ಕಾಂಗ್ರೆಸ್ ಶಾಸಕರ ರಿವರ್ಸ್ ಆಪರೇಷನ್ ಕಸರತ್ತು
ರಾತ್ರೋರಾತ್ರಿ 'ಕಾವೇರಿ'ಯಲ್ಲಿ ಗೇಮ್‌ಪ್ಲಾನ್ ; ಮೂವರಿಗೆ ಸಚಿವಗಿರಿ, ಉಳಿದವರಿಗೆ 'ಇಷ್ಟಾರ್ಥ' ಈಡೇರಿಕೆ ಆಮಿಷ
Team Udayavani, May 28, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ನಿಟ್ಟಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದ ಕಾಂಗ್ರೆಸ್ ಶಾಸಕರನ್ನು ರಾತ್ರೋರಾತ್ರಿ ರಿವರ್ಸ್ ಆಪರೇಷನ್ ಕಸರತ್ತು ಮಾಡಿ ‘ಬೇಲಿ’ ಹಾರದಂತೆ ಕಟ್ಟಿಹಾಕಲಾಗಿದೆ.
ಹದಿನಾಲ್ಕು ಶಾಸಕರು ಬಿಜೆಪಿಗೆ ಹೋಗಲು ಸಿದ್ಧರಾಗಿ ಅತ್ತ ಎರಡನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಆಪರೇಷನ್ ಕಮಲ ಕಾರ್ಯಾಚರಣೆಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿತ್ತು. ಇದರ ಮಾಹಿತಿ ಪಡೆದ ಕಾಂಗ್ರೆಸ್-ಜೆಡಿಎಸ್ ರಹಸ್ಯ ಕಾರ್ಯಾಚರಣೆ ನಡೆಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಜಮೀರ್ ಅಹಮದ್ ರಾತ್ರೋರಾತ್ರಿ ಆಪರೇಟ್ ಮಾಡಿ ಹದಿನಾಲ್ಕು ಶಾಸಕರ ಪೈಕಿ ಹನ್ನೆರಡು ಶಾಸಕರನ್ನು ಹಿಡಿದಿಟ್ಟುಕೊಂಡಿದ್ದು ಇದೆಲ್ಲ ಪ್ರಹಸನ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸದಲ್ಲೇ ನಡೆದಿದೆ.
ಬಿಜೆಪಿ ಕ್ಯಾಂಪ್ ಸೇರಲು ಸಜ್ಜಾಗಿದ್ದ ಇಬ್ಬರು ಪಕ್ಷೇತರರು ಸೇರಿ 9 ಕಾಂಗ್ರೆಸ್ ಶಾಸಕರು ಇದೀಗ ಕಾಂಗ್ರೆಸ್-ಜೆಡಿಎಸ್ ಕ್ಯಾಂಪ್‌ನಲ್ಲಿ ‘ಲಾಕ್’ ಆಗಿದ್ದಾರೆ. ಪಕ್ಷೇತರ ಶಾಸಕರಾದ ಆರ್.ಶಂಕರ್, ನಾಗೇಶ್, ಕಾಂಗ್ರೆಸ್ ಶಾಸಕರಾದ ಬಿ.ಸಿ.ಪಾಟೀಲ್, ಪ್ರತಾಪ್‌ಗೌಡ ಪಾಟೀಲ್, ಆನಂದ್‌ಸಿಂಗ್, ಕಂಪ್ಲಿ ಗಣೇಶ್, ಡಾ.ಕೆ.ಸುಧಾಕರ್, ಶಿವರಾಂ ಹೆಬ್ಟಾರ್, ಭೀಮಾ ನಾಯ್ಕ , ನಾಗೇಂದ್ರ, ಬಸವರಾಜ್ ದದ್ದಲ್, ರೋಷನ್‌ಬೇಗ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಆಪರೇಷನ್ ‘ಖೆಡ್ಡಾ’ಗೆ ಬಿದ್ದಿದ್ದರು.
ಈ ಪೈಕಿ ರಮೇಶ್ ಜಾರಕಿಹೊಳಿ, ರೋಷನ್‌ಬೇಗ್ ಹೊರತುಪಡಿಸಿ ಉಳಿದೆಲ್ಲಾ ಶಾಸಕರನ್ನು ಮತ್ತೆ ರಾತ್ರೋರಾತ್ರಿ ಆಪರೇಟ್ ಮಾಡಲಾಗಿದೆ. ಇವರಲ್ಲಿ ಇಬ್ಬರಿಂದ ಮೂವರಿಗೆ ಸಚಿವಗಿರಿ ‘ಭಾಗ್ಯ’ ದೊರೆಯಲಿದ್ದು, ಉಳಿದವರಿಗೆ ಬೇಕಾದ ಅಧಿಕಾರಿಗಳ ವರ್ಗಾವಣೆ ಸೇರಿ ‘ಇಷ್ಟಾರ್ಥ’ ನೆರವೇರಿಸುವ ‘ಭರಪೂರ’ ಕೊಡುಗೆ ಭರವಸೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಮೊದಲ ಹಂತವಾಗಿ ಖಾಲಿ ಇರುವ ಮೂರು ಸಚಿವ ಸ್ಥಾನ ಭರ್ತಿಯಾಗಲಿದ್ದು, ಎರಡನೇ ಹಂತದಲ್ಲಿ ಅಗತ್ಯವಾದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ತಲಾ ಮೂವರು ಸಚಿವರ ರಾಜೀನಾಮೆ ಪಡೆದು ಅತೃಪ್ತರಿಗೆ ಸಚಿವಗಿರಿ ಭಾಗ್ಯ ನೀಡಲು ತೀರ್ಮಾನಿಸಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ರೂಪಿಸಿರುವ ಸೂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಯೂ ಇದ್ದು, ಎಂತಹುದೇ ಪರಿಸ್ಥಿತಿಯಲ್ಲೂ ಸರ್ಕಾರ ಉಳಿಸಿಕೊಳ್ಳುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.
ಆದರೆ, ಎರಡನೇ ಹಂತದಲ್ಲಿ ಆರು ಸಚಿವರನ್ನು ಸಂಪುಟದಿಂದ ತೆಗೆಯುವಾಗ ಎಚ್ಚರವಹಿಸಿ. ಆ ಪ್ರಕ್ರಿಯೆ ಜೇನುಗೂಡಿಗೆ ಕಲ್ಲು ಎಸೆದಂತೆ ಆಗಬಾರದು ಎಂಬ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿದು ಬಂದಿದೆ. ಆದರೆ, ಹದಿನಾಲ್ಕು ಅತೃಪ್ತರಲ್ಲಿ ಮೂವರಿಗೆ ಸಚಿವಗಿರಿ ಕೊಟ್ಟರೆ ಉಳಿದ 11 ಮಂದಿ ಭರವಸೆಗಳಿಗೆ ಮಾತ್ರ ತೃಪ್ತಿಯಾಗುತ್ತಾರಾ? ಈಗ ಬಿಜೆಪಿಯತ್ತ ಹೋಗುವುದಿಲ್ಲ ಎಂದು ಒಪ್ಪಿರುವವರು ಮಾತು ಉಳಿಸಿಕೊಳ್ಳುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.
ಈ ಮಧ್ಯೆ, ರಾಜ್ಯ ಬಿಜೆಪಿಯಲ್ಲಿ ಮಾತ್ರ ಪರ್ಯಾಯ ಸರ್ಕಾರ ರಚನೆ ಆಸೆ ಇದೆ. ಆದರೆ, ಕೇಂದ್ರ ಬಿಜೆಪಿ ನಾಯಕರಿಗೆ ಹೊಸದಾಗಿ ಚುನಾ ವಣೆಗೆ ಹೋಗುವ ಚಿಂತನೆಯಿದೆ ಎಂದು ಹೇಳಲಾ ಗಿದ್ದು, ಆದರೆ, ಕಾಂಗ್ರೆಸ್, ಜೆಡಿಎಸ್ ಅಷ್ಟೇ ಅಲ್ಲದೆ ಬಿಜೆಪಿಯ ಬಹುತೇಕ ಶಾಸಕರಿಗೆ ಹೊಸದಾಗಿ ಚುನಾ ವಣೆಗೆ ಹೋಗುವ ಮನಸ್ಸಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಗೇಮ್‌ಪ್ಲಾನ್ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.