Bengaluru ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಐಸಿಸ್ ನಂಟು?
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಸಾಮ್ಯತೆ ಉಗ್ರ ಶಾರೀಕ್, ಸಹಚರರ ತನಿಖೆ ಸಾಧ್ಯತೆ
Team Udayavani, Mar 3, 2024, 6:50 AM IST
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಐಸಿಸ್ ಕೈವಾಡವಿರುವ ಸಾಧ್ಯತೆಮೇಲ್ನೋಟಕ್ಕೆ ಕಂಡುಬಂದಿದೆ.
ಬಾಂಬ್ ಸ್ಫೋಟಿಸಿದ ಮಾದರಿ ಯನ್ನು ಗಮನಿಸಿದಾಗ ಐಸಿಸ್ ಉಗ್ರರಿಗೂ ಪ್ರಕರಣಕ್ಕೂ ಸಂಬಂಧ ವಿರುವುದು ಗೊತ್ತಾಗಿದೆ. ಐಸಿಸ್ ಇನ್ನೂ ಸಕ್ರಿಯವಾಗಿದೆ ಎಂದು ಎಚ್ಚರಿಕೆ ನೀಡಲು ಈ ಬಾಂಬ್ ಸ್ಫೋಟಿಸಿರುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಆದರೆ ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಐಸಿಎಸ್ ಉಗ್ರ ಸಂಘಟನೆಯು ತನ್ನ ಜಾಲವನ್ನು ವಿಸ್ತರಿಸಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಮೇಲೆ ಮತ್ತೆ ಐಸಿಸ್ ಉಗ್ರರ ಕಣ್ಣು ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಸಿಸಿ ಕೆಮರಾದಲ್ಲಿ ದಾಖಲಾಗಿರುವ ಶಂಕಿತ ಉಗ್ರನಿಗಾಗಿ ಬೆಂಗಳೂರಿನ ಸಿಸಿಬಿ ಪೊಲೀಸರ ವಿಶೇಷ 8 ತಂಡಗಳು ಹಗಲಿರುಳೆನ್ನದೆ ಸತತ ಶೋಧ ಕಾರ್ಯಾಚರಣೆ ಕೈಗೊಂಡಿವೆ. ವಶಕ್ಕೆ ಪಡೆಯಲಾಗಿರುವ ಅನುಮಾನಾಸ್ಪದ ವ್ಯಕ್ತಿ ಯೊಬ್ಬನನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸ ಲಾಗುತ್ತಿದೆ ಎನ್ನಲಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶಿವಮೊಗ್ಗ ನದೀ ತೀರದಲ್ಲಿ ನಡೆಸಿದ್ದ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೂ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಳಸಿರುವ ಸಾಮಗ್ರಿಗಳಿಗೂ ಸಾಮ್ಯತೆ ಕಂಡುಬಂದಿದೆ. ಹೀಗಾಗಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೂ ಈ ಪ್ರಕರಣಕ್ಕೂ ಸಂಬಂಧವಿರುವಂತೆ ಕಾಣುತ್ತಿದೆ. ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಪತ್ತೆಯಾಗಿರುವ ಬ್ಯಾಟರಿ, ಡಿಟೋನೇಟರ್, ಟೈಮರ್, ಬೋಲ್ಟ್, ನಟ್‌ಗಳನ್ನು ಪರಿಶೀಲಿಸಿದಾಗ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲೂ ಇದೇ ಮಾದರಿಯ ವಸ್ತು ಗಳನ್ನು ಬಳಸಲಾಗಿರುವುದು ತಿಳಿದುಬಂದಿದೆ. ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟದಲ್ಲೂ ಹೊಗೆಯ ಪ್ರಮಾಣ ದಟ್ಟವಾಗಿತ್ತು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸರು ರಾಜಧಾನಿ ಬೆಂಗಳೂರಿಗೆ ದೌಡಾಯಿಸಿ ತನಿಖೆಗೆ ಇಳಿದಿದ್ದಾರೆ.
ಬೆಂಗಳೂರಿನ ಚರ್ಚ್‌ಸ್ಟ್ರೀಟ್ ರಸ್ತೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲೂ ಈ ಮಾದರಿಯ ವಸ್ತು ಬಳಕೆಯಾಗಿತ್ತು ಎನ್ನಲಾಗಿದೆ. ಈ ಎಲ್ಲ ಸಂಗತಿಗಳೂ ಐಸಿಸ್ ಉಗ್ರ ಸಂಘಟನೆಯ ಸದಸ್ಯರ ಕೈವಾಡವಿರುವುದಕ್ಕೆ ಪುಷ್ಟಿ ನೀಡುತ್ತವೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಹಾಗೂ ಆತನ ಸಹಚರರನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಯಾರನ್ನೂ ಬಂಧಿಸಿಲ್ಲ: ಪೊಲೀಸರು
ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವರ್ಗಾವಣೆ ಮಾಡಲಾಗಿದೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ಇದುವರೆಗೆ ಯಾವುದೇ ಆರೋಪಿಯನ್ನು ವಶಕ್ಕೆ ಪಡೆದಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಟಿಫಿನ್ ಬಾಕ್ಸ್‌ನಲ್ಲಿ ಬಾಂಬ್ ಇಟ್ಟಿದ್ದ ಶಂಕಿತ
ಶಂಕಿತ ಟಿಫನ್ ಬಾಕ್ಸ್‌ನಲ್ಲಿ ಬಾಂಬ್ ಇಟ್ಟಿದ್ದ ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಹೊರಬಿದ್ದಿದೆ. ಕಡಿಮೆ ತೀವ್ರತೆ ಇರುವ ಐಇಡಿ ಮೂಲಕ ಬಾಂಬ್ ಸ್ಫೋಟಿಸಲಾಗಿದೆ. ಡಿಜಿಟಲ್ ಟೈಮರ್ ಜತೆಗೆ ಡಿಟೋನೇಟರ್ ಹಾಗೂ ಬಲ್ಬ್ ಇರಿಸಿದ್ದರು. ಸ್ವಲ್ಪ ಬಿಸಿಯಾಗಿ ಡಿಟೋನೇಟರ್‌ಗೆ ತಗುಲಬೇಕೆಂದು ಬಲ್ಬ್ ಇಟ್ಟಿದ್ದರು. ಅನಂತರ ಟೈಮರ್‌ಗೆ ತಾಗಿ ಸ್ಫೋಟಗೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಬಾಂಬ್ ತಯಾರಿಸಿದ್ದರು. ಹೆಚ್ಚುವರಿ ಡಿಜಿಟಲ್ ಟೈಮರ್‌ಗಳನ್ನು ಬಳಕೆ ಮಾಡಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ 500 ಗ್ರಾಂ ಗನ್ ಪೌಡರ್ ಹಾಗೂ ಪೊಟ್ಯಾಷಿಯಮ್ ನೈಟ್ರೇಟ್ ಸಿಕ್ಕಿದೆ ಎಂದು ತನಿಖೆ ನಡೆಸುತ್ತಿರುವ ಉನ್ನತ ಮೂಲಗಳು ತಿಳಿಸಿವೆ.
ಈ ಮಾದರಿಯಲ್ಲಿ ಐಸಿಸ್ ಉಗ್ರರು ಮಾತ್ರ ಬಾಂಬ್ ಸ್ಫೋಟಿಸುತ್ತಾರೆ. ಬೇರೆ ಉಗ್ರ ಸಂಘಟನೆಗಳು ಈ ರೀತಿಯಲ್ಲಿ ಬಾಂಬ್ ಸ್ಫೋಟಿಸುವುದು ವಿರಳ. ಹೀಗಾಗಿ ಬಾಂಬ್ ಸ್ಫೋಟದ ಸಂಪೂರ್ಣ ಚಿತ್ರಣ ಗಮನಿಸಿದಾಗ ಇದು ಐಸಿಸ್ ಕೃತ್ಯ ಎಂಬುದು ಕಂಡು ಬರುತ್ತಿದೆ ಎಂದು ಹಿರಿಯ ತನಿಖಾಧಿಕಾರಿ ಮೂಲಗಳು ಹೇಳಿವೆ.
ಅತ್ಯಾಧುನಿಕ ಸಾಮಗ್ರಿ ಬಳಕೆ
ರಾಮೇಶ್ವರಂ ಕೆಫೆ ನ್ಪೋಟಕ್ಕೆ ಬಳಸಿರುವ ವಸ್ತುಗಳನ್ನು ಎಫ್ಎಸ್‌ಎಲ್ ತಜ್ಞರು ಪರಿಶೀಲಿಸಿದಾಗ ಅತ್ಯಾಧುನಿಕ ಎಲೆಕ್ಟ್ರಾನಿಕ್ ಟೈಮರ್ ಡಿವೈಸ್‌ಗಳು ಕಂಡುಬಂದಿವೆ. ಆರ್‌ಡಿಎಕ್ಸ್‌ನಂತಹ ಉನ್ನತ ಮಟ್ಟದ ಸ್ಫೋಟಕಗಳನ್ನು ಬಾಂಬ್ ತಯಾರಿಕೆಗೆ ಬಳಸಲಾಗಿದೆ. ಸ್ಫೋಟಕ್ಕೆ ಕಚ್ಚಾ ಐಇಡಿ ಬಳಕೆ ಮಾಡಿಲ್ಲ. ಆದರೆ ಟೈಮರ್, ಡಿಟೋನೇಟರ್, ಬ್ಯಾಟರಿಯೊಂದಿಗೆ ಅತ್ಯಾಧುನಿಕ ನಟ್‌ಗಳು, ಬೋಲ್ಟ್‌ಗಳನ್ನು ಅಳವಡಿಸಲಾಗಿದೆ. ಸ್ಫೋಟ ವಿಫಲವಾಗದಂತೆ ತಂತಿಯ ಮೂಲಕ ಬಿಗಿಯಾಗಿ ಜೋಡಿಸಲಾಗಿತ್ತು. ಪ್ಲಾಸ್ಟಿಕ್ ಬಳಸಿ ಎರಡು ಸಣ್ಣ ಕಂಟೈನರ್ ಮಾದರಿಯನ್ನು ಸೃಷ್ಟಿಸಿ ಎರಡು ಬಾಂಬ್‌ಗಳನ್ನು ಇರಿಸಲಾಗಿತ್ತು. ಒಂದು ಬಾಂಬ್ ಸ್ಫೋಟಗೊಂಡ ಕೆಲವು ಸೆಕೆಂಡ್‌ಗಳಲ್ಲೇ ಮತ್ತೂಂದು ಬಾಂಬ್ ಸ್ಫೋಟಗೊಳ್ಳುವಂತೆ ಟೈಮರ್ ಜೋಡಣೆ ಮಾಡಿರುವುದು ಪತ್ತೆಯಾಗಿದೆ. ಶುಕ್ರವಾರ ತಡರಾತ್ರಿ ರಾಮೇಶ್ವರಂ ಕೆಫೆಗೆ ಕೇಂದ್ರ ಗುಪ್ತಚರ ಇಲಾಖೆ ಹಾಗೂ ಎನ್‌ಎಸ್‌ಜಿ ಅಧಿಕಾರಿಗಳ ತಂಡ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿವೆ. ಆದರೆ ಎಫ್ಎಸ್‌ಎಲ್ ಸಿಬಂದಿ ಕೃತ್ಯ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಸ್ಫೋಟಕದ ಅವಶೇಷಗಳನ್ನು ಲ್ಯಾಬ್‌ನಲ್ಲಿ ಪರಿಶೀಲಿಸಿದ ಬಳಿಕವೇ ಈ ಸಾಮಗ್ರಿಗಳ ಕುರಿತು ನಿರ್ದಿಷ್ಟವಾಗಿ ತಿಳಿದುಬರಲಿದೆ.
ಎನ್‌ಎಸ್‌ಜಿ ತೀವ್ರ ನಿಗಾ
ಎನ್‌ಎಸ್‌ಜಿಯ ಕಮಾಂಡೊಗಳು ಕೃತ್ಯ ನಡೆದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ, ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಕ್ಷಣಕ್ಷಣಕ್ಕೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ರಾಜ್ಯಾದ್ಯಂತ ಕಟ್ಟೆಚ್ಚರ
ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಮುಖ ಬಸ್, ರೈಲು ನಿಲ್ದಾಣಗಳಲ್ಲಿ ಹದ್ದುಗಣ್ಣು ಇರಿಸಲಾಗಿದೆ.
ಸ್ಫೋಟ ಪ್ರಕರಣದ ಪೂರ್ಣ ಸತ್ಯ ಹೊರಗೆಳೆಯಿರಿ. ಪೊಲೀಸರು ಇಂಥ ಘಟನೆ ನಡೆದಾಗ ಮಾತ್ರ ಎಚ್ಚರಿಕೆ ವಹಿಸಿ, ಬಳಿಕ ಮೈಮರೆಯಬಾರದು. ಸಮಾಜ ದ್ರೋಹಿಗಳ ಮೇಲೆ ಯಾವುದೇ ಸಹಾನುಭೂತಿ ಇಲ್ಲದೆ ಕ್ರಮ ಜರಗಿಸಿ. ಜನನಿಬಿಡ ಸ್ಥಳಗಳನ್ನು ಗುರುತಿಸಿ ಅಂಥ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ, ಜನರಿಗೆ ರಕ್ಷಣೆ ಒದಗಿಸಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.