BJP ಅಪಸ್ವರಕ್ಕೆ ಸದ್ಯ ತಡೆ: ರಾಜ್ಯ ನಾಯಕರಿಗೆ ಬಿಜೆಪಿ ದಿಲ್ಲಿ ನಾಯಕರಿಂದ ಸ್ಪಷ್ಟ ಸಂದೇಶ
Team Udayavani, Nov 14, 2023, 6:45 AM IST
ಬೆಂಗಳೂರು: ರಾಜ್ಯ ಬಿಜೆಪಿ ನೂತನ ಸಾರಥಿಯ ನೇಮಕಕ್ಕೆ ಸಂಬಂಧಪಟ್ಟಂತೆ ಯಾರೂ ಅಪಸ್ವರ ಎತ್ತಬಾರದು, ಇದು ವರಿಷ್ಠರ ನಿರ್ಧಾರ ಎಂಬ ಸೂಚನೆ ಬಿಜೆಪಿ ದಿಲ್ಲಿ ನಾಯಕತ್ವದಿಂದ ರವಾನೆಯಾಗಿದ್ದು, ಪರೋಕ್ಷ ಹೇಳಿಕೆಗಳಿಗೂ ಕಡಿವಾಣ ಹಾಕಲು ಮುಂದಾಗಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಬಿಜೆಪಿಯ ಅನೇಕ ಹಿರಿಯರು ಕಣ್ಣಿಟ್ಟಿದ್ದರು. ಆದರೆ ವಿಜಯೇಂದ್ರ ನೇಮಕದಿಂದ ಅವರ ಆಸೆ ಭಂಗವಾಗಿದೆ. ಹೀಗಾಗಿ ಕೆಲವರು ಮೌನಕ್ಕೆ ಶರಣಾದರೆ, ಇನ್ನು ಕೆಲವರು ಪರೋಕ್ಷ ಹೇಳಿಕೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ವರಿಷ್ಠರು ಇದೆಲ್ಲವನ್ನೂ ಗಮನಿಸಿದ್ದು, ಯಾರೂ ಅಪಸ್ವರ ಎತ್ತಬೇಡಿ ಎಂಬ ಸೂಚನೆ ರವಾನಿಸಿದ್ದಾರೆ.
ಮೂಲಗಳ ಪ್ರಕಾರ, ಮೊದಲೆರಡು ದಿನ ಈ ನೇಮಕದಿಂದ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣವೇ ನಿರ್ಮಾಣವಾಗಿತ್ತು. ಹೀಗಾಗಿ ವಿಜಯೇಂದ್ರ ಅವರೇ ಅನೇಕರಿಗೆ ಕರೆ ಮಾಡಿ ಸಹಕಾರ-ಮಾರ್ಗದರ್ಶನ ಕೋರಿದ್ದಾರೆ. ಯಡಿಯೂರಪ್ಪನವರೂ ಕೆಲವು ಹಿರಿಯರಿಗೆ ಕರೆ ಮಾಡಿದ್ದು, ಸದ್ಯದಲ್ಲೇ ಅವರೆಲ್ಲರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ.
ದಿಲ್ಲಿಯ ಪ್ರಭಾವಿ ಪ್ರಮುಖರೊಬ್ಬರು ಕರೆ ಮಾಡಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾರೂ ಬಹಿರಂಗ ಹೇಳಿಕೆ ನೀಡಕೂಡದು ಎಂದಿದ್ದಾರೆ. ಲೋಕಸಭೆ ಚುನಾವಣೆ ಬಹುದೊಡ್ಡ ಸವಾ ಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಬೇಕು. ಇದಕ್ಕೆ ಹಿರಿಯರು, ಕಿರಿಯರು ಸಹಕಾರ ಕೊಡಬೇಕು. ಪಕ್ಷದ ವಿರುದ್ಧ ಒಂದೇ ಒಂದು ಅಪಸ್ವರ ಬೇಡವೆಂದು ಮನವಿ ಮಾಡಿ¨ªಾರೆ ಎಂದು ಮೂಲಗಳು ತಿಳಿಸಿವೆ.
ಸಾಮೂಹಿಕ ನಾಯಕತ್ವದ ಮಂತ್ರ
ವಿಜಯೇಂದ್ರ ಅವರೂ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ನಾನು ರಾಜ್ಯಾಧ್ಯಕ್ಷನಾದರೂ ಸಾಮೂಹಿಕ ನಾಯಕತ್ವದಲ್ಲೇ ಲೋಕಸಭಾ ಚುನಾವಣೆ ಯನ್ನು ಎದುರಿಸುತ್ತೇವೆ ಎಂದು ಹೇಳುವ ಮೂಲಕ ಹಿರಿಯರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅನಂತರ ಸುದ್ದಿಗಾರರ ಜತೆಗೆ ಮಾತನಾಡಿದ ವಿಜಯೇಂದ್ರ ಸಾಮೂ ಹಿಕ ನಾಯಕತ್ವದ ಮಂತ್ರ ಪಠಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ, ಮಾಜಿ ಸಚಿವರಾದ ಆರ್. ಅಶೋಕ್, ಸುರೇಶ್ ಕುಮಾರ್, ಗೋವಿಂದ ಕಾರಜೋಳ ಸಹಿತ ಹಲವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ವಿಜಯೇಂದ್ರ ಎಲ್ಲರ ಸಹಕಾರವನ್ನು ಬಯಸಿದ್ದಾರೆ.
ನಾಯಕರ ಮಧ್ಯೆ ಅಂತರ ಸೃಷ್ಟಿಯಾಗದಂತೆ ನೋಡಿಕೊಳ್ಳು ವುದು ಈ ಕ್ಷಣದ ಅಗತ್ಯ ಎಂದು ಅವರು ಭಾವಿಸಿದ್ದಾರೆ. ಸ್ನೇಹದ ಆಹ್ವಾನದ ಮೂಲಕ ಅಸಮಾ ಧಾನವನ್ನು ತಹಬಂದಿಗೆ ತರುವ ತಂತ್ರ ನಡೆಸಿದ್ದಾರೆ.
ಪೌರ ಕಾರ್ಮಿಕರಿಗೆ
ಸಿಹಿ ತಿನ್ನಿಸಿದ ವಿಜಯೇಂದ್ರ
ಎಸ್.ಎಂ. ಕೃಷ್ಣ ಭೇಟಿಗೆ ತೆರಳಿದಾಗ ಅವರ ಮನೆ ಎದುರು ನಿಂತಿದ್ದ ಪೌರ ಕಾರ್ಮಿಕರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೇಂದ್ರ ದೀಪಾವಳಿ ಆಚರಿಸಿದರು. ಬಳಿಕ ರಾತ್ರಿ ಮಾಜಿ ಸಚಿವ ಆರ್. ಅಶೋಕ್ ಅವರು ಪ್ರತಿನಿಧಿಸುತ್ತಿರುವ ಪದ್ಮನಾಭನಗರದ ಬಿಜೆಪಿ ಕಾರ್ಯಕರ್ತ ಶಿವನಂಜಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ದೀಪಾವಳಿ ಶುಭಾಶಯ ಕೋರಿದರು. ಅಶೋಕ್ ಸಹಿತ ಅನೇಕರು ಸಾಥ್ ನೀಡಿದರು.
ಸಮನ್ವಯ ಸಾಧಿಸಬೇಕು
ಭೇಟಿ ಬಳಿಕ ಮಾತನಾಡಿದ ಎಸ್.ಎಂ. ಕೃಷ್ಣ, ಹಿರಿಯರಾದ ನಾವು ಸಮನ್ವಯ ಸಾಧಿಸಿಕೊಂಡು ಹೋಗಬೇಕಾಗುತ್ತದೆ. ಇಂದಲ್ಲ, ನಾಳೆ ಯುವಕರು ರಾಜಕಾರಣದಲ್ಲಿ ಹೊರಹೊಮ್ಮಲೇ ಬೇಕಾಗುತ್ತದೆ. ಅವರಿಗೆ ಮಾರ್ಗದರ್ಶನ ನೀಡಿ ಜತೆ ನಿಂತು ಕೈ ಬಲಪಡಿಸುವುದು ನಮ್ಮ ಕರ್ತವ್ಯ. ವಿಜಯೇಂದ್ರ ಅವರ ಮೇಲೆ ಮೋದಿ ಅಮಿತ್ ಶಾ ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ಪ್ರತಿಭೆಯನ್ನು ಗುರುತಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ತಮ್ಮ ಛಾಪನ್ನು ತೋರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಕುರುಡುಮಲೆಗೆ ಭೇಟಿ
ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಐತಿಹಾಸಿಕ ಕುರುಡುಮಲೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಅಲ್ಲಿಯೇ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.