ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
ವಕ್ಫ್ ಕಾಯ್ದೆ ರದ್ದು, ರೈತರ ನೋಟಿಸ್ ವಾಪಸ್‌ಗೆ ಆಗ್ರಹ
Team Udayavani, Nov 5, 2024, 1:48 AM IST
ಬೆಂಗಳೂರು/ಹುಬ್ಬಳ್ಳಿ/ಮಂಗಳೂರು: ವಕ್ಫ್ ಅವಾಂತರದ ವಿರುದ್ಧ ಸಿಡಿದೆದ್ದಿರುವ ಬಿಜೆಪಿಯು ರಾಜಧಾನಿ ಬೆಂಗಳೂರು ಸಹಿತ ರಾಜ್ಯಾದ್ಯಂತ ಸೋಮವಾರ ಬೀದಿಗಿಳಿದು ಹೋರಾಟ ನಡೆಸಿತು. ಎಲ್ಲ ತಾಲೂಕು, ಜಿಲ್ಲೆಗಳ ತಹಶೀಲ್ದಾರ್, ಉಪವಿಭಾಗಾಧಿ ಕಾರಿ, ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೆ ವಕ್ಫ್ ಸಚಿವ ಜಮೀರ್ ಅಹ್ಮದ್ ರಾಜೀನಾಮೆಗೆ ಪಟ್ಟು ಹಿಡಿಯಿತು.
ವಿಜಯನಗರ ಜಿಲ್ಲೆ ಹೊಸಪೇಟೆ, ಹಗರಿಬೊಮ್ಮನ ಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಬಿಜೆಪಿ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಹರಿಹಾಯ್ದರು. ಬೆಳಗಾವಿಯಲ್ಲಿ ಬಿಜೆಪಿಯ ಗ್ರಾಮಾಂತರ, ನಗರ ಘಟಕದ ಮುಖಂಡರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರ ವಣಿಗೆ ನಡೆಸಿದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ವಕ್ಫ್ ಬೋರ್ಡ್ ದೇಶದಲ್ಲಿನ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ಅದರಲ್ಲೂ ರಾಜ್ಯದಲ್ಲಿ ರೈತರ, ದೇವಸ್ಥಾನ, ಮಠಗಳ ಆಸ್ತಿಗಳ ಮೇಲೆ ಕಣ್ಣು ಹಾಕಿದೆ. ತತ್‌ಕ್ಷಣ ಇದನ್ನು ಕೈಬಿಟ್ಟು ಪಹಣಿ ಸರಿಪಡಿಸಬೇಕೆಂದು ಆಗ್ರಹಿಸಿದರು. ಸವದತ್ತಿ, ಗೋಕಾಕ, ಬೈಲಹೊಂಗಲ, ರಾಮದುರ್ಗ, ರಾಯಬಾಗ ಸೇರಿ ತಾಲೂಕು ಮಟ್ಟದಲ್ಲೂ ಭಾರೀ ಪ್ರತಿಭಟನೆ ನಡೆಸಲಾಯಿತು.
ಬೊಮ್ಮಾಯಿ ಎಚ್ಚರಿಕೆ
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದ ಪ್ರತಿಭಟನೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು. ಈ ವೇಳೆ ಮಾತನಾಡಿ, ರೈತರ ಜಮೀನು ಮುಟ್ಟಿದ ಯಾವ ನಾಯಕನೂ ಅಧಿಕಾರದಲ್ಲಿ ಉಳಿದಿಲ್ಲ. ರಾಜ್ಯದಲ್ಲಿ ಮತ್ತೂಂದು ನರಗುಂದ ಮಾದರಿ ರೈತ ಬಂಡಾಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು. ಚಿಕ್ಕಮಗಳೂರಿನಲ್ಲಿ ಹನುಮಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಗದಗದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಚಿವ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ವಕ್ಫ್ ಮಂಡಳಿ ಸಾರ್ವಜನಿಕರ ಆಸ್ತಿ ಕಬಳಿಕೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಕಲಬುರಗಿಯಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟಿಸಿ ಒಂದಿಂಚು ಭೂಮಿಯನ್ನೂ ವಕ್ಫ್ಗೆ ಕೊಡುವುದಿಲ್ಲ ಎಂದು ಗುಡುಗಿದರು. ಜೇವರ್ಗಿಯಲ್ಲಿ ಬೀದರ-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಯಿತು. ಕೊಪ್ಪಳ ಡಿ.ಸಿ. ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ರೈತರಿಗೆ ಅನ್ಯಾಯ ಮಾಡಿ ಸಾರ್ವಜನಿಕರ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸುವ ಹುನ್ನಾರ ನಡೆಸಿದೆ. ಕೂಡಲೇ ಇದನ್ನು ಕೈಬಿಡಬೇಕು, ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. ಕಾರವಾರ, ಜೋಯಿಡಾ, ಹಳಿಯಾಳ, ದಾಂಡೇಲಿ, ರಾಯಚೂರು, ಶಿವಮೊಗ್ಗ, ಯಾದಗಿರಿಗಳ ಲ್ಲಿಯೂ ಪ್ರತಿಭಟಿಸಿದರು.
ಬಂಧನ, ಬಿಡುಗಡೆ
ಬಿಜೆಪಿ ಕಾರ್ಯಕರ್ತರು, ಮುಖಂಡರು ದಾವಣಗೆರೆ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ ಎಸಿ ಕಚೇರಿ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಅನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆಯೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಗಾಯತ್ರಿ ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಒಳಗೊಂಡಂತೆ 35 ಜನರನ್ನು ಮುಂಜಾಗ್ರತೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಅನಂತರ ಬಿಡುಗಡೆ ಮಾಡಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು.
ಕೋಲಾರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಹಾಸನದಲ್ಲಿ ಸ್ಥಳೀಯ ಮುಖಂಡರು, ತುಮಕೂರಿನಲ್ಲಿ ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಸಾಗಿದ ನೂರಾರು ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿದರು.
ಚಾಮರಾಜನಗರ, ರಾಮನಗರ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರತಿಭಟಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಬೇಡಿಕೆಗಳೇನು?
1. ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಸರಕಾರಿ ಜಮೀನು, ಇತ್ಯಾದಿ ಆಸ್ತಿಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆ ಮಾಡಿರುವುದನ್ನು ತತ್‌ಕ್ಷಣ ತೆಗೆದು ಹಾಕಬೇಕು.
2. ಈಗಾಗಲೇ ನೋಟಿಸ್ ಕೊಟ್ಟು ಅಥವಾ ಕೊಡದೆ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆ ಮಾಡಿರುವುದನ್ನು ತೆಗೆದು ಹಾಕಬೇಕು.
3.ಪಹಣಿಯ ಯಾವುದೇ ಕಾಲಂನಲ್ಲೂ ವಕ್ಫ್ ಎಂದು ಇರಬಾರದು, ಕೇವಲ ರೈತರ ಹೆಸರು ಮಾತ್ರ ಇರಬೇಕು.
4. ಯಾವುದೇ ಆಸ್ತಿಗಳಿಗೆ ಸಂಬಂಧಿಸಿದ ತಕರಾರು ಸಾಮಾನ್ಯ ಕೋರ್ಟ್‌ಗಳಲ್ಲೇ ಇತ್ಯರ್ಥ ಆಗಬೇಕು, ವಕ್ಫ್ ನ್ಯಾಯಾಲಯಕ್ಕೆ ಅವಕಾಶ ಕಲ್ಪಿಸಬಾರದು.
5 ವಕ್ಫ್ ಅದಾಲತ್‌ನಿಂದ ಸರಕಾರಿ ನ್ಯಾಯಾಲಯದ ಮಹತ್ವ ಕಡಿಮೆ ಆಗಲಿದೆ. ಹೀಗಾಗಿ ಎಲ್ಲಿಯೂ ವಕ್ಫ್ ಅದಾಲತ್ ನಡೆಸಬಾರದು.
6. ನೋಟಿಸ್‌ಗಳನ್ನು ಹಿಂಪಡೆಯುವುದರ ಜತೆಗೆ ಮುಂದೆ ನೋಟಿಸ್ ನೀಡದಂತೆ ಜಿಲ್ಲಾಧಿಕಾರಿ ಗಳಿಗೆ ಲಿಖೀತ ಆದೇಶ ಹೊರಡಿಸಬೇಕು
7. ವಕ್ಫ್ ಕಾಯ್ದೆ ರದ್ದುಪಡಿಸಬೇಕು. ಜಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು.
ಜಿಲ್ಲಾ ಪ್ರವಾಸ ಮಾಡುತ್ತಿರುವ ಸಚಿವ ಜಮೀರ್ ಅವರು ಡಿ.ಸಿ.ಗಳನ್ನು ಬೆದರಿಸಿ, ವಕ್ಫ್ ಆಸ್ತಿ ಎಂದು ರೈತರು, ದೇಗುಲ, ಮಠಕ್ಕೆ ನೋಟಿಸ್ ಕೊಡಿಸುತ್ತಿದ್ದಾರೆ. ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಕಬಳಿಸಲು ಯತ್ನಿಸಲಾಗುತ್ತಿದೆ.
-ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ
ಕರ್ನಾಟಕವನ್ನು ಸಿದ್ದರಾಮಯ್ಯ ಉಗ್ರರ “ಸ್ಲಿಪಿಂಗ್ ಸೆಲ್’ ಮಾಡಿದ್ದಾರೆ. ಲವ್ ಜೆಹಾದ್ ಬಳಿಕ ಸಿದ್ದರಾಮಯ್ಯ ಮತ್ತು ತಂಡದವರು ಲ್ಯಾಂಡ್ ಜೆಹಾದ್ ನಡೆಸುತ್ತಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವ ಹುನ್ನಾರ ನಡೆಯುತ್ತಿದೆ.
-ಆರ್. ಅಶೋಕ್,
ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.