ಉಭಯ ಸದನದಲ್ಲಿ ಡೈರಿಯದ್ದೇ ಆಲಾಪ
Team Udayavani, Mar 17, 2017, 6:26 AM IST
ಬೆಂಗಳೂರು: ಕಾಂಗ್ರೆಸ್ ಪಕ್ಷ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿದೆ ಎನ್ನಲಾದ ಡೈರಿ ವಿವಾದ ಗುರುವಾರ ಉಭಯ ಸದನಗಳಲ್ಲೂ ಪ್ರಸ್ತಾವಗೊಂಡು ಕೋಲಾಹಲ ಸೃಷ್ಟಿಸಿತು. ಇಡೀ ದಿನದ ವಿಧಾನಸಭೆ ಕಲಾಪ ಡೈರಿ ಗದ್ದಲಕ್ಕೆ ಬಲಿಯಾದರೆ, ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಅವಕಾಶ ಕೊಡದಿರುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ವಿಧಾನಸಭೆಯಲ್ಲಿ ಕಲಾಪ ಆರಂಭಕ್ಕೆ ಮುನ್ನ ಸ್ಪೀಕರ್ ಕೊಠಡಿಗೆ ತೆರಳಿದ್ದ ಬಿಜೆಪಿ ಸದಸ್ಯರು, ಡೈರಿ ಪ್ರಕರಣದ ಕುರಿತು ನಿಲುವಳಿ ಸೂಚನೆ ಪ್ರಸ್ತಾವ ಮಂಡಿಸಲು ಕೋರಿಕೆ ಸಲ್ಲಿಸಿದ್ದರು. ಆದರೆ, ಇದಕ್ಕೆ ನಿರಾಕರಿಸಿದ್ದ ಸ್ಪೀಕರ್, ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಲಿಖೀತವಾಗಿ ತಿಳಿಸಿದ್ದರು. ಅನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಯ ಪ್ರಸ್ತಾವಿಸಲು ಮುಂದಾದಾಗ, ಪ್ರಶ್ನೋತ್ತರ ಅವಧಿಯ ಅನಂತರ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು.
ಅದರಂತೆ ಪ್ರಶ್ನೋತ್ತರ ಕಲಾಪ ಮುಗಿಯು ತ್ತಿದ್ದಂತೆ ಜಗದೀಶ್ ಶೆಟ್ಟರ್ ಮತ್ತೆ ವಿಷಯ ಪ್ರಸ್ತಾವಿಸಲು ಮುಂದಾದಾಗ ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಕ್ರಿಯಾಲೋಪ ಎತ್ತಿದರು. ಇದಕ್ಕೆ ಸಚಿವ ರಮೇಶ್‌ಕುಮಾರ್ ಕೂಡ ದನಿಗೂಡಿಸಿದರಲ್ಲದೆ, ಚರ್ಚೆಗೆ ಅವಕಾಶ ನೀಡಿದ ಸ್ಪೀಕರ್ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೊಂಚ ವಿಚಲಿತರಾದಂತೆ ಕಂಡುಬಂದ ಸ್ಪೀಕರ್ ಚರ್ಚೆಗೆ ಅವಕಾಶ ನೀಡಿದ್ದ ತನ್ನ ತೀರ್ಮಾನವನ್ನು ಹಿಂಪಡೆಯುವುದಾಗಿ ಘೋಷಿಸಿದರು.
ಇದು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣ ವಾಯಿತು. ಜಗದೀಶ್ ಶೆಟ್ಟರ್ ಮಾತನಾಡಿ, ನಾನಿನ್ನೂ ವಿಷಯ ಪ್ರಸ್ತಾವಿಸಿಯೇ ಇಲ್ಲ. ಅಷ್ಟರಲ್ಲೇ ಕಾಂಗ್ರೆಸ್‌ನವರು ಆಕ್ಷೇಪ ವ್ಯಕ್ತಪಡಿಸುತ್ತಿರು ವುದು ಯಾವ ನ್ಯಾಯ ಎಂದು ಪ್ರಶ್ನಿಸಿದಾಗ ಆಡಳಿತ ಮತ್ತು ವಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಯಿತು.
ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ತೆರಳಿ ಧರಣಿ ಆರಂಭಿಸಿದರು. ಇದರಿಂದ ಕಲಾಪವನ್ನು ಸ್ವಲ್ಪ ಹೊತ್ತು ಮುಂದೂಡಲಾಯಿತು. ಅನಂತರ ಸದನ ಸೇರಿದರೂ ಬಿಜೆಪಿ ಸದಸ್ಯರ ಧರಣಿ ಮುಂದು ವರಿದು ಸದನದಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಮತ್ತೆ ಮುಂದೂಡಿದರು.
ಈ ಮಧ್ಯೆ ಸ್ಪೀಕರ್ ಕೊಠಡಿಯಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಸಭೆ ನಡೆಯಿತಾದರೂ ಸಂಧಾನ ಏರ್ಪಡಲಿಲ್ಲ. ಹೀಗಾಗಿ ಭೋಜನಾನಂತರ ಕಲಾಪ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು.
ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡೈರಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬಾರದು ಎಂದು ಹೇಳಿದರಲ್ಲದೆ, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿರುವ ಸಹರಾ ಡೈರಿ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮತ್ತೆ ಮಾತಿನ ಚಕಮಕಿ ಆರಂಭವಾಯಿತು.
ಸ್ಪೀಕರ್ ಚರ್ಚೆಗೆ ಅವಕಾಶ ನೀಡಿ ಬಳಿಕ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಅನುಮತಿ ವಾಪಸ್ ಪಡೆದಿದ್ದರಿಂದ ಸದಸ್ಯರ ಹಕ್ಕುಚ್ಯುತಿಯಾಗಿದೆ ಎಂದಾಗ ಸಿಟ್ಟುಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ ಮರ್ಯಾದೆ ಇದೆಯೇನ್ರಿ ನಿಮಗೆ. ಲೆಹರ್ ಸಿಂಗ್ ಡೈರಿಯಲ್ಲಿ ಬಿಜೆಪಿ ಮುಖಂಡರಿಗೆ ಹಣ ನೀಡಿರುವ ಬಗ್ಗೆ ಪ್ರಸ್ತಾವವಿದ್ದು, ಆ ಬಗ್ಗೆಯೂ ಚರ್ಚಿಸಿ ಎಂದು ಹೇಳಿದರು. ಎರಡು ಡೈರಿಗಳ ಬಗ್ಗೆ ಚರ್ಚೆಯಾಗಲಿ ಮತ್ತು ಸಿಬಿಐ ತನಿಖೆಯೂ ಆಗಲಿ ಎಂದು ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.
ಧರಣಿನಿರತರನ್ನು ಸಮಾಧಾನಪಡಿಸಲು ಸಭಾಧ್ಯ ಕ್ಷರ ಪೀಠದಲ್ಲಿದ್ದ ಉಪಾಧ್ಯಕ್ಷ ಎನ್.ಎಚ್. ಶಿವಶಂಕರ ರೆಡ್ಡಿ ಸಾಕಷ್ಟು ಪ್ರಯತ್ನ ಮಾಡಿದರಾದರೂ ಪ್ರಯೋಜನ ವಾಗದೇ ಇದ್ದುದರಿಂದ ಕಲಾಪವನ್ನು ಮುಂದೂಡಿದರು.
ವಿಧಾನಪರಿಷತ್ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರು ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ಡೈರಿ ಪ್ರಕರಣದ ಕುರಿತು ನಿಲುವಳಿ ಸೂಚನೆ ಪ್ರಸ್ತಾವ ಮಂಡಿಸಿದರು. ಆದರೆ, ಸಭಾಪತಿಗಳು ಅವಕಾಶ ನಿರಾಕರಿಸಿದ್ದರಿಂದ ಬಿಜೆಪಿ ಸದಸ್ಯರು ಅಸಮಾಧಾನಗೊಂಡು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಆಡಳಿತ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಗದ್ದಲ ನಿರ್ಮಾಣವಾಯಿತು.
ಗದ್ದಲದ ಮಧ್ಯೆಯೇ ಮಾತು ಮುಂದುವರಿಸಿದ ಈಶ್ವರಪ್ಪ, ಡೈರಿ ಪ್ರಕರಣದ ಕುರಿತು ಸಿಬಿಐ ತನಿಖೆಯಾದರೆ ಅನೇಕ ಸಚಿವರು, ಶಾಸಕರು ಜೈಲಿಗೆ ಹೋಗಲಿದ್ದಾರೆ ಎಂದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕಾರದಲ್ಲಿದ್ದಾಗಲೇ ಮಾಡಬಾರದ ಕೆಲಸ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದವರು ನೀವು. ನಮ್ಮ ಬಗ್ಗೆ ಮಾತನಾಡಲು ನಿಮಗೇನು ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದರಿಂದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಅನಂತರ ಸಭಾಪತಿಗಳು ಪ್ರಶ್ನೋತ್ತರ ಆರಂಭಿಸಿದಾಗ ಬಿಜೆಪಿ ಸದಸ್ಯರು ಕಲಾಪದಲ್ಲಿ ಸೇರಿಕೊಂಡರು. ಬಿಜೆಪಿ ಸದಸ್ಯರು ಮಂಡಿಸಿದ್ದ ನಿಲುವಳಿ ಸೂಚನೆ ಪ್ರಸ್ತಾಪವನ್ನು ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿರಸ್ಕರಿಸಿದ್ದರಿಂದ ಸದಸ್ಯರು ಸಭಾತ್ಯಾಗ ಮಾಡಿದರು.
ಧರಣಿ ಅಂತ್ಯಗೊಳಿಸಿ ಕಲಾಪ ನಡೆಯಲು ಅವಕಾಶ ಡೈರಿ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಧರಣಿ ಆರಂಭಿಸಿರುವ ಬಿಜೆಪಿ ಸದಸ್ಯರು ಶುಕ್ರವಾರ ಧರಣಿ ಹಿಂಪಡೆದು ಕಲಾಪ ಮುಂದುವರಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಚರ್ಚೆಗೆ ಅವಕಾಶ ನೀಡುವವರೆಗೆ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೇವೆ. ಆದರೆ, ಬಜೆಟ್ ಲೇಖಾನುದಾನದ ಮೇಲಿನ ಚರ್ಚೆ ಜತೆಗೆ ಬರಗಾಲ ಮತ್ತಿತರ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿರುವುದರಿಂದ ಶುಕ್ರವಾರ ಬೆಳಗ್ಗೆ ಧರಣಿ ಹಿಂಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.