ಬಿಎಂಎಸ್ ಶಿಕ್ಷಣ ಟ್ರಸ್ಟ್ ಅಕ್ರಮ: ಪ್ರಧಾನಿಗೆ ದೂರು ನೀಡಲು ಹೆಚ್ ಡಿಕೆ ನಿರ್ಧಾರ
ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ + ಒಂದು ಕಾಣದ ಕೈ ; ಮಾಜಿ ಸಿಎಂ ಗಂಭೀರ ಆರೋಪ
Team Udayavani, Sep 23, 2022, 5:07 PM IST
ಬೆಂಗಳೂರು: ಬಿಎಂಎಸ್ ಟ್ರಸ್ಟ್ ಪ್ರಕರಣ ಕುರಿತು ರಾಜ್ಯ ಸರಕಾರ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕೆಲ ದಿನಗಳಲ್ಲಿ ನಾನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾಖಲೆ ಸಮೇತ ಪತ್ರ ಬರೆಯುವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದ್ದಾರೆ.
ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ನಂತರ ಅವರು ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾತನಾಡಿ, ಕರ್ನಾಟದಲ್ಲಿ ಮೊತ್ತ ಮೊದಲಿಗೆ ಪರ್ಸಂಟೇಜ್ ವಿಷಯ ಎತ್ತಿದವರೇ ಪ್ರಧಾನಿ ಮೋದಿ ಅವರು. ಕೆಂಪುಕೋಟೆ ಮೇಲೆ ಅಗಸ್ಟ್ 15ರಂದು ಅವರು ಮಾಡಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಷಣದಲ್ಲಿಯೂ ಸೇರಿದಂತೆ ಎಲ್ಲ ಕಡೆ ಕಮಿಷನ್ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಎಂದೆಲ್ಲ ಹೇಳುತ್ತಲೇ ಇದ್ದಾರೆ. ಹಾಗಾದರೆ, ಅವರದ್ದೇ ಬಿಜೆಪಿ ಪಕ್ಷದ ಸರಕಾರ ಇರುವ ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿಗೆ ಗೊತ್ತಿಲ್ಲವೆ? ಎಂದು ಖಾರವಾಗಿ ಪ್ರಶ್ನಿಸಿದರು.
ಹಾಗೆ ನೋಡಿದರೆ ಕಳೆದ ಏಳು ವರ್ಷಗಳಿಂದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರದೇ ಪಕ್ಷದ ಸರಕಾರದಲ್ಲಿ ಸಚಿವರೊಬ್ಬರ ಬ್ರಹ್ಮಾಂಡ ಅಕ್ರಮ ಕುರಿತಂತೆ ನಾನೇ ದಾಖಲೆಗಳ ಸಮೇತ ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ. ಕಾದು ನೋಡೊಣ, ಪ್ರಧಾನಿ ಅವರು ಏನು ಕ್ರಮ ಕೈಗೊಳ್ಳುತ್ತಾರೋ ಎಂದರು.
ಇದು ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಟ್ರಸ್ಟ್ ಆಸ್ತಿಯನ್ನು ಹೊಡೆದುಕೊಳ್ಳುವ ಭಾರೀ ಹಗರಣ. ಈಗಾಗಲೆ ಬಹಳಷ್ಟು ಅಕ್ರಮಗಳು ನಡೆದು ಹೋಗಿವೆ. ರಾಜ್ಯ ಬಿಜೆಪಿ ಸರಕಾರಕ್ಕೆ ತನಿಖೆ ನಡೆಸುವ ಧೈರ್ಯವಿಲ್ಲ. ಭ್ರಷ್ಟಾಚಾರ ಹೊರಬಂದರೆ ಈ ಸರಕಾರದ ಬುಡಕ್ಕೇ ಬರುತ್ತದೆ ಎಂಬ ಭಯ ಅವರದ್ದು. ಯಾಕೆಂದರೆ, ಕಾಣದ ಕೈ ಒಂದು ಇಡೀ ಅಕ್ರಮದ ಹಿಂದೆ ಅಡಗಿದೆ. ಈ ಕಾರಣಕ್ಕಾಗಿಯೇ ಸರಕಾರವು ತನಿಖೆಗೆ ಸುತರಾಂ ಒಪ್ಪುತ್ತಿಲ್ಲ ಎಂದು ದೂರಿದರು.
ಅಕ್ರಮ ನಡೆದಿದೆ ಎಂದು ಸರಕಾರಕ್ಕೂ ಗೊತ್ತಿದೆ, ದಾಖಲೆಗಳು ಕಣ್ಣಿಗೆ ಕಟ್ಟಿದಂತೆ ಇವೆ ಎಂದು. ಆದರೆ, ಆ ಕಾಣದ ಕೈಗಳು ಅಕ್ರಮದ ತನಿಖೆ ಆಗದಂತೆ ತಡೆಯುತ್ತವೆ ಹಾಗೂ ತನಿಖೆಯ ಕೈ ಕಟ್ಟಿಹಾಕಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿವೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು. ಏನು ಮಾಡಿಲ್ಲವೆಂದರೆ ತನಿಖೆ ನಡೆಸಲು ಮೀನ ಮೇಷ ಏಕೆ? ಭಯ ಏಕೆ? ಎಂದು ಅವರು ಪ್ರಶ್ನೆ ಮಾಡಿದರು.
ಸಾರ್ವಜನಿಕರಿಗೆ ಸೇರಿದ ಟ್ರಸ್ಟ್ ನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಎಲ್ಲ ರೀತಿಯ ಕುಮ್ಮಕ್ಕು ನೀಡಿ ಖಾಸಗಿ ಕುಟುಂಬ ಒಂದಕ್ಕೆ ಪರಭಾರೆ ಮಾಡಿಕೊಳ್ಳಲು ಹೊರಟ್ಟಿದ್ದಾರೆ. ಇದನ್ನು ಸದನದಲ್ಲಿ ನಾನು ದಾಖಲೆಗಳ ಸಮೇತ ಬಿಚ್ಚಿಟ್ಟಿದ್ದೇನೆ. ಆದರೂ, ಸಚಿವರು ಉಢಾಪೆ ಉತ್ತರ ಕೊಟ್ಟು ಏನೂ ಆಗಿಲ್ಲವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸರಕಾರ ಕೂಡ ಎಲ್ಲ ಗೊತ್ತಿದ್ದರೂ, ಏನೂ ಗೊತ್ತೇ ಇಲ್ಲ ಎನ್ನುವಂತೆ ನಾಟಕ ಆಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಿಕ್ ಬ್ಯಾಕ್ ಪಡೆದಿರುವ ಸಚಿವರು
ಉನ್ನತ ಶಿಕ್ಷಣ ಸಚಿವರು ದೊಡ್ಡಮಟ್ಟದ ಕಿಕ್ ಬ್ಯಾಕ್ ಪಡೆದಿದ್ದಾರೆ. ನಾನು ಸದನದಲ್ಲಿ ಈ ಮಾತು ಹೇಳಿದಾಗ ಬಿಜೆಪಿ ಪಕ್ಷದ ಯಾವ ಶಾಸಕರಾಗಲಿ, ಸಚಿವರಾಗಲಿ ವಿರೋಧ ವ್ಯಕ್ತಪಡಿಸಲಿಲ್ಲ. ಯಾಕೆಂದರೆ ಇಡೀ ಹಗರಣದಲ್ಲಿ ಏನೇನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದು ಜಗಜ್ಜಾಹೀರಾದ ಹಗರಣ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪ ಮಾಡಿದರು.
ನಿನ್ನೆ ಮತ್ತು ಇಂದು ವಿಧಾನಸಭೆ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವರ ಬೆಂಬಲಕ್ಕೆ ಆಡಳಿತ ಪಕ್ಷದ ಯಾರೊಬ್ಬರೂ ಬಾರದೆ ಇದ್ದಿದ್ದನ್ನು ನೋಡಿದ ಮೇಲೆ ಮಹಾಭಾರತದ ಪ್ರಸಂಗ ಒಂದು ನೆನಪಾಯಿತು. ದ್ರೌಪದಿಯ ವಸ್ತ್ರಾಪಹರಣ ಆದ ಸಂದರ್ಭದಲ್ಲಿ ಭೀಷ್ಮ, ದ್ರೋಣ ಮುಂತಾದವರೆಲ್ಲ ಮೌನಕ್ಕೆ ಶರಣಾಗಿದ್ದ ರೀತಿಯಲ್ಲಿ ಬಿಜೆಪಿಯ ಸಚಿವ, ಶಾಸಕರು ಮೌನಕೆ ಶರಣಾಗಿದ್ದರು ಎಂದು ಕುಟುಕಿದರು.
ಲೋಕಾಯುಕ್ತಕ್ಕೂ ದೂರು
ಸಚಿವ ಅಶ್ವತ್ಥನಾರಾಯಣ ಸೂಚನೆ ಮೇರೆಗೆ ಅನುಮೋದನೆ ಕೊಟ್ಟಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ತನಿಖೆ ನಡೆದರೆ ಸತ್ಯಾಂಶ ಹೊರ ಬರುತ್ತದೆ. ಲೋಕಾಯುಕ್ತ ಸಂಸ್ಥೆಗೆ ದೂರು ನೀಡುವ ಕುರಿತು ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ. ನಾನು ಕೇವಲ ಅಶ್ವತ್ಥನಾರಾಯಣ ವಿರುದ್ಧ ಹೋರಾಟ ಮಾಡುವುದಿಲ್ಲ. ಸರಕಾರದ ವಿರುದ್ಧವೂ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ಇದು ಕೇವಲ 40 ಪರ್ಸೆಂಟ್ ಕಮಿಷನ್ ಸರಕಾರವಲ್ಲ. ನಾನು ಪ್ರಸ್ತಾಪಿಸಿರುವುದು 100 ಪರ್ಸೆಂಟ್ ಕಮೀಷನ್ ಪ್ರಕರಣವನ್ನು. ಇದಕ್ಕಾಗಿಯೇ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ. ಬಿಎಂಎಸ್ ಟ್ರಸ್ಟ್ ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದಂತೆ ತಿದ್ದುಪಡಿ ಮಾಡಿದ್ದಾರೆ. ಈ ಸರಕಾರವು ಮುಂದುವರಿಯಲು ಯಾವ ನೈತಿಕತೆ ಉಳಿಸಿಕೊಂಡಿಲ್ಲ. ಬಹಳ ಉದ್ದಟತನ ತೋರುತ್ತಿದೆ. ಇದರಲ್ಲಿ ಹಲವರ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಲವರು ಇದೇ ಪ್ರಕರಣಕ್ಕೆ ಸಂಬಂಧಿಸಿ ನನಗೇ ಆಮಿಷವೊಡ್ಡಲು ಬಂದಿದ್ದರು. ನಾನು ಅದನ್ನು ತಿರಸ್ಕರಿಸಿ ಕಡತ ಹಿಂತಿರುಗಿಸಿದ್ದೆ. ನಾನು ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ನಮ್ಮ ತಂದೆಯವರಿಂದ ಕಲಿತಿದ್ದೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ ಎಂದರು.
ಇಡೀ ಅಕ್ರಮದ ಬಗ್ಗೆ ಹೇಳುವುದನ್ನೆಲ್ಲ ಸದನದಲ್ಲೇ ಹೇಳಿದ್ದೇನೆ. ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಈ ಪ್ರಕರಣವನ್ನು ಇಲ್ಲಿಗೇ ಬಿಡುವ ಪ್ರಶ್ನೆ ಇಲ್ಲ. ಬಿಎಂಎಸ್ ಟ್ರಸ್ಟ್ ಅನ್ನು ಲಪಟಾಯಿಸಲು ಟ್ರಸ್ಟ್ ನಲ್ಲಿ ಅಕ್ರಮವಾಗಿ ತಂದ ತಿದ್ದುಪಡಿಗಳಿಗೆ ಒಪ್ಪಿಗೆ ಕೊಡಲು ನನ್ನ ನೇತೃತ್ವದ ಸರಕಾರ ನಿರಾಕರಿಸಿತ್ತು. ಆದರೆ, ನಂತರ ಬಂದ ಬಿಜೆಪಿ ಸರಕಾರ ಈ ಅಕ್ರಮ ತಿದ್ದುಪಡಿಗಳಿಗೆ ಶರವೇಗದಲ್ಲಿ ಅನುಮೋದನೆ ನೀಡಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಶಾಸಕ ಮತ್ತು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಕೆ.ಎನ್.ತಿಪ್ಪೇಸ್ವಾಮಿ ಅವರು ಸೇರಿದಂತೆ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.