ಕಾಂಗ್ರೆಸ್ ನಾಯಕರ ಬೆನ್ನು ಬಿದ್ದ ಸಿ.ಎಂ.ಇಬ್ರಾಹಿಂ; ಜಮೀರ್-ತನ್ವೀರ್ ಸೆಳೆಯಲು ಯತ್ನ!
Team Udayavani, Mar 22, 2022, 10:16 AM IST
ಬೆಂಗಳೂರು: ಕಾಂಗ್ರೆಸ್‌ಗೆ ಕೈ ಕೊಟ್ಟು ಜೆಡಿಎಸ್ ತೆನೆ ಹೊರಲು ಸಜ್ಜಾಗಿರುವ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ, ಮತ್ತಷ್ಟು ನಾಯಕರನ್ನು ಸೆಳೆಯಲು ಮುಂದಾಗಿದ್ದು ನನ್ನೊಂದಿಗೆ ನೀವೂ ಬನ್ನಿ ಎಂದು ಮಾಜಿ ಸಚಿವರಾದ ಜಮೀರ್ ಅಹಮದ್ ಹಾಗೂ ತನ್ವೀರ್ ಸೇಠ್ ಬೆನ್ನು ಬಿದ್ದಿದ್ದಾರೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನೋಡಿದರೆ ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತ್ರಿಶಂಕು ಪರಿಸ್ಥಿತಿ ಏರ್ಪಡುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಜೆಡಿಎಸ್ ಜತೆಗಿದ್ದರೆ ಸರ್ಕಾರ ರಚಿಸುವ ಅಥವಾ ಪಾಲುದಾರರಾಗುವ ಅವಕಾಶ ಸಿಗಬಹುದು ಎಂದು ಆಸೆ ತೋರಿಸುತ್ತಿದ್ದಾರೆ. ಮುಂದಿನ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ಅನಿವಾರ್ಯ ಎಂದಾದರೆ ಉಪಮುಖ್ಯಮಂತ್ರಿ ಸೇರಿ ಪ್ರಮುಖ ಸಚಿವಗಿರಿ ಸಿಗಲಿದೆ. ಆಗ, ನಿಮಗೆಲ್ಲಾ ಅಧಿಕಾರ ಕೊಡಿಸುವ ಹೊಣೆಗಾರಿಕೆ ನನ್ನದು ಎಂಬ ಆಶ್ವಾಸನೆ ಸಹ ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಜೆಡಿಎಸ್‌ಗೆ ಬರುವಾಗ ಪ್ರಮುಖ ನಾಯಕರನ್ನೂ ಕರೆತನ್ನಿ ಬೃಹತ್ ಸಮಾವೇಶ ಮಾಡಿ ಬರಮಾಡಿಕೊಳ್ಳುತ್ತೇವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿರುವ ಹಿನ್ನೆಲೆಯಲ್ಲಿ ಇದೀಗ ಇಬ್ರಾಹಿಂ ಕೈ ನಾಯಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆಂದು ಹೇಳಲಾಗಿದೆ. ಇತ್ತೀಚೆಗೆ ಜಮೀರ್ ಅಹಮದ್ ಭೇಟಿ ಮಾಡಿದ ಸಂದರ್ಭದಲ್ಲಿ ಜೆಡಿಎಸ್‌ಗೆ ನನ್ನೊಂ ದಿಗೆ ಬನ್ನಿ ಎಂಬ ಆಹ್ವಾನ ನೀಡಿದ ಇಬ್ರಾಹಿಂ, ತನ್ವೀರ್ ಸೇಠ್ ಜತೆಗೂ ಮಾತನಾಡುತ್ತೇನೆ. ನಾವೆಲ್ಲರೂ ಒಂದೇ ಕಡೆ ಇದ್ದರೆ ಮುಸ್ಲಿಂ ಸಮುದಾಯಕ್ಕೆ ನಾಯಕತ್ವ ಸಿಗಲಿದೆ. ಒಪ್ಪಿದರೆ ದೇವೇಗೌಡರ ಜತೆ ಮಾತುಕತೆಗೆ ಸಮಯ ನಿಗದಿ ಮಾಡುತ್ತೇನೆಂದು ಹೇಳಿದರು ಎಂದು ತಿಳಿದು ಬಂದಿದೆ.
ಉ.ಕ.ಭಾಗದ ಕೆಲವು ನಾಯಕರ ಸಂಪರ್ಕ
ಮೈಸೂರಿನಲ್ಲಿ ತನ್ವೀರ್ ಸೇಠ್ ಹಾಗೂ ಸಿದ್ದರಾಮಯ್ಯ ನಡುವೆ ಆಂತರಿಕವಾಗಿ ಭಿನ್ನಾಭಿಪ್ರಾಯವಿದೆ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ತಮ್ಮ ಜತೆ ಬಂದವರಿಗೆ ಟಿಕೆಟ್ ನೀಡಬೇಕೆಂಬ ಜಮೀರ್ ಅಹಮದ್ ಬೇಡಿಕೆಗೆ ಡಿ.ಕೆ.ಶಿವಕುಮಾರ್ ಬಣದ ವಿರೋಧವಿದೆ. ಹೀಗಾಗಿ, ಇಬ್ಬರನ್ನೂ ಜೆಡಿಎಸ್‌ಗೆ ಸೆಳೆಯಲು ಇಬ್ರಾಹಿಂ ಗಾಳ ಹಾಕಿದ್ದಾರೆ. ಇದೇ ರೀತಿ ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ ಭಾಗದ ಕೆಲವು ನಾಯಕರನ್ನು ಇಬ್ರಾಹಿಂ ಸಂಪರ್ಕಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಜಮೀರ್ ಗೆ ಶಾಕ್
ಸಿ.ಎಂ.ಇಬ್ರಾಹಿಂ ಅವರ ಆಹ್ವಾನದಿಂದ ಶಾಕ್ ಆದ ಜಮೀರ್ ಅಹಮದ್, ನಾನು ಜೆಡಿಎಸ್‌ನಲ್ಲಿದ್ದು ಕಾಂಗ್ರೆಸ್ ಸೇರಿದ್ದು ಎಂದು ಹೇಳಿದಾಗ, ನಾನೂ ಅಲ್ಲೇ ಇದ್ದು ಬಂದಿದ್ದು ಅಲ್ವಾ. ಈಗ ಇಲ್ಲಿ ನಮಗ್ಯಾರಿಗೂ ಸೆಟ್ ಆಗುತ್ತಿಲ್ಲ. ಟಿಕೆಟ್ ಹಂಚಿಕೆ ಸಂದರ್ಭ ದಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಮುಸುಕಿನ ಗುದ್ದಾಟದಲ್ಲಿ ನಾವು ಬಲಿ ಪಶುವಾಗುತ್ತೇವೆ. ಹೀಗಾಗಿ, ಯೋಚಿಸಿ ಎಂದು ಸಲಹೆ ನೀಡಿದರು. ಆದರೆ, ಜಮೀರ್ ಅಹಮದ್ ಯಾವುದೇ ಭರವಸೆ ನೀಡದೆ ವಾಪಸ್ ಆದರು ಎಂದು ಹೇಳಲಾಗಿದೆ.
ಇದನ್ನೂ ಓದಿ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ: ಶಿಕ್ಷಣ ವಂಚಿತ 652 ಮಕ್ಕಳು
ಸಿ.ಎಂ.ಇಬ್ರಾಹಿಂ ಮೂಲಕ ಕಾಂಗ್ರೆಸ್‌ನಲ್ಲಿರುವ ಅತೃಪ್ತ ಹಾಗೂ ಅಧಿಕಾರ ವಂಚಿತ ಮುಸ್ಲಿಂ ಸೇರಿ ಅಹಿಂದ ನಾಯಕರನ್ನು ಜೆಡಿಎಸ್‌ಗೆ ಸೆಳೆದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಯಸಿದ ಕ್ಷೇತ್ರಗಳಲ್ಲಿ ಟಿಕೆಟ್ ನೀಡಲು ಚಿಂತನೆ ನಡೆಸಿದೆ. ಪಂಚರಾಜ್ಯ ಚುನಾವಣೆ ಫಲಿತಾಂಶವನ್ನೇ ಮುಂದಿಟ್ಟು ಕಾಂಗ್ರೆಸ್ ಪಕ್ಷದ ಅಹಿಂದ ನಾಯಕರನ್ನು ಜೆಡಿಎಸ್‌ಗೆ ಸೆಳೆಯಲು ಇಬ್ರಾಹಿಂ ಕಸರತ್ತು ನಡೆಸಿದ್ದು ಇತ್ತೀಚೆಗಿನ ಪ್ರವಾಸ ಸಂದರ್ಭದಲ್ಲಿ ಹಲವರ ಜತೆ ಮೊದಲ ಹಂತದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.