ಚಿತ್ತ ಸಮುದಾಯಗಳತ್ತ: ಮುಂದಿನ ಚುನಾವಣೆಗೆ ಕಾರ್ಯತಂತ್ರ ರೂಪಿಸಿದ ಕಮಲಪಡೆ
ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳನ್ನು ಸೆಳೆಯಲು ನಿರ್ಧಾರ
Team Udayavani, Jul 16, 2022, 7:10 AM IST
ಬೆಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಬಿಜೆಪಿಯು ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಸಹಿತ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿ ರುವ ರೆಸಾರ್ಟ್‌ನಲ್ಲಿ ಬಿಜೆಪಿ ಚಿಂತನ ಮಂಥನ ಸಭೆ ನಡೆಯಿತು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ವಿವಿಧ ಆಯಾಮ ಗಳಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಪ್ರಸ್ತುತ ಸರಕಾರದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅಭಿಪ್ರಾಯ ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಇರುವ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಕ್ಷವು ಸಂಘಟನೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಮತ್ತಷ್ಟು ಬಲಪಡಿಸುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಸಲಹೆಗಳನ್ನು ನೀಡಲಾಗಿದೆ. ಎರಡನೇ ಹಂತದಲ್ಲಿ ಸಚಿವರ ವರ್ಷದ ಸಾಧನೆ, ಇಲಾಖೆಗಳ ಪ್ರಗತಿ ಮತ್ತು ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಸಚಿವರ ಕೊಡುಗೆ, ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ, ಅವರ ಜನಪ್ರಿಯತೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಜತೆಗೆ ಸಚಿವರ ಕಾರ್ಯವೈಖರಿ, ಅವರ ಮೇಲಿರುವ ಆರೋಪಗಳ ಬಗ್ಗೆ ಪಕ್ಷದ ವರಿಷ್ಠರಿಗೆ ಇರುವ ಮಾಹಿತಿಯ ಕುರಿತಾಗಿ ಪಕ್ಷದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಚಿವರ ಗಮನಕ್ಕೆ ತಂದಿದ್ದಾರೆ. ಇನ್ನುಳಿದ ಅವಧಿಯಲ್ಲಿ ಪಕ್ಷ ಸಂಘಟನೆ ಮತ್ತು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಮುದಾಯಗಳನ್ನು ಸೆಳೆಯಲು ತಂತ್ರ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಕ್ಕಾಗಿ ಎಲ್ಲ ಸಮುದಾಯಗಳ ಮತಗಳನ್ನು ಕ್ರೋಡೀಕರಿಸಲು ಚಿಂತನೆ ನಡೆಸಿದೆ. “ಮೇಲ್ವರ್ಗದ ಜನರ ಪಕ್ಷ’ ಎಂಬ ಅಭಿಪ್ರಾಯವನ್ನು ಬದಲಾಯಿಸಲು; ದಲಿತರು, ಹಿಂದುಳಿದವರು, ರೈತರು ಮತ್ತು ಕಾರ್ಮಿಕ ವರ್ಗದವರಿಗಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ತಲುಪಿಸಿ ಮನವರಿಕೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಫಲಾನುಭವಿ ಸಮುದಾಯಗಳ ಪ್ರತ್ಯೇಕ ಸಮಾವೇಶಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಗಳಿಗೆ ಪ್ರತ್ಯುತ್ತರ
ಸರಕಾರದ ಮೇಲೆ ಕೇಳಿ ಬಂದಿರುವ ಗಂಭೀರ ಆರೋಪಗಳಿಗೆ, ವಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚಿಸಲಾಗಿದೆ. ಪಕ್ಷ ಸಂಘಟನೆ ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದು ಸಂಘ ಪರಿವಾರದ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮಾವೇಶಕ್ಕೆ ಸಿದ್ಧತೆ
ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾಗಿ ಜು. 27ಕ್ಕೆ ಒಂದು ವರ್ಷ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಸರಕಾರದ ಸಾಧನ ಸಮಾವೇಶವನ್ನು ಅದ್ದೂರಿಯಾಗಿ ಏರ್ಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿರುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಯನ್ನು ಸಮಾವೇಶಕ್ಕೆ ಕರೆಯಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಪಕ್ಷದ ಬಲವರ್ಧನೆಗೆ ಕ್ರಮ
ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಇನ್ನಷ್ಟು ಬಲಗೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಹಳೇ ಮೈಸೂರು ಭಾಗ ದಲ್ಲಿ ಬಿಜೆಪಿಯ ಕಡೆ ಒಲವಿರುವ ಇತರ ಪಕ್ಷಗಳ ಮುಖಂಡರನ್ನು ಸೆಳೆಯುವ ಕುರಿತಾಗಿಯೂ ಚರ್ಚಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಶಾಸಕರ ಸಂಖ್ಯೆಯನ್ನು 2ರಷ್ಟು ಹೆಚ್ಚಿಸಲು ಆ ಭಾಗಕ್ಕೆ ಒಬ್ಬ ಹಿರಿಯ ನಾಯಕರನ್ನು ಉಸ್ತುವಾರಿ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.
ಚಿಂತನ-ಮಂಥನದಲ್ಲಿ ಚರ್ಚೆಯಾದದ್ದೇನು?
01 ಪಕ್ಷವು ಎಲ್ಲೆಲ್ಲಿ ಸಂಘಟನೆಯ ಕೊರತೆ ಎದುರಿಸುತ್ತಿದೆಯೋ ಅಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕ್ರಮ
02 ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ
03 ದಲಿತರು, ಹಿಂದುಳಿದವರು, ರೈತರು, ಕಾರ್ಮಿಕ ವರ್ಗದವರಿಗೆ ಕೇಂದ್ರ-ರಾಜ್ಯ ಸರಕಾರದ ಯೋಜನೆಗಳ ಮನವರಿಕೆ
04 ಸರಕಾರದ ಫಲಾನುಭವಿಗಳಾಗಿರುವ ಸಮುದಾಯಗಳ ಪ್ರತ್ಯೇಕ ಸಮಾವೇಶಗಳನ್ನು ಆಯೋಜಿಸಲು ಚಿಂತನೆ
05 ವಿಪಕ್ಷಗಳ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಕಾರ್ಯತಂತ್ರ ಕುರಿತು ಸಮಾಲೋಚನೆ
06ಸರಕಾರದ ವರ್ಚಸ್ಸು ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನ ಮಾಡುವ ಕುರಿತು ಚರ್ಚೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.