ಪಂಚಸೂತ್ರದ ಮೂಲಕ ಭಾರತ್ ಜೋಡೋ ಯಾತ್ರೆ: ಡಿ.ಕೆ ಶಿವಕುಮಾರ್
Team Udayavani, Aug 28, 2022, 2:07 PM IST
ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧೀಜಿಯವರ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರಸ್ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಭಾನುವಾರ ಯಾತ್ರೆಯ ಲೋಗೊ ಬಿಡುಗಡೆ ಗೊಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ರಾಮಲಿಂಗಾ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಿ.ಕೆ ಶಿವಕುಮಾರ್ ಮಾತನಾಡಿ, ಭಾರತ ಐಕ್ಯತೆ ಯಾತ್ರೆ ಗುಂಡ್ಲುಪೇಟೆಯಿಂದ ಪ್ರಾರಂಭ ಆಗಲಿದೆ. 21 ದಿನ ಕರ್ನಾಟಕದಲ್ಲಿ ರೂಟ್ ಫಿಕ್ಸ್ ಮಾಡಿದ್ದೇವೆ. ಪ್ರತಿದಿನ 25 ಕಿಮೀ ನಂತೆ ಪಾದಯಾತ್ರೆ ನಡೆಯುತ್ತದೆ. ಭಾರತವನ್ನು ಒಗ್ಗೂಡಿಸುವ ಐಕ್ಯತೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಇದು ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ, ಭಾರತವನ್ನು ಓಗ್ಗೂಡಿಸುವ ಕೆಲಸದಲ್ಲಿ ಯಾರು ಬೇಕಾದರೂ ಹೆಜ್ಜೆ ಹಾಕಬಹುದು. ಬಳ್ಳಾರಿ ಮೇಕೆದಾಟು ಸ್ವಾತಂತ್ರ್ಯ ನಡಿಗೆ ಬಳಿಕ ಇದು ಮಹತ್ವ ಪಡೆದುಕೊಂಡಿದೆ ಎಂದರು.
ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ಯುವಕರಿಗೆ ಉದ್ಯೋಗ ಸಿಗದೇ ಮಾನಸಿಕ ಒತ್ತಡ ಆಗ್ತಿದೆ. ಖಾಸಗಿಯಾಗಿ ಅಥವಾ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು. ರಾಜ್ಯದಲ್ಲಿ ಇರುವ ಪ್ರತಿ ರೈತನ ಬದುಕು ಹಸನಾಗಬೇಕು. ಎಲ್ಲರಿಗೂ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧ ಕೇಳಿ ಬಂದಿರುವ ಆರೋಪ ಸುಳ್ಳು: ಬಿಎಸ್ ವೈ
ಹಸ್ತದಲ್ಲಿ 5 ಬೆರಳುಗಳು ಇರುವ ರೀತಿ ಪಂಚಸೂತ್ರದ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ. ಭಾರತ್ ಜೋಡೋ ಯಾತ್ರೆ ಹೊಸ ಟ್ರೆಂಡ್ ಸೆಟ್ ಮಾಡುತ್ತದೆ ಎಂಬ ನಂಬಿಕೆ ಇದೆ. ಇಡೀ ದೇಶಕ್ಕೆ ಈ ಯಾತ್ರೆ ಮಾದರಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಪಾದಯಾತ್ರೆ ನಡೆಯಲಿದ್ದು, ಸೆ.7ರಿಂದ 19 ದಿನ ಕೇರಳ, 4 ದಿನ ತಮಿಳುನಾಡಿನಲ್ಲಿ ಸಾಗುತ್ತೆ. ರಾಹುಲ್ ಗಾಂಧಿ ಜೊತೆಗೆ 125 ಜನರು ಪಾಲ್ಗೊಳ್ಳಲಿದ್ದಾರೆ. 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾದುಹೋಗುತ್ತೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದರು. ಕರ್ನಾಟಕದಲ್ಲಿ 511 ಕಿ.ಮೀ., 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಕರ್ನಾಟಕದ 125 ಜನ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ,ದೇಶವನ್ನು ಒಗ್ಗೂಡಿಸಲು, ದೇಶಾಭಿಮಾನ, ಜನರನ್ನು ಒಗ್ಗೂಡಿಸಲು, ಸಾಮರಸ್ಯ ಮೂಡಿಸಲು, ಜನರ ಸಮಸ್ಯೆ ಅರಿಯಲು ರಾಹುಲ್ ಗಾಂಧಿಯಿಂದ ಪಾದಯಾತ್ರೆ ಮಾಡಲಾಗುತ್ತಿದೆ. ದೇಶದ 130 ಕೋಟಿ ಜನರು ಸಾಮರಸ್ಯದಿಂದ ಬದುಕಬೇಕಾಗಿದೆ. ಭಾರತ ಐಕ್ಯತಾ ಯಾತ್ರೆ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.