ಮೌಢ್ಯಕ್ಕೆ ಸಡ್ಡುಹೊಡೆದು ಚಾಮರಾಜನಗರಕ್ಕೆ ಬರಲಿದ್ದಾರೆ ಬೊಮ್ಮಾಯಿ!
30 ಮಂದಿ ಆಕ್ಸಿಜನ್ ದುರಂತದಿಂದ ಸತ್ತರೂ ಬಿಎಸ್‌ವೈ ಭೇಟಿ ನೀಡಲಿಲ್ಲ
Team Udayavani, Oct 6, 2021, 9:36 AM IST
ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಗುರುವಾರ ಭೇಟಿ ನೀಡಲಿದ್ದು, ಮೂಢನಂಬಿಕೆಗೆ ಸಡ್ಡು ಹೊಡೆದಿದ್ದಾರೆ.
ನಗರ ಸರ್ಕಾರಿ ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆ ಉದ್ಘಾಟನೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿಯಾದವರು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದರೆ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯಿದೆ. ಈ ಮೂಢನಂಬಿಕೆಯನ್ನು ನಂಬಿ ಅನೇಕ ಮುಖ್ಯಮಂತ್ರಿಗಳು ಚಾಮರಾಜನಗರ ಪಟ್ಟಣಕ್ಕೆ ತಮ್ಮ ಅಧಿಕಾರಾವಧಿಯಲ್ಲಿ ಭೇಟಿ ನೀಡಲಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಆದರೂ ಅವರು ಅಧಿಕಾರ ಕಳೆದುಕೊಂಡರು. ಮುಖ್ಯಮಂತ್ರಿಯಾಗಿದ ಸಿದ್ದರಾಮಯ್ಯ ಮೂಢನಂಬಿಕೆಗೆ ಬೆಲೆ ಕೊಡದೇ ತಾವು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಪಟ್ಟಣಕ್ಕೆ 10ಕ್ಕಿಂತ ಹೆಚ್ಚು ಬಾರಿ ಭೇಟಿ ನೀಡಿ ವಿವಿಧ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದ್ದರು. ಆದರೂ ಅವರು ಐದು ವರ್ಷದ ಅಧಿಕಾರಾವಧಿ ಪೂರೈಸಿದರು.
ಈ ಮೂಢನಂಬಿಕೆಯ ಗುಮ್ಮನ ಕಾರಣ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವರೋ ಇಲ್ಲವೋ ಎಂಬ ಅನುಮಾನವಿತ್ತು. ರಾಷ್ಟ್ರಪತಿಯವರ ಕಾರ್ಯಕ್ರಮದ ದಿನವಾದ ಗುರುವಾರ ಮೈಸೂರಿನಲ್ಲಿ ದಸರಾ ಉದ್ಘಾಟನೆಯಿರುವುದರಿಂದ ಅದೇ ಕಾರಣ ನೀಡಿ ಚಾಮರಾಜನಗರಕ್ಕೆ ಬಾರದೇ ತಪ್ಪಿಸಲೂ ಅವಕಾಶವಿತ್ತು.
ಆದರೆ ಬೊಮ್ಮಾಯಿ ಅವರು ಮೂಢನಂಬಿಕೆಯನ್ನು ಬದಿಗೊತ್ತಿ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಅ.7 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಮಧ್ಯಾಹ್ನ 1 ಗಂಟೆಗೆ ಚಾಮರಾಜನಗರದ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿ.ಐ.ಎಂ.ಎಸ್)ಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 1.25 ಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಳಿಯ ಹೆಲಿಪ್ಯಾಡ್‌ನಲ್ಲಿ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.40 ಕ್ಕೆ ರಾಷ್ಟ್ರಪತಿಗಳನ್ನು ಹೆಲಿಪ್ಯಾಡ್ ನಲ್ಲಿ ಬೀಳ್ಕೊಡುವರು. ಸಂಜೆ 5 ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ಅಧಿಕೃತ ಪ್ರವಾಸ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ.
ಹೀಗಾಗಿ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಬರುವುದು ಖಚಿತವಾಗಿದೆ. ಅವರು ಬಂದರೆ ಮೂಢನಂಬಿಕೆಗೆ ಸೆಡ್ಡು ಹೊಡೆದ ಮುಖ್ಯಮಂತ್ರಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಅವರ ಸಾಲಿಗೆ ಬಸವರಾಜ ಬೊಮ್ಮಾಯಿ ಸೇರಲಿದ್ದಾರೆ.
ಮೂಢನಂಬಿಕೆಯ ಇತಿಹಾಸ
ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸ್, ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಇಲ್ಲಿಗೆ ಭೇಟಿ ನೀಡಿದ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಂಡರು ಎಂಬ ಮೂಢನಂಬಿಕೆ ಬಿತ್ತಲಾಯಿತು.
ನಂತರ 1990ರಲ್ಲಿ ವೀರೇಂದ್ರ ಪಾಟೀಲರು ಅನಾರೋಗ್ಯದ ಕಾರಣ ಅಧಿಕಾರ ಕಳೆದುಕೊಂಡರು. ಬಂಗಾರಪ್ಪನವರು ಮುಖ್ಯಮಂತ್ರಿಯಾದ ನಂತರವಂತೂ ಅನೇಕ ಮುಖ್ಯಮಂತ್ರಿಗಳೂ ಚಾಮರಾಜನಗರಕ್ಕೆ ಬರಲಿಲ್ಲ.
ಅನಂತರ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂ ಸಿಂಗ್ ಚಾ.ನಗರಕ್ಕೆ ಭೇಟಿ ನೀಡಲಿಲ್ಲ. ಸಮಾಜವಾದಿ ಎನಿಸಿಕೊಂಡ ಪಟೇಲ್ ಅವರು ಸಹ ನೂತನ ಚಾ.ನಗರ ಜಿಲ್ಲೆಯನ್ನು ಮಹದೇಶ್ವರ ಬೆಟ್ಟದಲ್ಲಿ ಉದ್ಘಾಟಿಸಿದರು.
17 ವರ್ಷಗಳ ಬಳಿಕ, ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಧಿಕಾರ ಹಂಚಿಕೆ ಒಡಂಬಡಿಕೆ ವಿವಾದದಿಂದ ಅವರು ಅಧಿಕಾರ ಕಳೆದುಕೊಂಡರು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಪಟ್ಟಣಕ್ಕೆ ಬರಲೇ ಇಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಕೊನೆಯ ದಿನಗಳಲ್ಲಿ ಎರಡು ಬಾರಿ ಚಾ.ನಗರಕ್ಕೆ ಭೇಟಿ ನೀಡಿದ್ದರು. ಬಳಿಕ ಸಿದ್ದರಾಮಯ್ಯ ಹಲವಾರು ಬಾರಿ ಭೇಟಿ ನೀಡಿದ್ದರು.
30ಜನ ಸತ್ತರೂ ಬಾರದ ಬಿಎಸ್‌ವೈ: ನಿಕಟಪೂರ್ವ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮೂಢನಂಬಿಕೆಯನ್ನು ಬಲವಾಗಿ ನಂಬಿ, ಆಕ್ಸಿಜನ್ ದುರಂತದಲ್ಲಿ 30ಕ್ಕೂ ಹೆಚ್ಚು ಜನರು ಸತ್ತರೂ ಚಾಮರಾಜನಗರಕ್ಕೆ ಬರಲಿಲ್ಲ. ಅಧಿಕಾರ ಕಳೆದುಕೊಂಡ ಎರಡೇ ದಿನಕ್ಕೆ ತಮ್ಮ ಅಭಿಯಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಭೇಟಿ ನೀಡಿದರು.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.