ಮತಾಂತರ ನಿಷೇಧಕ್ಕೆ ಅಧ್ಯಾದೇಶದ ಬಲ
Team Udayavani, May 12, 2022, 7:50 AM IST
ಬೆಂಗಳೂರು: ಆಡಳಿತ ಮತ್ತು ವಿಪಕ್ಷ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ಉದ್ದೇಶದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆ -2022ನ್ನು ಅಧ್ಯಾದೇಶದ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಈ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಗೊಂಡಿದ್ದರೂ ವಿಧಾನಪರಿಷತ್‌ನಲ್ಲಿ ಬಹುಮತ ಇಲ್ಲದ ಕಾರಣ ಮಂಡಿಸಿರಲಿಲ್ಲ. ಈಗ ಅಧ್ಯಾದೇಶದ ಮೂಲಕ ಜಾರಿಗೊಳಿಸಿ ಮುಂದಿನ ಅಧಿವೇಶನ ಸಂದರ್ಭ ಪರಿಷತ್‌ನಲ್ಲಿ ಅಂಗೀಕಾರ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಮುಂದೆ ವಿಧಾನಪರಿಷತ್‌ನಲ್ಲಿ ಈ ಮಸೂದೆಗೆ ಅಂಗೀಕಾರ ಪಡೆಯಲು ನಮಗೆ ಸಮಸ್ಯೆಯಾಗದು ಎಂದು ಸಚಿವ ಮಾಧುಸ್ವಾಮಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಮತಾಂತರಕ್ಕೆ ಷರತ್ತುಗಳು :
- ಮತಾಂತರವಾಗಲು ಮುಂದಾಗಿರುವ ವ್ಯಕ್ತಿ ಕನಿಷ್ಠ 60 ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ತಿಳಿಸಬೇಕು.
- ಮತಾಂತರ ಮಾಡುವ ವ್ಯಕ್ತಿಯೂ ಜಿಲ್ಲಾ ದಂಡಾಧಿಕಾರಿಗೆ 30 ದಿನ ಮೊದಲು ಮಾಹಿತಿ ನೀಡಬೇಕು.
- ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿ ಸೂಚನ ಫಲಕದಲ್ಲಿ ಹಾಕಬೇಕು.
- 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.
- ವಿಚಾರಣೆ ವೇಳೆ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶ.
- ಮತಾಂತರ ದಿನಾಂಕ, ಮೂಲ ಧರ್ಮ, ಮತಾಂತರಗೊಂಡ ಧರ್ಮ ಮತ್ತಿತರ ಮಾಹಿತಿಗಳನ್ನು ಜಿಲ್ಲಾಧಿಕಾರಿಗೆ ನೀಡಬೇಕು.
- ಮತಾಂತರಕ್ಕೆ ನೆರವು ಮತ್ತು ಪ್ರೇರಣೆ ನೀಡಿದ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.