PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ: ಸಿಎಂ ಸಿದ್ದರಾಮಯ್ಯ
2023ರಲ್ಲಿ ಇದು ಸಾಬೀತು, ನಮ್ಮ ಗ್ಯಾರಂಟಿಯೇ ಗಟ್ಟಿ; ರಾಜ್ಯದಲ್ಲಿ 18-19 ಕ್ಷೇತ್ರ ಗೆಲ್ಲುತ್ತೇವೆ
Team Udayavani, May 5, 2024, 7:20 AM IST
ಬೆಂಗಳೂರು: ರಾಜ್ಯದಲ್ಲಿ ಮೋದಿ ಅಲೆ ಎಲ್ಲಿಯೂ ಕಾಣಿಸುತ್ತಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಕಡೆಗಳಲ್ಲೆಲ್ಲ ಕಾಂಗ್ರೆಸ್ ಗೆದ್ದಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಈಗ ಇರುವುದು “ಗ್ಯಾರಂಟಿ ಅಲೆ ಮಾತ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ 18ರಿಂದ 19 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವ ಅವರು ಕೇಂದ್ರದಲ್ಲಿ ಸರಕಾರ ರಚನೆ ಮಾಡುವುದಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟ ಗಳಿಸಲಿದೆ ಎಂದಿದ್ದಾರೆ.ಗ್ಯಾರಂಟಿಗಳಿಂದ ಜನತೆ ಖುಷಿಯಾಗಿದ್ದಾರೆ. ಲೋಕಸಭೆ ಚುನಾವಣೆಯ ಅನಂತರ ಗ್ಯಾರಂಟಿ ಸ್ಥಗಿತಗೊಳ್ಳುತ್ತದೆ ಎಂಬುದು ಬಿಜೆಪಿಯವರ ಸುಳ್ಳು ಆರೋಪ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದರು.
2ನೇ ಹಂತದ ಲೋಕಸಮರದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಎಂ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಎರಡನೇ ಹಂತದ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಿಮ್ಮದು?
ಈಗಾಗಲೇ ಮತದಾನ ನಡೆದಿರುವ 14 ಕ್ಷೇತ್ರಗಳ ಪೈಕಿ 8ರಿಂದ 9 ಸ್ಥಾನಗಳನ್ನು ಗೆಲ್ಲುತ್ತೇವೆ. ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಇನ್ನೂ ಮತದಾನ ನಡೆಯಬೇಕಿದೆ. ಈ ಹಂತದಲ್ಲಿ 10ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಒಟ್ಟು 18ರಿಂದ 19 ಸ್ಥಾನಗಳನ್ನು ಗೆಲ್ಲುತ್ತೇವೆ. ಇನ್ನು ದೇಶದ 543 ಸ್ಥಾನಗಳ ಪೈಕಿ ಕಾಂಗ್ರೆಸ್ 330 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಉಳಿದೆಡೆ ಐಎನ್‌ಡಿಐಎ ಮಿತ್ರಪಕ್ಷಗಳು ಸ್ಪರ್ಧಿಸಿವೆ. ಪಶ್ಚಿಮ ಬಂಗಾಲ, ತೆಲಂಗಾಣ, ಆಂಧ್ರಪ್ರದೇಶ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಮಿತ್ರಪಕ್ಷದ ಸದಸ್ಯರು ಗೆದ್ದು ನಮ್ಮನ್ನು ಬೆಂಬಲಿಸಲಿದ್ದಾರೆ. ಕೇಂದ್ರದಲ್ಲಿ ಸರಕಾರ ರಚನೆ ಮಾಡಲು ಬೇಕಿರುವ ಸಂಖ್ಯೆಗಿಂತ ಹೆಚ್ಚು ಸ್ಥಾನಗಳು ಬರಲಿವೆ.
ರಾಷ್ಟ್ರಮಟ್ಟದಲ್ಲಿ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಐಎನ್‌ಡಿಐಎ ಎಂಬ ಹೆಸರಿಟ್ಟು ನಾಯಕರನ್ನೇ ಆಯ್ಕೆ ಮಾಡಲಿಲ್ಲವೇಕೆ? ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು?
ಕಾಂಗ್ರೆಸ್ ನೇತೃತ್ವದಲ್ಲಿ ಐಎನ್‌ಡಿಐಎ ಕೂಟ ಇದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷರು. ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಬಹುಮತ ಬಂದ ಅನಂತರ ತೀರ್ಮಾನ ಮಾಡುತ್ತಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮಾಡಿದ ಅನಂತರ ಇವೆಲ್ಲ ನಿರ್ಣಯ ಆಗುವಂಥದ್ದು. ಬಿಜೆಪಿಯವರು ಎಲ್ಲ ಕಡೆ ಚುನಾವಣೆಗೆ ಮುನ್ನ ಸಿಎಂ ಅಭ್ಯರ್ಥಿ ಘೋಷಿಸಿದ್ದರೇ? ಅವರಿಗೆ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ, ಹಾಗಾಗಿ ಮೋದಿ ಹೆಸರು ಹೇಳುತ್ತಾರೆ ಅಷ್ಟೇ. ಸಂಸದೀಯ ಮಂಡಳಿಯಲ್ಲಿ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳುವ ವಿಚಾರ. ಸಂಸದರೇ ಆಯ್ಕೆಯಾಗದೆ ಪ್ರಧಾನಿ ಅಭ್ಯರ್ಥಿ ಆಯ್ಕೆ ಹೇಗೆ ಸಾಧ್ಯ?
ದೇಶದೆಲ್ಲೆಡೆ ಮೋದಿ ಅಲೆ ಇದೆ ಎಂದು ಬಿಜೆಪಿ ಹೇಳುತ್ತದೆ. ನೀವು ಗ್ಯಾರಂಟಿ ಅಲೆ ಇದೆ ಎನ್ನುತ್ತೀರಿ. ಎರಡರಲ್ಲಿ ಯಾವುದು ಗಟ್ಟಿ?
ಮೋದಿ ಅಲೆ ಇಲ್ಲವೇ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಹೋದಲ್ಲೆಲ್ಲ ನಾವು ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇವೆ. ಸೇಡಂಗೆ ಹೋಗಿದ್ದರು, ಶರಣ ಪ್ರಕಾಶ್ ಪಾಟೀಲ್ 40 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಬೆಳಗಾವಿಗೆ ಹೋದರು, ನಂಜನಗೂಡಿಗೆ ಹೋದರು. ಆದರೆ ಎಲ್ಲ ಕಡೆ ನಾವೇ ಗೆದ್ದಿದ್ದೇವಲ್ಲ? ಗ್ಯಾರಂಟಿ ಅಲೆಯೇ ಕರ್ನಾಟಕದಲ್ಲಿ ಹೆಚ್ಚು ಇದೆ. ಗ್ಯಾರಂಟಿ ಯೋಜನೆಗಳನ್ನು ನಾವು ಮಾಡಿರುವುದರಿಂದ ಮತ್ತು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿರುವುದರಿಂದ ಜನರೆಲ್ಲರೂ ಖುಷಿಯಾಗಿದ್ದಾರೆ. ಕಾಂಗ್ರೆಸ್ ಬಗ್ಗೆ ನಂಬಿಕೆ, ವಿಶ್ವಾಸ ಬಂದಿದೆ. ಕರ್ನಾಟಕದಲ್ಲಿ ನಾವು 136 ಸ್ಥಾನ ಹೇಗೆ ಗೆದ್ದೆವು? ಗ್ಯಾರಂಟಿ ಮೇಲೆ ತಾನೇ? ಬಿಜೆಪಿಯವರೂ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದರು. ಮಧ್ಯಪ್ರದೇಶದಲ್ಲಿ ಘೋಷಿಸಿದರು. ರಾಜಸ್ಥಾನದಲ್ಲಿ ಘೋಷಿಸಲಿಲ್ಲವೇ? ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಸುಳ್ಳು ಹೇಳುವುದೇ ಮೋದಿ ಗ್ಯಾರಂಟಿ.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆಯೇ?
ಬಜೆಟ್‌ನಲ್ಲಿ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಅನುದಾನ ಮೀಸಲಿಟ್ಟಿದ್ದೇವೆ. ಅದು ಹೇಗೆ ನಿಂತು ಹೋಗಿಬಿಡುತ್ತದೆ? ಏಕೆ ನಿಲ್ಲುತ್ತದೆ? ಜನರನ್ನು ತಪ್ಪು ದಾರಿಗೆ ಎಳೆಯುವುದೇ ಬಿಜೆಪಿಯವರ ಕೆಲಸ. ಆರಂಭದಲ್ಲಿ ಗ್ಯಾರಂಟಿ ಜಾರಿಯಾಗುವುದಿಲ್ಲ ಎನ್ನುತ್ತಿದ್ದರು. ಖಜಾನೆ ಖಾಲಿಯಾಗುತ್ತದೆ ಎನ್ನುತ್ತಿದ್ದರು. ಜಾರಿಯಾದ ಅನಂತರ ಸರಿಯಾಗಿ ಅನುಷ್ಠಾನ ಮಾಡಿಲ್ಲ ಎಂದರು. ಜನರಿಗೆ ತಲುಪಿದ ಬಳಿಕ ಚುನಾವಣೆಯ ಅನಂತರ ನಿಲ್ಲಿಸಿಬಿಡುತ್ತಾರೆ ಎನ್ನುತ್ತಿದ್ದಾರೆ. ಬರೇ ಸುಳ್ಳು ಹೇಳುತ್ತಿದ್ದಾರೆ. 52,009 ಕೋಟಿ ರೂ.ಗಳನ್ನು ಬಜೆಟ್ ಅನುಷ್ಠಾನಕ್ಕಾಗಿ ಇಟ್ಟಿದ್ದೇನೆ. ಮುಂದಿನ ವರ್ಷ ಸ್ವಲ್ಪ ಜಾಸ್ತಿ ಆಗಬಹುದು. ಬಂಡವಾಳ ವೆಚ್ಚ ಕಳೆದ ಬಾರಿಗಿಂತ ಈ ಬಾರಿ ಜಾಸ್ತಿ ಆಗಿದೆ. ಅಭಿವೃದ್ಧಿಗೆ ಯಾವ ಕಾರಣಕ್ಕೂ ಹಿನ್ನಡೆ ಆಗುವುದಿಲ್ಲ.
ಬರ ಪರಿಹಾರದ ವಿಚಾರದಲ್ಲಿ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿದಿದ್ದೀರಿ, ಸುಪ್ರೀಂ ಕೋರ್ಟ್‌ಗೆ ಹೋಗಿದ್ದೀರಿ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಕ್ಕೂ ಸಂಘರ್ಷವೇ ಪರಿಹಾರವೇ?
ಕೇಂದ್ರ ಸರಕಾರದ ಜತೆಗೆ ಸಂಘರ್ಷ ಎನ್ನುವುದೇ ತಪ್ಪು. ನಮಗೆ ಆದ ಅನ್ಯಾಯದ ವಿರುದ್ಧ ಕೋರ್ಟ್‌ಗೆ ಹೋಗಿದ್ದೇವೆ. ಅವರು ಕೊಟ್ಟಿದ್ದರೆ ನಾವೇಕೆ ಕೋರ್ಟ್‌ಗೆ ಹೋಗುತ್ತಿದ್ದೆವು? ನಾವು 17,172 ಕೋಟಿ ರೂ. ಪರಿಹಾರ ಕೇಳಿದ್ದೆವು. ನಾನು, ನಮ್ಮ ಸಚಿವರು ಭೇಟಿ ಮಾಡಿ ಪತ್ರ ಬರೆದರೂ ಕೊಡಲಿಲ್ಲ. ಏಳು ತಿಂಗಳಾದರೂ ಬರ ಪರಿಹಾರ ಸಿಗದಿದ್ದಾಗ ಕಾನೂನು ಹೋರಾಟವೊಂದೇ ಪರ್ಯಾಯ. ಸುಪ್ರೀಂ ಕೋರ್ಟ್‌ಗೆ ಹೋದೆವು. ಕೊಡುವುದಾಗಿ ಒಪ್ಪಿಕೊಂಡು ಕಡಿಮೆ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಹೋಗದೆ ಇದ್ದಿದ್ದರೆ ಅದನ್ನೂ ಕೊಡುತ್ತಿರಲಿಲ್ಲ. ಇದು ದ್ವೇಷದ ರಾಜಕಾರಣ ಅಷ್ಟೇ. ಕಾಂಗ್ರೆಸ್ ಸರಕಾರದ ಮೇಲೆ ಕೆಟ್ಟ ಹೆಸರು ಬರಬೇಕು, ರೈತರಿಗೆ ಬರ ಪರಿಹಾರ ಕೊಡಲಿಲ್ಲ ಎಂದಾಗಬೇಕು, ಬರಗಾಲ ಸರಿಯಾಗಿ ನಿಭಾಯಿಸಲಿಲ್ಲ ಎಂದಾಗಬೇಕು, ಲೋಕಸಭೆ ಚುನಾವಣೆ ಮೇಲೆ ಅದು ಪರಿಣಾಮ ಬೀರಬೇಕು ಎಂಬುದು ಕೇಂದ್ರದ ಉದ್ದೇಶ. ಈಗ 3,454 ಕೋಟಿ ರೂ.ಗಳನ್ನು ಹೇಗೆ ಕೊಟ್ಟರು? ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ ತಾನೇ ಕೊಟ್ಟಿರುವುದು? ಅದನ್ನು ಮೊದಲೇ ಏಕೆ ಕೊಡಲಿಲ್ಲ? ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಅನಂತರ ಏಕೆ ಕೊಟ್ಟರು?
ಲೋಕಸಭೆ ಚುನಾವಣೆಯ ಅನಂತರ ರಾಜ್ಯ ಸರಕಾರ ಬೀಳುತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆಯಲ್ಲ?
ನನ್ನ ಮತ್ತು ಡಿಸಿಎಂ ಮಧ್ಯೆ ಸಂಬಂಧ ಚೆನ್ನಾಗಿಲ್ಲ ಎಂದು ಯಾರು ಹೇಳಿದ್ದು? ಅದು ಬಿಜೆಪಿಯವರ ಸುಳ್ಳು ಆರೋಪ ಅಷ್ಟೇ. ಇಬ್ಬರೂ ಜತೆಯಾಗಿ ಪ್ರಚಾರ ಮಾಡುತ್ತಿದ್ದೇವೆ. ಲೋಕಸಭೆ ಚುನಾವಣೆಯ ಅನಂತರ ರಾಜ್ಯ ಸರಕಾರ ಏಕೆ ಬೀಳುತ್ತದೆ? ಬಿಜೆಪಿಯವರಷ್ಟು ಕಚ್ಚಾಟ ನಮ್ಮಲ್ಲಿದೆಯೇ? ಕಚ್ಚಾಟ ಇಲ್ಲದೇ ಇದ್ದಿದ್ದರೆ ಈಶ್ವರಪ್ಪ ಏಕೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದರು? ಬಿಜೆಪಿ ಅಧ್ಯಕ್ಷರಾಗಿದ್ದವರು, ಆರೆಸ್ಸೆಸ್ ಕಟ್ಟಾಳುವಾದ ಈಶ್ವರಪ್ಪನೇ ಸ್ವತಂತ್ರವಾಗಿ ಸ್ಪರ್ಧಿಸಿಲ್ಲವೇ? ಅವರ ಮೈತ್ರಿಯಲ್ಲೂ ಅದೇ ಪರಿಸ್ಥಿತಿ ಇದೆ. ಜಾತ್ಯತೀತ ಮತದಾರರು ಜಾತ್ಯತೀತ ಪಕ್ಷಕ್ಕೆ ಮತ ಹಾಕುತ್ತಾರೆ. ಕೋಮುವಾದಿಗಳ ಜತೆಗೆ ಸೇರಿರುವ ಅವರಿಗೇಕೆ ಮತ ಹಾಕುತ್ತಾರೆ?
ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿಮ್ಮ ಆಪ್ತರಾದ ಎಚ್.ಡಿ. ರೇವಣ್ಣ ಅವರ ಹೆಸರೂ ಪ್ರಕರಣದಲ್ಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಗುರಿ ಮಾಡಿ ರಾಜಕೀಯವಾಗಿ ಮುಗಿಸಲು ಮಾಡಿರುವ ಸಂಚು ಆರೋಪಗಳಿವೆ. ಇದಕ್ಕೆ ನಿಮ್ಮ ಉತ್ತರವೇನು?
ಎಚ್.ಡಿ. ರೇವಣ್ಣ ನನ್ನ ಜತೆಗಿದ್ದವರು. ಕುಮಾರಸ್ವಾಮಿಯೂ ಜತೆಗಿದ್ದವರು. ಜಿ.ಟಿ. ದೇವೇಗೌಡನೂ ಜತೆಗಿದ್ದವನು. ಎಲ್ಲ ಶಾಸಕರಂತೆ ರೇವಣ್ಣ ಗೊತ್ತಿರುವವನಷ್ಟೇ. ಕಾನೂನು ಬಂದಾಗ, ತಪ್ಪಿತಸ್ಥರು ಎಂದಾದಾಗ ಕಾನೂನು ಏನು ಹೇಳುತ್ತದೆಯೋ ಅದೇ ರೀತಿ ಮಾಡುವುದು. ಕಾನೂನಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಘಟನೆ ಯಾವಾಗಲೇ ನಡೆದಿರಲಿ, ಯಾವಾಗ ದೂರು ಬರುತ್ತದೋ ಆಗ ಕಾನೂನು ಪ್ರಕ್ರಿಯೆ ಆರಂಭವಾಗುತ್ತದೆ. ಮಹಿಳಾ ಆಯೋಗಕ್ಕೆ ಬಂದ ದೂರಿನ ಆಧಾರದ ಮೇಲೆ ಸರಕಾರಕ್ಕೆ ಪತ್ರ ಬಂತು. ಅದರ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಕದ್ದು ದೇಶ ಬಿಟ್ಟು ಓಡಿ ಹೋಗಿದ್ದಾನೆ. ನಾನೂ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಪಾಸ್‌ಪೋರ್ಟ್, ವೀಸಾರದ್ದತಿಗೆ ಆಗ್ರಹಿಸಿದ್ದೇನೆ. ಸಂತ್ರಸ್ತರಿಗೆ ಅಗತ್ಯ ಬೆಂಬಲ ಕೊಡಲು ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ. ರಕ್ಷಣೆ ಕೊಡುತ್ತಿದ್ದೇವೆ.
-ಸಾಮಗ ಶೇಷಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.