ರಾಜ್ಯ ಮತ್ತು ಜನರನ್ನು ಉಳಿಸಲು 2023 ರ ಚುನಾವಣೆ ಗೆಲ್ಲಬೇಕಾಗಿದೆ: ಸಿದ್ದರಾಮಯ್ಯ
ನಾವು ಅಧಿಕಾರಕ್ಕೆ ಬರಬೇಕು ಎನ್ನುವುದು ಮುಖ್ಯವಲ್ಲ : ಚಿಂತನಾ ಶಿಬಿರದಲ್ಲಿ ಮಾಜಿ ಸಿಎಂ
Team Udayavani, Jun 2, 2022, 4:24 PM IST
ಬೆಂಗಳೂರು : ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರದಲ್ಲಿ ಮಾತನಾಡಿದ ಅವರು, 2024ಕ್ಕೆ ಲೋಕಸಭಾ ಚುನಾವಣೆ ಇದೆ, ಕರ್ನಾಟಕದಲ್ಲಿ 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡಯಲಿದೆ. ಇವುಗಳ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಪಕ್ಷ ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದ ವರೆಗೆ ಸಂಘಟಿತಗೊಂಡರೆ ಚುನಾವಣೆಗಳ ಗೆಲುವು ಕಷ್ಟದ ಕೆಲಸವಲ್ಲ. ಇಂತಹ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ಪಕ್ಷ ಈಗಾಗಲೇ ಎದುರಿಸಿದೆ ಕೂಡ ಎಂದರು.
ಪಕ್ಷವನ್ನು ಬಲಪಡಿಸಲು ಅನೇಕ ಕ್ರಮಗಳನ್ನು ಎಐಸಿಸಿ ಹಾಗೂ ಕೆಪಿಸಿಸಿ ತೆಗೆದುಕೊಳ್ಳಲು ಆರಂಭ ಮಾಡಿದೆ. ಅದರ ಭಾಗವಾಗಿ ಈ ಸಭೆಯೂ ನಡೆಯುತ್ತಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆಸಬೇಕು ಎಂಬ ಆದೇಶವಾಗಿದೆ. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರದ ಮೀಸಲಾತಿ ಬಗ್ಗೆ ಒಂದು ತೀರ್ಪನ್ನು ನೀಡಿದೆ. ತೀರ್ಪಿನ ಪ್ರಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವಾಗ ಒಂದು ನಂಬಿಕಾರ್ಹ ಮಾಹಿತಿ ಇರಬೇಕು ಮತ್ತು ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿದೆ. ಇದು 2021 ಏಪ್ರಿಲ್ ನಲ್ಲಿ ನೀಡಿದ ತೀರ್ಪಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ತೀರ್ಪು ಬಂದ ಮೇಲೆ ಯಾವ ಕ್ರಮ ಕೈಗೊಂಡಿಲ್ಲ, ಇತ್ತೀಚೆಗೆ ಭಕ್ತವತ್ಸಲಂ ಅವರ ಸಮಿತಿ ರಚನೆ ಮಾಡಿದೆ, ಆ ಸಮಿತಿ ಇನ್ನು ವರದಿ ನೀಡಿಲ್ಲ. ಹತ್ತು ವಾರದಲ್ಲಿ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ನಮ್ಮ ಪಕ್ಷವು ಸರ್ವ ಪಕ್ಷ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಎಂದು ಹೇಳಿದೆ. ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ ನಂತರ. ಮಹಿಳೆಯರಿಗೆ 50%, ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ನೀಡಿದ್ದು. ಇದರಲ್ಲಿ ಅಲ್ಪಸಂಖ್ಯಾತರು ಹಾಗೂ ಇನ್ನಿತರೆ ಜಾತಿಗಳು ಸೇರುತ್ತವೆ. ಕಾಂಗ್ರೆಸ್ ಪಕ್ಷ ರಾಜಕೀಯ ಮೀಸಲಾತಿ ನೀಡಿದ್ದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಇದನ್ನೂ ಓದಿ : ಟಿಕೆಟ್ ಬಿಸಿ: ಕಾಂಗ್ರೆಸ್ ಶಿಬಿರಕ್ಕೆ ಗೈರಾದ ಎಸ್.ಆರ್.ಪಾಟೀಲ್, ಬಿ.ಎಲ್.ಶಂಕರ್, ಜಮೀರ್
ಈಗ ತರಾತುರಿಯಲ್ಲಿ ಸರ್ಕಾರ ಚುನಾವಣೆ ನಡೆಸಬಹುದು. ಯಾಕೆಂದರೆ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ನಮ್ಮ ಕಾರ್ಯಕರ್ತರು ತಯಾರಾಗಬೇಕು. ನನಗಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರಕ್ಕೆ ಈ ಚುನಾವಣೆಯನ್ನು ನಡೆಸಲಾಗಲೀ ಅಥವಾ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಲು ಒಲವಿಲ್ಲ. ಕಾಂಗ್ರೆಸ್ ಗೆ ಮಾತ್ರ ಈ ಬದ್ಧತೆ ಇರುವುದು. ಬಿಜೆಪಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ ಎಂದರು.
2023ರ ಏಪ್ರಿಲ್ – ಮೇ ಗೆ ವಿಧಾನಸಭಾ ಚುನಾವಣೆ ಬರುತ್ತದೆ, ಈ ಚುನಾವಣೆಯನ್ನು ನಾವು ಗೆಲ್ಲಲೇಬೇಕು. ಇದು ನಮ್ಮ ಮುಂದಿರುವ ಸವಾಲು. ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಚುನಾವಣೆ ಗೆಲ್ಲುವುದಲ್ಲ, ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ. ಆದ್ದರಿಂದ ನಾವು ಈ ಸವಾಲನ್ನು ಸ್ವೀಕಾರ ಮಾಡಬೇಕು. ಇವರು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ನಮ್ಮ ಪಕ್ಷ 6 ಕಮಿಟಿಗಳನ್ನು ಮಾಡಿದೆ, ಇವುಗಳು ಸುದೀರ್ಘ ಚರ್ಚೆ ನಡೆಸಿ ತನ್ನ ನಿರ್ಣಯಗಳನ್ನು ಮಾಡಿ, ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ ಎಂದರು.
ಇಂದು ರಾಜ್ಯ ಮತ್ತು ದೇಶ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದೆ. 2014-15ರಲ್ಲಿ ಈ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷ ಕೋಟಿ ರೂಪಾಯಿ. ಇಂದು ಈ ಸಾಲ 155 ಲಕ್ಷ ಕೋಟಿ ರೂಪಾಯಿ ಆಗಿದೆ. ನಿನ್ನೆಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಆಯಿತು, ಅವರ ತಮ್ಮ 8 ವರ್ಷಗಳ ಆಡಳಿತದಲ್ಲಿ 100 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಮಾಡಿದ್ದಾರೆ. ದೇಶದ ಪ್ರತಿಯೊಬ್ಬನ ಮೇಲೆ 1.70 ಲಕ್ಷ ರೂಪಾಯಿ ಇದೆ. ಮಾರ್ಚ್ 2018 ರಲ್ಲಿ ಕರ್ನಾಟಕದ ಸಾಲ 2.42 ಲಕ್ಷ ಕೋಟಿ ರೂಪಾಯಿ ಇತ್ತು. 2023 ಮಾರ್ಚ್ ಗೆ 5.40 ಲಕ್ಷ ಕೋಟಿ ಸಾಲ ಆಗುತ್ತದೆ ಎಂದು ಕಿಡಿ ಕಾರಿದರು.
ಸದನದಲ್ಲಿ ಉತ್ತರಿಸುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಆರ್ಥಿಕತೆ ಉತ್ತಮ ಆಗುತ್ತಿದೆ ಎಂದು ಹೇಳಿದ್ದರು. ನಾವು ಈ ಬಾರಿ 71 ಸಾವಿರ ಕೋಟಿ ಸಾಲ ಮಾಡಬೇಕಾಗಿತ್ತು, ಅದನ್ನು 63 ಸಾವಿರ ಕೋಟಿಗೆ ಇಳಿಸಿದ್ದೀವಿ ಎಂದು ಅವರು ಹೇಳಿದರು. ಇದರರ್ಥ ನಾವು ಸಾಲ ಕಡಿಮೆ ಮಾಡುತ್ತಿದ್ದೇವೆ ಎಂದರು. ಸರ್ಕಾರ ನನಗೆ ನೀಡಿರುವ ಪ್ರಕಾರ ಈ ಸಾಲಿನಲ್ಲಿ 80 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸದನಕ್ಕೆ ಸುಳ್ಳು ಹೇಳಿದ್ಧಾರೆ. ರಾಜ್ಯದ ಜಿಡಿಪಿ ಬೆಳವಣಿಗೆ ಕಡಿಮೆಯಾಗಿದೆ, ಬೆಲೆಯೇರಿಕೆಯಿಂದ ಜನರ ಕೈಲಿ ಹಣವಿಲ್ಲ, 30% ಇಂದ 22% ಗೆ ಕಾರ್ಪೋರೇಟ್ ತೆರಿಗೆ ಇಳಿಸಿದ್ದಾರೆ, ಪರೋಕ್ಷ ತೆರಿಗೆ ಹೆಚ್ಚಿಸಿ ಕೆಳ ಮತ್ತು ಮಧ್ಯಮ ವರ್ಗದ ಜನರಿಂದ ಹಣ ಕಿತ್ತುಕೊಳ್ಳಲಾಗುತ್ತಿದೆ. ಯಾವಾಗ ಸಾಮಾನ್ಯ ಮತ್ತು ಕೆಳ ವರ್ಗದ ಜನರ ಕೈಲಿ ದುಡ್ಡಿರಲ್ಲ ಆಗ ಜಿಡಿಪಿ ಬೆಳವಣಿಗೆ ಆಗಲು ಸಾಧ್ಯವಿಲ್ಲ ಎಂದರು.
ನಾವು ಅಧಿಕಾರಕ್ಕೆ ಬರುವಾಗ ರಾಜ್ಯದ ಜಿಡಿಪಿ 6 ಲಕ್ಷ ಕೋಟಿ ಇತ್ತು, ನಾವು ಅಧಿಕಾರದಿಂದ ಇಳಿಯುವಾಗ 14 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. 2020-21 ರಲ್ಲಿ -5% ಬೆಳವಣಿಗೆ ಕಂಡಿದೆ. ಇದು ರಾಜ್ಯವನ್ನು ಸಾಲದ ಸುಳಿಗೆ ಸಿಕ್ಕಿಸಿ, ಆರ್ಥಿಕವಾಗಿ ದಿವಾಳಿ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಗೊಬ್ಬರ, ಸಿಮೆಂಟ್ ಹೀಗೆ ಎಲ್ಲದರ ಬೆಲೆ ಗಗನಕ್ಕೇರಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತಪ್ಪು ಆರ್ಥಿಕ ನೀತಿ ಮತ್ತು ಅದನ್ನು ರಾಜ್ಯ ಸರ್ಕಾರ ಅನುಸರಿಸುತ್ತಿರುವುದು ಎಂದು ಆರೋಪಿಸಿದರು.
ಜಿಎಸ್‌ಟಿ, ನೋಟು ರದ್ದತಿ, ಕೊರೊನಾ ಬಂದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಇದರಿಂದ ರಾಜ್ಯದ ತೆರಿಗೆ ಪಾಲು ಕಡಿಮೆಯಾಗುತ್ತಿದೆ. 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಶಿಫಾರಸ್ಸು ಮಾಡಿತ್ತು, ಆದರೆ ಅಂತಿಮ ವರದಿಯಲ್ಲಿ ಅದನ್ನು ಕೈಬಿಡಲಾಯಿತು, ಇದರ ಹಿಂದೆ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರ ಕೈವಾಡವಿದೆ. ಇದರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಜಿಎಸ್‌ಟಿ ಬರುವ ಮುಂಚೆ ರಾಜ್ಯದ ತೆರಿಗೆ ಬೆಳವಣಿಗೆ 14 – 15% ಇತ್ತು, ಜಿಎಸ್‌ಟಿ ಬಂದ ಮೇಲೆ 6%ಗೆ ಬಂದು ನಿಂತಿದೆ. ಜುಲೈ 1 ರಿಂದ ಜಿಎಸ್‌ಟಿ ಪರಿಹಾರ ನಿಲ್ಲಿಸುತ್ತಾರೆ, ಇದರಿಂದ ಪ್ರತಿ ವರ್ಷ ರಾಜ್ಯಕ್ಕೆ 19 ಸಾವಿರ ಕೋಟಿ ರೂಪಾಯಿ ಬರುವುದು ನಿಂತುಹೋಗುತ್ತದೆ. ಇವರಿಂದ ರಾಜ್ಯ ಉಳಿಯುತ್ತಾ? ಎಂದು ಪ್ರಶ್ನಿಸಿದರು.
ಕರ್ನಾಟಕ ಒಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಪೆಟ್ರೋಲ್ – ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ, ಅಬಕಾರಿ ಸುಂಕ, ಜಿಎಸ್‌ಟಿ ಹೀಗೆ ವಿವಿಧ ತೆರಿಗೆ ರೂಪದಲ್ಲಿ 3 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ, ಆದರೆ ನಮಗೆ ವಾಪಾಸು ಬರುವುದು 44 ಸಾವಿರ ಕೋಟಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಯುವಕರು, ಮಕ್ಕಳು, ರೈತರು ಸಮಸ್ಯೆಯಲ್ಲಿದ್ದಾರೆ. ಇವುಗಳನ್ನು ಮುಚ್ಚಿಡಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.
ಇಂದು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಆತಂಕದಲ್ಲಿ ಬದುಕುವಂತಾಗಿದೆ. ಚರ್ಚ್, ಮಸೀದಿಗಳ ಮೇಲೆ ದಾಳಿ, ಹಿಂದುಗಳನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಕೆಲಸ ದೇಶದ ಉದ್ದಗಲಕ್ಕೂ ನಡೀತಿದೆ. ಹೀಗಾಗಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ತೆಗೆಯಬೇಕಾಗಿದೆ. ಸಂವಿಧಾನದ ಆಶಯಗಳಲ್ಲಿ ನಂಬಿಕೆ, ಬದ್ಧತೆ ಇಲ್ಲದವರು ದೇಶದ್ರೋಹಿಗಳು ಎಂದರು.
ಅನಗತ್ಯವಾಗಿ ಪಠ್ಯ ಪರಿಷ್ಕರಣೆಗೊಳಪಡಿಸಿ ಪಠ್ಯವನ್ನು ಕೇಸರೀಕರಣ ಮಾಡಲಾಗುತ್ತಿದೆ. ಯಾರೋ ರೋಹಿತ್ ಚಕ್ರತೀರ್ಥ ಎಂಬ ಆರ್.ಎಸ್.ಎಸ್ ಮೂಲದವನನ್ನು ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಪಠ್ಯದಲ್ಲಿ ಭಗತ್ ಸಿಂಗ್, ನಾರಾಯಣ ಗುರು, ಕುವೆಂಪು ಇಂಥವರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ 10 ಮಂದಿ ಸಾಹಿತಿಗಳು ಪಠ್ಯ ಕ್ರಮದಿಂದ ತಮ್ಮ ಸಾಹಿತ್ಯಗಳನ್ನು ತೆಗೆದುಹಾಕಿ ಎಂದು ಹೇಳಿದ್ದಾರೆ ಎಂದರು.
ಜನರ ಈ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೋರಾಟಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕೆ ಪಕ್ಷ ಮಾಡಿರುವ ಆರು ಕಮಿಟಿಗಳ ಸದಸ್ಯರು ತಮ್ಮ ಸಲಹೆ ನೀಡಬೇಕು. ನಾವೆಲ್ಲರೂ ಒಂದು ಗೂಡಿ ಈ ದಿಸೆಯಲ್ಲಿ ಹೋರಾಟ ನಡೆಸೋಣ. ತಾವೆಲ್ಲರೂ ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಮನವಿ ಮಾಡುತ್ತಾ, ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.