![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 25, 2022, 6:30 AM IST
ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಇನ್ನು ಮುಂದೆ ಫಲಾನುಭವಿಗಳ ಖಾತೆಗೆ ಹಣ ನೇರ ವರ್ಗಾವಣೆ ಆಗಲಿದೆ. ಈ ಮೂಲಕ ವಿಳಂಬ ಧೋರಣೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಮೊದಲು ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ಹಂತಗಳಲ್ಲಿ ಟೆಂಡರ್ ಪದ್ಧತಿ ಇತ್ತು. ಉದಾಹರಣೆಗೆ ಬೋರ್‌ವೆಲ್ ಕೊರೆಯಲು, ವಿದ್ಯುತ್ ಸಂಪರ್ಕ ಕಲ್ಪಿಸಲು ಟೆಂಡರ್ ಕರೆಯಲಾಗುತ್ತಿತ್ತು. ಗುತ್ತಿಗೆ ಪಡೆದ ವ್ಯಕ್ತಿ ಯೋಜನೆಯಡಿಯ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುತ್ತಿದ್ದಾನೆ. ಆದರೆ, ಈ ವ್ಯವಸ್ಥೆಯಲ್ಲಿ ಸೌಲಭ್ಯ ದೊರೆಯುವುದು ವಿಳಂಬವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಯೋಜನೆಗೆ ಹೊಸ ಸ್ಪರ್ಶ ನೀಡಲಾಗಿದೆ ಎಂದರು.
ಅದರಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಈ ಯೋಜನೆಯಡಿ ಹಣ ಎರಡು ಮೂರು ಕಂತುಗಳಲ್ಲಿ ಪಾವತಿ ಆಗಲಿದೆ. ಅದರ ನೆರವಿನಿಂದ ಫಲಾನುಭವಿಯೇ ಯೋಜನೆಯ ಸೌಲಭ್ಯ ನೇರವಾಗಿ ಪಡೆಯಬಹುದು. ಗಂಗಾ ಕಲ್ಯಾಣದಡಿ ಎರಡು ಲಕ್ಷ ರೂ.ವರೆಗೆ ಸಹಾಯಧನ ದೊರೆಯಲಿದೆ ಎಂದು ಹೇಳಿದರು.
ಶಾದಿ ಮಹಲ್ ನಿಲ್ಲಿಸಲಾಗಿದೆ :
ಅಲ್ಪಸಂಖ್ಯಾಕರಿಗೆ ಈ ಹಿಂದೆ 77 ಯೋಜನೆಗಳಿದ್ದವು. ಈಗ ಅವುಗಳನ್ನು 29ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸಿ.ಎಂ. ಇಬ್ರಾಹಿಂ ಕೇಳಿದಾಗ, “ಶಾದಿ ಮಹಲ್ ಹೊರತುಪಡಿಸಿ ಇನ್ನಾವುದೇ ಯೋಜನೆಗಳನ್ನು ಸ್ಥಗಿತಗೊಳಿಸಿಲ್ಲ. ಶಾದಿ ಮಹಲ್ ಅನ್ನು ಕಳೆದ ವರ್ಷದಿಂದ ನಿಲ್ಲಿಸಲಾಗಿದೆ. ಪಿಎಚ್.ಡಿ.ಗೆ ನೆರವು ಯೋಜನೆ ಸ್ಥಗಿತಗೊಂಡಿತ್ತು. ಪುನರಾರಂಭಗೊಳಿಸಲಾಗಿದೆ. “ಅರಿವು’ ಯೋಜನೆಗೆ ಕಳೆದ ಬಾರಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಜಿಲ್ಲೆಗೊಂದು ಇರುವ ಅಬ್ದುಲ್ ಕಲಾಂ ಶಾಲೆಗಳನ್ನು 25 ಕೋಟಿ ರೂ.ಗಳಲ್ಲಿ ಮೇಲ್ದರ್ಜೆಗೇರಿಸಿ ಸಿಬಿಎಸ್‌ಇ ಪಠ್ಯದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.
ಅಲ್ಪಸಂಖ್ಯಾಕ ಕಾಲನಿ ಅಭಿವೃದ್ಧಿ:
ಅಲ್ಪಸಂಖ್ಯಾಕ ಕಾಲನಿಗಳನ್ನು ಕೊಳಚೆ ನಿರ್ಮೂಲನ ಮಂಡಳಿ ಮೂಲಕ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹೆಚ್ಚು ಅಲ್ಪಸಂಖ್ಯಾಕರು ವಾಸ ಮಾಡುವ ಕಾಲನಿಗಳನ್ನು ಗುರುತಿಸಿ, ವಿಶೇಷ ಕಾರ್ಯಕ್ರಮದಡಿ ಕೊಳಚೆ ನಿರ್ಮೂಲನ ಮಂಡಳಿ ಮೂಲಕ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.