PM Modi ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು
ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿ ನೋಡಿಲ್ಲ
Team Udayavani, Jun 26, 2023, 7:25 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ನರೇಂದ್ರ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿರಲಿಲ್ಲ ಎಂದಿದ್ದಾರೆ.
“ನ ಖಾವೂಂಗ, ನ ಖಾನೆ ದೂಂಗ’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಕರ್ನಾಟಕದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ರಾರಾಜಿಸಿತು. ಮೋದಿಯವರ ಆ ಮಾತು ಏನಾಯಿತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ “ಮಹಾ ನಿರ್ಧಾರ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದಂತೆ ಬಿಜೆಪಿ ವಿರುದ್ಧ ಹೋರಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
ದೀನ ದಲಿತರ ಹಾಗೂ ಬಡವರ ಏಳಿಗೆಗಾಗಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಹಾಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವ ಸಲುವಾಗಿ ದೇಶದಲ್ಲಿ ಬಿಜೆಪಿಯೇತರ ಸರಕಾರ ಬರಲೇಬೇಕು ಎಂದರು.
ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ವಿದೇಶದಲ್ಲಿ ಕಪ್ಪುಹಣವನ್ನು ತಂದು ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ರೂ.ನೀಡುತ್ತೇವೆಂದಿದ್ದ ಅವರ ಮಾತು ಸುಳ್ಳಾಯಿತು. 9 ವರ್ಷದಲ್ಲಿ 18 ಕೋಟಿ ರೂ. ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ ಹೊಸ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಯುವಕರು ಕಳೆದುಕೊಳ್ಳುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಸಂವಿಧಾನ ರಕ್ಷಣೆಗಾಗಿ ಶಪಥ ಮಾಡಬೇಕು
ಸಾಂಗ್ಲಿ ಜಿಲ್ಲೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದು, ಪ್ರಮುಖ ರಾಷ್ಟ್ರ ನಾಯಕರನ್ನು ದೇಶಕ್ಕೆ ನೀಡಿದೆ. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕತೃì. ಈ ಸಂವಿಧಾನವಿರದಿದ್ದರೆ ಸಮಾಜದ ಶೋಷಿತರು, ದೀನದಲಿತರು, ಅಲ್ಪಸಂಖ್ಯಾಕರು ದೇಶದ ರಾಜಕಾರಣದಲ್ಲಿ, ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸಿಗರು ಸಂವಿಧಾನ ಬದಲಾಯಿಸಲು ಬಿಡಬಾರದು ಎಂಬ ಶಪಥ ಮಾಡಬೇಕು. ದೇಶದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿದ್ದು, ಅವರನ್ನು ಕಿತ್ತೂಗೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಾಸಕಾಂಗ ಪಕ್ಷದ ನಾಯಕ ಬಾಳಾ ಸಾಹೇಬ್ ತೋರತ್, ಕೇಂದ್ರದ ಮಾಜಿ ಸಚಿವ ಪೃಥ್ವೀರಾಜ್ ಚೌಹಾಣ್, ಶಾಸಕರಾದ ವಿಕ್ರಂ ಸಾವಂತ್, ವಿಶ್ವಜಿತ್ ಕದಂ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದಿಂದ ದ್ವೇಷ ರಾಜಕಾರಣ
ಬಡವರಿಗೆ ಅಕ್ಕಿ ನೀಡಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಆದರೆ ಅಕ್ಕಿ ದಾಸ್ತಾನಿದ್ದರೂ ಅಕ್ಕಿ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಕರ್ನಾಟಕಕ್ಕೆ ಅಕ್ಕಿ ನೀಡಲು ಒಪ್ಪುತ್ತಿಲ್ಲ. ಈ ಮೂಲಕ ಬಿಜೆಪಿ ಬಡವರ ವಿರೋಧಿಗಳು ಎಂಬುದು ನಿರೂಪಿತವಾಗಿದೆ. ಆದರೆ ಈ ಬಾರಿಯೂ ರಾಜ್ಯದ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಕಾಂಗ್ರೆಸ್ ಅನುಷ್ಠಾನಗೊಳಿಸಲಿದೆ ಎಂದರು.
ಮೋದಿ ಜನಪ್ರಿಯತೆ ಮಸುಕು
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮಸುಕಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಪ್ರಧಾನಿ ಮೋದಿಯವರು ಹಾಗೂ ಕೇಂದ್ರ ಮಂತ್ರಿಮಂಡಲದ ಅನೇಕರು ರಾಜ್ಯಕ್ಕೆ ಭೇಟಿ ನೀಡಿದರು. ಆದರೂ ಕರ್ನಾಟಕದಲ್ಲಿ ಬಿಜೆಪಿ ಸೋತಿರುವುದು ನರೇಂದ್ರ ಮೋದಿಯವರ ಜನಪ್ರಿಯತೆ ಮಸುಕಾಗುತ್ತಿದೆ ಎಂಬುದನ್ನು ಸಂಕೇತಿಸುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು. ರಾಜ್ಯ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ, ಜನವಿರೋಧಿಯಾಗಿತ್ತು. ಕೇವಲ ಪ್ರಧಾನಿ ಮೋದಿಯವರನ್ನು ನಂಬಿ ಚುನಾವಣೆ ಗೆಲ್ಲಬಹುದೆಂಬ ಬಿಜೆಪಿ ನಂಬಿಕೆ ಹುಸಿಯಾಯಿತು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.