ಸ್ವಾಯತ್ತ ಸಂಸ್ಥೆಯ ಸ್ಥಾನಮಾನದತ್ತ ಬಿಐಟಿ: ನ್ಯಾಕ್ ನ ಎ+ ಗ್ರೇಡ್
Team Udayavani, Sep 11, 2022, 5:16 PM IST
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ(ಬಿಐಟಿ)ವು ನ್ಯಾಕ್ ನ ಎ+ ಗ್ರೇಡ್ ಪಡೆದಿದ್ದು, ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ಪಡೆಯಲು ಮುಂದಾಗಿದೆ.
ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಬಿಐಟಿಯ ಅಧ್ಯಕ್ಷರಾದ ಎಂ. ಪುಟ್ಟಸ್ವಾಮಿ ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸೆಮಿಸ್ಟರ್ ನಲ್ಲಿ ಅತಿ ಹೆಚ್ಚು ರ‍್ಯಾಂಕ್ ಗಳಿಸಿದ ಹೆಗ್ಗಳಿಕೆ ಬಿಐಟಿಗೆ ಸಲ್ಲುತ್ತದೆ. 2020-21ರಲ್ಲಿ 24, 2019-20ರಲ್ಲಿ 22 ರ‍್ಯಾಂಕ್ ಗಳನ್ನು ಗಳಿಸಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್ ಬಿಎ)ಯು ಎಂಟು ಪ್ರೋಗ್ರಾಂಗೆ ಮುಂದಿನ ಮೂರು ವರ್ಷಗಳವರೆಗೆ ಅನುಮತಿ ವಿಸ್ತರಣೆ ಮಾಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ನಡೆಸಿದ ಸ್ಮಾಟ್ ಇಂಡಿಯಾ ಹ್ಯಾಕಥಾನ್ 2022ರ ಸ್ಪರ್ಧೆಯಲ್ಲಿ ಬಿಐಟಿ ಮೊದಲ ಸ್ಥಾನ ಪಡೆದಿದೆ. ಅಲ್ಲದೆ, 2022ರ ದಿ ವೀಕ್ ಹನ್ಸಾ ಸರ್ವೆಯ ಪ್ರಕಾರ ಖಾಸಗಿ ಎಂಜಿನಿಯರ್ ಕಾಲೇಜುಗಳಲ್ಲಿ ಬಿಐಟಿಯು ಬೆಂಗಳೂರಿನಲ್ಲಿ ಮೂರನೇ ರ‍್ಯಾಂಕ್, ರಾಜ್ಯದಲ್ಲಿ 5ನೇ ರ‍್ಯಾಂಕ್, ದಕ್ಷಿಣ ಭಾರತದಲ್ಲಿ 13ನೇ ರ‍್ಯಾಂಕ್, ಅಖಿಲ ಭಾರತ ಮಟ್ಟದಲ್ಲಿ 29ನೇ ರ‍್ಯಾಂಕ್ ಪಡೆದಿದೆ. ರಾಷ್ಟ್ರಮಟ್ಟದ ಎಲ್ಲಾ ಉತ್ತಮ ಎಂಜಿನಿಯರ್ ಕಾಲೇಜುಗಳಲ್ಲಿ 53ನೇ ರ‍್ಯಾಂಕ್ ಬಂದಿದೆ.
ಕಳೆದ 1979ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಂಪ್ಯೂಟರ್ ಕೋರ್ಸನ್ನು ಆರಂಭಿಸಿತ್ತು. ಪದವಿಯಲ್ಲಿ 13 ಕೋರ್ಸ್, ಸ್ನಾತಕೋತ್ತರ ಪದವಿಯಲ್ಲಿ 7 ಹಾಗೂ ಸಂಶೋಧನೆಯಲ್ಲಿ(ಪಿಎಚ್ ಡಿ) 13 ಕೋರ್ಸ್ ಗಳಿವೆ.
ಈಗ ಮತ್ತೆ ಮೂರು ಹೊಸ ಕಂಪ್ಯೂಟರ್ ಕೋರ್ಸ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸೆಂಟರ್ ಆಫ್ ಎಕ್ಸೆಲೆನ್ಸ್, ಐಡಿಯಾ ಲ್ಯಾಬ್, ಇನೋವೇಷನ್ ಸೆಂಟರ್, ಸ್ಟಾರ್ಟಪ್ ಸೆಂಟರ್, ವೆಂಚರ್ಸ್ ಸ್ಟುಡಿಯೋ ಪ್ರಾರಂಭಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರಸಕ್ತ ಸಾಲಿನ ವಿವಿಧ ತಾಂತ್ರಿಕ ಕೋರ್ಸುಗಳ ಆಡಳಿತ ಮಂಡಳಿ ಕೋಟಾದ ಸೀಟುಗಳು ಶೇಕಡಾ 95 ರಷ್ಟು ಈಗಾಗಲೇ ಭರ್ತಿಯಾಗಿವೆ. ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯು ಉತ್ತಮವಾಗಿದ್ದು, ಪ್ರತಿವರ್ಷವೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರೆಯುತಿವೆ. 150ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಿಐಟಿಯಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ನೆಲೆಸಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ. ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಎರಡು ಲಕ್ಷ ರೂಪಾಯಿವರೆಗೂ ರಿಯಾಯ್ತಿ ನೀಡಲಾಗುತ್ತಿದೆ. ಸಂಘದ ಪ್ರಸಕ್ತ ಕಾರ್ಯಕಾರಿ ಸಮಿತಿ ಬಿಐಟಿಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಉದ್ದೇಶಿಸಿದೆ. ಇದಕ್ಕಾಗಿ ಬಿಐಟಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಪರಿಣಿತ ಬೋಧಕ ಸಿಬಂದಿಯನ್ನು ಒದಗಿಸಿದೆ ಎಂಬ ಮಾಹಿತಿಯನ್ನು ಪುಟ್ಟಸ್ವಾಮಿ ಅವರು ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.