ಚಾಮರಾಜಪೇಟೆ: ಮಕ್ಕಳ ಕಳ್ಳನೆಂದು ಸಾರ್ವಜನಿಕರ ಥಳಿತ; ವ್ಯಕ್ತಿ ಬಲಿ
Team Udayavani, May 24, 2018, 9:18 AM IST
ಬೆಂಗಳೂರು: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅನ್ಯ ರಾಜ್ಯದ ಯುವಕನನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಸಾರ್ವಜನಿಕರು, ಆತನನ್ನು ಹೊಡೆದು ಸಾಯಿಸಿದ ಅಮಾನವೀಯ ಘಟನೆ ಚಾಮರಾಜಪೇಟೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಚಾಮರಾಜಪೇಟೆಯ ಪೆನ್‌ಷನ್ ಮೊಹಲ್ಲಾ ರಸ್ತೆಯ ರಂಗನಾಥ ಚಿತ್ರಮಂದಿರದ ಬಳಿ ಈ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಕಾಲು ರಾಮ್ (26) ಹತ್ಯೆಯಾದ ವ್ಯಕ್ತಿ. ಇದುವರೆಗೆ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ಸೀಮಿತವಾಗಿದ್ದ ಇಂಥ ಅಮಾನವೀಯ, ಮೃಗೀಯ ವರ್ತನೆಯ ಘಟನೆ ರಾಜ್ಯಕ್ಕೂ ಕಾಲಿಟ್ಟಿದೆ. ಅದರಲ್ಲೂ ರಾಜಧಾನಿಯ ಹೃದಯ ಭಾಗದಲ್ಲಿ ನಡೆದಿರುವುದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ವ್ಯಕ್ತಿ ನಿಜವಾದ ಮಕ್ಕಳ ಕಳ್ಳನೇ ಆಗಿದ್ದರೂ ಆತನನ್ನು ಪೊಲೀಸರಿಗೆ ಒಪ್ಪಿಸಬೇಕಾಗಿದ್ದ ಸಾರ್ವ ಜನಿ ಕರು, ಮಾನವೀಯತೆ ಮರೆತು ವ್ಯಕ್ತಿಯ ಮೇಲೆ ಮೃಗಗಳಂತೆ ಎರಗಿ ಸಾಯಿಸಿದ್ದಾರೆ. ಬ್ಯಾಟ್, ಕಬ್ಬಿಣದ ರಾಡ್‌ನಿಂದ ಮನಸೋ ಇಚ್ಛೆ ಹೊಡೆದು ಆತನನ್ನು ಕೊಂದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ತುಮಕೂರಿನಲ್ಲೂ ನಡೆದಿತ್ತು: ಇತ್ತೀಚೆಗೆ ತುಮಕೂರು ಜಿಲ್ಲೆಯ ಪಾವಗಡ ಮತ್ತು ಕೊರಟಗೆರೆ ತಾಲೂಕು ಸೇರಿ ರಾಜ್ಯದ ಇನ್ನೂ ಕೆಲವು ಕಡೆ ಮಕ್ಕಳ ಕಳ್ಳರು ಕಾಣಿಸಿಕೊಂಡಿದ್ದಾರೆ ಎಂಬ ವಂದತಿ ಹಬ್ಬಿತ್ತು.
ಕರ್ನಾಟಕದಲ್ಲಿ ನಡೆದ ಘಟನೆ ಎಂಬಂತೆ ಬಿಂಬಿಸಿದ, ಎಲ್ಲೋ ನಡೆದ ಘಟನೆಯೊಂದರ ವಿಡಿಯೋವೊಂದು ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ನ್ಯಾಯಾಲಯದಲ್ಲಿ ಹರಿದಾಡುತ್ತಿತ್ತು. ಇಂಥ ನಕಲಿ ವೀಡಿಯೋ ಸದ್ದು ಮಾಡಿದ ಬೆನ್ನಲ್ಲೇ ರಾಜಧಾನಿಯಲ್ಲಿ ಇದೀಗ ಈ ಘಟನೆ ಸಂಭವಿಸಿರುವುದು ಆತಂಕ ಹೆಚ್ಚಿಸಿದೆ.
ನಡೆದಿದ್ದೇನು?; ರಾಜಸ್ಥಾನ ಮೂಲದ ಕಾಲುರಾಮ್, ಬುಧವಾರ ಮಧ್ಯಾಹ್ನ ಚಾಮರಾಜಪೇಟೆಯ ಪೆನ್‌ಷನ್ ಮೊಹಲ್ಲಾ ರಸ್ತೆಯಲ್ಲಿ ನಾಲ್ಕಾರು ಬಾರಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿದ್ದಾನೆ. ಇದನ್ನು ಕಂಡ ಸ್ಥಳೀಯರೊಬ್ಬರು ಆತ ಮಕ್ಕಳ ಕಳ್ಳ ಇರಬಹುದೆಂದು ಅನುಮಾನ ವ್ಯಕ್ತಪಡಿಸಿ,ವದಂತಿ ಹಬ್ಬಿಸಿದ್ದಾರೆ. ಇದರಿಂದ ಕೆರಳಿದ ಸ್ಥಳೀಯ ಯುವಕರ ಗುಂಪೊಂದು, ಕಾಲುರಾಮ್‌ನ ಕೈಕಾಲು ಕಟ್ಟಿ ಥಳಿಸಿದೆ. ನಂತರ ಕ್ರಿಕೆಟ್ ಬ್ಯಾಟ್, ದೊಣ್ಣೆ, ಕಬ್ಬಿಣದ ರಾಡ್‌ಗಳನ್ನೆಲ್ಲ ತಂದು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ತಲೆ ಹಾಗೂ ಇತರ ಭಾಗಗಳಿಗೆ ಬಿದ್ದ ಬಲವಾದ ಹೊಡೆತಗಳಿಂದ ಕಾಲುರಾಮ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಾಲದೆಂಬಂತೆ, ಆತನ ಕೈಗೆ ಹಗ್ಗ ಕಟ್ಟಿ ರಸ್ತೆಯಲ್ಲಿ ಎಳೆದಾಡಿದ್ದಾರೆ. ಈ ವೇಳೆ ಕೆಲ ಮಹಿಳೆಯರೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಇದನ್ನು, ಗಮನಿಸಿದ ಸ್ಥಳೀಯರೊಬ್ಬರು ಪೊಲೀಸ್ ಸಹಾಯವಾಣಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಚಾಮರಾಜಪೇಟೆ ಠಾಣೆ ಪೊಲೀಸರು, ಸಾರ್ವಜನಿಕರ ಗುಂಪನ್ನು ಚದುರಿಸಿ ಕೂಡಲೇ ಕಾಲುರಾಮ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಂಡಿದ್ದ ಕಾಲುರಾಮ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಗುಂಪು ಗುಂಪಾಗಿ ಹಲ್ಲೆ ನಡೆಸಿರುವುದರಿಂದ ನಿರ್ದಿಷ್ಟ ಮಾಹಿತಿ ಇಲ್ಲ. ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಎರಡು ತಂಡ ರಚನೆ: ಪ್ರಕರಣ ಸಂಬಂಧ ಎರಡು ತಂಡಗಳು ತನಿಖೆ ಆರಂಭಿಸಿವೆ. ಒಂದು ತಂಡ ಕಾಲುರಾಮ್‌ನ ಹಿನ್ನೆಲೆ ಹಾಗೂ ಕುಟುಂಬದವರ ಪತ್ತೆ ಕಾರ್ಯದಲ್ಲಿ ತೊಡಗಿದೆ. ಮತ್ತೂಂದು ತಂಡ ವೈರಲ್ ಆಗಿರುವ ವಿಡಿಯೋದಲ್ಲಿ ಕಾಲುರಾಮ್ ಮೇಲೆ ಹಲ್ಲೆ ನಡೆಸಿರುವ ಯುವಕರು ಹಾಗೂ ಮಹಿಳೆಯರನ್ನು ವಶಕ್ಕೆ ಪಡೆದಿದೆ. ಘಟನೆಯಲ್ಲಿ 12ರಿಂದ 15 ಮಂದಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುರುವಾರ ಬೆಳಗ್ಗೆ ಈ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ. ಇದೇ ರೀತಿಯ ವದಂತಿ ನೆರೆಯ ಜಿಲ್ಲೆಗಳಲ್ಲೂ ಹಬ್ಬಿದ್ದು, ಕೊಪ್ಪಳ, ಗದಗ, ಬಾಗಲಕೋಟೆ, ಹಾವೇರಿ, ಚಿತ್ರದುರ್ಗದ ಕೆಲ ತಾಲೂಕು, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲೂ ನಿತ್ಯ ಒಂದಲ್ಲಾ ಒಂದು
ಪ್ರಕರಣ ವರದಿಯಾಗುತ್ತಿದೆ.
ಈ ಹಿಂದೆ ಎಲ್ಲೆಲ್ಲಿ ನಡೆದಿತ್ತು?
ಮೇ 9ರಂದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ರುಕ್ಮಿಣಿ ಎಂಬ ವೃದ್ಧೆಯನ್ನು ಮಕ್ಕಳ ಕಳ್ಳಿ ಎಂದು ಭಾವಿಸಿ ಸಾರ್ವಜನಿಕರು ಹೊಡೆದು ಕೊಂದಿದ್ದರು.
ಮೇ 20ರಂದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಗೋ ಹತ್ಯೆ ಮಾಡಿದ್ದಾನೆ ಎಂದು 45 ವರ್ಷದ
ಸಿರಾಜ್ ಎಂಬ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹೊಡೆದು ಕೊಂದಿದ್ದರು.
ಮೇ 20ರಂದು ಗುಜರಾತ್‌ನ ಶಾಪರ್ ಕೈಗಾರಿಕಾ ಪ್ರದೇಶದಲ್ಲಿ ಕಳವು ಮಾಡಿದ ಆರೋಪದಲ್ಲಿ 30 ವರ್ಷದ ಮುಖೇಶ್ ಎಂಬಾತನನ್ನು ಯುವಕರು ಥಳಿಸಿ ಕೊಂದಿದ್ದರು.
ಇತ್ತೀಚೆಗೆ ಚಿತ್ರದುರ್ಗದಲ್ಲಿಯೂ ಸಾರ್ವಜನಿಕರು ಶಂಕಿತ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇವೆ. ಹತ್ಯೆಯಾದ ವ್ಯಕ್ತಿಯ ಬಗ್ಗೆ ಎಲ್ಲಾ ರೀತಿಯ
ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ. ಈ ಕ್ಷಣ ಮಕ್ಕಳ ಕಳ್ಳ ಎನ್ನುವುದಕ್ಕೆ ಯಾವುದೇ ಖಚಿತ
ಮಾಹಿತಿಗಳಿಲ್ಲ. ಹಲ್ಲೆ ನಡೆಸಿದವರನ್ನೆಲ್ಲ ಕೂಡಲೇ ಬಂಧಿಸಲಾಗುವುದು.
●ರವಿ ಡಿ. ಚನ್ನಣ್ಣನವರ್, ಪಶ್ಚಿಮ ವಿಭಾಗದ ಡಿಸಿಪಿ
9 ಮಂದಿ ಸೆರೆ
ಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜ ಪೇಟೆ ಪೊಲೀಸರು 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯ ನಡೆದ ವೇಳೆ ಸ್ಥಳದಲ್ಲಿದ್ದವರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.