ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ
Team Udayavani, Mar 4, 2021, 4:42 PM IST
ಬೆಂಗಳೂರು: ಒಂದು ದೇಶ ಒಂದು ಚುನಾವಣೆ ಚರ್ಚೆ ವಿಧಾನ ಪರಿಷತ್ ನಲ್ಲಿ ಮಾಡುವ ಅಗತ್ಯವಿಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾಗಲಿದೆ. ಹೀಗಾಗಿ ಈ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಆಕ್ರೋಶ ಹೊರಹಾಕಿದರು.
ವಿಪಕ್ಷದ ನಾಯಕ ಎಸ್. ಆರ್. ಪಾಟೀಲ್ ಮಾತನಾಡಿ, ಒಂದು ದೇಶ ಒಂದು ಚುನಾವಣೆಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ. ಲೋಕಸಭೆಯಲ್ಲಿ ಇದರ ನಿರ್ಧಾರ ಮಾಡಲಿ. ಈಗಾಗಲೇ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ಈ ಬಗ್ಗೆ ವರದಿ ನೀಡಿದೆ. ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.
ಇದಕ್ಕೆ ಕಾಂಗ್ರೆಸ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ನಾರಾಯಣಸ್ವಾಮಿ, ಪ್ರಕಾಶ್ ರಾಥೋಡ್, ಯು.ಬಿ.ವೆಂಕಟೇಶ್ ಮೊದಲಾದವರು ಇದಕ್ಕೆ ಧ್ವನಿಗೂಡಿಸಿದರು.
ಆಡಳಿತಪಕ್ಷದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಚರ್ಚೆಗೆ ಅವಕಾಶ ನೀಡಿದರು. ಆಗ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಆಕ್ರೋಶ ಹೊರ ಹಾಕಿದರು. ನಂತರ ಸಭಾಪತಿಯವರು ಮಧ್ಯಪ್ರವೇಶಿಸಿ, ಈ ರೀತಿ ಮಾಡುವುದು ಸರಿಯಲ್ಲ. ಸದನ ಕಲಾಪದ ನಿಯಮದಡಿ ಅವಕಾಶ ಕಲ್ಪಿಸಲಾಗಿದೆ. ಈ ವಿಷಯ ಚರ್ಚೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರೂ ಕಾಂಗ್ರೆಸ್ ಸದಸ್ಯರು ಬಾವಿಯಿಂದ ಹೊರಬರಲು ಒಪ್ಪದೇ ಇದ್ದಾಗ ಸಭಾಪತಿಯವರು ಕಲಾಪವನ್ನು 10 ನಿಮಿಷ ಮುಂದೂಡಿದರು. ಅಲ್ಲದೇ, ಆಡಳಿತ ಪಕ್ಷ ಹಾಗೂ ವಿಪಕ್ಷದ ನಾಯಕರು, ಮುಖ್ಯಸಚೇತಕರು ತಮ್ಮ ಕಚೇರಿಗೆ ಬಂದು ಈ ವಿಚಾರವಾಗಿ ಚರ್ಚಿಸಲು ಸೂಚಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.