ನಾಲ್ಕು ಚಕ್ರದ ವೈಯಕ್ತಿಕ ವಾಹನವಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ “ದಂಡ”ದ ಶಿಕ್ಷೆ!
Team Udayavani, Jul 25, 2022, 7:00 AM IST
ಪುತ್ತೂರು: ನಾಲ್ಕು ಚಕ್ರಗಳ ವೈಯಕ್ತಿಕ ವಾಹನ ಹೊಂದಿದ್ದರೂ ನಿಯಮಕ್ಕೆ ವಿರುದ್ಧವಾಗಿ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿದ್ದೀರಾ? ಹಾಗಿದ್ದರೆ ಹೋಗಿ ದಂಡ ಕಟ್ಟಿ ಬನ್ನಿ!
ಹೌದು, ಇಂಥವರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ರಾಜ್ಯದ 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರವು ಈ ಪಡಿತರ ಚೀಟಿ ಹಿಂದೊಪ್ಪಿಸಲು ಹಲವು ಅವಕಾಶ ನೀಡಿದ್ದರೂ ನಿರ್ಲಕ್ಷಿಸಿದ ಅನರ್ಹರ ಮಾಹಿತಿ ಸಂಗ್ರಹಿಸಿ ಅವರಿಂದ ಈ ತನಕ ಪಡೆದ ಆಹಾರ ಸಾಮಗ್ರಿಗೆ ದಂಡ ವಸೂಲಿ ಮಾಡಲಿದೆ.
ಏನಿದು ಅನರ್ಹತೆ? :
ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ, ಅಂಥವರು ದಂಡ ರಹಿತವಾಗಿ 2019ರ ಸೆ.3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ವಾಪಸ್ ಕೊಟ್ಟು, ರದ್ದು ಮಾಡಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಬಳಿಕ ಅವಧಿಯನ್ನು ಅ.15ರ ತನಕ ವಿಸ್ತರಿಸಿತು. ಹೀಗೆ ಒಟ್ಟು ನಾಲ್ಕಾರು ಬಾರಿ ಸರೆಂಡರ್‌ಗೆ ಅವಕಾಶ ನೀಡಲಾಗಿತ್ತು. ಆದರೂ ರದ್ದು ಮಾಡದೇ ಸೌಲಭ್ಯ ಪಡೆಯುತ್ತಿರುವ ಅನರ್ಹ ಪಡಿತರ ಚೀಟಿದಾರರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.
ಅನರ್ಹರಿಗೆ ನೋಟಿಸ್ :
ನಾಲ್ಕು ಚಕ್ರಗಳ ವಾಹನ ಹೊಂದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರ ಕುಟುಂಬಗಳ ಮಾಹಿತಿ ನೀಡುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸಾರಿಗೆ ಇಲಾಖೆಯನ್ನು ಕೋರಿತ್ತು. ಇಲಾಖೆಯು ಅಂಥವರ ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡಿದೆ. ಅದರ ಅನ್ವಯ ಆಯಾ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರ/ನಿರೀಕ್ಷಕರಿಗೆ ಅನರ್ಹ ಪಡಿತರ ಚೀಟಿದಾರರ ಪಟ್ಟಿ ಕಳುಹಿಸಲಾಗಿದೆ. ನಿಯಮ ಉಲ್ಲಂ ಸಿದವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ದಾಖಲೆಗಳು, ಹೆಸರಿನ ವ್ಯತ್ಯಾಸ ಗೊಂದಲ ಇದ್ದಲ್ಲಿ ಸ್ಥಳ ಪರಿಶೀಲಿಸುವ ಅಧಿಕಾರವನ್ನು ನೀಡಲಾಗಿದ್ದು, ಅನರ್ಹರು ದಂಡ ಪಾವತಿಸಲೇ ಬೇಕಿದೆ.
ಮೂರು ದಿನ ಕಾಲಾವಕಾಶ:
ನೋಟಿಸ್ ತಲುಪಿದ 3 ದಿನಗಳ ಒಳಗೆ ಕಾರ್ಡುದಾರ ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಾಜರಾಗಬೇಕು. ಅಲ್ಲಿ ಪಾವತಿಸಬೇಕಾದ ದಂಡದ ಮೊತ್ತವನ್ನು ತಿಳಿಸಲಾಗುತ್ತದೆ. ದಂಡ ಮೊತ್ತವನ್ನು ಸರ್ಕಾರದ ಟ್ರೆಜರಿಗೆ ಪಾವತಿಸಬೇಕಾದ ಕಾರಣ ಚಲನ್ ನೀಡಲಾಗುತ್ತದೆ. ಬ್ಯಾಂಕ್‌ನಲ್ಲಿ ದಂಡ ಮೊತ್ತ ಕಟ್ಟಿದ ರಶೀದಿಯನ್ನು ಪುನಃ ಆಹಾರ ನಿರೀಕ್ಷಕರಿಗೆ ನೀಡಬೇಕು. ಬಳಿಕ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡನ್ನು ಎಪಿಎಲ್ ಆಗಿ ಪರಿವರ್ತಿಸಲಾಗುತ್ತದೆ. ರಶೀದಿ ಒಪ್ಪಿಸುವ ತನಕ ಕಾರ್ಡನ್ನು ಅಮಾನತಿನಲ್ಲಿಡಲಾಗುತ್ತದೆ.
ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ:
ಪಡಿತರ ಚೀಟಿದಾರ ವಾಹನ ಖರೀದಿಸಿದ ದಿನಾಂಕ, ಪಡಿತರ ಚೀಟಿ ನೋಂದಣಿ ಆದ ದಿನಾಂಕವನ್ನು ಇಲಾಖೆಯು ವೆಬ್‌ಸೈಟ್‌ನಲ್ಲಿ ಗಮನಿಸುತ್ತದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮೊದಲೇ ವಾಹನ ಹೊಂದಿದ್ದರೆ ಆತ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದಿದ್ದಾನೆ ಎಂದರ್ಥ. ಅಂಥವರಿಗೆ ದಂಡ ಹೆಚ್ಚಿರುತ್ತದೆ. ಪಡಿತರ ಚೀಟಿ ಆದ ಬಳಿಕ ವಾಹನ ಖರೀದಿಸಿದ್ದರೆ, ವಾಹನ ಪಡೆದ ದಿನದಿಂದ ದಂಡ ಅನ್ವಯ ಆಗುತ್ತದೆ. ಕಾರ್ಡುದಾರ ಈ ತನಕ ಪಡೆದಿರುವ ಪಡಿತರ ಸಾಮಗ್ರಿಗೆ ಈಗಿನ ಮಾರುಕಟ್ಟೆ ಮೌಲ್ಯ ಆಧರಿಸಿ ದಂಡ ಕಟ್ಟಬೇಕು. ಅಂದರೆ ಪಡಿತರ ಇಲಾಖೆಯಿಂದ 1 ರೂ.ಗೆ ಅಕ್ಕಿ ಪಡೆಯುತ್ತಿದ್ದರೆ ಈಗಿನ ಮಾರುಕಟ್ಟೆ ಮೌಲ್ಯ ಕೆ.ಜಿ.ಗೆ 28 ರೂ. ಎಂದು ಪರಿಗಣಿಸಬಹುದು. ಆರಂಭದಿಂದ ಈ ತನಕ ಪಡೆದ ಪಡಿತರ ಸಾಮಗ್ರಿಗೆ ಈಗಿನ ಮಾರುಕಟ್ಟೆ ಮೌಲ್ಯ ಪ್ರಕಾರವೇ ದಂಡ ಪಾವತಿಸಬೇಕು.
ಗರಿಷ್ಠ ಅನರ್ಹ ಬಿಪಿಎಲ್ ಕಾರ್ಡ್‌ದಾರರು:
ಕಲಬುರಗಿ: 2,026
ಚಿಕ್ಕಮಗಳೂರು : 1,838
ಬೆಂಗಳೂರು: 1,273
ಕನಿಷ್ಠ ಅನರ್ಹ ಬಿಪಿಎಲ್ ಕಾರ್ಡ್‌ದಾರರು :
ಗದಗ: 13
ಧಾರವಾಡ: 15
ಕೊಡಗು: 21
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸೈಫ್ ಅಲಿಖಾನ್ ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನಿಗೆ 1 ಲಕ್ಷ ರೂ. ಘೋಷಿಸಿದ ಗಾಯಕ ಮಿಕಾ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?