ಕಾಗೇರಿ-ದೇಶಪಾಂಡೆ ನಡುವೆ ಬಜೆಟ್ ವಾಗ್ವಾದ
Team Udayavani, Feb 24, 2018, 8:15 AM IST
ವಿಧಾನಸಭೆ: ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಮತ್ತು ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಸದನದಲ್ಲಿ ಪರಸ್ಪರ ವಾಗ್ವಾದ ನಡೆಯಿತು. ಕಾಗೇರಿಯವರು ಬಜೆಟ್ ಕುರಿತು
ಮಾತನಾಡುವಾಗ, ವಿಧಾನಸಭೆ ಚುನಾವಣೆ ಹತ್ತಿರದಲ್ಲಿ ಇರುವಾಗ ಯಾವ ಪಕ್ಷದ ಸರ್ಕಾರವೇ ಆಗಲಿ ಮುಂಗಡಪತ್ರ
ಮಂಡಿಸಬಾರದು. ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಚುನಾವಣೆ ಸಮೀಪವಿದ್ದಾಗ ಬಜೆಟ್ ಮಂಡಿಸುವ ಕಾನೂನು ಪುನರ್
ಪರಿಶೀಲಿಸುವಂತೆ ರಾಜ್ಯಪಾಲರು, ರಾಷ್ಟ್ರಪತಿಗಳು ಮತ್ತು ಕೇಂದ್ರ ಚುನಾವಣೆ ಆಯೋಗಕ್ಕೆ ಪತ್ರ ಬರೆದು ವ್ಯವಸ್ಥೆ ಬದಲಾಯಿಸಲು ಪ್ರಯತ್ನಿಸಬೇಕೆಂದು ಸ್ಪೀಕರ್ ಗೆ ಮನವಿ ಮಾಡಿದರು.
ಸಚಿವ ದೇಶಪಾಂಡೆಯವರು ಕಾಗೇರಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಆಡಳಿತದ ಕಾಲದಲ್ಲೂ ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದಾಗ ಚುನಾವಣೆ ಸಂದರ್ಭದಲ್ಲಿ ಬಜೆಟ್ ಮಂಡಿಸಿದ್ದರೆಂದು ನೆನಪಿಸಿದರು. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, ಬಿಜೆಪಿ ಸೇರಿ ಎಲ್ಲ ಪಕ್ಷದ ಸರ್ಕಾರಗಳ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ದೇಶಪಾಂಡೆ ಅವರು ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳದೇ ಮಾತನಾಡುತ್ತಿದ್ದಾರೆಂದು ಹೇಳಿದರು. ಈ ಮಾತಿನಿಂದ ಮತ್ತಷ್ಟು ಸಿಟ್ಟಿಗೆದ್ದ ಸಚಿವ ದೇಶಪಾಂಡೆ ನಾನು ತಿಳಿದುಕೊಂಡೇ ಮಾತನಾಡುತ್ತಿದ್ದೇನೆ ಕಳೆದ 32 ವರ್ಷಗಳಿಂದ ಸದನದಲ್ಲಿ ಕೂತಿದ್ದೇನೆ ನೀವು ನನಗಿಂತ ಬಹಳ ಜೂನಿಯರ್ ಎಂದು ಕಾಗೇರಿಗೆ ಪ್ರತ್ಯುತ್ತರ ನೀಡಿದರು. ಬಜೆಟ್ ಬಗ್ಗೆ ಇರುವ ಕಾನೂನನ್ನು ಸದನದಲ್ಲಿ ಓದಿ ಹೇಳಿದರು.
ಕಾಗೇರಿ ಮತ್ತು ದೇಶಪಾಂಡೆ ನಡುವೆ ವಾದ -ವಿವಾದ ನಡೆಯುತ್ತಿರುವಾಗ ಬಿಜೆಪಿಯ ಲಕ್ಷ್ಮಣ ಸವದಿ ಮಧ್ಯಪ್ರವೇಶಿಸಿ ಇಬ್ಬರೂ
ಉತ್ತಮ ಸ್ನೇಹಿತರು. ಒಂದೇ ಜಿಲ್ಲೆಯ ಮುಖಂಡರಾದ ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆಯಿದೆ ಎಂದು ನಗೆ ಚಟಾಕಿ ಹಾರಿಸಿ ವಾಗ್ವಾದದ ತೀವ್ರತೆ ಕಡಿಮೆಗೊಳಿಸುವ ಯತ್ನ ಮಾಡಿದರು. ಚಿಕ್ಕೋಡಿ ಜಿಲ್ಲೆಗೆ ಆಗ್ರಹ: ಬಜೆಟ್ ಕುರಿತು ಮಾತನಾಡಿದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ , ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.