ಜನರಿಗೆ ನರಕ ಕಲ್ಪಿಸುವ ಯಾತ್ರೆ ಬಿಜೆಪಿಯವರು ಮಾಡಬಾರದು: ಸಿದ್ದರಾಮಯ್ಯ
ಬದ್ಧತೆ ಸಂಕಲ್ಪಗಳಿಲ್ಲದಿರುವಾಗ ಯಾತ್ರೆ ಹಾಸ್ಯಾಸ್ಪದ, ನಾಡಿಗೆ ಮಾಡುವ ದ್ರೋಹ...
Team Udayavani, Nov 7, 2022, 5:59 PM IST
ಬೆಂಗಳೂರು : ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುವ ಮೊದಲು ರಾಜ್ಯದ ಜನರಿಗೆ ನ್ಯಾಯಯುತವಾಗಿ ನೀಡಬೇಕಾದ್ದನ್ನು ನೀಡಿ, ಜನರ ಬದುಕಿನಲ್ಲಿ ಒಂದಿಷ್ಟು ನೆಮ್ಮದಿ ತರಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ್ದು, ಬಿಜೆಪಿಯವರು ಯಾವ ಯಾತ್ರೆ ಬೇಕಾದರೂ ಮಾಡಲಿ. ಆದರೆ ಜನರಿಗೆ ನರಕ ಕಲ್ಪಿಸುವ ಯಾತ್ರೆಯನ್ನು ಮಾತ್ರ ಮಾಡಬಾರದೆಂದು ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರವು ‘ಜನ ಸಂಕಲ್ಪ’ ಯಾತ್ರೆಗಳನ್ನು ಮುಂದುವರೆಸಿದೆ. ಸರ್ಕಾರಕ್ಕೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಚಾರದಲ್ಲಿ ಯಾವುದೇ ಬದ್ಧತೆ ಸಂಕಲ್ಪಗಳಿಲ್ಲದಿರುವಾಗ ಜನಸಂಕಲ್ಪ ಯಾತ್ರೆಗಳನ್ನು ಮಾಡುವುದು ಹಾಸ್ಯಾಸ್ಪದ ಮತ್ತು ನಾಡಿಗೆ ಮಾಡುವ ದ್ರೋಹ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಅನೇಕ ವಿಚಾರಗಳಲ್ಲಿ ಯಾವ ಸಂಕಲ್ಪವೂ ಇಲ್ಲ. ಕೇಂದ್ರವನ್ನು ಒತ್ತಾಯಿಸಿ ಅಗತ್ಯವಿದ್ದರೆ ಪ್ರತಿಭಟಿಸಿ ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನಗಳನ್ನು ತಂದು ರಾಜ್ಯದ ಅಭಿವೃದ್ಧಿಗೆ ಅದನ್ನು ವಿನಿಯೋಗಿಸಬೇಕು ಎಂದಿದ್ದಾರೆ.
ದುರಂತವೆಂದರೆ ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎದುರು ನಿಂತು ರಾಜ್ಯದ ಪರವಾಗಿ ಧೈರ್ಯವಾಗಿ ಮಾತನಾಡುವ ಸಂಸದರು ಒಬ್ಬರೂ ಇಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸುತ್ತಾರಾದರೂ ಕರ್ನಾಟಕಕ್ಕೆ ಎಲ್ಲೆಲ್ಲಿ ಅನ್ಯಾಯ ಮಾಡಬಹುದು ಎನ್ನುವುದನ್ನು ಯೋಜಿಸುವುದರಲ್ಲಿಯೇ ಅವರ ಸಮಯ ಮುಗಿದು ಹೋಗುತ್ತಿದೆ ಎಂದಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಲಿ, ಇನ್ಯಾರೇ ಸಚಿವರುಗಳಾಗಲೀ ಕೇಂದ್ರ ಸರ್ಕಾರದೊಂದಿಗೆ ಧೈರ್ಯವಾಗಿ ವ್ಯವಹರಿಸುವ ಶಕ್ತಿಯನ್ನು ಹೊಂದಿಲ್ಲ. ಪ್ರಹ್ಲಾದ್ ಜೋಷಿಯವರು ನನ್ನನ್ನು ಹೇಗೆ ಟೀಕಿಸಬಹುದು ಎನ್ನುವುದರಲ್ಲೇ ಸಮಯ ಕಳೆಯುತ್ತಿದ್ದಾರೆ.2022-23 ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯನ್ನು ನೋಡಿದರೆ ರಾಜ್ಯದ ಸಂಕಲ್ಪ ಯಾವ ಮಟ್ಟಿಗಿದೆ ಎಂದು ಅರ್ಥವಾಗುತ್ತದೆ. ಈ ವರ್ಷ 20352 ಕೋಟಿ ರೂಗಳನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ನೀಡಬೇಕಾಗಿತ್ತು. ಆದರೆ, ಸರ್ಕಾರದ ದಾಖಲೆಗಳನ್ನು ಗಮನಿಸಿದರೆ ಅಕ್ಟೋಬರ್ ಅಂತ್ಯದ ವೇಳೆಗೆ ಕೇವಲ 5083 ಕೋಟಿ ರೂಗಳನ್ನು (ಶೇ25) ಮಾತ್ರ ಬಿಡುಗಡೆಮಾಡಿದೆ. ಈಗಾಗಲೇ ಹಣಕಾಸು ವರ್ಷದ ಮುಕ್ಕಾಲು ಭಾಗ ಮುಗಿದು ಹೋಗಿದೆ. ಈ ವಿಚಾರದಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಲಿ, ಸಚಿವರುಗಳಾಗಲಿ ಕೇಂದ್ರದ ಮುಂದೆ ನಿಂತು ರಾಜ್ಯಕ್ಕೆ ಅನುದಾನಗಳನ್ನು ತರಲು ಯಾವುದೇ ಸಂಕಲ್ಪ ಮಾಡಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರವು ಹಲವಾರು ಕೇಂದ್ರ ಪುರಸ್ಕೃತ ಯೋಜನೆಗಳಡಿ ಇಲಾಖೆಗಳಿಗೆ ಇದುವರೆಗೂ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಉದಾಹರಣೆಗೆ, ವಸತಿ ಇಲಾಖೆಗೆ 473 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಯಾವುದೆ ಅನುದಾನ ಬಿಡುಗಡೆ ಮಾಡಿಲ್ಲವೆಂಬ ದಾಖಲೆಯನ್ನು ಸರ್ಕಾರ ನೀಡಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ಕೇಂದ್ರವು ಒಂದು ರೂ.ವನ್ನೂ ಬಿಡುಗಡೆ ಮಾಡಿಲ್ಲವೆಂದು ಸರ್ಕಾರದ ವೆಬ್‍ಸೈಟ್ ಹೇಳುತ್ತಿದೆ. ಉನ್ನತ ಶಿಕ್ಷಣ ಇಲಾಖೆಗೆ 59.22 ಕೋಟಿ ರೂ.ಗಳನ್ನು ನೀಡಬೇಕಾಗಿತ್ತು. ಆದರೆ, ಕೊಟ್ಟದ್ದು ಸೊನ್ನೆ ರೂಪಾಯಿ ಎಂದಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ 346 ಕೋಟಿ ರೂಗಳಷ್ಟು ಅನುದಾನ ರಾಜ್ಯಕ್ಕೆ ಬರುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ, ಇದುವರೆಗೆ ಬಿಡುಗಡೆಯಾಗಿರುವುದು ಕೇವಲ 7 ಕೋಟಿ ರೂ.ಮಾತ್ರ. ಕೃಷಿ ಇಲಾಖೆಗೆ 613 ಕೋಟಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಇದುವರೆಗೆ ಬಿಡುಗಡೆಯಾಗಿರುವುದು ಕೇವಲ 136 ಕೋಟಿ ರೂ ಮಾತ್ರ. ಕೃಷಿ, ಸಮಾಜ ಕಲ್ಯಾಣ ಇಲಾಖೆಗಳನ್ನು ರಾಜ್ಯದಿಂದ ಆಯ್ಕೆಯಾದ ಶೋಭ ಕರಂದ್ಲಾಜೆ ಮತ್ತು ನಾರಾಯಣಸ್ವಾಮಿಯವರು ನಿಭಾಯಿಸುತ್ತಿದ್ದಾರೆ. ಅವರುಗಳೇ ರಾಜ್ಯಕ್ಕೆ ಕೊಡಿಸಬೇಕಾದ ಅನುದಾನವನ್ನು ಕೊಡಿಸಬಾರದೆಂಬ ಸಂಕಲ್ಪ ಮಾಡಿದಂತೆ ಕಾಣುತ್ತಿದೆ.ಇಲ್ಲದಿದ್ದರೆ ಕೊಡಿಸಬೇಕಾದ ಅನುದಾನಗಳನ್ನು ಕೊಡಿಸುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದರು. ಅವರ ಉನ್ನತ ಶಿಕ್ಷಣ ಇಲಾಖೆಗೆ ಒಂದು ರೂಪಾಯಿಯನ್ನೂ ಕೊಡದೆ ಮೋದಿ ಸರ್ಕಾರ ಅವಮಾನ ಮಾಡಿದೆ. ಹಾಗೆಯೇ, ಕೌಶಲ್ಯಾಭಿವೃದ್ಧಿ ಇಲಾಖೆಯ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರವು ಪದೇ ಪದೇ ಕೊಚ್ಚಿಕೊಳ್ಳುತ್ತಿದೆ. (ಈ ಇಲಾಖೆಯನ್ನು ಸ್ಥಾಪನೆ ಮಾಡಿ ಯಥೇಚ್ಚ ಅನುದಾನಗಳನ್ನು ನೀಡಿ ತರಬೇತಿ ಮತ್ತು ಉದ್ಯೋಗಗಗಳನ್ನು ಒದಗಿಸಿದ್ದು ನಮ್ಮ ಸರ್ಕಾರ) ಆದರೆ, ಸರ್ಕಾರದ ವೆಬ್‍ಸೈಟ್ ಪ್ರಕಾರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯಕ್ಕಾಗಿ 472.5 ಕೋಟಿ ರೂ.ಗಳನ್ನು ನೀಡಬೇಕಾಗಿದ್ದ ಕೇಂದ್ರವು ಇದುವರೆಗೂ ನೀಡಿರುವುದು ಕೇವಲ 3.68 ಕೋಟಿ ಮಾತ್ರ ಎಂದು ಅಂಕಿ ಅಂಶಗಳನ್ನು ಮುಂದಿಟ್ಟಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2152 ಕೋಟಿ ರೂ.ಗಳನ್ನು ಕೊಡಬೇಕಾಗಿತ್ತು. ಕೊಟ್ಟಿರುವುದು ಕೇವಲ 382 ಕೋಟಿ ರೂ. ಮಾತ್ರ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 1431 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಬೇಕಾಗಿತ್ತು. ಆದರೆ, ಇದುವರೆಗೂ ಕೂಡ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ದಾಖಲೆಗಳು ಹೇಳುತ್ತಿವೆ. ಆದರೂ ರಾಜ್ಯದ ಈ ಖಾತೆಯ ಸಚಿವರು ವಿವಾದಾತ್ಮಕ ಹೇಳಿಕೆಗಳಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಜಲಸಂಪನ್ಮೂಲ ಇಲಾಖೆಗೆ 66 ಕೋಟಿ ರೂ. ಕೊಡಬೇಕಾಗಿತ್ತು. ಇದುವರೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಸಂಕಲ್ಪ ಇದ್ದರೆ ಕೇಂದ್ರವು ರಾಜ್ಯಕ್ಕೆ ಮಾಡುತ್ತಿರುವ ಮೋಸವನ್ನು ಪ್ರತಿಭಟಿಸಿ ರಾಜ್ಯಕ್ಕೆ ದಕ್ಕಬೇಕಾದ ಪ್ರತಿ ಪೈಸೆಯನ್ನೂ ಸಹ ಬಿಡುಗಡೆ ಮಾಡಿಸಬೇಕಾಗಿತ್ತು. ರಾಜ್ಯ ಸರ್ಕಾರದ ಸಂಕಲ್ಪ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕಮಿಷನ್ ದಂಧೆ, ಸರ್ಕಾರಿ ಹುದ್ದೆಗಳ ನೇಮಕಾತಿ , ವರ್ಗಾವಣೆ, ಬಡ್ತಿ ಮುಂತಾದವುಗಳಲ್ಲಿ ಭ್ರಷ್ಟಾಚಾರ ಎಷ್ಟೆಷ್ಟು ನಡೆಸಬಹುದು ಎನ್ನುವುದಕ್ಕೆ ಮಾತ್ರ ಬಿಜೆಪಿ ಸರ್ಕಾರಗಳಿಗೆ ಸಂಕಲ್ಪ ಇದೆಯೇ ಹೊರತು, ಜನರ ಕಲ್ಯಾಣ ಮಾಡಬೇಕೆಂಬ ಬಗ್ಗೆ ಮಾತ್ರ ಯಾವ ಸಂಕಲ್ಪವೂ ಇಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ತೆಂಗಿನ ಕಾಯಿ ಮತ್ತು ಕೊಬ್ಬರಿಯ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಅಡಿಕೆ, ಕಾಫಿ, ಮೆಣಸು ಬೆಳೆಯುವವರೂ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವೇ ಹೇಳಿರುವ ಹಾಗೆ ಕಳೆದ ಐದು ವರ್ಷಗಳಲ್ಲಿ 1.36 ಕೋಟಿ ಎಕರೆಗಳಷ್ಟು ಭೂಮಿಯಲ್ಲಿ ರಾಜ್ಯದ ರೈತರು ಬೆಳೆದ ಬೆಳೆ ಹಾಳಾಗಿದೆ. 2.62 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಆದರೆ ಇದುವರೆಗೂ ರೈತರಿಗೆ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲವೆಂದು ತಿಳಿದು ವಿಶ್ವ ಬ್ಯಾಂಕಿನ ಮುಂದೆ ನೆರವಿಗಾಗಿ ಕೋರಿಕೊಳ್ಳುವಷ್ಟರ ಮಟ್ಟಿಗೆ ಕೇಂದ್ರ-ರಾಜ್ಯ ಸರ್ಕಾರಗಳು ದಿವಾಳಿಯಾಗಿವೆ. ಹಾಗಿದ್ದರೆ ಜನರಿಂದ ದೋಚುತ್ತಿರುವ ತೆರಿಗೆ ಹಣ ಎಲ್ಲಿ ಹೋಯಿತು? ಬಿಜೆಪಿಯವರ ಭ್ರಷ್ಟಾಚಾರದ ಹಗೇವುಗಳ ದಾಹ ತೀರುವುದೆಂದು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಮತ್ತು ರಾಜ್ಯದ ರಸ್ತೆಗಳಲ್ಲಿ ಗುಂಡಿಬಿದ್ದು ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಅಪಘಾತಗಳಲ್ಲಿ ಮರಣ ಹೊಂದುವವರ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಸ್ತೆಗಳ ಗುಂಡಿ ಮುಚ್ಚುವ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲವಾಗಿದೆ. ರಾಜ್ಯದ 15 ಜಿಲ್ಲೆಗಳ ಮಕ್ಕಳಿಗೆ ಇನ್ನೂ ಸಮವಸ್ತ್ರ ನೀಡಿಲ್ಲವೆಂದು ಪತ್ರಿಕೆಗಳು ವರದಿ ಮಾಡಿವೆ. ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿವೇತನ ದೊರಕುತ್ತಿಲ್ಲ ಎಂದು ಆರೋಪಗಳ ಮಳೆ ಸುರಿಸಿದ್ದಾರೆ.
ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದ್ದರೂ, ಜನರ ಬದುಕನ್ನು ಬರ್ಬಾದು ಮಾಡಿದ್ದರೂ ಸಹ ಜನಸಂಕಲ್ಪ ಯಾತ್ರೆಯನ್ನು ಮಾಡುತ್ತಿರುವ ದುಷ್ಟತನ ಹಾಗೂ ಭಂಡತನವನ್ನು ಬಿಜೆಪಿ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.