ಬಿಕ್ಕಟ್ಟು ತಾರಕಕ್ಕೆ: ಇಂದು ಅತೃಪ್ತರಿಂದ ಸಂಘಟನೆ ಉಳಿಸಿ ಸಭೆ
Team Udayavani, Apr 27, 2017, 10:43 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ
ಕೆಲವು ಮುಖಂಡರು ಗುರುವಾರ ಬೆಂಗಳೂರಿನಲ್ಲಿ ಕರೆದಿರುವ “ಸಂಘಟನೆ ಉಳಿಸಿ’ ಸಭೆ ಪಕ್ಷದೊಳಗಿನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.ಅತೃಪ್ತರ ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಭಾಗವಹಿಸಬಾರದೆಂದು ಬಿಜೆಪಿ ಹೈಕಮಾಂಡ್ ತಾಕೀತು ಮಾಡಿದೆ. ಇದರ ನಡುವೆಯೂ ಈಶ್ವರಪ್ಪ ಅತಿಥಿಯಾಗಿ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿರುವುದು ಸಭೆಯ ಗಂಭೀರತೆಯನ್ನು ಹೆಚ್ಚಿಸಿದೆ.
ಬಿಜೆಪಿ ಪಕ್ಷದ್ದಲ್ಲದ ಸಭೆಯಲ್ಲಿ ಹಿರಿಯ ಮುಖಂಡರಾಗಿ ಪಾಲ್ಗೊಳ್ಳುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಲಿದೆ.
ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಸಂದೇಶವನ್ನು ಬಿಜೆಪಿ ರಾಜ್ಯ ಘಟಕ ಸಹ ಅತೃಪ್ತ ಮುಖಂಡರಿಗೆ ರವಾನಿಸಿದೆ. ಆದರೆ, ಸಭೆ ನಡೆಸಿಯೇ ಸಿದ್ಧ. ಸಂಘಟನೆ ಉಳಿಸಿ ಎನ್ನುವುದು ಪಕ್ಷ ವಿರೋಧಿಯಾದರೆ ಪಕ್ಷದ ಪರವಾದ ಕಾರ್ಯಕ್ರಮ ಯಾವುದೆಂದು ಪ್ರಶ್ನಿಸುವ ಮೂಲಕ ಸಭೆ ಆಯೋಜಿಸಿರುವ ಮುಖಂಡರು ಶಿಸ್ತು ಕ್ರಮ ಬೆದರಿಕೆಗೆ ತಿರುಗೇಟು ನೀಡಿದ್ದಾರೆ.
ಇದು ಬಿಜೆಪಿ ಸಭೆಯಲ್ಲ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟಿಸಿರುವ ಸಭೆ ಎಂದು ಹೇಳಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಈ ಸಭೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಪಕ್ಷದ ಯಾವ ಕಾರ್ಯಕರ್ತರೂ ಪಾಲ್ಗೊಳ್ಳುವಂತಿಲ್ಲ ಎಂದು ಸೂಚಿಸಿದ್ದಾರೆ. ಅಲ್ಲದೆ, ಬಿಜೆಪಿ ಸಂಘಟಿಸದೇ ಇರುವ ಯಾವುದೇ
ಸಮಾವೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬಾರದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ
ಉಸ್ತುವಾರಿ ಮುರಳೀಧರರಾವ್ ಮತ್ತು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಇದು ಪಕ್ಷದ ನಿಲುವಾಗಿದೆ.
ಇದಕ್ಕೆ ವಿರುದ್ಧವಾಗಿ ಸಭೆಗಳಲ್ಲಿ ಭಾಗವಹಿಸುವವರ ಮೇಲೆ ಆಯಾ ಜಿಲ್ಲಾಧ್ಯಕ್ಷರು ನಿಗಾ ಇಡಬೇಕು. ಪಕ್ಷದ ಸೂಚನೆ
ಹೊರತಾಗಿಯೂ ಸಭೆಯಲ್ಲಿ ಭಾಗವಹಿಸುವವರ ನಿಲುವನ್ನು ಪಕ್ಷ ಗಮನಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ ಸಭೆಯಲ್ಲಿ ಭಾಗವಹಿಸದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ಕೆ.ಎಸ್.ಈಶ್ವರಪ್ಪ
ಅವರಿಗೆ ಸೂಚನೆ ನೀಡಿದ್ದಾರೆ. ಆದರೆ, ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರಿಂದ ಪಾಲ್ಗೊಳ್ಳುವ ಅನಿವಾರ್ಯ ಎಂದು
ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಬಿಕ್ಕಟ್ಟಿಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾಷ್ಟ್ರಾಧ್ಯಕ್ಷ ಅಮಿತ್
ಶಾ ಅವರಿಗೆ ವರದಿ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಏಟು-ತಿರುಗೇಟು: ಈ ಮಧ್ಯೆ ಗುರುವಾರ ಕರೆದಿರುವ ಸಭೆ ನಡೆಸಬಾರದು. ಒಂದೊಮ್ಮೆ ಸಭೆ ನಡೆಸಿದರೆ ಪಾಲ್ಗೊಳ್ಳುವ ವರವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಆಪ್ತರೂ ಆಗಿರುವ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವಿರುದ್ಧವೂ ಅವರು ಕಿಡಿಕಾರಿದ್ದು, ಪಕ್ಷದ ಮಾಜಿ ಅಧ್ಯಕ್ಷರಾಗಿರುವ ಮತ್ತು ಪಕ್ಷದ ಹೆಸರಿನಲ್ಲಿ ಅಧಿಕಾರ
ಅನುಭವಿಸುತ್ತಿರುವ ಈಶ್ವರಪ್ಪ ಅವರು ಈ ರೀತಿಯ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಸರಿಯಲ್ಲ. ಸಭೆಯಲ್ಲಿ ಪಾಲ್ಗೊಂಡರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಚಿವ ಸೊಗಡು ಶಿವಣ್ಣ, ನಾವು ಪಕ್ಷ ಅಥವಾ ಪಕ್ಷದ ನಾಯಕರ ವಿರುದ್ಧ ಈ ಸಭೆ ನಡೆಸುತ್ತಿಲ್ಲ. ಯಾವುದೇ ಗೊಂದಲಗಳಿಲ್ಲದೆ ಬಿಜೆಪಿ ಸಂಘಟನೆಯನ್ನು ಬೆಳೆಸಬೇಕು ಎಂಬ ಉದ್ದೇಶ ಇಟ್ಟುಕೊಂಡು ಸಭೆ
ಕರೆದಿದ್ದೇವೆ. ಈ ವಿಚಾರದಲ್ಲಿ ಪಕ್ಷದ ಬಗ್ಗೆ ಬದ್ಧತೆ ಇಲ್ಲದೇ ಇರುವವರು ಮಾತನಾಡಿದರೆ ಅದಕ್ಕೆ ಬೆಲೆ ಇಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ಪಕ್ಷದಲ್ಲಿ ಉದ್ಭವಿಸಿರುವ ಅಸಮಾಧಾನ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ. ಗುರುವಾರ ನಡೆಯುವ ಸಭೆಯಲ್ಲಿ ಅಸಮಾಧಾನಿತರು ಯಡಿಯೂರಪ್ಪ ಅವರ ವಿರುದ್ಧ ಅಥವಾ ಪಕ್ಷಕ್ಕೆ ಧಕ್ಕೆಯಾಗುವ ರೀತಿ ಮಾತನಾಡಿದರೆ ಅವರ ವಿರುದ್ಧ ಶಿಸ್ತು ಕ್ರಮದ ತೂಗುಗತ್ತಿ ನೇತಾಡುವ ಸಾಧ್ಯತೆ ಇದೆ.
ಪಕ್ಷದಲ್ಲಿ ಉಂಟಾಗುತ್ತಿರುವ ಗೊಂದಲ, ಅದಕ್ಕೆ ಕೆ.ಎಸ್.ಈಶ್ವರಪ್ಪ ಅವರು ಬೆಂಬಲಿಸುತ್ತಿರುವ ವಿಚಾರವನ್ನು ಯಡಿಯೂರಪ್ಪ ಅವರು ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರಿಗೆ ತಲುಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಉಸ್ತುವಾರಿ ಮುರಳೀಧರರಾವ್
ಅವರು ಸೂಚಿಸಿದ್ದು, ಅದರ ಪರಿಣಾಮವೇ ಬಿ.ಜೆ.ಪುಟ್ಟಸ್ವಾಮಿ ಅವರು ಸಭೆ ನಡೆಸುವವರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸುವ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.