ಕಾಂಗ್ರೆಸ್ ನವಸಂಕಲ್ಪ ಶಿಬಿರ: 400 ಜನ ಆಹ್ವಾನಿತರಿಗೆ ಮಾತ್ರ ಅವಕಾಶ
Team Udayavani, Jun 2, 2022, 12:49 PM IST
ಬೆಂಗಳೂರು: ಪಕ್ಷದ ಪುನಶ್ಚೇತನಕ್ಕಾಗಿ ಕೆಪಿಸಿಸಿ ಆಯೋಜಿಸಿರುವ ನವಸಂಕಲ್ಪ ಶಿಬಿರ ಗುರುವಾರ ಆರಂಭವಾಗಿದ್ದು ಸುಮಾರು 400 ಜನ ಆಹ್ವಾನಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ಹೊರ ವಲಯದ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡಾಗ, ‘ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು’ ಎಂದು ಹೇಳಿದ್ದೆ. ಈಗ ಅದು ಸಾಕಾರಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಚಿಂತನ ಮಂಥನ ಶಿಬಿರವನ್ನು 7-8 ತಿಂಗಳ ಹಿಂದೆಯೇ ನಡೆಸಲು ಯೋಚಿಸಿದ್ದೆವು. ಉಪಚುನಾವಣೆ, ಹೋರಾಟ, ಅಧಿವೇಶನ, ದೆಹಲಿ ಕಾರ್ಯಕ್ರಮ ಮತ್ತಿತರ ಕಾರಣಗಳಿಂದ ನಾಲ್ಕು ಬಾರಿ ಮುಂದೂಡಲಾಗಿತ್ತು. ಕೊಡಗು, ಹುಬ್ಬಳ್ಳಿ, ಮಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಎಐಸಿಸಿ ಕೊಟ್ಟಿರುವ ಸೂಚನೆ, ಮಾರ್ಗದರ್ಶನದ ಪ್ರಕಾರ ನಾನು ಈ ಸಭೆ ಮಾಡುತ್ತಿದ್ದೇವೆ. ಅವರ ಸೂಚನೆಯಂತೆ ಆರು ಸಮಿತಿಗಳನ್ನು ರಚಿಸಲಾಗಿದೆ ಎಂದರು.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗಬೇಕು, ಯಾವ ರೀತಿ ಹೋರಾಟ ಮಾಡಬೇಕು ಎಂದು ಉದಯಪುರ ನವಸಂಕಲ್ಪ ಶಿಬಿರದಲ್ಲಿ ತೀರ್ಮಾನ ಮಾಡಲಾಗಿದೆ. ಕಾರ್ಯಾಧ್ಯಕ್ಷರಿದ್ದರೂ ಸಮಿತಿಗಳಿಗೆ ಬೇರೆ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಉದಯಪುರ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಸಮಿತಿಗಳು ನಿನ್ನೆ, ಮೊನ್ನೆ ಚರ್ಚೆ ಮಾಡಿ ಸಲಹೆಗಳ ಪಟ್ಟಿ ಮಾಡಿದ್ದು, ಇಂದು ಆ ಬಗ್ಗೆ ಚರ್ಚಿಸಲಾಗುವುದು. ಈ ಸಮಿತಿಗಳಲ್ಲಿ ಇಲ್ಲದ, ಸಲಹೆ ನೀಡಲು ಬಯಸುವವರು ಅದನ್ನು ಲಿಖಿತ ರೂಪದಲ್ಲಿ ನೀಡಬಹುದು. ಅಮೂಲ್ಯ ಸಲಹೆಗಳನ್ನು ಸೇರ್ಪಡೆ ಮಾಡಿಕೊಂಡು ಚರ್ಚಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಬಿಜೆಪಿಯವರ ‘ಕೊಡುಗೆ’ ಜಾಹೀರಾತು ರಾಜ್ಯಕ್ಕೆ ಅವಮಾನ: ಸಿದ್ದರಾಮಯ್ಯ
ನಿಮ್ಮ ಸಲಹೆ ರಾಜ್ಯ ಹಾಗೂ ದೇಶದ ಭವಿಷ್ಯ, ಪಕ್ಷದ ಬಲವರ್ಧನೆ, 2023 ಹಾಗೂ 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇರಲಿ. ಉದಯಪುರ ಸಭೆ ನಿರ್ಣಯಗಳನ್ನು ನಿಮಗೆ ನೀಡಲಾಗುವುದು. ಎಐಸಿಸಿ ಸೂಚನೆ ಅನ್ವಯ ಪಕ್ಷದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದಿಷ್ಟ ಜವಾಬ್ದಾರಿ ನೀಡಲಾಗಿದ್ದು, ನೀವು ತಿಂಗಳಲ್ಲಿ 15-20 ದಿನ ಪಕ್ಷಕ್ಕೆ ಸಮಯ ನೀಡಬೇಕು ಎಂದು ಕರೆ ನೀಡಿದರು.
ಪಂಚಾಯ್ತಿಗಳಲ್ಲಿ ಸಭೆ ನಡೆಸಿ, ಅಲ್ಲಿನ ಸಮಸ್ಯೆ ಗುರುತಿಸಿ, ಬಗೆಹರಿಸಬೇಕು. ಪಕ್ಷ ಹಾಗೂ ಪಕ್ಷದ ಸಿದ್ಧಾಂತದ ಪರವಾಗಿರುವ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ರಮ ರೂಪಿಸಬೇಕು. ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಅದರಲ್ಲಿ ಶೇ.42 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಶೇ.42 ರಷ್ಟು ಮಂದಿ ಮಹಿಳೆಯರು. ಸದಸ್ಯತ್ವ ನೋಂದಣಿ ಮುಂದುವರಿಯಲಿದ್ದು, ಬೂತ್ ಮಟ್ಟದ ಸಮಿತಿ ಸೇರಿ ಎಲ್ಲ ಸಮಿತಿಗಳನ್ನು ರಚಿಸಲು ಕಾಲಮಿತಿ ನಿಗದಿ ಮಾಡಲಾಗಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಆಗಸ್ಟ್ 9 ರಿಂದ ಆಗಸ್ಟ್ 15 ರ ವರೆಗೆ ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ರಾಷ್ಟ್ರ ನಾಯಕರು ಸೂಚಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳು, ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಸರಕಾರದ ವೈಫಲ್ಯಗಳ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗಿದೆ. ನಿಮ್ಮ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರತ್ಯೇಕ ಪ್ರಣಾಳಿಕೆ ಮಾಡಬೇಕು. ಕರಾವಳಿ, ಮಲೆನಾಡು, ಬೆಂಗಳೂರು, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ವಲಯಕ್ಕೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ ವರ್ಗದ ಜನರ ಸೇವೆಗೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಉತ್ತಮ ಆಡಳಿತ ನೀಡುವ ಸರ್ಕಾರ ರಚಿಸಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.