 9:21ಕ್ಕೆ ದೇಹ ತ್ಯಾಗ ಮಾಡಿ ಜಿನೈಕ್ಯರಾದರು.
ಧೈರ್ಯಮತಿ ಮಾತಾಜಿಯ ಅಂತ್ಯಸಂಸ್ಕಾರ ನಗರದ ಮಾಣಿಕಬಾಗ್ ಬೋರ್ಡಿಂಗ್ ನಲ್ಲಿ ಗುರುವಾರ ಆ. 3ರಂದು ಬೆಳಗ್ಗೆ 10:30 ಗಂಟೆಗೆ ನೆರವೇರಲಿದೆ. ದಿಗಂಬರ ಜೈನ ಬೋಗಾರ ಸಮುದಾಯ ಭವನದಲ್ಲಿ ವ್ರತ ಆರಂಭಿಸಿದ್ದರು. ಗುರುವಾರ ಬೆಳಗ್ಗೆ 8:30ಕ್ಕೆ ಅಂತಿಮಯಾತ್ರೆ ಆರಂಭವಾಗಿ 10:30ಕ್ಕೆ ಅಂತ್ಯಸಂಸ್ಕಾರ ನೆರವೇರಲಿದೆ.
11 ದಿನಗಳ ಹಿಂದೆ ಪುಣ್ಯಸಾಗರ ಮಹಾರಾಜರು, ಪುರಾಣ ಸಾಗರ ಮಹಾರಾಜರು ಹಾಗೂ ಪ್ರಸನ್ನ ಸಾಗರ ಮಹಾರಾಜರ ಅವರ ಮಾರ್ಗದರ್ಶನದಲ್ಲಿ ಧೈರ್ಯಮತಿ ಮಾತಾಜಿ ಸಲ್ಲೇಖನ ವ್ರತ ಕೈಗೊಂಡಿದ್ದರು. ನೀರು, ಆಹಾರ ತ್ಯಜಿಸಿ ವೃತ ಆರಂಭಿಸಿದ್ದರು.
ಪದ್ಮಾವತಿ ಇಜಾರೆ ಎಂಬ ಮೂಲ ಹೆಸರಿನವರಾದ ಮಾತಾಜಿ ಗ್ರಹಸ್ಥರಾಗಿದ್ದರು. ಮೊದಲಿನಿಂದಲೂ ಜೈನ ಧರ್ಮ ಸಂಪ್ರದಾಯ, ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದರು. 11 ಸಲ ಸಮ್ಯೇದಸಿಖರಜೀ ಯಾತ್ರೆ ಕೈಗೊಂಡಿದ್ದರು. ಚಾತುರ್ಮಾಸವನ್ನು ಆಚರಿಸಿಕೊಂಡು ಬಂದಿದ್ದರು. 11 ದಿನಗಳ ಹಿಂದೆ ವ್ರತ ಕೈಗೊಂಡಾಗ 105 ಧೈರ್ಯಮತಿ ಮಾತಾಜಿ ಎಂದಾದರು.
ಸಲ್ಲೇಖನ ವ್ರತ ಎಂದರೇನು?
ಜೈನ ದಿಗಂಬರ ಮುನಿಗಳು ಕೇವಲ ಒಂದು ಹೊತ್ತು ಮಾತ್ರ ಆಹಾರ ನೀರು ಸೇವನೆ ಮಾಡುತ್ತಾರೆ. ಇನ್ನು ಸಲ್ಲೇಖನ ವ್ರತ ಸ್ವೀಕಾರ ಮಾಡಿದ ಮುನಿಗಳು ಯಾವುದೇ ಆಹಾರ ಸ್ವೀಕಾರ ಮಾಡುವುದಿಲ್ಲ. ಬದಲಾಗಿ ತಮ್ಮ ಆತ್ಮ ಹಾಗೂ ಪಂಚೇಂದ್ರಿಯಗಳನ್ನು ನಿಗ್ರಹ ಮಾಡುವ ಸಲುವಾಗಿ ನಿತ್ಯ ತಾವು ಸೇವಿಸುವ ಆಹಾರ, ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋಗುತ್ತಾರೆ. ಕೊನೆಗೆ ಇಹಲೋಕ ತ್ಯಜಿಸುತ್ತಾರೆ.
ಏಕೆ ಈ ಸಲ್ಲೇಖನ ವೃತ ಆಚರಣೆ?
ವಯಸ್ಸಾಗುತ್ತಾ ಹೋದಂತೆಲ್ಲ ಧರ್ಮ ಪರಿಪಾಲನೆ ಮತ್ತು ತಾವು ಸ್ವೀಕರಿಸಿದ ವ್ರತಗಳ ಆಚರಣೆ ತುಂಬಾ ಕಷ್ಟವಾಗುತ್ತ ಹೋಗುತ್ತದೆ. ಹೀಗಾಗಿ ಧರ್ಮ ಮತ್ತು ವ್ರತಕ್ಕೆ ಧಕ್ಕೆ ಬಾರದಿರಲಿ ಎಂಬ ಕಾರಣಕ್ಕೆ ಸಲ್ಲೇಖನ ವ್ರತ ಸ್ವೀಕಾರ ಮಾಡುತ್ತಾರೆ. ಈ ವೇಳೆ ಆಹಾರದಲ್ಲಿ ನಿಯಂತ್ರಣ ಸಾಧಿಸಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.