ಬಿಜೆಪಿ ಪ್ರಣಾಳಿಕೆಗೆ ಸಲಹೆ ನೀಡಬಹುದು: ಸಚಿವ ಸುಧಾಕರ್
Team Udayavani, Feb 23, 2023, 5:35 AM IST
ಬೆಂಗಳೂರು: ಸಮೃದ್ಧ ಕರ್ನಾಟಕ ನಿರ್ಮಿಸಲು ಜನರ ಅಭಿಪ್ರಾಯದೊಂದಿಗೆ ಬಿಜೆಪಿ ಪ್ರಣಾಳಿಕೆ ತಯಾರಾಗಲಿದೆ. ಪ್ರಣಾಳಿಕೆ ತಯಾರಿಯಲ್ಲಿ ಕೇಂದ್ರದ ಸಚಿವರು ಕೂಡ ಭಾಗಿಯಾಗಲಿದ್ದಾರೆ. ಜನರು ಕೂಡ ವಾಟ್ಸ್ ಆ್ಯಪ್ ಮತ್ತು ಪತ್ರಗಳ ಮುಖೇನ ತಮ್ಮ ಅಭಿಪ್ರಾಯ ಸಲ್ಲಿಸಬಹುದು ಎಂದು ಪ್ರಣಾಳಿಕೆ ಸಮಿತಿ ಸಂಚಾಲಕ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ತಯಾರಿಯ ಬಗ್ಗೆ ಸಚಿವರು ಮಾಹಿತಿ ಹಂಚಿಕೊಂಡರು.
ಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ ಎಂಬ ಘೋಷಣೆಯಡಿಯಲ್ಲಿ ಜನರ ಬಳಿ ಹೋಗುತ್ತೇವೆ. ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಿದ್ದೇವೆ. ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಕ್ಷೇತ್ರಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ಸಲಹೆ ಪಡೆಯುತ್ತೇವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲೂ ಸಭೆ ನಡೆಸಿ, ಸಂಘಟನೆಗಳ ಸಲಹೆ ಸ್ವೀಕರಿಸುತ್ತೇವೆ ಎಂದು ಡಾ| ಸುಧಾಕರ್ ತಿಳಿಸಿದ್ದಾರೆ.
ವಾಟ್ಸ್ ಆ್ಯಪ್‌ಗೆ ಕಳುಹಿಸಿ
ಜನರು ಬಿಜೆಪಿ ಪ್ರಣಾಳಿಕೆಗೆ ತಮ್ಮ ಅಭಿಪ್ರಾಯವನ್ನು ವಾಟ್ಸ್ ಆ್ಯಪ್ ನಂಬರ್ +91 8595158158ಗೆ ಕಳುಹಿಸಬಹುದು. ಹಾಗೆಯೇ http://www.bjp4samruddhakarnataka.in ನಲ್ಲೂ ಸಲಹೆ ನೀಡಬಹುದು. ರಾಜ್ಯಾದ್ಯಂತ ಮಂಡಲಗಳಲ್ಲಿ 8 ಸಾವಿರ ಬಾಕ್ಸ್‌ಗಳನ್ನಿಟ್ಟು ಅದರ ಮೂಲಕವು ಸಲಹೆ ಸಂಗ್ರಹಿಸಲಾಗುತ್ತದೆ. ಪ್ರಗತಿ ರಥಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟು, ಅಲ್ಲಿಂದಲೂ ಬಿಜೆಪಿ ಸಲಹೆ ಪಡೆಯಲಿದೆ. ತನ್ಮೂಲಕ ಕನಿಷ್ಠ ಒಂದು ಕೋಟಿ ಜನರನ್ನು ತಲುಪುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ. ಮಾರ್ಚ್ 25 ರವರೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಣಾಳಿಕೆ ಸಂಬಂಧಿ ಸಭೆ ನಡೆಯಲಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.