40 ಪರ್ಸೆಂಟ್‌ಗೆ ಪರಿಷತ್ ಕಲಾಪ ಬಲಿ: ಕಾಂಗ್ರೆಸ್ ನಾಯಕರ ಟೀಕೆಗೆ ಆಕ್ರೋಶ
ಸಾಕ್ಷಿ ಇಟ್ಟು ಮಾತನಾಡುವಂತೆ ಬಿಜೆಪಿ ಆಗ್ರಹ: ಗದ್ದಲವಾಗಿದ್ದರಿಂದ ಸದನ ಮುಂದೂಡಿಕೆ
Team Udayavani, Sep 15, 2022, 6:55 AM IST
ವಿಧಾನ ಪರಿಷತ್ತು: “ಸರ್ಕಾರದ 40 ಪರ್ಸೆಂಟ್ ಕಮಿಷನ್’ ಆರೋಪ ಮೇಲ್ಮನೆಯಲ್ಲಿ ಬುಧವಾರ ಕೋಲಾಹಲ ಸೃಷ್ಟಿಸಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ವಾಗ್ವಾದ ತೀವ್ರಗೊಂಡ ಪರಿಣಾಮ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
“ಸರ್ಕಾರದ 40 ಪರ್ಸೆಂಟ್ ಕಮಿಷನ್‌ನಿಂದಾಗಿಯೇ ಬೆಂಗಳೂರು ಇಂದು ಈ ಪರಿಸ್ಥಿತಿಗೆ ಬಂದಿದೆ. ನೆರೆಯಿಂದ ಇಡೀ ನಗರ ತುತ್ತಾಗಿದೆ. ಇದಕ್ಕೆ ಸರ್ಕಾರವೇ ಹೊಣೆ’ ಎಂಬ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ನೇರ ಆರೋಪ ಆಡಳಿತ ಪಕ್ಷವನ್ನು ಕೆರಳಿಸಿತು. ಈ ಆರೋಪಕ್ಕೆ ದಾಖಲೆ ನೀಡುವಂತೆ ಪಟ್ಟುಹಿಡಿಯಿತು. ಇದರಿಂದ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡು ಗದ್ದಲ ಉಂಟಾಯಿತು. ಆಗ ಹತ್ತು ನಿಮಿಷಗಳ ಮಟ್ಟಿಗೆ ಕಲಾಪ ಮುಂದೂಡಲಾಯಿತು. ಬಳಿಕ ಪುನಾರಂಭಗೊಂಡಾಗಲೂ ಅದೇ ಪರಿಸ್ಥಿತಿ ಮುಂದುವರಿಯಿತು. ಆಗ ಸಭಾಪತಿ ರಘುನಾಥ್ ಮಲ್ಕಾಪುರೆ ಸದನವನ್ನು ಮುಂದೂಡಿದರು.
ಬೆಂಗಳೂರು ದುಸ್ಥಿತಿಗೆ ಇದೇ ಕಾರಣ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಭೀತಿ ಕುರಿತು ನಿಯಮ 68ರ ಅಡಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, “ರಾಜ್ಯ ಸರ್ಕಾರವು ಮೂಲಸೌಕರ್ಯಗಳನ್ನು ಕಲ್ಪಿಸುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಖರ್ಚು ಮಾಡಿಲ್ಲ. ಈ ಸಂಬಂಧದ ಅನುದಾನದಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ನಡೆಸಿದ್ದು, ಇದರಿಂದ ಸೂಕ್ತ ಕೆಲಸವಾಗದೆ ಬೆಂಗಳೂರಿಗೆ ಈ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು” ಎಂದು ಆರೋಪಿಸಿದರು. ಇದು ವಾಗ್ವಾದಕ್ಕೆ ಕಿಡಿಹೊತ್ತಿಸಿತು.
ಪ್ರತಿಪಕ್ಷದ ನಾಯಕರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ “ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿ ಅಲ್ಲ. ನಿಮ್ಮ ಬಳಿ ಇರುವ ಸಾಕ್ಷಿ ಕೊಡಿ. ಸದನದಲ್ಲಿ ದಾಖಲಾತಿಗಳನ್ನು ನೀಡಿ ನಂತರ ಆರೋಪ ಮಾಡಿ. ಪದೆ ಪದೇ ಪಕೋಡ ಎಂದು ಪ್ರಧಾನಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಮತ್ತೊಂದೆಡೆ ಬೇಕಾಬಿಟ್ಟಿ ಆರೋಪ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹರಿಹಾಯ್ದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯರು, ಕಾಂಗ್ರೆಸ್ ಸರ್ಕಾರ ಶೇ.90 ಭ್ರಷ್ಟಾಚಾರ ಮಾಡಿದೆ. ಹೀಗಿರುವಾಗ ಬಿಜೆಪಿ ವಿರುದ್ಧ ಆರೋಪ ಮಾಡುವ ನೈತಿಕತೆಯೂ ಇಲ್ಲ. ಒಂದು ವೇಳೆ ದಾಖಲೆಗಳಿದ್ದರೆ ನೀಡಲಿ. ಅದುಬಿಟ್ಟು ಹೀಗೆ ಬೇಕಾಬಿಟ್ಟಿ ಆರೋಪ ಮಾಡುವುದು ಸರಿ ಅಲ್ಲ ಎಂದರು.
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, “ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಘೋಷಣೆ ಕೂಗಿದರು. ಆಗ ಗದ್ದಲ ಶುರುವಾಯಿತು. ಈ ಮಧ್ಯೆ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸಭಾಪತಿಗಳು ಸದನವನ್ನು ಕೆಲಹೊತ್ತು ಮುಂದೂಡಿದರು.
“ದಾಖಲೆ ಇಟ್ಟು ಮಾತನಾಡಿ”
ಸದನ ಪುನಾರಂಭಗೊಳ್ಳುತ್ತಿದ್ದಂತೆ ಮಾತಿಗಿಳಿದ ಬಿ.ಕೆ. ಹರಿಪ್ರಸಾದ್, ರಾಜ್ಯ ಸರ್ಕಾರ 40 ಪರ್ಸೆಂಟ್ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಮತ್ತೆ ಆರೋಪಿಸಿದರು. ಆಗ ಸಚಿವ ಡಾ.ಅಶ್ವತ್ಥ ನಾರಾಯಣ, “ಸಾಕ್ಷಿ ಇಟ್ಟು ಮಾಡನಾಡಿ’ ಎಂದು ಪಟ್ಟುಹಿಡಿದರು. ಹಾಗಿದ್ದರೆ, “ಈ ಹಿಂದೆ ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಕಮಿಷನ್ ಪಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಆಗ ಯಾವ ದಾಖಲೆ ನೀಡಿ ಆರೋಪಿಸಿದ್ದರು’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, “ಕಾಂಗ್ರೆಸ್ ಮುಚ್ಚಿದ್ದ ಲೋಕಾಯುಕ್ತವನ್ನು ಬಿಜೆಪಿ ಮತ್ತೆ ಆರಂಭಿಸಿದೆ’ ಎಂದರು. ವಾಗ್ವಾದ ಮುಂದುವರಿದಿದ್ದರಿಂದ ಸಭೆ ಮುಂದೂಡಲ್ಪಟ್ಟಿತು.
ಪರಿಹಾರ ಮೊತ್ತ ಪರಿಷ್ಕರಣೆಗೆ ಆಗ್ರಹ
ಇದಕ್ಕೂ ಮುನ್ನ ಮಾತನಾಡಿದ ಹರಿಪ್ರಸಾದ್, ಮಳೆಯಿಂದಾಗುವ ಅನಾಹುತಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ (ಎನ್‌ಡಿಆರ್‌ಎಫ್) ನೀಡುವ ಪರಿಹಾರ ಮೊತ್ತ ಹೆಚ್ಚಿಸಬೇಕು. 2015ರ ಮಾದರಿಯಲ್ಲಿಯೇ ಎನ್‌ಡಿಆರ್‌ಎಫ್ ಪರಿಹಾರ ನೀಡಲಾಗುತ್ತಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಪರಿಹಾರ ಮೊತ್ತ ಪರಿಷ್ಕರಿಸಬೇಕು ಎಂಬ ನಿಯಮವಿದ್ದರೂ ಕೇಂದ್ರ ಸರ್ಕಾರ ಕಳೆದ ಎರಡು ವರ್ಷದಿಂದ ಹೆಚ್ಚಿಸಿಲ್ಲ. ಜನರ ತೆರಿಗೆ ಹಣದಿಂದ ಸರ್ಕಾರ ನಡೆಯುತ್ತಿದ್ದು, ಆ ಜನರ ಸಂಕಷ್ಟಕ್ಕೆ ನೀಡುವ ಪರಿಹಾರ ಮೊತ್ತವನ್ನು ಪರಿಹಾರ ಹೆಚ್ಚಿಸಬೇಕು. ಈ ಬಗ್ಗೆ ಸದನ ಒಕ್ಕೊರಲ ನಿರ್ಣಯ ಕೈಗೊಂಡು ಪರಿಷ್ಕರಣೆ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.