ಸಂಕಷ್ಟ ಎದುರಾದರೆ ಬಿಎಸ್‌ವೈ ಬೆನ್ನಿಗೆ ಎಚ್‌ಡಿಕೆ ?
ಬಿಎಸ್‌ವೈ-ಎಚ್‌ಡಿಕೆ ಸಂಬಂಧ ಗಟ್ಟಿ
Team Udayavani, Sep 13, 2020, 6:10 AM IST
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದೊಮ್ಮೆ ಸಂಕಷ್ಟ ಅಥವಾ ದಿಢೀರ್ ವಿದ್ಯಮಾನ ಗಳು ಘಟಿಸಿದರೆ ಎಚ್.ಡಿ. ಕುಮಾರಸ್ವಾಮಿ ಅವರು ಬಿ.ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ನಿಲ್ಲುತ್ತಾರೆಯೇ? ಉಭಯ ನಾಯ ಕರು ಭೇಟಿ ಯಾದ ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಯಿದು.
ಸಾಮಾನ್ಯವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾಗಲೀ ಎಚ್.ಡಿ. ಕುಮಾರಸ್ವಾಮಿ ಯವರಾಗಲೀ ಯಾರನ್ನೂ ಸುಮ್ಮನೆ ಭೇಟಿ ಮಾಡುವುದಿಲ್ಲ. ಒಂದೊಮ್ಮೆ ಭೇಟಿಯಾದರೆ ಅಲ್ಲಿ “ರಾಜಕೀಯ’ ಇದ್ದೇ ಇರುತ್ತದೆ. ಎಚ್ ಡಿಕೆ ಮತ್ತು ಬಿಎ ಸ್‌ವೈ ಅವರ ಭೇಟಿಯ ಹಿಂದೆಯೂ ಸಂದೇಶ ರವಾನೆಯ ರಾಜಕೀಯ ಕಾರ್ಯತಂತ್ರವಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಬಿಜೆಪಿ ವಲಯದಲ್ಲಿ ಕಳೆದ ಆರು ತಿಂಗಳಿಂದ ನಾಯಕತ್ವ ಬದಲಾವಣೆಯ ಗುಸುಗುಸು ಕೇಳಿಬರುತ್ತಿದೆ. ಸೆ. 21ರಿಂದ ಹತ್ತು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್ ಬಿಜೆಪಿ ಸರಕಾರದ ವಿರುದ್ಧ ಮುಗಿಬೀಳಲು ವೈಫಲ್ಯಗಳ ಬಗ್ಗೆ “ಚಾರ್ಜ್‌ಶೀಟ್’ ಸಿದ್ಧಪಡಿಸಿದೆ. ಜತೆಗೆ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಯಾವುದೇ ಸಂದರ್ಭ ದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಭೇಟಿ ರಾಜಕೀಯವಾಗಿಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಾಸಕರಿಂದಲೂ ಒತ್ತಡ?
ಜೆಡಿಎಸ್ ಶಾಸಕರು ಕೂಡ ಯಡಿಯೂರಪ್ಪ ಮತ್ತು ಬಿಜೆಪಿ ಜತೆ ಸಂಬಂಧ ಸುಧಾರಣೆ ಮಾಡಿಕೊಳ್ಳುವಂತೆ ಕುಮಾರಸ್ವಾಮಿಯವರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಇಬ್ಬರಿಗೂ ಆತ್ಮೀಯರಾದ ಪ್ರಸ್ತುತ ಬಿಜೆಪಿಯಲ್ಲಿ ಇರುವ ಜನತಾಪರಿವಾರದ ನಾಯಕರೊಬ್ಬರು ಇದಕ್ಕೆ ಕೊಂಡಿಯಾಗಿ ಪೌರೋಹಿತ್ಯ ವಹಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಸಂಕಷ್ಟ ಎದುರಾದರೆ ಜತೆಗೆ ನಿಲ್ಲುವ ಭರವಸೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಭೇಟಿ ಬಳಿಕ ಕುಮಾರಸ್ವಾಮಿಯವರು ಆಪ್ತರ ಬಳಿ, ತತ್‌ಕ್ಷಣಕ್ಕೆ ಸರಕಾರ ಬಿದ್ದರೆ ಯಾರಿಗೂ ಚುನಾವಣೆಗೆ ಹೋಗುವ ಮನಸ್ಸಿಲ್ಲ. ನನಗೆ ಪಕ್ಷದ ಶಾಸಕರು ಮತ್ತು ರಾಜ್ಯದ ಜನತೆಯ ಹಿತ ಮುಖ್ಯ ಎಂಬರ್ಥದಲ್ಲಿ ಮಾತಾಡಿದ್ದಾರೆ ಎನ್ನಲಾಗಿದೆ. ಇವರಿಬ್ಬರ ಭೇಟಿ ಕಾಂಗ್ರೆಸ್‌ಗೂ ತಲೆಬಿಸಿ ತಂದಿದೆ ಎನ್ನಲಾಗುತ್ತಿದೆ.
ಗುದ್ದಾಟ -ಆತ್ಮೀಯತೆ 2013ರ ವಿಧಾನಸಭೆ ಚುನಾವಣೆ ಅನಂತರ ಬಿಜೆಪಿ ಸರಕಾರ ರಚನೆ ತಪ್ಪಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದಾಗ ಯಡಿಯೂರಪ್ಪ ವಿಧಾನಸಭೆಯಲ್ಲೇ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ ಬಳಿಕವೂ ಕುಮಾರಸ್ವಾಮಿಯವರು ಯಡಿಯೂರಪ್ಪ ವಿರುದ್ಧ ಸಮಯ ಬಂದಾಗ ಕುಟುಕುತ್ತಿದ್ದರು.
ಆದರೆ ಕೋವಿಡ್ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಕಾರ ಮತ್ತು ಸಿಎಂ ಮೇಲೆ ಮುಗಿಬಿದ್ದಾಗ “ಜನರ ಆರೋಗ್ಯ ಮುಖ್ಯ, ರಾಜಕೀಯ ಬಿಡಿ’ ಎಂದು ಸಲಹೆ ನೀಡುವ ಮೂಲಕ ಕುಮಾರಸ್ವಾಮಿ ಸರಕಾರದ ಪರ ನಿಂತಿದ್ದರು. ಯಡಿಯೂರಪ್ಪ ಅವರೂ ಕುಮಾರಸ್ವಾಮಿಯವರು ಒಳ್ಳೆಯ ಮಾತನಾಡಿದ್ದಾರೆ. ಅವರು ಸರಕಾರದ ಕೆಲಸವನ್ನು ಮೆಚ್ಚಿದಂತಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಬೇರೆ ಬೆಳವಣಿಗೆಗೆ ಸಾಕ್ಷಿ ಸಾಧ್ಯತೆ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಿ ಸರಕಾರಕ್ಕೆ ಗಂಡಾಂತರ ಎದುರಾದರೆ ಜೆಡಿಎಸ್ -ಬಿಜೆಪಿ ಒಂದಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಅದರ ಬೆನ್ನಲ್ಲೇ ಎಚ್.ಡಿ. ಕುಮಾರಸ್ವಾಮಿಯವರು “ನನಗೆ ಬಿಜೆಪಿಗಿಂತ ಕಾಂಗ್ರೆಸ್ ಮೊದಲ ಶತ್ರು’ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಬಿಜೆಪಿಯ ಕೇಂದ್ರ ನಾಯಕರು ಕುಮಾರಸ್ವಾಮಿ ಸಂಪರ್ಕದಲ್ಲಿ ನಿರಂತರವಾಗಿ ಇರುವುದು ಗುಟ್ಟೇನಲ್ಲ. ಆದರೆ ಈಗ ದಿಢೀರ್ ಎಂಬಂತೆ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಒಂದಾಗುವ ಲಕ್ಷಣಗಳು ಕಂಡುಬರುತ್ತಿರುವುದು ಬೇರೆಯದೇ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.