Lok Sabha Electionಸೋಲಿಗೆ ಕಾಂಗ್ರೆಸ್ ನಾಯಕರಿಂದ ವಿವರಣೆ
ಕಾಂಗ್ರೆಸ್ ಸತ್ಯಶೋಧನ ಸಮಿತಿ ಮುಂದೆ ಬಾಗಲಕೋಟೆ ಟಿಕೆಟ್ ಆಕಾಂಕ್ಷಿ ಸಮರ್ಥನೆ
Team Udayavani, Jul 12, 2024, 11:39 PM IST
ಬೆಂಗಳೂರು: ಒಂದು ದಿನದ ಹಿಂದಷ್ಟೇ ಸಚಿವ ಶಿವಾನಂದ ಪಾಟೀಲ, ಸತ್ಯಶೋಧನ ಸಮಿತಿ ಮುಂದೆ ಬಾಗಲಕೋಟೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರ ಸಂಪೂರ್ಣ ಸಹಕಾರ ಸಿಗದಿದ್ದರಿಂದ ಸೋಲಾಯಿತು ಅಂತ ದೂರು ನೀಡಿದ್ದರು. ಮರುದಿನವೇ ಅದೇ ಬಾಗಲಕೋಟೆಯಲ್ಲಿ ನನಗೆ ಟಿಕೆಟ್ ನೀಡಿದ್ದರೆ ಗೆಲ್ಲುತ್ತಿದ್ದೆವು.
ಅನಾಯಾಸವಾಗಿ ಕಳೆದುಕೊಂಡಂತಾಯಿತು’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸಮಿತಿ ಮುಂದೆ ಸಮರ್ಥನೆ ನೀಡಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮುಂದುವರಿದ ಪಕ್ಷದ ಸತ್ಯಶೋಧನ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳನ್ನೂ ಆಹ್ವಾನಿಸಲಾಗಿತ್ತು. ಈ ವೇಳೆ ಮಾತನಾಡಿದ ವೀಣಾ ಕಾಶಪ್ಪನವರ, ಬಾಗಲಕೋಟೆಯಲ್ಲಿ ನಾನು ಆಕಾಂಕ್ಷಿಯಾಗಿದ್ದೆ. ಒಂದು ವೇಳೆ ನನಗೆ ಅವಕಾಶ ನೀಡಿದ್ದರೆ, ಗೆಲ್ಲುವ ಅವಕಾಶಗಳು ಹೆಚ್ಚಿದ್ದವು. 2019ರ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲಾಗಿತ್ತು. ಈ ಬಾರಿ ಪೂರ್ವಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಟಿಕೆಟ್ ಸಿಗಲಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಇದಲ್ಲದೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೂ ತಮ್ಮನ್ನು ಪರಿಗಣಿಸಬೇಕು. ಸಂಘಟನೆಗೆ ಶ್ರಮಿಸುತ್ತೇನೆ. ಪ್ರಬಲ ಸಮುದಾಯವನ್ನು ತಾವು ಪ್ರತಿನಿಧಿಸುತ್ತಿದ್ದು ಇದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದೂ ಸಮಿತಿಯ ಗಮನ ಸೆಳೆದಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ವಿಧಾನ ಪರಿಷತ್ತಿನ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಸತ್ಯಶೋಧನ ಸಮಿತಿಯನ್ನು ಭೇಟಿ ಮಾಡಿತು. ಈ ವೇಳೆ ಮಾತನಾಡಿದ ಸಮಿತಿ ನಾಯಕರು, ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರಬಹುದು, ಪದವೀಧರ ಕ್ಷೇತ್ರದ ಚುನಾವಣೆ ಇರಬಹುದು, ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಇಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7ರಲ್ಲಿ ಗೆದ್ದುಕೊಂಡಿದೆ. ಇಷ್ಟಾದರೂ ಈ ಲೋಕಸಭೆ ಚುನಾವಣೆಯಲ್ಲಿ ಸೋಲು ಹೇಗೆ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ-ಜೆಡಿಎಸ್ ಮೈತ್ರಿ ಸೇರಿದಂತೆ ಸೋಲಿಗೆ ಹಲವಾರು ಅಂಶಗಳು ಪ್ರಭಾವ ಬೀರಿದವು’ ಎಂದು ವಿವರಿಸಿದ್ದಾರೆ.
ನೇಹಾ ಹತ್ಯೆಯಿಂದ ಕಾಂಗ್ರೆಸ್‌ಗೆ ಹಿನ್ನಡೆ: ವಿನಯ್
ಸಮಿತಿ ಭೇಟಿಯಾದ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂ ಎಸ್‌ಡಿ) ಅಧ್ಯಕ್ಷ ವಿನಯ ಕುಲಕರ್ಣಿ, ಧಾರವಾಡ ಜಿಲ್ಲೆಯಲ್ಲಿ ಯಾರೂ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ನೇಹಾ ಹತ್ಯೆ ಪ್ರಕರಣದಿಂದ ನಮಗೆ ಹಿನ್ನಡೆಯಾಯಿತು. ಈ ಪ್ರಕರಣದಲ್ಲಿ ಬಿಜೆಪಿಯವರು ರಾಜಕಾರಣ ಮಾಡಿದರು. ಹತ್ಯೆಯಾದ ನೇಹಾ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ಆಗಿದ್ದರೂ ಬಿಜೆಪಿಯವರು ಅವರ ದಾರಿ ತಪ್ಪಿಸಿದರು ಎಂದು ಆರೋಪಿಸಿದರು. ಧಾರವಾಡದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಅನ್ನುವುದಿತ್ತು. ಗ್ಯಾರಂಟಿಗಳು ಕೈಹಿಡಿಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಉಲ್ಟಾ ಆಯಿತು. ಹಿನ್ನಡೆಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದನ್ನು ಸಮಿತಿ ಗಮನಕ್ಕೆ ತರಲಾಗಿದೆ ಎಂದರು.
ಯಾವ ಹೊಂದಾಣಿಕೆ ರಾಜಕಾರಣವೂ ನಡೆದಿಲ್ಲ: ಡಿಕೆಶಿ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಯಾವ ಹೊಂದಾಣಿಕೆ ರಾಜಕಾರಣವೂ ನಡೆದಿಲ್ಲ. ಎಲ್ಲವೂ ಸುಳ್ಳು. ಕಾರ್ಯಕರ್ತರೆಲ್ಲರೂ ಒಟ್ಟಾಗಿ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆ ಹೊತ್ತಿನಲ್ಲಿ ತಳಮಟ್ಟದ ಪರಿಸ್ಥಿತಿಯನ್ನು ಸರಿಯಾಗಿ ಅರಿಯಲು ಆಗಲಿಲ್ಲ. ಎಲ್ಲ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿ ಎಂದು ನಾವೇ ಒಂದಿಷ್ಟು ಸಚಿವರಿಗೆ ತಮ್ಮ ಕುಟುಂಬದ ಸದಸ್ಯರನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳಿದ್ದೆವು. ಇದರಲ್ಲಿ ಒಂದಷ್ಟು ಜನ ಗೆದ್ದಿದ್ದಾರೆ. ಒಂದಷ್ಟು ಜನ ಸೋತಿದ್ದಾರೆ. ಮುಂದಕ್ಕೆ ಇವರು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಎಲ್ಲ ಕಾರ್ಯಕರ್ತರು, ಮುಖಂಡರು, ಗೆದ್ದವರು, ಸೋತವರು ಎಲ್ಲರು ಸೇರಿ ಎಐಸಿಸಿ ಸತ್ಯಶೋಧನ ಸಮಿತಿಗೆ ಪರಿಸ್ಥಿತಿ ಅರಿಯಲು ಅಹವಾಲು ಸಲ್ಲಿಸಿದ್ದೆವು. ಅದರಂತೆ ಎಲ್ಲರೂ ಸಮಿತಿ ಮುಂದೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ವಿಧಾನಸಭಾ ಕಲಾಪ ಬರುತ್ತಿರುವ ಕಾರಣ ಬಿಜೆಪಿಯವರು ಪ್ರತಿಭಟನೆ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಸದನದಲ್ಲಿ ಏನು ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ.
-ಡಿ.ಕೆ.ಶಿವಕುಮಾರ್, ಡಿಸಿಎಂ
ಸತ್ಯ ಶೋಧನ ಸಮಿತಿ
ಭೇಟಿಯಾಗದ ಸಿಎಂ
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಡೆಯ ಪರಾಮರ್ಶೆಗೆ ಸಂಬಂಧಿಸಿದಂತೆ ಆಗಮಿಸಿದ್ದ ಎಐಸಿಸಿಯ ಸತ್ಯಶೋಧನ ಸಮಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂ ದಿನ ಭೇಟಿಯಾಗಲಿಲ್ಲ. ಶುಕ್ರವಾರದ ಮುಖ್ಯಮಂತ್ರಿಗಳ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸತ್ಯಶೋಧನ ಸಮಿತಿ ಭೇಟಿಗೆ ಮಧ್ಯಾಹ್ನ 12 ಗಂಟೆಗೆ ಸಮಯ ನಿಗದಿಯಾಗಿತ್ತು. ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ನೀರು ಬಿಡುವಂತೆ ನೀಡಿದ ನಿರ್ದೇಶನ ಸೇರಿ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪರಿಷ್ಕೃತ ಕಾರ್ಯಕಲಾಪ ಪಟ್ಟಿ ಬಿಡುಗಡೆ ಮಾಡಲಾಯಿತು. ಅದರಂತೆ ಸಮಿತಿ ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.