Congress; ಸದ್ಯಕ್ಕಿಲ್ಲ ನಿಗಮ, ಮಂಡಳಿ ಅಧ್ಯಕ್ಷರ ನೇಮಕ: ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ
ಕೇವಲ ಲೋಕಸಭಾ ಚುನಾವಣೆ ಕುರಿತ ಚರ್ಚೆಗೆ ಸೀಮಿತವಾದ ಕೈ ನಾಯಕರ ದಿಲ್ಲಿ ಭೇಟಿ
Team Udayavani, Jan 5, 2024, 5:58 AM IST
ಬೆಂಗಳೂರು: ಕಾಂಗ್ರೆಸ್ ನಾಯಕರು ದಿಲ್ಲಿಗೆ ಭೇಟಿ ನೀಡಿದ ಬೆನ್ನಲ್ಲೇ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಇದು ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡಿಸಿದೆ.
ಆದರೆ ಇದೇ 10ರಂದು ಲೋಕಸಭಾ ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ನಿಗದಿಯಾಗಿರುವ ಸಭೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲ ಆಗಮಿಸಲಿದ್ದು, ಅಂದು ಚರ್ಚೆ ನಡೆದರೆ ಸಂಕ್ರಾಂತಿ ವೇಳೆಗೆ ಶಾಸಕರು, ಪಕ್ಷದ ಮುಖಂಡರಿಗೆ ಅಧಿಕಾರ ಭಾಗ್ಯ ಸಿಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬುಧವಾರ ದಿಲ್ಲಿಗೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಮರುಚಾಲನೆ ದೊರೆಯಲಿದ್ದು, ಅಂತಿಮ ಪಟ್ಟಿ ಕೂಡ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಗರಿಗೆದರಿದ್ದವು. ಆಕಾಂಕ್ಷಿಗಳು ಕೂಡ ದಿಲ್ಲಿಯತ್ತ ನೋಟ ಹರಿಸಿದ್ದರು. ಆದರೆ “ದಿಲ್ಲಿ ಭೇಟಿ’ ಕೇವಲ ಲೋಕಸಭಾ ಚುನಾವಣೆ ಚರ್ಚೆಗೆ ಸೀಮಿತವಾಯಿತು. ಇದು ಆಕಾಂಕ್ಷಿಗಳಲ್ಲಿ ತೀವ್ರ ಬೇಸರ ಉಂಟುಮಾಡಿದೆ.
ಪ್ರತಿ ಬಾರಿ ದಿಲ್ಲಿಗೆ ಹೋದಾಗಲೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮೂಲಕ ಶಾಸಕರು, ಹಿರಿಯ ಕಾರ್ಯಕರ್ತರಲ್ಲಿ “ಅಧಿಕಾರ ಭಾಗ್ಯ’ ಸಿಗಬಹುದು ಎಂಬ ಆಸೆ ಮೊಳಕೆಯೊಡೆಯುತ್ತದೆ. ನಾಯಕರು ಮರಳುತ್ತಿದ್ದಂತೆ ನಿರಾಸೆಯ ಉತ್ತರ ಸಿಗುತ್ತದೆ. ಇದು ಆಕಾಂಕ್ಷಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ಬೆಳಗಾವಿ ಅಧಿವೇಶನಕ್ಕೂ ಮೊದಲೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈಗ ಮತ್ತೂಂದು ಅಧಿವೇಶನ ಹತ್ತಿರ ಬರುತ್ತಿದೆ.
ಬೆಂಗಳೂರಿನಲ್ಲಿ ಜ. 10ಕ್ಕೆ ಲೋಕಸಮರ ಸಭೆ
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಚರ್ಚಿಸಲು ಕೆಪಿಸಿಸಿ ಜ. 10ರಂದು ಸಭೆ ಕರೆದಿದೆ. ಅಂದು ಸಂಜೆ 4ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 2023ರ ವಿಧಾನಸಭಾ ಅಭ್ಯರ್ಥಿಗಳು, ಎಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಕೆಪಿಸಿಸಿ ಮುಂಚೂಣಿ ಘಟಕ, ಸೆಲ್, ವಿಭಾಗಗಳ ರಾಜ್ಯ ಘಟಕದ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಚುನಾವಣೆ ಸಿದ್ಧತೆಗಳ ಬಗ್ಗೆ ಚರ್ಚಿಸಿ ಕೆಲವು ನಾಯಕರಿಗೆ ಚುನಾವಣೆ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ. ಹೀಗಾಗಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಗುರುವಾರ ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಮತ್ತೂಂದೆಡೆ ಡಿ.ಕೆ. ಶಿವಕುಮಾರ್ ಅವರು ಅಖೀಲ ಭಾರತ ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.