ಬದಲಾಗುತ್ತಿದೆ ಬಂಡೀಪುರ ಮೂಲ ಸ್ವರೂಪ
Team Udayavani, Mar 20, 2019, 12:30 AM IST
ಬೆಂಗಳೂರು: ಈಚೆಗೆ ಬೆಂಕಿಯ ಕೆನ್ನಾಲಿಗೆಗೆ ಗುರಿ ಯಾದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೂಲ ಸ್ವರೂಪ ಪರಿವರ್ತನೆ ಆಗುತ್ತಿದ್ದು, ಬಯಲು ಪ್ರದೇಶ ಹೆಚ್ಚುತ್ತಿದೆ. ಇದರ ಪರಿಣಾಮ ಕಳೆದೆರಡು ದಶಕಗಳಲ್ಲಿ ಅಲ್ಲಿನ ತಾಪಮಾನ ಸರಾಸರಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಿದೆ. ಇದು ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವು ಮೂಲತಃ ಅತಿಹೆಚ್ಚು ಉಷ್ಣವಲಯದ ಎಲೆ ಉದುರುವ ಕಾಡು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತಿದ್ದು, 1973ರಲ್ಲಿ ಶೇ. 61.69ರಷ್ಟಿದ್ದ ಈ ಉಷ್ಣವಲಯದ ಎಲೆ ಉದುರುವ ಕಾಡು, 2016ರಲ್ಲಿ ಶೇ. 47.30ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಬೆಂಕಿ ಬೇಗ ಹೊತ್ತಿಕೊಳ್ಳಲು ಪೂರಕವಾದ ಕುರುಚಲು ಅರಣ್ಯವು ಶೇ. 18.71ರಷ್ಟು ಏರಿಕೆ ಆಗಿದೆ. ಇದರಿಂದ ಕಾಡಿನ ಹೃದಯಭಾಗದಲ್ಲಿ ಬಯಲು ಪ್ರದೇಶದ ವಿಸ್ತೀರ್ಣ ಹೆಚ್ಚಳವಾಗಿದೆ. ಅಷ್ಟೇ ಅಲ್ಲ, ಬಯಲು ಪ್ರದೇಶ ಶೇ. 2.16ರಷ್ಟು ಬಫರ್ ಪ್ರದೇಶದಲ್ಲೇ ಏರಿಕೆ ಆಗಿದೆ. ಇದೆಲ್ಲದರ ಪರಿಣಾಮ ಉಷ್ಣಾಂಶ ಕೂಡ ಹೆಚ್ಚಳವಾಗಿದೆ.
– ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡವು ವರ್ಷದ ಹಿಂದೆ ನಡೆಸಿದ ಅಧ್ಯಯನ ವರದಿಯಲ್ಲಿ ಈ ಅಂಶ ಬೆಳಕಿಗೆಬಂದಿದೆ. ಪ್ರವಾಸೋದ್ಯಮ ಹೆಸರಿನಲ್ಲಿ ಮಾನವನ ಚಟುವಟಿಕೆಗಳು ಹೆಚ್ಚಳ, ಟೀಕ್ ಮತ್ತು ನೀಲಗಿರಿ ಪ್ಲಾಂಟೇಷನ್, ಆಗಾಗ್ಗೆ ಕಾಣಿಸಿಕೊಳ್ಳುವ ಕಾಡ್ಗಿàಚ್ಚು ಪ್ರಮುಖ ಕಾರಣ ಗಳಾಗಿವೆ ಎಂದು ಪ್ರೊ.ಟಿ.ವಿ. ರಾಮಚಂದ್ರ ನೇತೃತ್ವದ ಅಧ್ಯಯನ ತಂಡ ವರದಿಯಲ್ಲಿ ತಿಳಿಸಿದೆ.
ವಿಜ್ಞಾನಿಗಳ ತಂಡವು ಬಂಡೀಪುರ ಸೇರಿದಂತೆ ರಾಜೀವ್‌ಗಾಂಧಿ ಹುಲಿ ಸಂರಕ್ಷಿತ ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಒಟ್ಟಿಗೆ ಅಧ್ಯಯನ ಸಮಗ್ರ ಅಧ್ಯಯನ ನಡೆಸಿ, ವರದಿಯನ್ನು ಸಿದಟಛಿಪಡಿಸಿದೆ. ಅದರಲ್ಲಿ ಪ್ರಮುಖವಾಗಿ ಬಂಡೀಪುರ ಮತ್ತು ರಾಜೀವ್ ಗಾಂಧಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿವಿಧ ಪ್ರಕಾರದ ಸ್ಥಳೀಯವಲ್ಲದ ಜಾತಿಯ ಸಸ್ಯವರ್ಗ ಬೆಳೆಸಲಾಗುತ್ತಿದ್ದು, ಇದು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ ಆಗುತ್ತಿದ್ದು, ತಾಪಮಾನ ಹೆಚ್ಚಳದ ರೂಪದಲ್ಲಿ ಪರಿಣಮಿಸುತ್ತಿದೆ. ಇದರಿಂದ ಬೆಂಕಿ ಅನಾಹುತಗಳು ವೇಗವಾಗಿ ಹಬ್ಬಲು ಪೂರಕ ವಾತಾವರಣ ಕಲ್ಪಿಸಿದಂತಾಗಿದೆ ಎಂದು ವಿಜ್ಞಾನಿಗಳು ಉಲ್ಲೇಖೀಸಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ಏರಿಕೆ?:ಅರಣ್ಯವನ್ನು ಕೃಷಿ ವಲಯ, ಉಷ್ಣವಲಯದ ಎಲೆ ಉದುರುವ ಕಾಡು, ನಿರ್ಮಿತ ಪ್ರದೇಶ, ಜಲಮೂಲಗಳು, ಸಸ್ಯವರ್ಗದ ಪ್ರದೇಶವೆಂದು ವಿಂಗಡಿಸಲಾಗಿದ್ದು, ಆಯಾ ಪ್ರದೇಶವಾರು ತಾಪಮಾನವನ್ನೂ ದಾಖಲಿಸಲಾಗಿದೆ. ಅದನ್ನು 1992 ಮತ್ತು 2016ಕ್ಕೆ ಹೋಲಿಕೆ ಮಾಡಲಾಗಿದೆ.
ಅದರಲ್ಲಿ ಬಯಲು ಪ್ರದೇಶದಲ್ಲಿ ಉಷ್ಣಾಂಶ ಗರಿಷ್ಠ 36.7 ಡಿಗ್ರಿಯಿಂದ 37.8 ಡಿಗ್ರಿ, ಕೃಷಿ ಪ್ರದೇಶದಲ್ಲಿ 36.1 ಡಿಗ್ರಿಯಿಂದ 37.2 ಡಿಗ್ರಿ, ಸಸ್ಯವರ್ಗ ಪ್ರದೇಶದಲ್ಲಿ 34.5 ಡಿಗ್ರಿಯಿಂದ 35.2 ಡಿಗ್ರಿ, ಜಲಮೂಲ ಇರುವ ಪ್ರದೇಶದಲ್ಲಿ 24.2 ರಿಂದ 27.2 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಿರುವುದು ಕಂಡುಬಂದಿದೆ. ಇದು ಕಾಡಿನ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗೆ ಸಾಕ್ಷಿಯಾಗಿದೆ.
ಅದೇ ರೀತಿ, ಬಂಡೀಪುರದಲ್ಲಿ 2026ರ ವೇಳೆಗೆ ಬಯಲು ಪ್ರದೇಶವು ಶೇ. 0.40ಯಿಂದ ಶೇ. 3.21ಕ್ಕೆ, ಕುರುಚಲು ಪ್ರದೇಶವು ಶೇ. 17.72ರಿಂದ ಶೇ. 31ಕ್ಕೆ, ನಿರ್ಮಾಣ ಪ್ರದೇಶ ಶೇ. 0.75ರಿಂದ ಶೇ. 1.21ಕ್ಕೆ ಏರಿಕೆ ಆಗಲಿದೆ ಎಂದೂ ಅಂದಾಜಿಸಲಾಗಿದೆ. ಅಂದಹಾಗೆ ಬಂಡೀಪುರವು ಹುಲಿಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲ್ಪಟ್ಟ ಮೊದಲ ರಾಷ್ಟ್ರೀಯ ಉದ್ಯಾನವಾಗಿದೆ. ಇಲ್ಲಿ 250ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಮತ್ತು ಸ್ಥಳೀಯ ಸಸ್ತನಿಗಳು ಇವೆ. ಮ್ಯಾಪಿಂಗ್, ರಿಮೋಟ್ ಸೆನ್ಸಿಂಗ್ ಡಾಟಾ, ಸಸ್ಯವರ್ಗದ ನಕ್ಷೆ ಮತ್ತಿತರ ದತ್ತಾಂಶಗಳನ್ನು ಸಂಗ್ರಹಿಸಿ ನಡೆಸಿದ ವೈಜ್ಞಾನಿಕ ಅಧ್ಯಯನ ಇದಾಗಿದೆ.
● ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.