ಟಾರ್ಗೆಟ್ 150ಕ್ಕೆ ಕಾಂಗ್ರೆಸ್ ಮಾಸಿಕ ಕಾರ್ಯತಂತ್ರ ಸಭೆ
ಸಾಮೂಹಿಕ ನಾಯಕತ್ವದಡಿ ಸಮುದಾಯವಾರು ಸಮಾವೇಶಕ್ಕೆ ಸೂಚನೆ
Team Udayavani, Aug 14, 2022, 7:10 AM IST
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಪ್ರತಿ ತಿಂಗಳು ರಾಜಕೀಯ ವಿದ್ಯಮಾನ ಅವಲೋಕನ ನಡೆಸಿ ಸೂಕ್ತ ಕಾರ್ಯತಂತ್ರ ರೂಪಿಸಲು ಕೆಪಿಸಿಸಿ ತೀರ್ಮಾನಿಸಿದೆ.
ರಾಹುಲ್‌ಗಾಂಧಿ ನೀಡಿರುವ 150 ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ವಿಧಾನಸಭೆ ಕ್ಷೇತ್ರವಾರು ಅಥವಾ ಜಿಲ್ಲಾವಾರು ರಾಜಕೀಯ ಪರಿಸ್ಥಿತಿಗಳ ಸಮಾಲೋಚನೆ ನಡೆಸಿ ಅದಕ್ಕೆ ತಕ್ಕಂತೆ ಪ್ರತೀ ಹಂತದಲ್ಲೂ ತಂತ್ರಗಾರಿಕೆ ರೂಪಿಸುವುದು ಈ ಅವಲೋಕನ ಸಭೆಯ ಉದ್ದೇಶವಾಗಿದೆ.
ವಿಧಾನಸಭೆ ಹಾಗೂ ಪರಿಷತ್ ವಿಪಕ್ಷ ನಾಯಕರು, ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು, ಪ್ರಚಾರ ಸಮಿತಿ ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷರು, ಯುವ, ಮಹಿಳಾ, ಅಲ್ಪಸಂಖ್ಯಾಕರ, ಎಸ್‌ಟಿ, ಎಸ್‌ಸಿ, ಹಿಂದುಳಿದ ಘಟಕ ಗಳ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾದ ತೀರ್ಮಾನ ಕೈಗೊಳ್ಳಬೇಕಾದ ಸಂದರ್ಭ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕರೆದು ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಗೆ ಖರ್ಗೆಗೆ ಆಹ್ವಾನ?
ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಅಥವಾ ಪ್ರಮುಖ ಸಭೆ ನಡೆದರೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ತೀರ್ಮಾನ ಕೈಗೊಳ್ಳಬೇಕೆಂದು ಇತ್ತೀಚೆಗೆ ರಾಹುಲ್‌ಗಾಂಧಿ ರಾಜ್ಯ ಭೇಟಿ ಸಂದರ್ಭದಲ್ಲಿಯೂ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ, ವಿಭಾಗವಾರು ಸಮಾವೇಶ
ಸಮುದಾಯದ ಬೆಂಬಲ ಕ್ರೋಡೀಕರಣ ನಿಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಜಿಲ್ಲಾ ಹಾಗೂ ವಿಭಾಗವಾರು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಎಲ್ಲ ಕಾರ್ಯಕ್ರಮಗಳೂ ಸಾಮೂಹಿಕ ನಾಯಕತ್ವದಲ್ಲಿಯೇ ನಡೆಯಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದ ರೂಪು-ರೇಷೆ ನಿಗದಿಪಡಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನಿರಂತರ ಕಾರ್ಯಕ್ರಮ-ಸಂಘಟನೆ
224 ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಇದು ಕಡಿಮೆಯಾಗದಂತೆ ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ಸಂಘಟನೆ ಬಲಪಡಿಸಬೇಕು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎನ್ನುವ ತೀರ್ಮಾನಕ್ಕೆ ಬರಲಾಗಿದೆ.
ಬಿಜೆಪಿ-ಜೆಡಿಎಸ್‌ಗೆ ಪ್ರತಿತಂತ್ರ
ವಿಧಾನಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆ ಪ್ರಾಥಮಿಕ ಹಂತದಲ್ಲೇ ನಿವಾರಣೆ ಮಾಡಬೇಕು. ಟಿಕೆಟ್ ವಿಚಾರದಲ್ಲಿ ಆ ಗುಂಪು, ಈ ಗುಂಪು ಎಂಬುದು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಚುನಾವಣೆಗೆ ರೂಪಿಸುವ ಕಾರ್ಯತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಬೇಕು. ಅಗತ್ಯ ಬಿದ್ದರೆ ತತ್‌ಕ್ಷಣದ ಬದಲಾವಣೆಗಳನ್ನೂ ಮಾಡಬಹುದೆಂದು ಹುಬ್ಬಳ್ಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಸಮನ್ವಯ ಸಮಿತಿಗೆ ಒತ್ತಡ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಿದರೆ ಸೂಕ್ತ ಎಂಬ ಒತ್ತಡವನ್ನೂ ಹಿರಿಯ ಕಾಂಗ್ರೆಸ್ಸಿಗರು ಹೈಕಮಾಂಡ್ ಮುಂದಿಟ್ಟಿದ್ದಾರೆ. ರಾಜಕೀಯ ವ್ಯವಹಾರಗಳ ಸಮಿತಿ ಹೊರತಾಗಿ ನಿಯಮಿತವಾಗಿ ಸಭೆ ಸೇರಿ ಕೆಲವು ತೀರ್ಮಾನ ಕೈಗೊಳ್ಳಲು ಸಮನ್ವಯ ಸಮಿತಿ ಇದ್ದರೆ ಸೂಕ್ತ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಬಹುದು. ಅದಕ್ಕೆ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆಹ್ವಾನಿತರಾಗಿರಲಿದ್ದಾರೆ ಎಂದು ಹೇಳಲಾಗಿದೆ.
– ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.