ಸಚಿವ ಹೆಗಡೆಗೆ ಟಾಂಗ್ ಕೊಟ್ಟರೆ ಚಕ್ರವರ್ತಿ ಸೂಲಿಬೆಲೆ?
Team Udayavani, Dec 28, 2017, 2:00 PM IST
ಬೆಂಗಳೂರು: ನಿರಂತರ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಚಿಂತಕ,ವಾಗ್ಮಿ,ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಟಾಂಗ್ ನೀಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ಚಕ್ರವರ್ತಿ ಅವರ ಬ್ಲಾಗ್ ‘ನೆಲದ ಮಾತು’ವಿನಲ್ಲಿ ಬರೆದಿರುವ ಅಭಿಪ್ರಾಯ.
ಸಂವಿಧಾನ ತಿದ್ದುಪಡಿ,ಜತ್ಯಾತೀತರು ಅಪ್ಪ, ಅಮ್ಮನ ಮುಖ ನೋಡದವರು. ಅವರ ರಕ್ತದ ಬಗ್ಗೆ ಸಂಶಯವಿದೆ ಎಂದಿದ್ದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತ ವಾದ ಬೆನ್ನಲ್ಲೇ ಸೂಲಿಬೆಲೆ ಈ ಲೇಖನ ಬರೆದಿದ್ದಾರೆ.
ತಮ್ಮ ಅಭಿಪ್ರಾಯದ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಪ್ರಕಟವಾಗಿರುವ ಚಕ್ರವರ್ತಿ ಅವರು ನಾನು ಯಾರನ್ನೂ ಗುರಿಯಾಗಿರಿಸಿಕೊಂಡು ಬರೆದಿಲ್ಲ, ರಾಜಕಾರಣಿಗಳನ್ನು ಸಾರ್ವತ್ರಿಕ ವಾಗಿ ಗುರಿಯಾಗಿರಿಸಿಕೊಂಡು ಬರೆದಿದ್ದೇನೆ.ನಾನು ಯಾರ ಪರವೂ ಇಲ್ಲ, ಯಾರ ವಿರೋಧಿಯೂ ಅಲ್ಲ, ನನಗೆ ನನ್ನ ಕರ್ನಾಟಕ ರಾಜ್ಯದ ಹಿತ ಮುಖ್ಯ ಎಂದಿದ್ದಾರೆ.
ಚಕ್ರವರ್ತಿ ಬರೆದಿದ್ದೇನು ?
ಆಡಳಿತದ ಚುಕ್ಕಾಣಿ ಹಿಡಿದವರು ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಷ್ಟೇ. ಟಿಪ್ಪೂ ಜಯಂತಿ ಮಾಡಿದ್ದರಿಂದ ಮತ ಮತಗಳ ನಡುವೆ ಭಡಕಾಯಿಸಲಷ್ಟೇ ಸಾಧ್ಯವಾಯಿತು. ಅದರಿಂದ ಉದ್ಯೋಗವು ಹುಟ್ಟಲಿಲ್ಲ, ಪ್ರವಾಸೋದ್ಯಮದ ಆಸ್ಥೆಯೂ ಬೆಳೆಯಲಿಲ್ಲ. ವೋಟುಬ್ಯಾಂಕಿನ ರಾಜಕಾರಣವನ್ನು ಅಷ್ಟು ಶ್ರದ್ಧೆಯಿಂದ ಮಾಡಿದ ಮುಖ್ಯಮಂತ್ರಿಗಳು ಸ್ವಲ್ಪ ಪ್ರವಾಸೋದ್ಯಮದ ಕಡೆಗೆ ಹರಿಸಿದ್ದರೆ ನಾವಿಂದು ಬೆಂಗಳೂರೊಂದನ್ನೇ ಮುಂದಿಟ್ಟು ಬಂಡವಾಳ ಸಂಗ್ರಹ ಮಾಡಬೇಕಿರಲಿಲ್ಲ.
ಉದ್ಯೋಗ ಸೃಷ್ಟಿಗಾಗಿ ಎಲ್ಲ ಸರ್ಕಾರಗಳೂ ಹೆಣಗಾಡುತ್ತಿವೆ. ಕೃಷಿ ಮತ್ತು ಕೃಷಿ ಆಧಾರಿತ ವ್ಯವಸ್ಥೆಯನ್ನು ಸಂಪೂರ್ಣ ನಾಶಗೊಳಿಸಿದ ಆಂಗ್ಲರು ಭಾರತದಲ್ಲಿ ಉದ್ಯೋಗವಿಲ್ಲದೇ ದಾರಿದ್ರ್ಯಕ್ಕೆ ಸಿಲುಕಿದ ಜನಾಂಗವನ್ನು ಸೃಷ್ಟಿಸಿದರು. ಸ್ವಾತಂತ್ರ್ಯಾನಂತರವೂ ನಾವು ನಮ್ಮ ಆಂತರಿಕ ಶಕ್ತಿಯನ್ನು ಬಳಸಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನಕ್ಕೆ ಕೈಹಾಕಲೇ ಇಲ್ಲ. ಬದಲಿಗೆ ಉಚಿತ ಕೊಡುಗೆಗಳನ್ನು ಕೊಟ್ಟು ಜನರನ್ನು ಸಾಕುವ ಪ್ರಯತ್ನ ಮಾಡಿದೆವು. ರೈತರಿಗೆ ಸಬ್ಸಿಡಿ, ಬಡವರಿಗೆ ಬಿಪಿಎಲ್, ಉಚಿತ ಅನ್ನ, ಶಾಲೆಗೆ ಬಂದರೆ ಐನೂರು, ಕೆಲಸ ಮಾಡದಿದ್ದರೂ ಸಾವಿರ ಹೀಗೆಯೇ ಕಂಡ ಕಂಡಲೆಲ್ಲ ದುಡ್ಡು ಹಂಚಲಾರಂಭಿಸಿದೆವು. ಹಾಗಂತ ಭಾರತದಲ್ಲಿ ಇದು ಇರಲಿಲ್ಲವೆಂದಲ್ಲ. ಬಡವರಿಗೆ, ಅಶಕ್ತರಿಗೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಡುವುದು ರಾಜನದ್ದೇ ಕರ್ತವ್ಯ. ಆದರೆ ಆತ ಅದನ್ನು ಮಂದಿರಗಳ ಮೂಲಕ ಮಾಡುತ್ತಿದ್ದ. ಅನ್ನಭಾಗ್ಯದ ಜವಾಬ್ದಾರಿ ಪುಢಾರಿಯದ್ದೋ, ಅಧಿಕಾರಿಯದ್ದೋ ಅಲ್ಲ ಬದಲಿಗೆ ದೇವಸ್ಥಾನದ ಆಡಳಿತದ್ದು. ರಾಜ ಅದಕ್ಕೆ ಒಂದಷ್ಟು ಹಳ್ಳಿಗಳ ಉತ್ಪನ್ನವನ್ನು ಕೊಟ್ಟು ಸುಮ್ಮನಾಗುತ್ತಿದ್ದ. ಉಳಿದಂತೆ ಉಳ್ಳವರೇ ಮಂದಿರಗಳಿಗೆ ದಾನ ಕೊಟ್ಟು ಅನ್ನದಾನದ ವ್ಯವಸ್ಥೆ ಮುಕ್ಕಾಗದಂತೆ ನೋಡಿಕೊಳ್ಳುತ್ತಿದ್ದರು. ಊರಿನ ಜನರ ದಾನದಲ್ಲಿ ಈ ವ್ಯವಸ್ಥೆ ನಡೆಯುತ್ತಿದ್ದುದರಿಂದ ಮತ್ತು ಭಗವಂತನ ಪ್ರಸಾದವೆಂಬ ಭಾವನೆ ಎಲ್ಲರಲ್ಲೂ ಇರುತ್ತಿದ್ದುದರಿಂದ ದುರುಪಯೋಗವಂತೂ ಖಂಡಿತ ಆಗುತ್ತಿರಲಿಲ್ಲ, ಆದರೆ ಅಗತ್ಯವಿರುವವರಿಗೆ ಉಪಯೋಗವಂತೂ ನಿಸ್ಸಂಶಯವಾಗಿ ಆಗಿರುತ್ತಿತ್ತು.
ಉಚಿತ ವಿತರಣೆಯ ಪರಿಪಾಠವೇ ನಮ್ಮಲ್ಲಿ ಅನೇಕರನ್ನು ಮೈಗಳ್ಳರನ್ನಾಗಿ ಮಾಡಿತು. ತಮ್ಮ ತೆರಿಗೆಯ ಹಣ ಹೀಗೆ ಪೋಲಾಗುತ್ತಿರುವುದನ್ನು ಕಂಡೇ ಇನ್ನೂ ಕೆಲವರು ಸರ್ಕಾರಕ್ಕೆ ಮೋಸ ಮಾಡಲಾರಂಭಿಸಿದರು. ತೆರಿಗೆ ತಪ್ಪಿಸಿ ಕೂಡಿಡಲಾರಂಭಿಸಿದರು. ಕೆಲವೊಮ್ಮೆ ಇಲ್ಲಿ ಕೂಡಿಟ್ಟರೆ ಸಿಕ್ಕಿಬೀಳುವ ಭಯದಿಂದ ಹೊರಗಿನ ಬ್ಯಾಂಕುಗಳಲ್ಲಿ ತುಂಬಿಸಿಟ್ಟರು. ತಮ್ಮದೇ ದೇಶದಲ್ಲಿ ಸಿರಿವಂತರಾಗಿದ್ದೂ ಕಳ್ಳರಾಗಿ ಬದುಕುವ ದುಸ್ಥಿತಿ ಎಂಥವರಿಗೂ ಬರಬಾರದು. ಇಂಥವರೇ ಅಸಮರ್ಥ ನಾಯಕರನ್ನು ಆರಿಸುವಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಈ ನಾಯಕರು ಅವರ ಕಳ್ಳತನಕ್ಕೆ ಉಪಯೋಗವಾಗುವ ಮಾರ್ಗಗಳನ್ನು ಹೆದ್ದಾರಿ ಮಾಡಿಕೊಡುತ್ತಾರೆ. ಅಧಿಕಾರಿ ರಾಜಕಾರಣಿ ಮತ್ತು ಉದ್ದಿಮೆದಾರರ ಈ ಅನೈತಿಕ ಸಂಬಂಧದಿಂದ ಕಂಗಾಲಾದ ಸಾಮಾನ್ಯ ಜನತೆ ತಮ್ಮ ಪಾಡಿಗೆ ತಾವು ಒಂದಷ್ಟು ಬಾಚಿ ತಮಗೂ ಒಂದು ಪಾಲು ದೊರೆತ ಸಂತಸದಿಂದ ಬೀಗುತ್ತಾರೆ. ವ್ಯವಸ್ಥೆಯ ಮೇಲೆ ವಿಶ್ವಾಸ ಕಳಕೊಂಡರೆಲ್ಲ ತಮ್ಮಷ್ಟಕ್ಕೆ ತಾವೇ ಹಲಬುತ್ತ, ರೋದಿಸುತ್ತ ಉಳಿದುಬಿಡುತ್ತಾರೆ. ಮೋದಿ ಬಂದಮೇಲೆ ಆಗಿರುವ ಮೊದಲ ಕೆಲಸವೇ ಕೆಳಹಂತದಲ್ಲಿ ವಿಶ್ವಾಸ ಚಿಗುರಿರೋದು. ಒಂದಷ್ಟು ಜನ ರಾಷ್ಟ್ರಕ್ಕೆ ದ್ರೋಹ ಬಗೆದ ರಾಜಕಾರಣಿಗಳು ಜೈಲಿಗೆ ಹೋದರೆ ಈ ವಿಶ್ವಾಸ ಇನ್ನೂ ನೂರುಪಟ್ಟು ಹೆಚ್ಚುತ್ತದೆ.
ಬಿಡಿ. ಅದನ್ನು ಮತ್ತೊಮ್ಮೆ ಚರ್ಚೆ ಮಾಡೋಣ. ನಾವೀಗ ಆಲೋಚಿಸಬೇಕಿರೋದು ಹಳ್ಳಿಗಳಲ್ಲಿ ಸೃಷ್ಟಿಯಾಬೇಕಿರುವ ಉದ್ಯೋಗದ ಕುರಿತಂತೆ. ಈಗಾಗಲೇ ಹಿಂದಿನ ಲೇಖನಗಳಲ್ಲಿ ಚರ್ಚಿಸಿರುವಂತೆ ವ್ಯಾಪಕವಾದ ನಗರೀಕರಣ ಹಳ್ಳಿಗಳ ಸ್ವಾಸ್ಥ್ಯವನ್ನು ಹಾಳು ಮಾಡಿವೆ. ಅದೇ ವೇಳೆಗೆ ನಗರದಲ್ಲಿರುವವರಿಗೆ ಹಳ್ಳಿಯಂತೆ ಪಟ್ಟಣವನ್ನು ರೂಪಿಸುವ ಆಸೆ ಚಿಗುರಿದೆ. ಈ ವೇಳೆ ಹಳ್ಳಿಯಲ್ಲಿರುವ ಜನರಿಗೆ ಪಟ್ಟಣದತ್ತ ಧಾವಿಸುವ ಅನಿವಾರ್ಯತೆಯನ್ನು ತಡೆದರೆ ಬಲು ದೊಡ್ಡ ಲಾಭವಾದೀತು. ಹೀಗಾಗಬೇಕೆಂದರೆ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಉತ್ಪಾದಕ ಕಾರ್ಖಾನೆಗಳನ್ನು ಆಹ್ವಾನಿಸಿ ಜನರನ್ನು ಅವುಗಳಲ್ಲಿ ತೊಡಗಿಸುವುದು ಒಂದಾದರೆ, ಸ್ಥಳೀಯವಾಗಿ ಗ್ರಾಮ ಪ್ರವಾಸೋದ್ಯಮದ ಅಭಿವೃದ್ಧಿಯೂ ಮಹತ್ವದ ಹೆಜ್ಜೆಯಾಗಬಹುದು. ದೇಶದ ಕಥೆ ಒತ್ತಟ್ಟಿಗಿರಲಿ, ಕನರ್ಾಟಕವೇ ತನ್ನೊಡಲೊಳಗೆ ಅಡಗಿರುವ ಬಹುಮೂಲ್ಯ ಸಂಪತ್ತನ್ನು ಜನರೆದುರಿಗೆ ತೆರೆದಿಡದೇ ಸೋತುಹೋಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯಾಗಲೆಂದರೆ ಪರಿಸರ ನಾಶದ ಬೊಬ್ಬೆ ಹಾಕುವ ನಾವು, ಭೂಗರ್ಭದೊಳಗಿನ ಸಂಪತ್ತನ್ನು ಬಗೆಬಗೆದು ವಿದೇಶಗಳಿಗೆ ರಫ್ತು ಮಾಡುವಾಗ ಸುಮ್ಮನಿದ್ದುಬಿಡುತ್ತೇವೆ.
ಇತ್ತೀಚಿನ ದಿನಗಳಲ್ಲಿ ಪರಿಸರ ಪೂರಕ ಪ್ರವಾಸೋದ್ಯಮದ ಕುರಿತಂತೆ ವ್ಯಾಪಕವಾದ ಚರ್ಚೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. 2017ನ್ನು ವಿಶ್ವಸಂಸ್ಥೆ ಸುಸ್ಥಿರ ಪ್ರವಾಸೋದ್ಯಮಕ್ಕೆಂದೇ ಮೀಸಲಾಗಿಟ್ಟಿದೆ. ಇದರ ಪ್ರಕಾರ ಇಡಿಯ ಪ್ರವಾಸ ಪರಿಸರಕ್ಕೆ ಸಂವಾದಿಯಾಗಿರಬೇಕು, ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವಂತಿರಬೇಕು ಮತ್ತು ಸ್ಥಳೀಯರಿಗೆ ಸಾಮಾಜಿಕ ಮತ್ತು ಆರ್ಥಿಕ ಲಾಭವಾಗುವಂತೆ ನೋಡಿಕೊಳ್ಳಬೇಕು. ಈ ಎಲ್ಲ ವಿಚಾರಗಳೂ ಜಗತ್ತನ್ನು ಭಾರತದೆಡೆಗೆ ಸೆಳೆಯಲು, ಕರ್ನಾಟಕದೆಡೆಗೆ ಜಗ್ಗಲು ಬೆಟ್ಟದಷ್ಟಾಯಿತು. ಅಲ್ಲದೇ ಮತ್ತೇನು? ಕೃತಕ ಬೆಟ್ಟ, ಜಲಪಾತಗಳನ್ನು ಸೃಷ್ಟಿಸಿಯೇ ಸಿಂಗಪುರದಂತಹ ರಾಷ್ಟ್ರಗಳು ಜಾಗತಿಕವಾದ ಪ್ರವಾಸೀ ದೈತ್ಯವಾಗಿರುವಾಗ ಹಸಿರು ಬೆಟ್ಟಗಳ ಮಲೆನಾಡು, ಕಲ್ಲು ಬಂಡೆಗಳ ಬಯಲು ಸೀಮೆ, ಜಲಪಾತಗಳ ಘಟ್ಟ ಮತ್ತು ಸಾಗರಗಳ ಕರಾವಳಿ ಹೊಂದಿರುವ ನಾವು ಸಿಂಗಪುರವನ್ನು ದಾಟಿ ಹೋಗಿಬಿಡಬೇಕಿತ್ತು. ನಾವಿನ್ನೂ ಅಕ್ಕಪಕ್ಕದ ರಾಜ್ಯಗಳನ್ನು ಪಿಳಿಪಿಳಿ ಕಂಗಳಿಂದ ನೋಡುತ್ತ ಕುಳಿತಿದ್ದೇವೆ. ಜಲಪಾತಗಳ ಜಿಲ್ಲೆಯೆಂದೇ ಕರೆಯಲ್ಪಡುವ ಉತ್ತರ ಕನ್ನಡದ ಶಾಸಕ ಸಂಸದರನ್ನು ಮಾತನಾಡಿಸಿ ನೋಡಿ, ಸಮುದ್ರ ತೀರಕ್ಕೆ ಹತ್ತಿರವಿರುವುದೇ ತಮ್ಮೆಲ್ಲ ಹಿಂದುಳಿದಿರುವಿಕೆಗೆ ಕಾರಣವೆಂದು ಬೊಗಳೆ ಬಿಡುತ್ತಾರೆ. ಸಿಂಗಪೂರಕ್ಕೆ ಸಮುದ್ರ ಬಿಟ್ಟರೆ ಮತ್ತೇನಿಲ್ಲ; ಆಸ್ಟ್ರೇಲಿಯಾ ಸಮುದ್ರದ ನಡುವೆಯೇ ಇರುವ ನಡುಗಡ್ಡೆ. ದೂರದ ಮಾತೇಕೆ? ಮುಂಬೈ ಬೆಳೆದಿರೋದೆ ಸಮುದ್ರದ ಬದಿಯಲ್ಲಿ. ದೃಷ್ಟಿ ಬದಲಾಯಿಸು, ಸೃಷ್ಟಿ ಬದಲಾಗುತ್ತದೆ ಎನ್ನುವ ಮಾತೊಂದಿದೆ. ಇದನ್ನು ನಮ್ಮ ನಾಯಕರುಗಳಿಗೆ ಒಮ್ಮೆ ಪಾಠ ಮಾಡಬೇಕು. ಯಾಣದ ಕುರಿತಂತೆ ಬಂದ ಒಂದು ಚಲನಚಿತ್ರದಿಂದಾಗಿ ಲಕ್ಷಾಂತರ ಜನ ಅಲ್ಲಿಗೆ ಪ್ರವಾಸಕ್ಕೆಂದು ಬಂದರು. ಅವರು ಅಲ್ಲಿನ ಪರಿಸರ ಹಾಳುಮಾಡಿದ್ದನ್ನು ಎಲ್ಲರೂ ಮಾತನಾಡುತ್ತಾರೆ ನಿಜ; ಆದರೆ ಪ್ರವಾಸಿಗರಿಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟು ಸೂಕ್ತ ಶಿಸ್ತಿನ ವಾತಾವರಣ ರೂಪಿಸಿದ್ದರೆ ಈ ಸಮಸ್ಯೆ ಖಂಡಿತ ಆಗುತ್ತಿರಲಿಲ್ಲ. ಯಾಣವನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತಲಿನ ನಾಲ್ಕಾರು ಜಲಪಾತಗಳ ವೃತ್ತವೊಂದನ್ನು ಜೋಡಿಸಿಕೊಂಡಿದ್ದರೆ ಉತ್ತರ ಕನ್ನಡ ಈ ವೇಳೆಗೆ ಜಾಗತಿಕ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿರುತ್ತಿತ್ತು. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಅಕ್ವೇರಿಯಂಗಳನ್ನು ನಿರ್ಮಾಣ ಮಾಡಿರುವುದನ್ನು ನೀವು ನೋಡಿದರೆ ಗಾಬರಿಯಾಗುವಿರಿ. ಸಮುದ್ರಕ್ಕೆ ಹೊಂದಿಕೊಂಡು ನಿಲ್ಲಿಸಿದ ಹಡಗಿನೊಳಗೆ ಇಳಿದು ಹೋದರೆ ಅದೇ ಮತ್ಸ್ಯ ಲೋಕದ ಮಹಾ ಅನಾವರಣ. ಅಲ್ಲಿ ಚಿಕ್ಕದಾದುದು ಯಾವುದೂ ಇಲ್ಲ. ಒಳಹೊಕ್ಕರೆ ಮೊಸಳೆಯೊಂದಿಗೂ ಸೆಲ್ಫೀ ತೆಗೆಸಿಕೊಳ್ಳಬಹುದಾದ ವ್ಯವಸ್ಥೆ. ಅಲ್ಲೊಂದೆಡೆ ಡಾಲ್ಫಿನ್ಗಳ ಆಟ ಮತ್ತೊಂದೆಡೆ ಪೆಂಗ್ವಿನ್ಗಳಿಗೆ ಊಟ ಕೊಡುವುದನ್ನು ನೋಡಲಿಕ್ಕೆಂದೇ ವಿಶೇಷ ಗ್ಯಾಲರಿ! ಕಾರವಾರದಲ್ಲೂ ಒಂದು ಅಕ್ವೇರಿಯಂ ಇದೆ. ಅನೇಕರ ಮನೆಗಳಲ್ಲಿಯೇ ಅದಕ್ಕಿಂತಲೂ ಹೆಚ್ಚಿನ, ಅಪರೂಪದ ಮೀನುಗಳ ಸಂಗ್ರಹವಿದೆ! ಕೇಂದ್ರ ಸಕರ್ಾರದ ಬೆನ್ನುಬಿದ್ದು ಅನುದಾನ ತಂದು ಕಾರವಾರದಲ್ಲೊಂದು ಜಗತ್ತಿನಲ್ಲಿಯೇ ಬೃಹತ್ತಾದ ಅಕ್ವೇರಿಯಂ ಸ್ಥಾಪನೆಯ ಕನಸು ಕಾಣಬಹುದಿತ್ತೇನು? ಹಾಗೇನಾದರೂ ಆಗಿದ್ದರೆ ಗೋವಾಕ್ಕೆ ಹೋಗುವ ಮುನ್ನ ಪ್ರತಿಯೊಬ್ಬ ಪ್ರವಾಸಿಗನ ಒಂದು ಭೇಟಿ ಕಾರವಾರಕ್ಕೆ ಆಗಲೇಬೇಕಾಗುತ್ತಿತ್ತು. ಈ ದೊಡ್ಡ ಮತ್ಸ್ಯಲೋಕ ನಿರ್ವಹಣೆಗೆ ಸ್ಥಳೀಯರು ದೊಡ್ಡ ಮಟ್ಟದಲ್ಲಿ ತೊಡಗಿಕೊಳ್ಳುತ್ತಿದ್ದರು. ಇಲ್ಲಿಂದ ಗೋಕರ್ಣಕ್ಕೆ, ಅಲ್ಲಿಂದ ಮುರುಡೇಶ್ವರಕ್ಕೆ ಪ್ರವಾಸಿಗರನ್ನು ಸೆಳೆಯಲು ಒಂದಷ್ಟು ಉಪಾಯ ಮಾಡಿದ್ದರೆ ದಾರಿಯುದ್ದಕ್ಕೂ ಹೋಟೆಲ್ಲುಗಳು, ವಸತಿ ಗೃಹಗಳು, ಕರಕುಶಲ ವಸ್ತು ಮಾರಾಟದಂಗಡಿಗಳೆಲ್ಲ ತೆರೆದುಕೊಂಡು ನಳನಳಿಸುತ್ತಿದ್ದವು. ಕರಾವಳಿಯ ಸೆರಗು ಬಿಟ್ಟು ಘಟ್ಟ ಹತ್ತಿದ್ದರೆ ಜಲಪಾತಗಳ ಆನಂದವನ್ನು ಹೀರಿ, ಶಿರಸಿಯ ತೆಳ್ಳೇವು ತಂಬುಳಿಗಳನ್ನು ಸವಿದು ಮನೆಗಳಲ್ಲಿ ತಯಾರಿಸಿದ ಖಾದ್ಯವನ್ನು ಕಾರು ತುಂಬಿಸಿಕೊಂಡು ಪ್ರವಾಸಿಗರು ಒಯ್ಯುತ್ತಿದ್ದರು. ಉದ್ಯೋಗದ ಸೃಷ್ಟಿಗೆ ಕಾಡು ನಾಶ ಮಾಡಲೇಬೇಕೆಂದಿಲ್ಲ, ಸ್ವಲ್ಪ ಜನಪರವಾಗಿ ಆಲೋಚಿಸುವುದನ್ನು ಕಲಿಯಬೇಕಷ್ಟೇ. ಮೊದಲ ಬಾರಿ ಗೆಲ್ಲಲು ಭಾಷಣ ಬಳಸೋದು ಸರಿಯೇ. ಆದರೆ ಮತ್ತೆ ಮತ್ತೆ ಗೆಲ್ಲುವಾಗಲೂ ವಿಕಾಸದ ಬಂಡವಾಳವಿಲ್ಲದೇ ಗೆಲ್ಲುವ ಪರಿಪಾಠ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದಲ್ಲ.
ಹೇಳಿದೆನಲ್ಲ. ಪಟ್ಟಣಿಗರಲ್ಲಿ ಹಣ ಕೊಳೆಯುತ್ತಿದೆ. ಅವರದನ್ನು ಖರ್ಚು ಮಾಡಲೆಂದೇ ವರ್ಷಕ್ಕೊಮ್ಮೆ ವಿದೇಶಕ್ಕೆ ಹೋಗಿಬರುತ್ತಾರೆ. ಅದನ್ನು ತಡೆಯಲಾದರೆ ಬಲುದೊಡ್ಡ ಸಾಹಸ. ಜಗತ್ತಿನ ಯಾವ ಮೂಲೆಗೆ ಹೋದರೂ ನಮ್ಮಲ್ಲಿ ಇದಕ್ಕಿಂತಲೂ ಸುಂದರವಾದ ಜಾಗವಿದೆ ಎನ್ನುವ ಉದ್ಗಾರ ನಮ್ಮವರಿಂದ ಬರುವಂತಾಗಬೇಕು, ಅದು ನಮ್ಮ ಸಾಧನೆ! ಇನ್ನು ನಮ್ಮವರನ್ನಲ್ಲದೇ ಇತರೆ ರಾಷ್ಟ್ರಗಳಿಂದಲೂ ಜನರನ್ನು ಸೆಳೆಯುವಂತಾಗಬೇಕೆಂದರೆ ಅಂತರಾಷ್ಟ್ರೀಯ ಮಟ್ಟಕ್ಕೆ ಸರಿದೂಗುವ ವ್ಯವಸ್ಥೆಗಳನ್ನು ರೂಪಿಸಬೇಕು. ನಮ್ಮ ಅನೇಕು ಪ್ರವಾಸೀ ಕ್ಷೇತ್ರಗಳು ಸೂಕ್ತ ರಸ್ತೆಯಿಲ್ಲದೇ ಸೊರಗುತ್ತಿವೆ. ಅಲ್ಲಿ ಒಳ್ಳೆಯ ಹೊಟೆಲ್ಲುಗಳಿಲ್ಲ; ಉಳಿದುಕೊಳ್ಳಲು ಸಮರ್ಪಕ ವ್ಯವಸ್ಥೆಯಿಲ್ಲ. ಹೀಗಿರುವಾಗ ಎಲ್ಲಿಂದಾದರೂ ಜನರನ್ನು ಸೆಳೆದು ತರುವುದಾದರೂ ಹೇಗೆ ಹೇಳಿ?
ನಾವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ಸೋತು ಹೋಗಿದ್ದೇವೆ. ಕಳೆದ ಅಕ್ಟೋಬರ್ ನಲ್ಲಿ 21 ದಿನಗಳ ಪರ್ಯಟನ ಪರ್ವವನ್ನು ಆಚರಿಸುವ ಕರೆ ಕೊಟ್ಟ ನರೇಂದ್ರ ಮೋದಿಯವರು ಉದ್ಯಮಿಗಳ ಸಹಕಾರದಿಂದ ಭಾರತದ ಸ್ಮಾರಕಗಳನ್ನು ರಕ್ಷಿಸಿ ಅದನ್ನು ಸುದೀರ್ಘವಾಗಿ ಕಾಪಾಡುವ ಕುರಿತಂತೆಯೂ ಮಾತನಾಡಿದರು. ವಿದೇಶೀ ಪ್ರವಾಸಿಗರಲ್ಲದೇ ದೇಶೀ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುವ ಪ್ರಯತ್ನವಾಗಬೇಕೆಂದು ಹೇಳುವುದನ್ನು ಮರೆಯಲಿಲ್ಲ.
ನಮ್ಮ ಪ್ರಾಚೀನರಿಗೆ ಇದು ಬಲು ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಮಂದಿರಗಳ ಆಧರಿತ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗಿತ್ತು ಇಲ್ಲಿ. ಕಾಶಿ ರಾಮೇಶ್ವರಗಳ ಕಲ್ಪನೆಯೊಂದಾದರೆ, ಕಶ್ಮೀರ ಕನ್ಯಾಕುಮಾರಿಗಳದ್ದು ಮತ್ತೊಂದು. 52 ಶಕ್ತಿ ಪೀಠಗಳ ನೆಪದಲ್ಲಿ ದೇಶವನ್ನೆಲ್ಲ ಪ್ರವಾಸ ಮಾಡುವ ಪ್ರಯತ್ನವೊಂದೆಡೆಯಾದರೆ, ದ್ವಾದಶ ಜ್ಯೋತಿರ್ ಲಿಂಗಗಳ ನೆಪದಲ್ಲಿ ಹಿಮಾಲಯದ ತುದಿಯನ್ನೂ ಮುಟ್ಟಬಹುದಿತ್ತು. ಮಹಾಪುರಷರು ಜನಿಸಿದ, ಆಚಾರ್ಯರುಗಳು ನಡೆದಾಡಿದ ಜಾಗಗಳೆಲ್ಲವನ್ನೂ ನಮ್ಮವರು ವಿಶೇಷವಾಗಿ ಅಭಿವೃದ್ಧಿಪಡಿಸಿ ಪ್ರತಿಯೊಬ್ಬ ಭಾರತೀಯನು ಅಲ್ಲಿಗೆಲ್ಲ ಹೋಗುವುದು ಜೀವನದ ಗುರಿಯೆಂಬಂತೆ ದೃಢಪಡಿಸಿದ್ದರು. ನಿಜವಾದ ದೃಷ್ಟಿಯ ಸುಸ್ಥಿರ ಬೆಳವಣಿಗೆ ಇದೇ!
ಭಾರತಕ್ಕೆ ಭಗವಂತ ಕೊಟ್ಟ ವರವೇನು ಗೊತ್ತೇ? ನಮ್ಮ ಪ್ರಯತ್ನವೇ ಇಲ್ಲದೇ ಬೆಳೆಸಬಲ್ಲ ಪ್ರವಾಸೋದ್ಯಮ ನಮಗಿದೆ. ಇಂದಿಗೂ ಜಗತ್ತಿನ ಅತ್ಯಂತ ಹೆಚ್ಚಿನ ಜನ ಭೇಟಿ ಕೊಡುವ ಮಧ್ಯಭಾರತದ ಮಹಾಯಾತ್ರೆ ಕುಂಭಮೇಳ. ದಕ್ಷಿಣ ಭಾರತದಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋಗುತ್ತಾರಲ್ಲ, ಕೇರಳದ ಸಾಮಾನ್ಯ ಜನರಿಗೆ ಅದೆಂತಹ ಜೀವದಾಯಿನಿ ಗೊತ್ತೇನು? ಅಯೋಧ್ಯೆಯಲ್ಲಿ ರಾಮ ಮಂದಿರವಾಗಲಿ ಅರ್ಧದಷ್ಟು ಉತ್ತರಪ್ರದೇಶಕ್ಕೆ ಆದಾಯ ತಂದುಕೊಡುವ ಜನ ಜಂಗುಳಿ ಅಲ್ಲಿ ನಿರ್ಮಾಣವಾಗಿಬಿಡುತ್ತದೆ. ಗಂಗಾ ತಟದಲ್ಲಿ ಆರತಿಗೆ ಸೇರುವ ಜನರೇನು ಕಡಿಮೆಯೇ? ಇವೆಲ್ಲವೂ ನಮ್ಮ ಪ್ರಯಾಸವಿಲ್ಲದೇ ಆಗಿರುವಂಥದ್ದೇ. ದೇಶಕ್ಕಿರುವುದೆಲ್ಲ ಭಗವಂತ ಕರ್ನಾಟಕಕ್ಕೂ ಕೊಟ್ಟಿದ್ದಾನೆ. ಅಲ್ಲಿ ಗಂಗೆಯಾದರೆ ನಮಗೆ ತುಂಗೆ, ಕಾವೇರಿಯರು. ಗಂಗೆಗಿರುವಷ್ಟೇ ಶ್ರದ್ಧೆ ಇವರೀರ್ವರ ಮೇಲೂ ಇದೆ ಇಲ್ಲಿ. ಶ್ರೀರಂಗಪಟ್ಟಣದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕಾವೇರಿ ಆರತಿಗೆ, ಪುಷ್ಕರ ಸ್ನಾನಕ್ಕೆ ಧಾವಿಸಿ ಬರುವ ಜನ ನೋಡಿದ್ದೀರಾ? ಮಹಾಮಸ್ತಕಾಭಿಷೇಕಕ್ಕೆ ಇಡಿಯ ಜಗತ್ತು ಇತ್ತ ತಿರುಗಿ ಕುಳಿತಿರುತ್ತದೆ. ಇವೆಲ್ಲವುಗಳೊಟ್ಟಿಗೆ ಭಗವಂತ ನಮಗೆ ಆಂಜನೇಯನ ಜನ್ಮಸ್ಥಾನವನ್ನೂ ದಯಪಾಲಿಸಿಬಿಟ್ಟಿದ್ದಾನೆ. ಅತ್ತ ರಾಮ ಜನ್ಮಭೂಮಿಯ ಕುರಿತಂತೆ ಆಂದೋಲನ ಗರಿಗೆದರಿರುವಾಗಲೇ ಇತ್ತ ಅಂಜನಾದ್ರಿಯನ್ನು, ಕಿಷ್ಕಿಂಧೆಯನ್ನು ಪ್ರಚುರಪಡಿಸುವ ಕೆಲಸಕ್ಕೆ ಕೈಹಾಕಿದ್ದರೆ ನಾವು ಭೂಮಂಡಲದ ಮೂಲೆಮೂಲೆಯ ಜನರನ್ನು ಆಕಷರ್ಿಸಬಹುದಿತ್ತು. ಹಾಗಂತ ಬರಿ ಬೆಟ್ಟ ನೋಡಿಕೊಂಡು ಹೋಗಲು ಜನ ಬರಲಾರರು. ಅದರ ಬುಡ ತಲುಪುವ ರಸ್ತೆಗಳನ್ನು ಸುಂದರ ಮಾಡಬೇಕು, ಅಲ್ಲಿ ಹನುಮಂತನ ಕುರಿತಂತಹ ಅದ್ಭುತವಾದ ಥೀಮ್ ಪಾರ್ಕ್ ಮಾಡಬೇಕು. ಮಕ್ಕಳಿಗೆ ರಾಮಾಯಣದ ಕಲ್ಪನೆಗಳನ್ನು ಕಟ್ಟಿಕೊಡಬಲ್ಲ ಆಟಗಳನ್ನು ಅಲ್ಲಿ ರೂಪಿಸಬೇಕು. ಒಟ್ಟಿನಲ್ಲಿ ಅಲ್ಲಿಗೆ ಬಂದು ಹೋದವರೆಲ್ಲ ಭಾರತೀಯ ಪರಂಪರೆಯ ಒಂದು ಎಳೆಯನ್ನಾದರೂ ಜೊತೆಗೊಯ್ಯುವಂತಾಗಬೇಕು. ಇದು ಬರಿಯ ಪರಂಪರೆಯ ಪ್ರಚಾರವೆಂದೆಣಿಸಬೇಡಿ. ಮೇಕ್ ಇನ್ ಇಂಡಿಯಾದ ಲೆಕ್ಕಾಚಾರದ ಪ್ರಕಾರ ಪ್ರವಾಸೋದ್ಯಮಕ್ಕೆಂದು ಸುರಿದ 60 ಲಕ್ಷ ರೂಪಾಯಿ 78 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತದಲ್ಲಿ ವಿದೇಶಿ ವಿನಿಮಯದ ಸಂಗ್ರಹಣೆಯಲ್ಲಿ ಈ ಉದ್ದಿಮೆಗೆ ಮೂರನೇ ಸ್ಥಾನ. ಕಳೆದ ವರ್ಷ ಭಾರತಕ್ಕೆ ಎಂಭತ್ತು ಲಕ್ಷಕ್ಕೂ ಹೆಚ್ಚು ವಿದೇಶೀ ಪ್ರವಾಸಿಗರು ಬಂದಿದ್ದಾರೆ. ಕೇಂದ್ರ ಸರ್ಕಾರದ ಆಸ್ಥೆಯಿಂದಾಗಿ ವರ್ಷದಿಂದ ವರ್ಷಕ್ಕೆ ವಿದೇಶೀ ಪ್ರವಾಸಿಗರು ಹೆಚ್ಚುತ್ತಲೇ ಇದ್ದಾರೆ.
ಆಡಳಿತದ ಚುಕ್ಕಾಣಿ ಹಿಡಿದವರು ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಷ್ಟೇ. ಟಿಪ್ಪೂ ಜಯಂತಿ ಮಾಡಿದ್ದರಿಂದ ಮತ ಮತಗಳ ನಡುವೆ ಭಡಕಾಯಿಸಲಷ್ಟೇ ಸಾಧ್ಯವಾಯಿತು. ಅದರಿಂದ ಉದ್ಯೋಗವು ಹುಟ್ಟಲಿಲ್ಲ, ಪ್ರವಾಸೋದ್ಯಮದ ಆಸ್ಥೆಯೂ ಬೆಳೆಯಲಿಲ್ಲ. ವೋಟುಬ್ಯಾಂಕಿನ ರಾಜಕಾರಣವನ್ನು ಅಷ್ಟು ಶ್ರದ್ಧೆಯಿಂದ ಮಾಡಿದ ಮುಖ್ಯಮಂತ್ರಿಗಳು ಸ್ವಲ್ಪ ಪ್ರವಾಸೋದ್ಯಮದ ಕಡೆಗೆ ಹರಿಸಿದ್ದರೆ ನಾವಿಂದು ಬೆಂಗಳೂರೊಂದನ್ನೇ ಮುಂದಿಟ್ಟು ಬಂಡವಾಳ ಸಂಗ್ರಹ ಮಾಡಬೇಕಿರಲಿಲ್ಲ.
ಇರುವ ಎಲ್ಲ ಚಿನ್ನದ ಗಣಿಗಳು ಮುಚ್ಚಿದ ನಂತರವೂ ಕರ್ನಾಟಕ ಚಿನ್ನದ ಗಣಿಯೇ! ,ಚಿನ್ನ ಅರಸುವ ಸೂಕ್ಷ್ಮತೆ ಇರುವ ನಾಯಕ ಬೇಕಷ್ಟೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.