ರಾಜ್ಯ ಬಿಜೆಪಿ ನಡೆ ಮತ್ತೊಮ್ಮೆ ಅಧಿಕಾರದ ಕಡೆ: ಯಡಿಯೂರಪ್ಪ
Team Udayavani, Oct 7, 2022, 2:18 PM IST
ಬೆಂಗಳೂರು: ರಾಜ್ಯ ಬಿಜೆಪಿ ನಡೆಯು ಮತ್ತೆ ಅಧಿಕಾರಕ್ಕೆ ಏರುವ ಕಡೆ ಮುನ್ನಡೆಯಲಿದೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಇಂದು ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲಾಗದು. ನರೇಂದ್ರ ಮೋದಿ ಮತ್ತು ರಾಜ್ಯದ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಯಾತ್ರೆಗಳ ಮೂಲಕ ಜನರನ್ನು ತಲುಪಲಿದೆ. ಕಿಸಾನ್ ಸಮ್ಮಾನ್ ಯೋಜನೆ ಯಶಸ್ವಿಯಾಗಿದೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 140ರಿಂದ 150 ಸೀಟುಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಧ್ಯವರ್ತಿಗಳಿಲ್ಲದೆ ಈಗ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ ಎಂದ ಅವರು, ಈ ವಿಚಾರವನ್ನು ಜನರಿಗೆ ತಲುಪಿಸಿ ಎಂದು ಮನವಿ ಮಾಡಿದರು. ಶುದ್ಧ ಕುಡಿಯುವ ನೀರನ್ನು ಮನೆಮನೆಗೆ ತಲುಪಿಸಲಾಗಿದೆ. ಉಜ್ವಲ, ನಳ್ಳಿ ನೀರು ಸೇರಿ ಅನೇಕ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿವೆ ಎಂದು ವಿವರಿಸಿದರು. 6574 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳು ಜಾರಿ ಆಗುತ್ತಿವೆ ಎಂದರು.
ಇದನ್ನೂ ಓದಿ:ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಮೃತ್ಯು
ಕಾಂಗ್ರೆಸ್ ಪಕ್ಷ ಜನರಿಂದ ತಿರಸ್ಕೃತಗೊಂಡಿದೆ. ದೇಶದೆಲ್ಲೆಡೆ ತಿರಸ್ಕಾರಗೊಂಡ ಪಕ್ಷವು ಇಲ್ಲೂ ನೆಲಕಚ್ಚಲಿದೆ. ಕಾಂಗ್ರೆಸ್ ಯಾತ್ರೆ ಯಾವುದೇ ಫಲ ಕೊಡದು ಎಂದು ನುಡಿದರು. ಸಚಿವರು ನಿರಂತರ ಪ್ರವಾಸದಲ್ಲಿದ್ದು, ಕಾರ್ಯಕರ್ತರಲ್ಲಿ ವಿಶ್ವಾಸ- ನಂಬಿಕೆ ಹೆಚ್ಚಿಸಬೇಕು ಎಂದು ತಿಳಿಸಿದರು. ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದರು.
ರಾಜ್ಯದ ಬಿಜೆಪಿ ಸರಕಾರದ ವಿವಿಧ ಸಾಧನೆಗಳನ್ನು ಅವರು ವಿವರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆಯನ್ನು ಉದ್ಘಾಟಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.