ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಹೊಗೆ
Team Udayavani, Mar 7, 2017, 3:45 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತ ಶಮನಕ್ಕೆ ಅಸಮಾಧಾನಗೊಂಡಿರುವವರ ಜತೆ ಚರ್ಚಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಸಭೆ ಕರೆದು ಬಳಿಕ ಅದನ್ನು ಏಕಾಏಕಿ ರದ್ದುಗೊಳಿಸಿದ್ದರಿಂದ ಅತೃಪ್ತ ಮುಖಂಡರ ಪಡೆ ಮತ್ತೆ ತಿರುಗಿಬಿದ್ದಿದೆ.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣವಾಗಿರುವ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ, ಮುಖಂಡರ ವಿರುದ್ಧ ತೆಗೆದುಕೊಳ್ಳಲು ಉದ್ದೇಶಿಸಿರುವ ಶಿಸ್ತು ಕ್ರಮವನ್ನು ಕೈಬಿಡಲು ಮಾ.15ರ ಗಡುವು ನೀಡಿರುವ ಅತೃಪ್ತರ ಗುಂಪು, ಈ ಕುರಿತು ಜಿಲ್ಲೆಗಳಿಂದ ಮಾಹಿತಿ ಸಂಗ್ರಹಣೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿದೆ.
ಅಲ್ಲದೆ, 15ರೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಜಿಲ್ಲೆಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ವರದಿ ರೂಪದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಅವರೇ ರಚಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ನೇತೃತ್ವದ ಸಮಿತಿಗೆ ಕಳುಹಿಸಲು ಸೋಮವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮತ್ತು ಕೆಲವು ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಬಿಡುವ ಕುರಿತು ನಿರ್ಧಾರ ಕೈಗೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಮಿತಿಯೊಂದನ್ನು ರಚಿಸಿ ಫೆ.10ರವರೆಗೆ ಕಾಲಾವಕಾಶ ನೀಡಿದ್ದರು. ಆದರೆ,
ಅವಧಿ ಮುಗಿದು ತಿಂಗಳಾಗುತ್ತಾ ಬಂದರೂ ಸಮಸ್ಯೆ ಬಗೆಹರಿದಿಲ್ಲ. ಅದರ ಬದಲು ಜಿಲ್ಲಾವಾರು ಸಭೆಗಳನ್ನು ಕರೆದು
ಸಮಾಲೋಚನೆ ನಡೆಸಲಾಗುತ್ತಿದೆ.
ಇದು ನಮಗೆ ಅತ್ಯಂತ ನೋವು ತಂದಿದ್ದು, ಅನಿವಾರ್ಯವಾಗಿ ಸಭೆ ಕರೆದು ನಮ್ಮ ನೋವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿದ್ದೇವೆ ಎಂದರು. 15 ದಿನ ಕಳೆದರೆ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಸಂದುತ್ತದೆ.
ಅವರು ಅಧ್ಯಕ್ಷರಾದ ಮೇಲೆ ಕೆಲವು ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ರಾಷ್ಟ್ರೀಯ ಅಧ್ಯಕ್ಷರ ಮಾತುಗಳನ್ನೂ ಈಡೇರಿಸುತ್ತಿಲ್ಲ. ಈ ಕುರಿತು ಫೆ. 15ರವರೆಗೆ ಜಿಲ್ಲಾ ಪ್ರವಾಸ ಮಾಡಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುತ್ತೇವೆ. 15ರೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಜಿಲ್ಲಾವಾರು ಸಂಗ್ರಹಿಸಿದ ಅಭಿಪ್ರಾಯದ ವರದಿಯನ್ನು ಸಮಿತಿ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ನೀಡುತ್ತೇವೆ. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಆಗುಹೋಗುಗಳಿಗೆ
ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಕಿಡಿ ಕಾರಿದರು.
ಭಾನುಪ್ರಕಾಶ್ ಮಾತನಾಡಿ, ಯಡಿಯೂರಪ್ಪ ರಾಜ್ಯಾಧ್ಯಕ್ಷರಾದಾಗ ಮತ್ತು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಎಲ್ಲರೂ ಸಂಭ್ರಮಿಸಿದೆವು. ಅವರು ಆರಂಭದಲ್ಲಿ ಕೈಗೊಂಡ ಕೆಲವು ತೀರ್ಮಾನಗಳು ನಮಗೆ ನೋವು
ತಂದರೂ ಪಕ್ಷದ ಹಿತದೃಷ್ಟಿಯಿಂದ ಮೌನವಾಗಿದ್ದೆವು. ಆದರೆ, ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನು ಮುಗಿಸುತ್ತೇವೆಂದು ಹೇಳಿಕೊಂಡು ಪಕ್ಷ ತೊರೆದವರು ಮತ್ತೆ ಪಕ್ಷಕ್ಕೆ ಬಂದು ನಮ್ಮ ಮೇಲೆ ಸವಾರಿ ಮಾಡಿದಾಗ ಮೂಲ ಬಿಜೆಪಿಗರಿಗೆ ನೋವಾಗಿ ತಿರುಗಿ ಬೀಳುವ ಅನಿವಾರ್ಯ ಸ್ಥಿತಿ ಎದುರಾಯಿತು. ಇದು ಪಕ್ಷ ಸಂಘಟನೆ ಉದ್ದೇಶದಿಂದಲೇ ಹೊರತು ಪಕ್ಷ
ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಹೇಳಿದರು.
ಅಸಮಾಧಾನ ನಿವಾರಿಸುತ್ತೇವೆಂದು ಹೇಳಿಕೊಂಡು ಈ ಹಿಂದೆ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ 24 ಮಂದಿಯ ಪಟ್ಟಿಯನ್ನು ಮತ್ತೆ ತರಿಸಿಕೊಂಡು ಅದಕ್ಕಾಗಿ ಮಂಗಳವಾರ ಸಭೆ ನಿಗದಿಪಡಿಸಲಾಯಿತು. ಅದರಂತೆ ನಾವು ಬೆಂಗಳೂರಿಗೆ ಬಂದ ಬಳಿಕ ದಿಢೀರ್ ಸಭೆ ರದ್ದುಗೊಳಿಸಲಾಗಿದೆ. ಹೀಗಿರುವಾಗ ನಮ್ಮ ನೋವನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳದೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಈ ಹಿಂದೆ ಯಡಿಯೂರಪ್ಪ ಸಭೆ ಕರೆದರೂ ಹೋಗದೇ ಇದ್ದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಮಾತುಕತೆ ಎಂಬುದು ಸೌಹಾರ್ದಯುತ ವಾತಾವರಣದಲ್ಲಿ ನಡೆಯಬೇಕು. ನಮ್ಮ ಬೇಡಿಕೆ ಇದ್ದುದು ಕೆಲ ಮುಖಂಡರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮ ಕೈಬಿಡಬೇಕು ಎಂಬುದು. ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಸಭೆ ಕರೆದರೆ ಹೋಗಲು ಹೇಗೆ ಸಾಧ್ಯ ಎಂದು ಮರುಪ್ರಶ್ನೆ ಮಾಡಿದರು. ಪಕ್ಷದ ವಿರುದ್ಧ ಮಾಧ್ಯಮಗಳಿಗೆ ಹೋದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಯಡಿಯೂರಪ್ಪ ಅವರ ಪರವಾಗಿ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಮೊದಲು ಪಕ್ಷದ ನಿಷ್ಠಾವಂತ ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿರ್ಧಾರ ಕೈಬಿಟ್ಟು ನಂತರ ಉಪದೇಶ ಮಾಡಲಿ ಎಂದು ಕಿಡಿ ಕಾರಿದರು.
ಸಭೆಯಲ್ಲಿ ಹಾಜರಿದ್ದವರು
ಮಾಜಿ ಸಚಿವರಾದ ಸೊಗಡು ಶಿವಣ್ಣ, ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯರಾದ ಭಾನುಪ್ರಕಾಶ್,
ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ನಿರ್ಮಲ್‌ಕುಮಾರ್ ಸುರಾನಾ, ಶಿವಯೋಗಿಸ್ವಾಮಿ, ನೇಮಿರಾಜ್ ನಾಯ್ಕ, ಸೋಮಲಿಂಗಪ್ಪ, ಬಸವರಾಜ ನಾಯಕ್, ಸಿದ್ದರಾಜು, ನಾರಾಯಣ ಸಾ ಬಾಂಡಗೆ, ಮುಖಂಡರಾದ ಗಿರೀಶ್ ಪಟೇಲ್, ಅಶೋಕ್ ಬಸ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.